ಡಾ.ಎಸ್.ಎಸ್ ಗುಬ್ಬಿ dr.ss gubbi

ಡಾ.ಎಸ್.ಎಸ್ ಗುಬ್ಬಿ dr.ss gubbi

ವೈದ್ಯ ಲೋಕದ ದ್ರುವತಾರೆ ಡಾ.ಎಸ್.ಎಸ್.ಗುಬ್ಬಿ                   (ಸಿದ್ದಬಸ್ಸಯ್ಯ)

ರೋಗಿಗಳೇ ದೇವರೆಂದುಕೊಂಡು ಅವರ ಸೇವೆಯೇ ಮಹಾಪೂಜೆ ಎಂದು ನಂಬಿಕೊಂಡು ವೈದ್ಯಲೋಕಕ್ಕೆ ಸಮರ್ಪಿಸಿಕೊಂಡು ನಾಲ್ಕು ದಶಕಗಳ ಕಾಲ ಸಾರ್ಥಕ ಸೇವೆಗೈದ ವೈದ್ಯರೊಬ್ಬರ ಬದುಕು ಬುತ್ತಿ ಇದಾಗಿದೆ.

 ತಮ್ಮೆಲ್ಲರಿಗೂ ಚಿರಪರಿಚಿತರಾಗಿರುವ ವೈದ್ಯ ಡಾ. ಎಸ್.ಎಸ್. ಗುಬ್ಬಿ. ಬಹುಮುಖ ವ್ಯಕ್ತಿತ್ವ ಹೊಂದಿರುವ ಡಾ. ಗುಬ್ಬಿಯವರು, ವೈದ್ಯಲೋಕದಲ್ಲಿ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. 

 ಸಿದ್ಧಬಸ್ಸಯ್ಯ ಅವರು ಹುಟ್ಟಿದ್ದು ಯಾದಗಿರಿ ಜಿಲ್ಲೆ ಕೊಂಕಲ್‌ನಲ್ಲಿ. ಆದರೆ, ಆರಂಭಿಕದಲ್ಲಿ ಅಕ್ಷರ ದೀಕ್ಷೆ ಪಡೆದುಕೊಂಡಿದ್ದು ತಾಯಿಯ ತವರೂರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಲಟ್‌ನಲ್ಲಿ. ಕೊಂಕಲ್‌ನಲ್ಲಿ ೩ನೇ ತರಗತಿ, ತುಮಕೂರಿನಲ್ಲಿ ೪ನೇ ತರಗತಿ ಸುರಪುರನಲ್ಲಿ ೫ಮತ್ತು ೬ನೇ ತರಗತಿ, ವಡಗೇರಾದಲ್ಲಿ ೭ತರಗತಿ, ಯಾದಗಿರಿಯಲ್ಲಿ ೮ನೇ ತರಗತಿ, ೯ಮತ್ತು ೧೦ನೇ ತರಗತಿ ಕಲಬುರಗಿಯ ಎಂಪಿಹೆಚ್‌ಎಸ್ ಶಾಲೆ, ಪಿಯುಸಿ ಶಿಕ್ಷಣ ಕಲಬುರಗಿಯ ಸರಕಾರಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಸರಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದು, ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವೈದ್ಯ ಪದವಿ ಪಡೆಯುತ್ತಾರೆ. ಕಲಬುರಗಿಯ ಎಂ.ಆರ್.ಎಂ.ಸಿ. ಕಾಲೇಜಿನಲ್ಲಿ ಅರ್ಥೋಪೆಡಿಕ್ ವಿಷಯದಲ್ಲಿ ಎಂ.ಎಸ್. ಪದವಿ ಪಡೆಯುತ್ತಾರೆ. ಹೀಗೆ ಅವರ ಶಿಕ್ಷಣ ಯಾತ್ರೆ ವಿವಿಧ ಸ್ಥಳಗಳಲ್ಲಿ ಸಾಗಿ ಬರುತ್ತದೆ. 

