ಕಮಲಾಪೂರ ತಾಲೂಕು ಪಂಚಾಯತಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ: ಜಿಲ್ಲಾ ಪಂಚಾಯತಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು

ಕಮಲಾಪೂರ ತಾಲೂಕು ಪಂಚಾಯತಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ: ಜಿಲ್ಲಾ ಪಂಚಾಯತಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು
ಕಮಲಾಪುರ, ಜುಲೈ 18:ಕಮಲಾಪೂರ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ನೀಲಗಂಗಾ ಬಬಲಾದ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾದ ಶ್ರೀ ಜಗನ್ನಾಥ ರೆಡ್ಡಿ, ತಾಂತ್ರಿಕ ಸಂಯೋಜಕರಾದ ಶ್ರೀ ರಾಹುಲ ಹಾಗೂ ತಾಂತ್ರಿಕ ಸಹಾಯಕರಾದ ಶ್ರೀ ಉದಯಕುಮಾರ್ ರವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪದ ಕುರಿತು ಕಲಬುರಗಿಯ ಜಿಲ್ಲಾ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರ್ಯಕರ್ತರು ಜಿಲ್ಲಾಪಂಚಾಯತಿಗೆ ಮನವಿ ಸಲ್ಲಿಸಿ, ಮೇಲೆ ಉಲ್ಲೇಖಿಸಿದ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡುವಂತೆ ಹಾಗೂ ಇಲಾಖಾತ್ಮಕ ತನಿಖೆ ಕೈಗೆದುಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.
ಆರೋಪದಂತೆ, ಕಮಲಾಪೂರ ತಾಲೂಕಿನ 18 ಗ್ರಾಮ ಪಂಚಾಯತಿಗಳಲ್ಲಿ ನಡೆಯುವ ನರೇಗಾ ಕಾಮಗಾರಿಗಳಲ್ಲಿ 10-15% ಲಂಚ ನೀಡಿದವರಿಗೆ ಮಾತ್ರ ಬಿಲ್ಲು ಮಾಡಲಾಗುತ್ತಿದ್ದು, ಲಂಚ ನೀಡದ ಗ್ರಾಮ ಪಂಚಾಯತಿಗಳ ಕಾರ್ಯಗಳನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯಲಾಗುತ್ತಿದೆ. ಗೂಗಲ್ ಪಾರ್ಮ್ ಮೂಲಕ ತಪ್ಪು ಮಾಹಿತಿ ದಾಖಲಿಸುವ ಮೂಲಕ ಕೆಲವರಿಗೆ ಮಾತ್ರ ಎಫ್‌ಟಿಒ ಸೃಜಿಸಲಾಗುತ್ತಿದ್ದು, ಇತರರಿಗೆ ವೇತನ ತಡವಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಈ ಹಿಂದೆಯೂ ಜುಲೈ 7 ರಂದು ಇದೇ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಪ್ರತಿಭಟನಾಕಾರರು ವಿಷಾದ ವ್ಯಕ್ತಪಡಿಸಿದರು. ಕೂಡಲೇ ಅಧಿಕಾರಿಗಳನ್ನು ಅಮಾನತ್ತು ಮಾಡಿ, ಇಲಾಖಾತ್ಮಕ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ, ಜಿಲ್ಲಾಧ್ಯಕ್ಷ ಬಾಬು ಮದನಕರ, ಜೈಭೀಮ ಮಾಳಗೆ, ನಾಗೂ ಡೊಂಗರವಾಂವ್, ಅವಿನಾಶ ಕಪನೂರ, ಪ್ರವೀಣ ಖೇಮನ್, ದತ್ತು ಜಮಾದಾರ, ಮೋಹನ ಸಾಗರ, ಮಲ್ಲು ಸಂಕನ, ಪುಟ್ಟು ಸಿರಸಗಿ, ಆಕಾಶ ಭಿಮಳ್ಳಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.