ಬಸವಣ್ಣನವರು

ಬಸವಣ್ಣನವರು

ಬಸವಣ್ಣನವರು

ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,

ಅಂಬುಜಕೆ ಭಾನುವಿನ ಉದಯದ ಚಿಂತೆ,

ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ,

ಎನಗೆ ನಮ್ಮ ಕೂಡಲಸಂಗನ 

ಶರಣರ ನೆನೆವುದೆ ಚಿಂತೆ.

                   ಬಸವಣ್ಣನವರು

                      ವಚನ ಅನುಸಂಧಾನ

ಶರಣರು ಬಳಸುವ ವಚನದ ಕನ್ನಡ ಪರಿಭಾಷೆ ಹಾಗೂ ಇಂದಿನ ಜನಸಾಮಾನ್ಯರು ಬಳಸುವ ಕನ್ನಡ ಪರಿಭಾಷೆ ನಡುವೆ ಅರ್ಥ ಗ್ರಹಿಕೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ ಎಂಬುದನ್ನ ಮೊದಲು ಗಮನಿಸಬೇಕು. ಯಾಕೆಂದರೆ ಇಲ್ಲಿ ಪರಸ್ಪರರು ಬಳಸುವುದು ಒಂದೇ ಕನ್ನಡ ಭಾಷೆಯ ಪದಗಳೆ ಆದರೂ ಅವುಗಳಲ್ಲಿನ ಅರ್ಥ ವ್ಯತ್ಯಾಸ ಮತ್ತು ಭಾವದ ವಿಸ್ತಾರದ ಅಭಿವ್ಯಕ್ತಿಯ ಸ್ವರೂಪದಲ್ಲೇ ಸ್ಪಷ್ಟವಾದ ಹಾಗೂ ನಿಚ್ಚಳವಾದ ವ್ಯತ್ಯಾಸವಿದೆ. ಭಾಷಾ ಬಳಕೆಯಲ್ಲಿನ ಈ ಸೂಕ್ಷ್ಮವನ್ನು ಮತ್ತು ಶರಣರ ತಾತ್ವಿಕತೆಯನ್ನು ಬಲ್ಲವರು ಮಾತ್ರವೇ ಶರಣರ ವಚನಾಂತರಂಗದ ಒಳಗಿಳಿದು ಅಲ್ಲಿನ ಶರಣಭಾವದ ನಿಸ್ಸೀಮ ಸಾಧ್ಯತೆಗಳ ಬೆಳಗಿನ ಆ ಬೆರಗನ್ನು ಅನುಭವಿಸಿ ಅದರ ಅನುಭೂತಿಯನ್ನ ಅಕ್ಷರಗಳಲ್ಲಿ ವಿಶ್ಲೇಷಿಸುವ ಅನುಭಾವಿಕ ಶಕ್ತಿಯ ಹೊಂದಿರಬೇಕಾದ ಅಗತ್ಯವಿದೆ ಎನಿಸುತ್ತದೆ. ಈ ಅರಿವಿನ ಹುರಿಯ ದಾರಿಯನ್ನ ಹಿಡಿದು ಮೇಲಿನ ಅಪ್ಪ ಬಸವಣ್ಣರ ಪ್ರಸ್ತುತ ವಚನ ಅನುಸಂಧಾನ ಮಾಡಿ ಅನುಭೂತಿಯ ಆ ಗಿರಿ ಶಿಖರವನ್ನು ಏರಿ ಕಾಣುವ ಒಂದು ಪ್ರಾಮಾಣಿಕ ವಿನಯಪೂರ್ವಕ ವಾದ ಪ್ರಯತ್ನವನ್ನು ಈಗ ಮಾಡಿ ನೋಡೋಣ.

ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,

ಅಂಬುಜಕೆ ಭಾನುವಿನ ಉದಯದ ಚಿಂತೆ,

ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ,

ಭಾವದುಂಬಿಕೊಂಡು ಹಾಡಬಹುದಾದಂಥಾ ಈ ಸುಂದರವಾದ ವಚನದ ರಚನೆಯನ್ನು ರಾಗದಲ್ಲಿ

ಉದ್ದೀಪಿಸಿ ಸುಶ್ರಾವ್ಯವಾಗಿ ಹಾಡಿದಾಗ ನಿಜಕ್ಕೂ ಮೊದಲಿಗೆ ಕೇಳುವಲ್ಲಿನ ಆ ಒಂದು ಹಿತಾನುಭವ ಹೃನ್ಮನಗಳನ್ನು ಆವರಿಸಿ ತನ್ಮಯಗೊಳಿಸುತ್ತದೆ.

ಇದು ವಚನಾನುಭವದ ಒಂದು ಮೇಲ್ಮಟ್ಟದಲ್ಲಿ ದಕ್ಕುವ ಅನುಭೂತಿಯ ಹಂತವಾಗಿರುತ್ತದೆ.ಇನ್ನ ಪದಾರ್ಥದ ಫಲಗಳನ್ನು ತೊಳೆ ತೊಳೆಯಾಗಿ ಬಿಡಿಸಿಕೊಂಡು ರುಚಿಯ ಸವಿದಾಗ ಸಿಗುವ ಆ ಅನುಭವದ ಸುಖವು ಖರೆ ಇನ್ನೊಂದು ತೆರನಾಗಿ ಇರುವಂಥಾದ್ದು. ಇಲ್ಲಿ ವಚನದ ಮೂರು ಸಾಲಿನ ಕೊನೆಯಲ್ಲಿ ಚಿಂತೆ ಎನ್ನುವ ಪದ ಸ್ಥಾನ ಪಡೆದಿದೆ. ಲೌಕಿಕ ಬದುಕಿನಲ್ಲಿ ಈ ಪದಕ್ಕಿರುವಂಥ ಅರ್ಥ; ಕಾರ್ಯ ಸಾಧ್ಯತೆಯ ಕಷ್ಟದ ಕಳವಳದ ಅನಿಶ್ಚಿತ ತೆಯನ್ನು ಹೇಳುತ್ತದೆ. ಆದರೆ ಇಲ್ಲಿರುವ ಶರಣರ ಪರಿಭಾಷೆಯ ಸಾಂಗತ್ಯದಲ್ಲಿ ಈ ಚಿಂತೆ ಎನ್ನುವ ಪದದ ಅರ್ಥ ವಿಸ್ತಾರವು ಇನ್ನೂ ಹೆಚ್ಚಿನ ವ್ಯಾಪ್ತಿ ಯಲ್ಲಿ ಪಸರಿಸುತ್ತದೆ. ಈ ಮೂರೂ ಸಾಲುಗಳಲ್ಲಿ ಬರುವ ಚಕೋರ(ಪಕ್ಷಿ), ಚಂದ್ರ, ಬೆಳಗು

ಅಂಬುಜ (ಕಮಲ), ಭಾನು(ಸೂರ್ಯ) ಉದಯ ಭ್ರಮರ(ಹುಳು), ಪರಿಮಳ ಮತ್ತು ಬಂಡುಂಬು (ಮಕರಂದ ಹೀರು) ಈ ಪದಗಳು ನಿಸರ್ಗ ಸಹಜ ಪ್ರಕ್ರಿಯೆಯ ಕ್ರಿಯಾತ್ಮಕವಾದ ಭಾಗಗಳಾಗಿವೆ. ಹಾಗಾಗಿ ಲೌಕಿಕ ಬದುಕಿನಲ್ಲಿಯ ಚಿಂತೆ ಪದದ ಸೀಮಿತ ಅರ್ಥವನ್ನು ಮೀರಿ ಇಲ್ಲಿ ಅರ್ಥ ಗ್ರಹಿಕೆಯ ವಿಸ್ತಾರ ಪಸರಿಸುತ್ತಾ ನಿರ್ದಿಷ್ಟ ಅರ್ಥದ ಚೌಕಟ್ಟನ್ನ ದಾಟಿ ಅಸೀಮಗೊಳಿಸುತ್ತಾ ಸಮಷ್ಟಿಯ ವಿಸ್ತಾರವೇ ಆಗುತ್ತದೆ.

