ಸರಳ ಸಜ್ಜನ ವ್ಯಕ್ತಿ- ಶಿವರಾಜಪ್ಪ ನಾಗಪ್ಪ ರೂಗನ :
ಸರಳ ಸಜ್ಜನ ವ್ಯಕ್ತಿ- ಶಿವರಾಜಪ್ಪ ನಾಗಪ್ಪ ರೂಗನ :
ಕರ್ನಾಟಕದ ಮುಕುಟ ಪ್ರಾಯವನ್ನು ಎನಿಸಿಕೊಂಡಿರುವ, ವಿಶೇಷವಾಗಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯವಾಗಿ, ಅತ್ಯಂತ ಹೆಸರು ಮಾಡಿದ ಬೀದರ ಜಿಲ್ಲೆಯಾಗಿರುತ್ತದೆ. ಬೀದರ ಜಿಲ್ಲೆಯಲ್ಲಿ ಎಲ್ಲಾ ವರ್ಗದವರು, ಹಿಂದಿನ ಕಾಲದಿಂದಲೂ ಇಂದಿನ ಕಾಲದ ವರೆಗೂ ಪ್ರೀತಿ, ಪ್ರೇಮ, ಸೌಹಾರ್ದಯುತವಾಗಿ, ಆಧ್ಯಾತ್ಮಕವಾಗಿ, ಐಕ್ಯತೆ ಮತ್ತು ಸಾಮರಸ್ಯದಿಂದ ಕೂಡಿ, ರಾಷ್ಟ್ರೀಯ ತತ್ವ ಸಿದ್ಧಾಂತಗಳನ್ನು, ಸಾಧು-ಸಂತರ, ಶರಣರ ತತ್ವಗಳನ್ನು ಪ್ರತಿಪಾದನೆ ಮಾಡುತ್ತಾ ಬಂದಿರುವ ಜಿಲ್ಲೆಯಾಗಿದೆ.
ಇಲ್ಲಿಯ ಹುಮನಾಬಾದ ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ರಜಾಕಾರ ಚಳುವಳಿಯ ವಿರುದ್ಧ ಹೋರಾಟಗಾರರು, ಸಮಾಜ ಪರಿವರ್ತಕರು, ಇಂಥವರಲ್ಲಿ ಮಾಣಿಕ ಪ್ರಭು ದೇವಸ್ಥಾನದಿಂದ, ಗಡವಂತಿ ಗ್ರಾಮವು ವಿಶೇಷವಾಗಿ ರೂಗನ ಕುಟುಂಬವು, ಸ್ಮರಣಿಯವಾಗಿದೆ.
ಜನನ ಮತ್ತು ಶಿಕ್ಷಣ : “ಹುಟ್ಟಿದರೆ ತಾಯಿ ಸಂತೋಷ ಪಡಬೇಕು, ಬೆಳೆದರೆ ತಂದೆ ಗರ್ವ ಪಡಬೇಕು, ಬದುಕಿದರೆ, ಸಮಾಜ ಇಷ್ಟ ಪಡಬೇಕು. ಸತ್ತರೆ, ವೈರಿಯು ಕಣ್ಣೀರು ಇಡಬೇಕು ಇದುವೇ ಜೀವನ” ಎಂಬಂತೆ, ಗಡವಂತಿ ಗ್ರಾಮದಲ್ಲಿ ಸ್ವಾಭಿಮಾನ, ಅಭಿಮಾನದ ಖಣಿಗಳಾದ ಆದರಣಿಯ ನಾಗಪ್ಪ ರೂಗನ ಮತ್ತು ಆಯುಷ್ಮತಿ ಬಸಮ್ಮ ರೂಗನ, ಇವರ ಪವಿತ್ರ ಉದರದಲ್ಲಿ, 1942 ರಲ್ಲಿ ಜನಿಸಿ ಬಂದವರೇ, ಶಿವರಾಜಪ್ಪ ನಾಗಪ್ಪ ರೂಗನ ನವರು, ಅಂದಿನ ಕಾಲ ಘಟ್ಟದಲ್ಲಿಯೂ ಸಹ ಅವರ ತಂದೆ-ತಾಯಿ ಶಿವರಾಜಪ್ಪ ರೂಗನರಿಗೆ ಒಳ್ಳೆಯ ಶಿಕ್ಷಣವನ್ನು ಕಲಬುರಗಿಯ ನೂತನ ವಿದ್ಯಾಲಯದಲ್ಲಿ ಎಚ್.