 ಸಾಮಾನ್ಯವಾಗಿ ವೈದ್ಯ ಶಿಕ್ಷಣ ಪಡೆದ ಬಹುತೇಕ ಜನರಿಗೆ ನಮ್ಮ ಸಾಮಾಜಿಕ ಸ್ಥಿತಿಗತಿ, ಜನರ ಬದುಕು ಯಾವುದು ಗೊತ್ತಿರುವುದೇ ಇಲ್ಲ ಎಂದರೂ ತಪ್ಪಾಗದು. ಆದರೆ, ಡಾ. ಗುಬ್ಬಿಯವರಿಗೆ ಹಸಿವು, ನೀರಡಿಕೆ, ಜನಸಾಮಾನ್ಯರ ಬದುಕು ಎಲ್ಲವೂ ಅನುಭವಜನ್ಯವಾದದ್ದು. ಅವರಿಗೆ ಮತ್ತೊಬ್ಬರ ದೇಹದೊಳಗೆ ಪರಕಾಯ ಪ್ರವೇಶ ಮಾಡುವುದು ಸುಲಭ. ಹೀಗಾಗಿ ಮತ್ತೊಬ್ಬರ ಬದುಕು ಅರ್ಥೈಸಿಕೊಂಡು ವ್ಯವಹರಿಸುತ್ತಾರೆ.

 ಪದವಿ ಗಳಿಸಿಕೊಂಡು ೧೯೭೯ ರಿಂದ ೨೦೧೩ರವರೆಗೆ ೩೪ವರ್ಷಗಳ ಕಾಲ ಕಲಬುರಗಿ ಎಂ.ಅರ್. ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ೨೦೧೩ ರಿಂದ ೨೦೧೭ರವರೆಗೆ ಐದು ವರ್ಷಗಳ ಕಾಲ ತೆಲಂಗಾಣದ ಸಂಗಾರೆಡ್ಡಿಯ ಎಂ.ಎನ್.ಆರ್. ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಮತ್ತು ಎನ್.ಎಚ್.ಎಂ ಯೋಜನೆಯಡಿ ಒಂದು ವರ್ಷ ಗುತ್ತಿಗೆ ಆಧಾರದ ಮೇರೆಗೆ ಡಿ.ಎನ್.ಬಿ. ಸ್ನಾತಕೋತ್ತರ ಶಿಕ್ಷಕರು/ಸಿನಿಯರ್ ಕನ್ಸಲ್‌ಟಂಟ್ ಆಗಿ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆಗೈದಿದ್ದಾರೆ. ನಂತರ ಕಲಬುರಗಿಯ ಜಿಮ್ಸ್ನಲ್ಲಿ ೬ ತಿಂಗಳು ಕಾಲ ಅರ್ಥೋಪೆಡಿಕ್ಸ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈಗಲೂ ಖಾಸಗಿ ಆಸ್ಪತ್ರ ನಿರ್ವಹಿಸಿಕೊಂಡು ಬರುತ್ತಿದ್ದಾರೆ.  

 ಹೀಗೆ ವೈದ್ಯರಾಗಿ ಸೇವೆ ಸಲ್ಲಿಸುತ್ತಾ, ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳುವ ಸಂಬಧ ಮಿರಜ್‌ನ ಸ್ವಾಸ್ಥಿಮ್ಮ ಯೋಗ ಪ್ರತಿಷ್ಠಾನದಲ್ಲಿ ರಶ್ಯನ್ ತಂತ್ರಜ್ಞಾನ (ಇಲಿಝಾರೋವ್ ಎಕ್ಸಟರ್ನಲ್ ಫಿಕ್ಸೇರ‍್ಸ್), ಮುಂಬಯಿ ಸ್ಯೆಯನ್ ಆಸ್ಪತ್ರೆಯಲ್ಲಿ ಬೆನ್ನು ಮತ್ತು ನರರೋಗ ಶಾಸ್ತ್ರ ಚಿಕಿತ್ಸೆ ಹಾಗು ಬಹುಮೂಳೆ ಮುರಿತ ಚಿಕಿತ್ಸೆ ಕುರಿತು ವಿಶೇಷ ತರಬೇತಿ ಪಡೆದುಕೊಂಡಿದ್ದಾರೆ.

 ಓದಿ ಸಂಪಾದಿಸಿದ ಜ್ಞಾನ, ವಿಶೇಷ ತರಬೇತಿ ಪಡೆದ ಜ್ಞಾನ ಹಾಗು ತಮ್ಮ ಜೀವನಾನುಭವದ ಜ್ಞಾನ ಎಲ್ಲವೂ ಸಂಸ್ಕರಿಸಿ ರೋಗಿಗಳ ಶುಶ್ರೂಷೆಗೆ ಬಳಸಿರುವುದು ವಿಶೇಷವಾಗಿದೆ. ವೈದ್ಯಲೋಕ ವಿಸ್ಮಯಗೊಳಿಸುವ ರೀತಿಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಬೇರೆ ವೈದ್ಯರಿಗಿಂತ ಇವರ ಸೇವೆ ವಿಭಿನ್ನವಾಗಿದೆ. ರೋಗಿಯ ಆರ್ಥಿಕ ಸ್ಥಿತಿಗತಿ ಅರಿತು, ಇರುವ ವೈದ್ಯಕೀಯ ಸೌಲಭ್ಯದಲ್ಲೇ ಚಿಕಿತ್ಸೆ ನೀಡುವುದು ವಿಶೇಷವಾಗಿರುತ್ತದೆ. ಆದಷ್ಟು ಅಲ್ಪ ವೆಚ್ಚದಲ್ಲಿ ಆರೋಗ್ಯ ಭಾಗ್ಯ ನೀಡಬೇಕು, ಸಮಾಜಕ್ಕೆ ತಮ್ಮ ಜ್ಞಾನ ಸದ್ಭಳಕೆ ಆಗಬೇಕೆಂಬ ಪರಿಕಲ್ಪನೆಯಿಂದ ಸೇವೆಗೆ ತೊಡಗಿಸಿಕೊಂಡಿದ್ದಾರೆ.

