ವೀರಶೈವ ಮಹಾಸಭೆಗೆ ಅವಿರೋಧವಾಗಿ ಆಯ್ಕೆ ವಿವಾದ: 5 ರಂದು ಬಸವೇಶ್ವರ ಪ್ರತಿಮೆ ಎದುರು ಧರಣಿ: ದಿವ್ಯಾ ಹಾಗರಗಿ ಹೇಳಿಕೆ

ವೀರಶೈವ ಮಹಾಸಭೆಗೆ ಅವಿರೋಧವಾಗಿ ಆಯ್ಕೆ ವಿವಾದ: 5 ರಂದು ಬಸವೇಶ್ವರ ಪ್ರತಿಮೆ ಎದುರು ಧರಣಿ: ದಿವ್ಯಾ ಹಾಗರಗಿ ಹೇಳಿಕೆ

ಕಲಬುರಗಿ : ಅಖಿಲ ಭಾರತ ವೀರಶೈವ ಮಹಾಸಭೆ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಿದ್ದರ ಕುರಿತು ವಿವಾದ ಉಲ್ಬಣಗೊಂಡಿದ್ದು, ಸಮಸ್ಯೆಯನ್ನು ಭಾನುವಾರದೊಳಗೆ ಇತ್ಯರ್ಥಪಡಿಸದೇ ಹೋದಲ್ಲಿ ಆಗಸ್ಟ್ 5 ರಂದು ಸೋಮವಾರ ನಗರದ ಜಗತ್ ವೃತ್ತದಲ್ಲಿ ಇರುವ ಬಸವೇರ್ಶವರರ ಪುತ್ಥಳಿಯ ಮುಂದೆ ಅಹೋರಾತ್ರಿ ಆಧರಣಿ ಹಾಗೂ ಭಜನೆಯನ್ನು ಸದಸ್ಯರು ಮಾಡುವರು ಎಂದು ಸಮಾಜದ ಮುಖಂಡರಾದ ಶ್ರೀಮತಿ ದಿವ್ಯಾ ಹಾಗರಗಿ ಅವರು ತಿಳಿಸಿದ್ದಾರೆ. ಅವಿರೋಧ ಆಯ್ಕೆಯಲ್ಲಿ ಎಲ್ಲ ದೊಡ್ಡವರಿಗೆ ಸಮಾಜದ ಕಾಳಜಿಗಿಂತ ಕಾಂಗ್ರೆಸ್ ಪಕ್ಷದವರನ್ನು ಅಧ್ಯಕ್ಷರನ್ನಾಗಿ ಆಡುವುದೇ ಒಂದು ಅಜೆಂಡಾ ಆಗಿತ್ತು ಎನ್ನುವ ಅನುಮಾನ ಬರುತ್ತಿದೆ. 

ಹಗಲಿರುಳು ದುಡಿದವರಿಗೆ ಅನ್ಯಾಯ ಆಗಿದ್ದು, ದಿನಕ್ಕೊಂದು ನೆಪ ಹೇಳಿ ಸಭೆಯನ್ನು ಮುಂದಕ್ಕೆ ಹಾಕುತ್ತಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷದವರು ಅಧ್ಯಕ್ಷರಾಗಿದ್ದಾರೆ. ನಮ್ಮ ಉದ್ದೇಶ, ಗುರಿ ಈಡೇರಿದೆ. ಯಾರಿಗೆ ಅನ್ಯಾಯವಾದರೆ ನಮಗೇನು ..? ಎನ್ನುವ ಧೋರಣೆ ಅನುಸರಿಸಲಾಗುತ್ತಿದೆ. ಶಶಿಕಾಂತ್ ಪಾಟೀಲ್ ಅವರ ಪೆನೆಲ್‌ಗೆ ಹಾಗೂ ತಾಲ್ಲೂಕು ಅಧ್ಯಕ್ಷರ ಗೊಂದಲ ಪರಿಹರಿಸಿ ಸಾಮಾಜಿಕ ನ್ಯಾಯವನ್ನು ಮುಖಂಡರು ಭಾನುವಾರದೊಳಗೆ ಕೊಡಬೇಕು ಎಂದು ಅವರು ಗಡುವು ಕೊಟ್ಟಿದ್ದಾರೆ.

ಒಂದು ವೇಳೆ ಕ್ರಮ ಕೈಗೊಳ್ಳದೇ ಹೋದಲ್ಲಿ ಹೋರಾಟ ಅನಿವಾರ್ಯವಾಗಲಿದೆ. ಪೂಜ್ಯರ, ಮುಖಂಡರ, ಸಚಿವರ, ಶಾಸಕರ ಹಾಗೂ ಇನ್ನಿತರ ಪ್ರಮುಖರ ಭಾವಚಿತ್ರಗಳನ್ನು ತಲೆಯ ಮೇಲೆ ಇಟ್ಟುಕೊಂಡು ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.