ಆಳಂದ ತಾಲೂಕಿನ ಶರಣಪ್ಪ ನೂತನ ಪೊಲೀಸ್ ಕಮಿಷನರ್
ಎಸ್.ಡಿ.ಶರಣಪ್ಪ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದವರು, ತವರಿನಲ್ಲಿ ಸಂಭ್ರಮ..
ಆಳಂದ ತಾಲೂಕಿನ ಶರಣಪ್ಪ ನೂತನ ಪೊಲೀಸ್ ಕಮಿಷನರ್
ಕಲಬುರಗಿ: ಕಲಬುರಗಿ ನಗರ ನೂತನ ಪೊಲೀಸ್ ಕಮಿಷನರ್ ಹುದ್ದೆಗೆ 2009ನೇ ವೃಂದದ ಐಪಿಎಸ್ ಅಧಿಕಾರಿ, ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ಎಸ್.ಡಿ. ಶರಣಪ್ಪ ಅವರು ನಿಯೋಜನೆಗೊಂಡಿದ್ದಾರೆ.
ಪೊಲೀಸ್ ಕಮಿಷನರ್ ಆಗಿದ್ದ ಚೇತನ್ ಆರ್. ಅವರು ತಿಂಗಳ ಹಿಂದೆಯೇ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾಗಿ ವರ್ಗಾವಣೆಗೊಂಡಿದ್ದರು. ಈಗ, ರೈಲ್ವೆ ಪೊಲೀಸ್ ಡಿಐಜಿ ಆಗಿದ್ದ ಎಸ್.ಡಿ. ಶರಣಪ್ಪ ಅವರನ್ನು ಸಿಟಿ ಪೊಲೀಸ್ ಕಮಿಷನರ್ ಹುದ್ದೆಗೆ ನಿಯೋಜನೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.
ತುಮಕೂರಿನಲ್ಲಿ ಪ್ರೊಬೇಷನರಿ ಪೂರ್ಣಗೊಳಿಸಿದ ಶರಣಪ್ಪ ಅವರು, ಶಿವಮೊಗ್ಗ ಜಿಲ್ಲೆಯ ಸಾಗರ ವಿಭಾಗದ ಎಸಿಪಿಯಾಗಿದ್ದರು. ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಆಗಿದ್ದಾಗ 2020ರಲ್ಲಿ ನಡೆದ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಿದ್ದರು.