ದಿ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನುಡಿ ನಮನ

ದಿ. ಅಟಲ್  ಬಿಹಾರಿ ವಾಜಪೇಯಿ  ಅವರಿಗೆ ನುಡಿ ನಮನ

ದಿ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನುಡಿ ನಮನ

ನಗು ಮೊಗದ ಹಮ್ಮೀರ, ಭಾರತಾಂಬೆಯ ಕುವರ

ಮೇರು ವ್ಯಕ್ತಿತ್ವದಲಿ ನಾಡನಾಳಿದ ಧೀರl

ನಿನ್ನ ಮಾತಿನ ಮೋಡಿ, ನೀ ಪಟ್ಟ ಬವಣೆಗಳು

ನೀನು ಮಾಡಿದ ತ್ಯಾಗ, ಮರೆಯದಂತಿವೆ ಮನದಿ

"ಭಾರತವೆ ಸರ್ವಸ್ವ, ಭಾರತವೆ ನನ್ನುಸಿರು,

ಭಾರತವೆ ಅರ್ಪಣೆಯ ತರ್ಪಣೆಯ ಭೂಮಿ,

ಭಾರತದ ಕಣಕಣವು ಶಂಕರನೆ" ಎನಗೆಂದ

ಅಸಮಾನ್ಯ ಧೀಮ‌ಂತ ಮುತ್ಸದ್ಧಿ ನೀನು!

ಬದ್ಧ ವೈರಿಗು ಕೂಡ ಸ್ನೇಹ ಹಸ್ತವ ಚಾಚಿ

ಸಹ ಬಾಳ್ವೆ ಆಶಯವ ತೋರಿ ಸಿದ್ಧಿಸದಿರಲು

ಘನಘೋರ ಯುದ್ಧದಲಿ ಅವರ ಸೊಕ್ಕಡಗಿಸಿ

ತಕ್ಕ ಶಿಕ್ಷೆಯನಿತ್ತ ಧೀರ ನೀನು!

ನದಿಗಳನು ಜೋಡಿಸುವ, ದೇಶದುದ್ದಗಲದಲಿ

ರಾಜಪಥ ನಿರ್ಮಿಸುವ ನಿನ್ನ ಕನಸಿನ ಕಾರ್ಯ

ರಾಷ್ಟ್ರ ನಿರ್ಮಾಣಕ್ಕೆ ಅತಿ ದೊಡ್ಡ ಕೊಡುಗೆ!

ರಾಷ್ಟ್ರಭಾಷೆಯ ಪ್ರೇಮಿ, ಸಾಹಿತ್ಯದಭಿಮಾನಿ,

ಭಾವನೆಯ ತುಡಿತಗಳ ಪದಗಳಲಿ ಹಿಡಿದಿಟ್ಟ

ಹೆಸರಾಂತ ಕವಿ ನೀ‌ನು!

ಎಲ್ಲರಿಗೆ ಬೇಕಾಗಿ ಎಲ್ಲರನು ನಗಿಸುತ್ತ

ಹೇಳುವದನೆಲ್ಲವನು ಗಾಂಭೀರ್ಯದಲಿ ಹೇಳ್ವ

ಮಾಯಾವಿ ನೀ‌ನು!

ಭರತಮಾತೆಯ ಶ್ರೇಷ್ಠ ಮಗನಾಗಿಬಾಳಿ,

ಬಾಳಿನುದ್ದಕು ನೋವನುಣ್ಣುತಲೆ ನಲಿದು,

ದೇಶಕಾಗಿಯೆ ಸವೆದು ತಾಯ ಋಣ ತೀರಿಸಿದೆ!

ನೀನು ಭಾರತ ರತ್ನ, ನೀನು ಭಾರತ ರತ್ನ!

ನಮನಗಳು ನಿನಗೆ, ನಮನಗಳು ನಿ‌ನಗೆ l

ನರಸಿಂಗರಾವ ಹೇಮನೂರ

(ದಿ. ಅಟಲ್ ಬಿಹಾರಿ ವಾಜೇಯಿಯವರ ನೆನಪಿನಲ್ಲಿ)