ಆದೆಲ್ಲೋ ಪರಾರಿ

ಆದೆಲ್ಲೋ ಪರಾರಿ

ವಾರೆಗನ್ನ ಬೀರಿ ಹಾಕಿದಲ್ಲೊ ಎದೆಗೆ ಚೂರಿ 

ಹೊಳ್ಳಿ ಹೊಳ್ಳಿ ನೋಡಿ ಮಾರಿ 

ನಕ್ಕೆಲ್ಲೋ ಕುಡಿ ಮೀಸಿ ತಿರುವಿ 

ಕರೆದು ಬಿಟ್ಟೆಲ್ಲೋ ನಿನ್ನ ಹೃದಯ ಹರವಿ

ನಾನಾಗಿ ಬಿಟ್ಟೆನಲ್ಲೊ ನಿನ್ನ ಕೊರವಿ// 

ಹೇಳಿದಲ್ಲೋ ಸಾರಿ ಸಾರಿ 

ನೀನೆ ನನ್ನ ಪ್ರೀತಿ ಪಾರಿ 

ಮನಸು ಮಾಡಿ ಸೂರಿ 

ಸುತ್ತಿ ಸುತ್ತಿ ಹಾಳಿ ಮ್ಯಾರಿ 

ಬಿತ್ತಿಬಿಟ್ಟೆಲ್ಲೋ ಎದೆ ಬಣದಾಗ ಪಿರುತಿ//

ನೀ ಪುಂಡ ಪೋಕರಿಯೋ 

ದಂಡ ದಾಂಡಿಗನೋ 

ಉಂಡಾಡೋ ಬಂಟನೋ

ಪೋಲಿ ಫಟಿಂಗನೋ

ತಿಳಿಯಲಿಲ್ಲ ಮಾಯಗಾರ 

ಮರುಳ ಮನಸ ಕದ್ದ ಚಿತ್ತ ಚೋರ//

ಹೋದ ಹೋದಲ್ಲೆಲ್ಲ ಹಿಂದೆ ಬಂದೆ 

ಕದ್ದು ಕದ್ದು ಕಣ್ಣ ಹೊಡೆದೆ 

ಕೈಯ ಹಿಡಿದ ಮಾಡಿದೆ ತಿಳಿದಂತ ಮೂಡಿ 

ಮೈಮರೆಸಿ ಬಿಟ್ಟೆಲ್ಲೋ ಹಾಡ ಹಾಡಿ 

ಅಂದ ಚಂದ ಹೊಗಳಿದಲ್ಲೋ ಕಿಡಗೇಡಿ//

ನಾನು ನಿನ್ನವನೇ ಎಂದೆ 

ಉಸಿರಿಗೆ ಉಸಿರಾಗುವೆನೆಂದೆ 

ಹಿಡಿದ ಕೈಯ ಬಿಡುವನಲ್ಲ 

ಎಂದು ಆನೆ ಭಾಷೆ ಇಟ್ಟೆ ಮಲ್ಲ 

ಹುಚ್ಚ ಆಸೆ ಬಲಿಸಿ ನನ್ನೊಳಗ ಉಳಿದುಬಿಟ್ಟೆ //

ಚಿನ್ನ ರನ್ನ ನಿನ್ನಿಂದ 

ನನ್ನ ಬಾಳಿಗೆ ಬಣ್ಣ 

ಜೋಡಿಹಕ್ಕಿಯಂಗ ಹಾರಾಡೋಣೆಂದು 

ಬಾಣ ಬಯಲ ಸುತ್ತಿಸಿ 

ಮುದ್ದು ಮುದ್ದು ಮಾತನಾಡಿ ಒಲವ ಬಿತ್ತಿಬಿಟ್ಟೆ //

ರಮಿಸಿ ರಮಿಸಿ ಗಲ್ಲಸವರಿ 

ನಮ್ಮಪ್ಪನ ರೊಕ್ಕದ ಮ್ಯಾಲ 

ಮಾಡಿದೆಲ್ಲೋ ಸವಾರಿ 

ಎಲ್ಲಾ ಮುಗಿದ ಮ್ಯಾಲ 

ಹೊಂಟೆಲ್ಲೋ ಪ್ರೀತಿ ಗಾಳಿಗೆ ತೂರಿ 

ಯಾರೆ ನೀನು ಗೊತ್ತಿಲೆನುತ 

ಒಡಲಾಗ ನಿನ್ನ ಬೀಜ ಊರಿ 

ಮೋಸ ಮಾಡಿ ಅದೆಲ್ಲೊ ಪರಾರಿ//

ಡಾ ಅನ್ನಪೂರ್ಣ ಹಿರೇಮಠ