ಎಸ್.ಸಿ ವಿದ್ಯಾಭ್ಯಾಸ್ ಮಾಡಿಸಿದ್ದಾರೆ. ನಂತರ ಓದು-ಬರಹದ ಹಂಬಲ ಇವರನ್ನು ಹುಮನಾಬಾದದ, ಸರ್ಕಾರಿ ಪದವಿ-ಪೂರ್ವ ಕಾಲೇಜನಲ್ಲಿ, ಪಿಯುಸಿ ಶಿಕ್ಷಣ ಪಡೆದರು. ಮುಂದೆ ಪದವಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ, ಇವರಿಗೆ ಭಾಲ್ಕಿಯ ಪ್ಯಾಗೆ ಕುಟುಂಬದ ದಿವಂಗತ ವಿಠಾಬಾಯಿ ಮತ್ತು ಶಿವರಾಮ ಪ್ಯಾಗೆ ಇವರ ಸುಪತ್ರಿಯಾದ ಸಾತ್ವಿಕ ಶಿರೋಮಣಿ ಪದ್ಮಾವತಿಯೊಂದಿಗೆ 1961 ರಲ್ಲಿ ವಿವಾಹವಾಯಿತು. “ ಮಾನವನು ಜೀವನದಲ್ಲಿ ಮೇಲೆ ಬರಲು ಯಾವ ಪದವಿ ಅವಶ್ಯಕತೆ ಇಲ್ಲ. ಒಳ್ಳೆಯ ಮಾತು, ಒಳ್ಳೆಯ ವಿಚಾರ, ಒಳ್ಳೆಯ ನಡತೆ, ನಿರ್ಮಲ ಹೃದಯ ಮನುಷ್ಯನನ್ನ ಉನ್ನತ ಸ್ಥಾನಕ್ಕೆ ಏರಿಸುತ್ತದೆ” ಎಂದು ನಂಬಿದ ಇವರು ಜೀವನದಲ್ಲಿ “ಜೀವೋ ಔರ್ ಜೀವೋದೊ” ಎಂಬಂತೆ ಎಲ್ಲರೊಂದಿಗೆ, ಒಳ್ಳೆಯ ಸಂಬAಧ ಬೆಳಿಸಿಕೊಂಡು ತಾಲೂಕಿನಲ್ಲಿ ಒಳ್ಳೆಯ ನಾಗರಿಕರಾಗಿ ಹೊರಹೊಮ್ಮಿದವರೇ ಶಿವರಾಜಪ್ಪ ರೂಗನ್.
ಮಕ್ಕಳು ಮತ್ತು ಶಿಕ್ಷಣ : “ ಎಲ್ಲಾ ದುಶ್ಚಟಗಳಿಂದ ಮುಕ್ತರಾಗಿ, ಸ್ವಚ್ಛವಾಗಿರಲು ಕಲಿಯಿರಿ, ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿ, ಅವರ ಮನಸ್ಸಿನಲ್ಲಿ ನಿಧಾನವಾಗಿ ಮಹಾತಾಕಾಂಕ್ಷೆಯನ್ನು ಹುಟ್ಟುಹಾಕಿ, ಅವರು ಮಹಾನ್ ವ್ಯಕ್ತಿಯಾಗಲಿದ್ದಾರೆ ಎಂದು ಅವರಿಗೆ ಭರವಸೆ ನೀಡಿ, ಅವರ ಕೀಳಿರಿಮೆಯನ್ನು ನಾಶಮಾಡಿ” ಎಂಬ ಡಾ|| ಬಾಬಾಸಾಹೇಬ ಅಂಬೇಡ್ಕರವರ ದಿವ್ಯವಾಣಿಗೆ, ಮಾರು ಹೋಗಿ, ತಮ್ಮಿಂದ ಪದವಿ ಶಿಕ್ಷಣ ಪಡೆಯದಿದ್ದರೂ ತನ್ನ ಮಕ್ಕಳಿಗೆ, ವಿದ್ಯಾಭ್ಯಾಸ್ ಮಾಡಿಸಬೇಕೆಂಬ ದೃಢಸಂಕಲ್ಪ ಮಾಡಿದರು.