 ಹಣ ಮಾಡಬೇಕೆಂಬ ಹಂಬಲದಿಂದ ಯಾವತ್ತೂ ಹೋಗಲಿಲ್ಲ. ಉಪ ಜೀವನ ಮಾಡಲೇಬೇಕು. ಅದು ಎಲ್ಲರಿಗೂ ಅನಿವಾರ್ಯವಾಗಿದೆ. ಉಪ ಜೀವನ ಹೇಗೆ ಮಾಡಬೇಕು ಎಂಬುದು ಅವರಿಂದ ನೋಡಿ ಕಲಿಯುವಂತಹದ್ದು. ಅವರ ಉಪ ಜೀವನದ ಮಾದರಿಯೇ `ಮಹಾಜೀವನ’ದ ದಾರಿ ಆಗಿ ಪರಿವರ್ತನೆಯಾಗುತ್ತದೆ ಎಂಬ ಸತ್ಯ ಕೂಡ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. 

 ಮೃದು ಮಾತು, ಹಾಸ್ಯ ಚಟಾಕೆ, ರೋಗಿಗಳ ಜೊತೆ ಮಾಡುವ ಆಪ್ತ ಸಮಾಲೋಚನೆ ರೋಗಿಗಳಿಗೆ ಅರ್ಧ ರೋಗ ವಾಸಿ ಮಾಡುತ್ತದೆ. ಇನ್ನು ಮಿತ ವೆಚ್ಚದ ಔಷಧೋಪಚಾರದಿಂದ ಪೂರ್ಣ ರೋಗ ಮುಕ್ತರನ್ನಾಗಿಸುವ ಕಲೆ ಡಾ. ಗುಬ್ಬಿಯವರಿಗೆ ಕರಗತವಾಗಿ ಬಿಟ್ಟಿದೆ. ಬಡರೋಗಿಗಳ ಚಿಕಿತ್ಸಾ ಶುಲ್ಕ ಆ ಭಗವಂತ ಭರಿಸುತ್ತಾನೆ ಎಂಬ ನಂಬಿಕೆಯುಳ್ಳವರು. ಹೀಗಾಗಿ ಇವರ ಬಳಿ ಉಚಿತ ಚಿಕಿತ್ಸೆ ಪಡೆದು ಹೋದವರೇ ಹೆಚ್ಚು. ಎಷ್ಟೋ ಅನುಕೂಲಸ್ಥ ಜನರೂ ಉಚಿತ ಚಿಕಿತ್ಸೆ ಪಡೆದಿರುವುದು ಕಾಣಬಹುದಾಗಿದೆ. ದಾನ ಧರ್ಮ ಅವರ ರಕ್ತದಲ್ಲೇ ಬೆರೆತು ಹೋಗಿದೆ. ದೊಡ್ಡದೇನೂ ನಮ್ಮ ಕೈಯಿಂದ ಆಗಲಾರದಿದ್ದರೆ, ನಿತ್ಯ ಮಲಗುವ ಮುನ್ನ ಪಕ್ಕದ ಮನೆಯವರಿಗೆ `ಊಟ ಆಯಿತಾ ?’ ಅಂತ ಕೇಳಿ ಮಲಗಬೇಕು ಎಂಬ ವಿಚಾರದವರು. 

 ಕೇವಲ ಆಸ್ಪತ್ರೆ ಹುಡುಕಿಕೊಂಡು ಬರುವ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ ಅಂತಲ್ಲ, ಅವರು ವೈದ್ಯ ಮಿತ್ರರೊಂದಿಗೆ ಜೊತೆಗೂಡಿ ಗ್ರಾಮಾಂತರ ಪ್ರದೇಶದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸಿದ್ದೆಷ್ಟು ಲೆಕ್ಕಕ್ಕಿಲ್ಲ. ನೀಡಿದ ಉಪನ್ಯಾಸಗಳೆಷ್ಟು, ರೋಗಿಗಳಿಗೆ ಮಾಡಿದ ಆಪ್ತ ಸಮಾಲೋಚನೆಗಳೆಷ್ಟು... ಹೀಗೆ ಎಣಿಸಿ ಲೆಕ್ಕಕ್ಕಿಡುವಂತಿಲ್ಲ. 

 ಲಾಭ ಹಾನಿಯ ಲೆಕ್ಕಾಚಾರದಿಂದ ಮಾಡಿದ ವೃತ್ತಿಯಲ್ಲ, ಅವರು ಮಾಡಿದ್ದು ಸೇವಾ ಮನೋಭಾವದ ಪೂಜೆ ! ವೃತ್ತಿಯ ಜೊತೆಗೆ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪ್ರತಿ ಮಾಸಿಕ ಹಾಗು ಪ್ರತಿ ವಾರವೂ ಕಲಬುರಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಂತನಾಗೋಷ್ಠಿಗಳು ನಡೆಸಿದ್ದಾರೆ. ವೈದ್ಯ ಸಾಹಿತ್ಯ ಪರಿಷತ್ತು ಮತ್ತು ವಿಕಾಸ ಅಕಾಡೆಮಿ ಆಶ್ರಯದಲ್ಲಿ `ಆಪ್ತ ಸಮಾಲೋಚಕರ ತರಬೇತಿ’ ಕೊಡಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ವೈದ್ಯಕೀಯ ಸಮಸ್ಯೆಗಳ ಕುರಿತು ಅರಿವು ಮೂಡಿಸಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕಲಬುರಗಿ ಘಟಕದ ಆಶ್ರಯದಲ್ಲಿ ಮೂರು ವರ್ಷಗಳಲ್ಲಿ ಶಾಲಾ ಕಾಲೇಜುಗಳಿಗೆ ಅಲೆದಾಡಿ ಮಕ್ಕಳಲ್ಲಿ ಮನೆ ಮಾಡಿದ ಮೂಢನಂಬಿಕೆಗಳು ಹೋಗಲಾಡಿಸುವ ಪ್ರಯತ್ನ ಮಾಡಿದ್ಧಾರೆ. ಗುಲಬರ್ಗ ವಿಶ್ವವಿದ್ಯಾಲಯದಲ್ಲಿ ರಾಜ್ಯ ಮಟ್ಟದ ಬಾಲ ವಿಜ್ಞಾನಿಗಳ ಸಮಾವೇಶದ ಸಂಚಾಲಕತ್ವ ವಹಿಸಿಕೊಂಡಿದ್ದರು. ಸುಮಾರು ರಾಜ್ಯ ಮಟ್ಟದ ೧೨೦೦ ಬಾಲ ವಿಜ್ಞಾನಿಗಳು ಭಾಗವಹಿಸಿದ್ದು, ಅವರ ಸಂಘಟನಾ ಚಾತುರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. 

 ಜೊತೆಗೆ ಕರ್ನಾಟಕದ ಅರ್ಥೋಪೆಡಿಕ್ ಸಂಘದ ಸದಸ್ಯರು, ಮುಂಬಯಿನ ಬಾಂಬೆ ಅರ್ಥೋಪೆಡಿಕ್ ಸಂಘದ ಸದಸ್ಯರು, ದೆಹಲಿಯ ಇಂಡಿಯನ್ ಅರ್ಥೋಪೆಡಿಕ್ ಸಂಘದ ಸದಸ್ಯರು, ಇಂಡಿಯನ್ ಅರ್ಥೋಪೆಡಿಕ್ ಅಸೋಶಿಯನ್ ಕಾರ್ಯದರ್ಶಿಯಾಗಿ ಎಂ.ಆರ್.ಎಂ.ಸಿ. ಟೀರ‍್ಸ್ ಅಸೋಶಿಯನ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಸಮಾಜಮುಖಿ ಸಂಘಟನೆಗಲ್ಲಿ ತೊಡಗಿಸಿಕೊಂಡಿದ್ದಾರೆ. ನಾಟಕ, ಸಂಗೀತ, ವಿಶೇಷ ಉಪನ್ಯಾಸದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಜಾತಿ, ಮತದ ಬೇಲಿಯಾಚೆಯೂ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 

