ಡಾ.ಪರ್ವೀನ ಸುಲ್ತಾನಾ
ಡಾ.ಪರ್ವೀನ ಸುಲ್ತಾನಾ (ಪರಿಚಯ)
ವೃತ್ತಿಯಲ್ಲಿ ಶಿಕ್ಷಕಿಯಾಗಿ ಮತ್ತು ಪ್ರವೃತ್ತಿಯಲ್ಲಿ ಲೇಖಕಿ ಯಾಗಿರುವ ಡಾ. ಪರ್ವೀನ್ ಸುಲ್ತಾನಾ ಅವರು ಮೃದು ಸ್ವಭಾವ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಮಹಿಳೆ.ಬದುಕಿನಲ್ಲಿ ಶಿಸ್ತು, ಸಂಯಮ, ಪರಿಶ್ರಮಗಳನ್ನು ಮೈಗೂಡಿಸಿಕೊoಡಿರುವ ಪರ್ವೀನ್ ಅವರು ನಿರಂತರ ಅಧ್ಯಯನದ ಮೂಲಕ ಸಾಹಿತ್ಯದ ಸಂಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ಜನಿಸಿದ ಇವರು, ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ವಗ್ರಾಮದ ಸರಕಾರಿ ಶಾಲೆಯಲ್ಲಿಯೇ ಪೂರೈಸಿದರು. ಕಲ್ಬುರ್ಗಿಯಲ್ಲಿ ಎಂ.ಎ, ಎಂ.ಇಡಿ ಪದವಿಗಳನ್ನು ಯಶಸ್ವಿಯಾಗಿ ಮುಗಿಸಿದ್ದು ನಾಡಿನ ಚಿಂತಕಿ,ಸಾಹಿತಿಗಳಾದ ಡಾ. ಮೀನಾಕ್ಷಿ ಬಾಳಿ ಅವರ ಮಾರ್ಗದರ್ಶನದಲ್ಲಿ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ *"ಗುಲಬರ್ಗಾ ಜಿಲ್ಲೆಯ ಸೂಫಿ ಪರಂಪರೆ"* ಎಂಬ ವಿಷಯದಲ್ಲಿ ಪಿಹೆಚ್. ಡಿ ಪದವಿಯನ್ನು ಪಡೆದಿದ್ದಾರೆ.
ಡಾ.ಪರ್ವೀನ್ ಸುಲ್ತಾನಾರವರು
ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದ ಗೀಳನ್ನು ಹಚ್ಚಿಕೊಂಡು ಹಾಡು, ಭಾಷಣ, ಕವಿತೆ, ನಿರೂಪಣೆ ಮಾಡುವುದರ ಮೂಲಕ ಪ್ರತಿಭಾವಂತ ಕವಯತ್ರಿಯಾಗಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಭಾಷೆ, ವಚನ ಸಾಹಿತ್ಯ, ಸೂಫಿ ಸಾಹಿತ್ಯದ ಕುರಿತು ಅಪಾರ ಆಸಕ್ತಿಯನ್ನು ಹೊಂದಿರುವ ಇವರು, ಆಕಾಶವಾಣಿಯಲ್ಲಿ ಪುಸ್ತಕ ಪರಿಚಯ "ಹೊಸ ಓದು" ಕಾರ್ಯಕ್ರಮ ನೀಡಿದ್ದು, ವಿಶೇಷ ಉಪನ್ಯಾಸ, ಕಥೆ, ಕಾವ್ಯವಾಚನ ಮಾಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ತಾಲೂಕು, ಜಿಲ್ಲಾ, ವಿಭಾಗ,ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡುವ ಮೂಲಕ ಸಮ್ಮೇಳನಗಳಲ್ಲಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ವಿಚಾರ ಸಂಕಿರಣದಲ್ಲಿ ಶಿಬಿರಾರ್ಥಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿಷಯ ಮಂಡನೆ ಮಾಡುವುದರ ಮೂಲಕ ಶಹಬ್ಬಾಸ್ ಎನಿಸಿಕೊಂಡಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ಮಂಡಿಸಿದ ಇವರು ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾರೆ.
ಡಾ.ಪರ್ವೀನ್ ಸುಲ್ತಾನಾ ಅವರು *"ಚಿಮ್ಮನ ಜೋಡಿನ ಕಾವ್ಯ ಚಿಲುಮೆ", ಹಾಗೂ *"ಶರಣರ ನಾಡಿನ ಸೂಫಿ ಮಾರ್ಗ"* ಎಂಬ ಕೃತಿಗಳನ್ನು ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಇನ್ನೆರಡು ಕೃತಿಗಳು ಅಚ್ಚಿನಲ್ಲಿವೆ. ಪ್ರಸ್ತುತ ಸರ್ಕಾರಿ ಪ್ರೌಢ ಶಾಲೆ ಖಣದಾಳನಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ. ಪರ್ವೀನ್ ಸುಲ್ತಾನಾ ಅವರು ಕನ್ನಡ ನಾಡಿನ ಹಲವು ಪತ್ರಿಕೆಗಳಲ್ಲಿ ನಿಯತಕಾಲಿಕೆಗಳಲ್ಲಿ ವೈವಿಧ್ಯಮಯ ಲೇಖನಗಳನ್ನು ಬರೆದಿದ್ದು, ಸಾಕ್ಷರತಾ ಕಿರಣ ಸಮಿತಿಯಲ್ಲಿ ಸ್ವಯಂ ಸೇವಕಿಯಾಗಿ, ಶಿಕ್ಷಣ ಇಲಾಖೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದು.ಹಲವು ಕಥಾಕಮ್ಮಟ, ಕಾವ್ಯ ಕಮ್ಮಟ, ಕನ್ನಡ ಸಂಶೋಧನಾ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ.
ಬಿಸಿಲು ಬೆಳದಿಂಗಳು, ಕರ್ನಾಟಕ ರಾಜ್ಯ ಸಮುದಾಯ, ಸಾವಿತ್ರಿಬಾಯಿ ಫುಲೆ ಸಂಘ, ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದು, ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ಶ್ಲಾಘನೀಯ ಸೇವೆಯನ್ನು ಪರಿಗಣಿಸಿ ಹಲವು ಸಂಘ ಸಂಸ್ಥೆಗಳು ಇವರಿಗೆ ಕನ್ನಡ ಶ್ರೀ, ಕರುನಾಡ ಕಣ್ಮಣಿ, ಸಾವಿತ್ರಿಬಾಯಿ ಫುಲೆ, ಕರ್ನಾಟಕ ರಾಜ್ಯೋತ್ಸವ, ಕಲ್ಯಾಣ ಕರ್ನಾಟಕ ಸಾಧಕ ಶಿಕ್ಷಕ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಹಾಗೂ ರಾಜ್ಯಮಟ್ಟದ ಶೇಕ್ ಫಾತಿಮಾ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ನೀಡಿ ಗೌರವಿಸಿವೆ.
ಡಾ. ಶರಣಬಸಪ್ಪ ವಡ್ಡನಕೇರಿ