ಶಾಲಿವಾನ ರೂಗನ ಇವರು ಚೊಚ್ಚಿಲ ಮಗನಾಗಿ, ಪದವಿ ಶಿಕ್ಷಣ ಪಡೆದು, ಮಾಣಿಕ ನಗರ ಗ್ರಾಮ ಪಂಚಾಯತ ಸದಸ್ಯರಾಗಿ, ಅಧ್ಯಕ್ಷರಾಗಿ ಜನಾನುರಾಗಿಯಾಗಿ ಕಾರ್ಯಮಾಡಿ, ಎಲ್ಲಾ ಜನರ ಮೆಚ್ಚುಗೆ ಪಡೆದಿದ್ದಾರೆ. ಶಾಲಿವಾನ ಇವರು ಕನ್ಯಾ ಕುಮಾರಿಯೊಂದಿಗೆ ವಿವಾಹವಾಗಿ ಮೂರು ಜನ ಗಂಡು ಮಕ್ಕಳೊಂದಿಗೆ, ತಂದೆಗೆ ತಕ್ಕಮಗನಾಗಿ ಜೀವಿಸುತ್ತಿದ್ದಾರೆ. ಎರಡನೇ ಸುಪುತ್ರರಾದ ಗುರಲಿಂಗಪ್ಪಾ ರೂಗನ ಉನ್ನತ ಶಿಕ್ಷಣ ಪಡೆದು, ಅರಣ್ಯ ಇಲಾಖೆಯಲ್ಲಿ ಸೆಕ್ಸೇನ್ ಅರಣ್ಯ ಅಧಿಕಾರಿಯಾಗಿ (ಆರ್.ಎಫ್.ಓ) ಸಹ ಆಗಿದ್ದರು. ಇವರು ಸುನಿತಾರೊಂದಿಗೆ ಮದುವೆಯಾಗಿ, ಸುನಿತಾ ಇವರು, ಬೀದರನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾ, ಇವರಿಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಮೂರನೇಯವರಾಗಿ ಪರಮೇಶ್ವರಪ್ಪ ರೂಗನ, ಇಂಜಿನೀಯರಿAಗ ಪದವಿ ಪಡೆದು, ಕಲಬುರಗಿಯ ಕೆ.ಐ.ಎ.ಡಿ.ಬಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಕಾರ್ಯದ ಜೊತೆಗೆ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದಾರೆ. ಇವರು ಭಾಲ್ಕಿಯ ಪ್ಯಾಗೆ ಕುಟುಂಬದ ಡಾ|| ಪುಟ್ಟಮಣಿ ದೇವಿದಾಸ್ ಇವರೊಂದಿಗೆ, ವಿವಾಹವಾಗಿದ್ದಾರೆ. ಡಾ|| ಪುಟ್ಟಮಣಿ ದೇವಿದಾಸ್ ಇವರು, ಕಲಬುರಗಿಯ ಪ್ರತಿಷ್ಠಿತ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ, ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಮಹಾವಿದ್ಯಾಲಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಾ, ಕನ್ನಡ ಸಾಹಿತ್ಯ ಲೋಕಕ್ಕೆ ಅನೇಕ ಕೃತಿಗಳನ್ನು ರಚಿಸಿ, ಸಾಹಿತ್ಯ ಲೋಕದಲ್ಲಿ ಇವರು ಚಿರಪರಿಚಿತರಾಗಿದ್ದಾರೆ. ಜೊತೆಗೆ ಬುದ್ದಿಷ್ಟ ಸೊಸೈಟಿ ಆಫ್ ಇಂಡಿಯಾದ ಮಹಿಳಾ ಘಟಕದ ಅಧ್ಯಕ್ಷರಾಗಿ, ಬುದ್ಧ, ಬಸವ, ಡಾ|| ಅಂಬೇಡ್ಕರವರ ಅಮರ ಸಂದೇಶಗಳನ್ನು ಹಳ್ಳಿ-ಹಳ್ಳಿಗೆ ಪ್ರಚಾರ-ಪ್ರಸಾರ ಮಾಡುವ, ಡಾ|| ಅಂಬೇಡ್ಕರ ಕುರಿತು ತುಂಬಾ ಪ್ರಭಾವ ಶಾಲಿಯಾಗಿ ಭಾಷಣಕಾರರೆಂದು ಪ್ರಖ್ಯಾತಿ ಪಡೆದಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಪದವಿಧರರಾಗಿರುವರು. 4ನೇಯವರಾಗಿ ಓಂಕಾರ ರೂಗನ ಇವರು ಉನ್ನತ ಪದವಿಯೊಂದಿಗೆ, ಕೆ.ಇ.ಎಸ್, ಪದವಿ ಪಡೆದು, ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಮುಖ್ಯ ಗುರುಗಳಾಗಿ, ವಿದ್ಯಾಧಿಕಾರಿಯಾಗಿ, ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಅಕ್ಷರದಾಸೋಹದ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಶ್ರೀಮತಿ ನೂತನ ಇವರೊಂದಿಗೆ ಲಗ್ನವಾಗಿ, ನೂತನ ಇವರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು, ಇವರಿಗೆ, ಮೂರು ಜನ ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗುವನ್ನು ಹೊಂದಿದ್ದಾರೆ. 5ನೇದಾಗಿ ನೀಲಾಂಬಿಕಾ ಇವರು, ಶಂಕರರಾವ ಸೋಮರಾಜ ಇವರೊಂದಿಗೆ ಮದುವೆಯಾಗಿ, ಕಮಲನಗರದ ಸಿದ್ಧಾರಾಮೇಶ್ವರ ಕಾಲೇಜಿನಲ್ಲಿ, ಗ್ರಂಥಪಾಲಕರಾಗಿ, ಕಾರ್ಯನಿರ್ವಹಿಸುತ್ತಾ ಒಬ್ಬ ಹೆಣ್ಣು ಮಗಳನ್ನು ಹೊಂದಿದ್ದಾರೆ. 6ನೇಯ ಮಗನಾಗಿ ಶಂಬುಲಿಂಗ ಇವರು ಉಚ್ಛ ಶಿಕ್ಷಣ ಪಡೆದು, ವರ್ಷಾತಾಯಿಯೊಂದಿಗೆ ಲಗ್ನವಾಗಿ, ಎರಡು ಗಂಡು ಮಕ್ಕಳೊಂದಿಗೆ, ಇಬ್ಬರು ಸಹ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ, ಸೇವೆ ಗೈಯುತ್ತಿದ್ದಾರೆ. ಒಟ್ಟಾರೆಯಾಗಿ ಶಿವರಾಜಪ್ಪ ರೂಗನ ಇವರು 5 ಜನ ಗಂಡು ಮಕ್ಕಳು, 5 ಜನ ಸೊಸೆಯಂದಿರು, ಒಬ್ಬ ಹೆಣ್ಣು ಮಗಳು ಮತ್ತು ಒಬ್ಬ ಅಳೆಯರೊಂದಿಗೆ, 14 ಜನ ಮೊಮ್ಮಕ್ಕಳೊಂದಿಗೆ “ ಮಕ್ಕಳನ್ನು ಹೆತ್ತು , ಪೋಷಿಸುವುದಷ್ಟೇ ಅಲ್ಲ, ಅವರಿಗೆ ಶಿಕ್ಷಣ ನೀಡುವುದು ಸಹ ಕರ್ತವ್ಯವೇ” ಎಂದು ಭಾವಿಸಿದ ಇವರು ತಮ್ಮ ಪತ್ನಿಯೊಂದಿಗೆ ಸಾರ್ಥಕ ಜೀವನ ನಡೆಸಿದ್ದಾರೆ. “ ಜೀವನದಲ್ಲಿ ಸಿಗಬೇಕಾಗಿರೋ ನಿಜವಾದ ಗೆಲವು ಅಂದ್ರೇ, ನೆಮ್ಮದಿಯ ಬದುಕು” ಬುದ್ಧರ ವಾಣಿಗೆ ಅನ್ವಯವಾಗುವುದು ರೂಗನ್ ಕುಟುಂಬ | ಸುಖಿ ಕುಟುಂಬ || ಅವಿಭಕ್ತ ಕುಟುಂಬ |||
ಅಧ್ಯಾತ್ಮಿಕ ಮತ್ತು ರಾಜಕೀಯ :- “ ಮಾನವನ ಬದುಕಿಗೆ ಅಧ್ಯಾತ್ಮಿಕ ಗುರಿಹೊಂದಿದೆ ಎಂಬ ನಂಬಿಕೆಯೇ ಎಂದು ನಂಬಿದ” ಇವರು ಧಾರ್ಮಿಕದಲ್ಲಿ, ಅಧ್ಯಾತ್ಮಿಕದಲ್ಲಿ ಭಜನೆ, ಕೀರ್ತನೆಯಲ್ಲಿ, ಸಾಧು-ಸಂತರ, ಗುರು ಹಿರಿಯರಲ್ಲಿ ಅಪಾರವಾದ ಶೃದ್ಧೆ, ಭಕ್ತಿ-ಭಾವ, ಗೌರವದಿಂದ ಸಮರ್ಪಣ ಮನೋಭಾವ ಹೊಂದಿರುವ ಶಿವರಾಜಪ್ಪ ರೂಗನ. ಅಂತೆ ಇವರು, ಕನ್ನಡ ಕಟ್ಟುವ ಕೆಲಸ ಮಾಡಿದ ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀಮದ್ ಘನಲಿಂಗ್ ಚಕ್ರವರ್ತಿ ಡಾ|| ಚನ್ನಬಸವ ಪಟ್ಟದ್ದೇವರು, ಸಾಮಾಜಿಕ ಕಳಕಳಿ, ದಲಿತಪರ ಕಾಳಜಿ, ಧಾರ್ಮಿಕತೆ, ಸಂಸ್ಕೃತಿಕ ಚಿಂತಕರಾದ ನಾಡೋಜಾ, ಪೂಜ್ಯಶ್ರೀ ಡಾ|| ಬಸವಲಿಂಗ ಪಟ್ಟದ್ದೇವರು, ಹಾರಕೂಡ ಮಠದ ಪೂಜ್ಯಶ್ರೀ ಡಾ. ಶಿವಾಚಾರ್ಯರು, ಭಾಲ್ಕಿಯ ಉರಿಲಿಂಗ ಪೆದ್ದಿಮಠದ ಪೂಜ್ಯರಾದ ಶ್ರೀ ಕರಬಸಯ್ಯ ಸ್ವಾಮಿಜಿ, ಶ್ರೀ ಬಸವಣಪ್ಪ ಸ್ವಾಮೀಜಿ, ರೇವಣಸಿದ್ದಪ್ಪ ಸ್ವಾಮೀಜಿ, ಬೇಲೂರ ಮಠದ ಪೂಜ್ಯಶ್ರೀ ಪಂಚಾಕ್ಷರಿ ಸ್ವಾಮಿಜೀ, ಪೂಜ್ಯಶ್ರೀ ಡಾ|| ಸಿದ್ರಾಮ ಬೇಲ್ದಾಳ ಶರಣರು ಮತ್ತು ನಾಡಿನ ಅನೇಕ ಸಾಧು-ಸಂತರ, ಸ್ವಾಮೀಜಿಯವರ ಸಂಪರ್ಕದಲ್ಲಿ ಬೆಳೆದ ಶ್ರೀ ಶಿವರಾಜಪ್ಪ ರೂಗನ. ಧಾರ್ಮಿಕ ಮತ್ತು ಅಧ್ಯಾತ್ಮಿಕ ಜೊತೆಗೆ ರಾಜಕೀಯದಲ್ಲಿ ಸಹ “ಒಬ್ಬ ಮನುಷ್ಯನ ಗುಣ ತಿಳಿಯಬೇಕಾದರೆ, ಅವನಿಗೆ ಅಧಿಕಾರ ಕೊಟ್ಟು