 ಡಾ. ಗುಬ್ಬಿ ಅವರ ಸೇವೆಯನ್ನು ಮೆಚ್ಚಿ ಕರ್ನಾಟಕದ ಮೂಲೆ ಮೂಲೆಗಳಿಂದ ವಿವಿಧ ಸಂಘಟನೆಗಳು `ಕಾಯಕ ಜೀವಿ’, `ಡಾ. ರಾಜ ರಾಜ್ಯೋತ್ಸವ ಪ್ರಶಸ್ತಿ’, ``ಅವ್ವ’, `ಇಂದಿರಾಗಾಂಧಿ ಸದ್ಭಾವನಾ ಚಿನ್ನದ ಪದಕ ಪ್ರಶಸ್ತಿ’, `ಜನಕಲ್ಯಾಣ ವೈದ್ಯಶ್ರೀ’, `ಗೌಡ’, `ಕಲ್ಯಾಣ ಸಿರಿ’, `ಸಾಹಿತ್ಯ ಸೇವಾ ರತ್ನ’ ಹೀಗೆ ಅರ್ಧ ಶತಕಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿವೆ. ತೀರ ಇತ್ತೀಚಿನ ದಿನಗಳಲ್ಲಿ ಬೀದರನ ಚಟ್ನಳ್ಳಿ ಮಠದ `ವೈದ್ಯ ಸಂಗಣ್ಣ’, ಪ್ರಶಸ್ತಿ, ಕರ್ನಾಟಕ ಅರ್ಥೋಪೆಡಿಕ್ ಅಸೋಶಿಯನ್ ವತಿಯಿಂದ ನೀಡಲಾದ ಗೌರವ ಪ್ರಶಸ್ತಿ ಹಾಗು ೨೦೨೦ನೇ ಸಾಲಿನಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ -ಕರ್ನಾಟಕ ರಾಜ್ಯ ಶಾಖೆ ಕೊಡಮಾಡುವ `ಡಾಕ್ರ‍್ಸ್ ಡೇ’ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದು ಉಲ್ಲೇಖಿಸಬಹುದಾಗಿದೆ. 

 ಡಾ. ಗುಬ್ಬಿಯವರು ತಮ್ಮ ಬದುಕಿನ ೭೪ ವರ್ಷಗಳ ಕಾಲ ಯಂತ್ರದಂತೆ ಸಮಾಜಮುಖಿಯಾಗಿ ದುಡಿಯುತ್ತಾ ಸಾಗಿರುವುದು ದೊಡ್ಡ ದಾರಿ., ರಾಜ ಬೀದಿ. ಈ ಸುದೀರ್ಘ ದಾರಿಯಲ್ಲಿ ಚಿಕ್ಕದಾದ ಮನೆ ಹೊರತು ಪಡಿಸಿ, ತನ್ನ ನಂಬಿದ ಕುಟುಂಬದವರಿಗೇನು ಮಾಡಲಿಲ್ಲ. ಮಕ್ಕಳಿಗೆ ಅವರು ಇಷ್ಟ ಪಟ್ಟ ರೀತಿಯಲ್ಲಿ ಓದಿಸಿರುವುದು ಬಿಟ್ಟರೇನು ಮಾಡಲಿಲ್ಲ. ಬದಲಾಗಿ ಸಮಾಜಮುಖಿಯತ್ತ ಮುಖ ಮಾಡಿ ಸಾಗಿದವರು ಹಿಂತಿರುಗಿಯೂ ನೋಡದ ಸಂತ ! ಸಾಹಿತ್ಯ, ವೈದ್ಯಕೀಯ ಸೇವೆ, ಉಪನ್ಯಾಸ, ಶಿಬಿರಗಳು, ವೈದ್ಯಕೀಯ ಕ್ಷೇತ್ರ ಹೊರತುಪಡಿಸಿ ವಿವಿಧ ಸಂಘಟನೆಗಳ ಒಡನಾಟ ಎಲ್ಲವೂ ನೋಡಿದರೆ, ಗುಬ್ಬಿಯವರ ದುಡಿತದ ತೀವ್ರತೆ ಕಲ್ಪನೆಗೆ ಮೀರಿದ್ದಾಗಿದೆ. ಒಂದೇ ಜನ್ಮದಲ್ಲಿ ಮೂರು ಜನ್ಮದಲ್ಲಿ ಮಾಡಬಹುದಾದಷ್ಟು ಸೇವೆ ಸಲ್ಲಿಸಿದ್ಧಾರೆ. ಅವರ ಬದುಕು ಇತರಿಗೆ ಮಾದರಿ, ಅನುಕರಣೀಯ.

      -ಗುಂಡುರಾವ ಕಡಣಿ

    ಗೌರವ ಸಂಪಾದಕರು 

 ಗುರುಪದೇಶ ಪತ್ರಿಕೆ ಕಲಬುರಗಿ