ಎನಗೆ ನಮ್ಮ ಕೂಡಲಸಂಗನ 

ಶರಣರ ನೆನೆವುದೆ ಚಿಂತೆ.

ಇಲ್ಲಿ ಅಪ್ಪ ಬಸವಣ್ಣನವರಾದಿ ಎಲ್ಲಾ ಶರಣರು, ಎಲ್ಲರಂತೆ ತಾವೂ ಲೌಕಿಕದ ಬದುಕಿನ ನೆಲೆಯಲ್ಲಿ ಇನ್ನುಳಿದ ಮನುಷ್ಯರಂತೆಯೇ ಇದ್ದರೂ ಸಹಿತ ಅವರು ತಮ್ಮ ದಿವ್ಯ ಸಿದ್ಧಿ ಸಾಧನೆಯ ಮೂಲಕ ವ್ಯಷ್ಠಿಯ ಇತಿ ಮಿತಿಯ ಗೆರೆಯನ್ನು ದಾಟಿ ಅಂದ್ರೆ ಉನ್ನತೀಕರಣಗೊಂಡು ಸಮಷ್ಟಿಮಯವೇ ಆಗಿ ಅಷ್ಟೇ ಯಾಕೆ ಅವರು ಲೌಕಿಕ ಬದುಕಿನಲ್ಲಿದ್ದರೂ ಸಾಕ್ಷಾತ್ ಪರಶಿವ ಸ್ವರೂಪರೇ ಆಗಿರುವ ವಿಶಿಷ್ಟ ವಿನೂತನ ಬಗೆಯಲ್ಲಿರುವುದು ಕಾಣತ್ತದೆ. ಬೆಂದ ನುಲಿಕೆಯ ರೀತಿಯಲ್ಲಿ ಶರಣರು ಅನನ್ಯವಾದ ಬದುಕನ್ನು ಹೊಂದಿರುತ್ತಾರೆ. ಇಂತಹ ಶರಣರನ್ನ ಸದಾ ನೆನೆಯುವ ಭಕ್ತನೂ ಕೂಡಾ ತನ್ನ ಸಾಧನೆ ಮೂಲಕ ಬೆಳೆದು ಸಮಷ್ಟಿ ನೆಲೆಯ ಬದುಕಿನಲ್ಲಿ ಜಂಗಮವಾಗಿ ನಿಸ್ಸೀಮನಾಗುವ ಇಂಥ ಶರಣರ ಒಲಿಸಿಕೊಳ್ಳಲು ಅಪ್ಪ ಬಸವಣ್ಣವರು ಮಾಡುವ ಚಿಂತೆಯು ಪ್ರಕೃತಿಯ ಭಾಗವೇ ಆಗು ಮೂಲಕ ವಚನದ ಅರ್ಥವಿಸ್ತಾರವು ಲೌಕಿಕದ ನೆಲೆಯಿಂದ ಅಲೌಕಿಕ ಆಧ್ಯಾತ್ಮಿಕದ ಆ ದಿವ್ಯದ ನೆಲೆಯಲ್ಲಿ ಅದು ಉನ್ನತೀಕರಣವನ್ನು ಹೊಂದಿರುವ ಘನತೆ ಯನ್ನು ಇಲ್ಲಿ ಅಪ್ಪ ಬಸವಣ್ಣನವರ ಪ್ರಸ್ತುತ ಈ ವಚನವು ಮನಗಾಣಿಸುತ್ತದೆ.        

ಅಳಗುಂಡಿ ಅಂದಾನಯ್ಯ