ನೋಡಬೇಕು” ಎಂಬ ವಾಣಿಯಂತೆ, ಇವರು ದುಬಲಗುಂಡಿಯ ಕ್ಷೇತ್ರದಿಂದ ತಾಲೂಕ ಡೆವಲಪ್‌ಮೆಂಟ್ ಬೋರ್ಡಿನ್ ಸದಸ್ಯರಾಗಿ 1978 ರಿಂದ 1985ರ ವರೆಗೆ ಅನೇಕ ಜನಪರ, ಜೀವಪರ, ತಮ್ಮ ವಲಯದ ಜನರಿಗೆ ವಸತಿಗಳನ್ನು ಕೊಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪ್ರತಿ ಮನೆಗೆ ಅಂದು 2500 ರೂಪಾಯಿ ಹತ್ತಾರು ಹಳ್ಳಿ ಜನರಿಗೆ ಆಶ್ರಯ ನೀಡಿದವರು. ಅಂದಿನ ಹುಮನಾಬಾದ ತಾಲೂಕಿನ ತಹಶೀಲ್ದಾರರಾದ ಬಿ. ಭೀಮಯ್ಯ ಇವರ ಸಹಕಾರದೊಂದಿಗೆ, 1977-78 ರಲ್ಲಿ ಸಿ ಫಾರ್ಮ ಕೊಡಿಸಿದವರು ಮತ್ತು ಊರಿನ ರೇಷನ ಡೀಲರ್ ಆಗಿಯೂ ಸಹ ಜನಸೇವೆ ಗೈದಿದ್ದಾರೆ. ಅಲ್ಲದೇ ಹುಮನಾಬಾದಿನ ವಸತಿ ನಿಲಯಗಳಿಗೆ, ಸಂದರ್ಶನ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ್ ಮಾಡಲು ಮಾರ್ಗದರ್ಶನ ಮಾಡಿದ್ದರಿಂದ ಇಂದು ಅನೇಕ ಜನರು, ಅಧಿಕಾರಿಗಳಾಗಿದ್ದಾರೆ. ಇವರಂತೆ, ಇವರ ಧರ್ಮಪತ್ನಿಯು ಪದ್ಮಾವತಿಯೂ ಸಹ ಸುಶಿಕ್ಷಿತರಾಗಿ, ಬಾಲಸೇವಕರಾಗಿ, ಬಾಲವಾಡಿ ಮುಖ್ಯಸ್ಥರಾಗಿ, ವಸತಿನಿಲಯಗಳ ವಾರ್ಡನರಾಗಿ, ಅನೇಕ ಬಡ ಮಕ್ಕಳಿಗೆ ತಾಯ್ತನದ ಹೃದಯವಂತಿಕೆ ನೀಡಿದವರು. ಜೊತೆಗೆ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಅನ್ನದ ಜೊತೆಗೆ, ಅಕ್ಷರದ ಅರಿವು, ಆರೋಗ್ಯಕ್ಕೆ ಹೆಚ್ಚು ಕಾಳಜಿ ವಹಿಸಿದ ಇವರು, ಬಸವಕಲ್ಯಾಣದಿಂದ ನಿವೃತ್ತಿಯನ್ನು ಹೊಂದಿದ ಇವರ ಕಾರ್ಯ ವೈಖರಿಯನ್ನು ಮೆಚ್ಚುವಂತಹದ್ದು, ಮಹಾತ್ಮಾ ಜ್ಯೋತಿಬಾ ಫುಲೆ ಅವರಿಗೆ ಅವರ ಪತ್ನಿಯಾದ ಸಾವಿತ್ರಿಬಾಯಿ ಫುಲೆ, ಸಹಕಾರ ನೆರವು ನೀಡಿದಂತೆ, ಶಿವರಾಜಪ್ಪ ರೂಗನ ರವರಿಗೆ, ಅವರ ಪತ್ನಿಯೂ ಸಹ, ಅವರ ನಡೆ-ನುಡಿ, ಆಚಾರ-ವಿಚಾರ ಅವರ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ, ನಡೆದ ಅಮರ ಜೀವಿಗಳಾಗಿದ್ದಾರೆ.
ಸಂದೇಶ:- “ ವೇದಗಳನ್ನು ಓದಿದವರು, ದೊಡ್ಡವರಾಗುವುದಿಲ್ಲ, ಜನರ ವೇದನೆಗಳನ್ನು ಅರಿತವರು ಮಾತ್ರ ದೊಡ್ಡವರಾಗುತ್ತಾರೆ” ಎಂಬ ಅಣ್ಣ ಬಸವಣ್ಣನವರ ವಚನದಂತೆ, ತಾಲೂಕಿನ ಹಲವಾರು ಜನರ ಮನೆ, ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ‘ಬದುಕಿನ ಅವಧಿಕ್ಕಿಂತ, ಬದುಕಿನ ರೀತಿ ಮುಖ್ಯ’ ಎಂಬಂತೆ, ತನ್ನ ಕುಟುಂಬಕ್ಕೂ ಊರಿಗೂ, ತಾಲೂಕಿಗೂ, ಕೀರ್ತಿ ಕಳಸದಂತೆ ಅತ್ಯಂತ ಕ್ರೀಯಾಶೀಲರಾಗಿ, ಯಾವುದೇ ದಬ್ಬಾಳಿಕೆಗೆ ಅಂಜದೇ, ನಿರ್ಭಯವಾಗಿ, ಬದುಕಿದವರು ಇವರು. ಜನಪರ, ಜೀವಪರ, ಕಾಳಜೀಯ ಅಪಾರವಾದ ಬಂಧು-ಬಳಗ ಮತ್ತು ಅವರ ಕುಟುಂಬದವರನ್ನು ಬಿಟ್ಟು 25-10-2014 ರಂದು ನಿಧನರಾದರು. “ ಸತ್ತಮೇಲೆ ಬದುಕುಬೇಕು ಎಂದರೆ ಒಂದು ಕೆಲಸ ಮಾಡಿ ಹೋಗಿ, ಜನ ಓದುವ ಹಾಗೇ ಏನಾದರೂ ಒಂದು ಬರೆದಿಟ್ಟು ಹೋಗಿ, ಇಲ್ಲವಾದರೆ, ಜನ ನಿಮ್ಮ ಬಗ್ಗೆ ಬರೆಯುವ ಹಾಗೆ ಏನಾದರೂ ಕಾರ್ಯ ಮಾಡಿ ಹೋಗಿ” ಎಂದು ಡಾ|| ಬಾಬಾಸಾಹೇಬ ಅಂಬೇಡ್ಕರ ರವರ ಉವಾಚ್ಯವು ಇವರಿಗೆ ಹೋಲುತ್ತದೆ. ಅಂತೇಯೇ ಇವರ ಚಿರಸ್ಮೃರಣೆಗೆ ರೂಗನ ಕುಟುಂಬದವರು, 10ನೇ ಪುಣ್ಯಾನ್ಮೊದನೆ ಕಾರ್ಯಕ್ರಮದೊಂದಿಗೆ 27-10-2024 ರಂದು ಹುಮನಾಬಾದಿನಲ್ಲಿ ಅವರ ಪ್ರತಿಮೆ ಪ್ರತಿಷ್ಠಾಪನೆ ಮಾಡುವುದು ಮತ್ತು ರೂಗನ ರವರ ಸವಿನೆನಪಿಗಾಗಿ ಭೀಮ ಪ್ರಕಾಶನ ಪ್ರಾರಂಭಿಸುವುದು, ಅವರ ಜೀವನವು ಅಮರ ಮತ್ತು ಅಜರಾಮರ. ಮುಂದಿನ ಯುವ ಜನಾಂಗಕ್ಕೆ ಅವರ ನಡೆ-ನುಡಿ, ಮಾರ್ಗದರ್ಶನ ದಾರಿದೀಪವಾಗಲೆಂದು, ಆಶಿಸೋಣಾ.
-ಡಾ||. ಕೆ.ಎಸ್. ಬಂಧು ಸಿದ್ಧೇಶ್ವರ ,ಕಲಬುರಗಿ. ಮೊ.ನಂ. 9449992776
ಶಿವರಾಜಪ್ಪ ನಾಗಪ್ಪ ರೂಗನ