ಡೆತ್ ನೋಟ್ ಬರೆದಿಟ್ಟು ಲಾಡ್ಜ್ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆತ್ಮಹತ್ಯೆ – ತನಿಖೆ ಆರಂಭ

ಡೆತ್ ನೋಟ್ ಬರೆದಿಟ್ಟು ಲಾಡ್ಜ್ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆತ್ಮಹತ್ಯೆ – ತನಿಖೆ ಆರಂಭ
ತುಮಕೂರು: ಜುಲೈ 06, 2025ದಾವಣಗೆರೆ ಜಿಲ್ಲೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಬ್ ಇನ್ಸ್‌ಪೆಕ್ಟರ್ ನಾಗರಾಜು (58) ಅವರು ತುಮಕೂರು ನಗರದ ದ್ವಾರಕಾ ಹೋಟೆಲ್ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಅವರು ಜುಲೈ 1ರಂದು ಲಾಡ್ಜ್‌ನ ನಾಲ್ಕನೇ ಮಹಡಿಯಲ್ಲಿ ಕೊಠಡಿ ಬಾಡಿಗೆಗೆ ಪಡೆದು ನಿಲ್ಲುತ್ತಿದ್ದಾಗ, ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಇಂದಿನ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಲಾಡ್ಜ್ ಸಿಬ್ಬಂದಿ ದುರ್ವಾಸನೆ ಕೇಳಿ ನೋಡಿದಾಗ ಮೃತದೇಹ ಪತ್ತೆಯಾಗಿದ್ದು, ಕೂಡಲೇ ತುಮಕೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಮೃತ ನಾಗರಾಜು ದಾವಣಗೆರೆ ತಾಲ್ಲೂಕಿನ ಜವಳಘಟ್ಟ ಗ್ರಾಮದ ನಿವಾಸಿಯಾಗಿದ್ದು, ನಿವೃತ್ತಿಗೆ ಇನ್ನೂ ಒಂದೂವರೆ ವರ್ಷ ಮಾತ್ರ ಬಾಕಿ ಇತ್ತು. ಆತ್ಮಹತ್ಯೆಗೆ ಮೊದಲು ಮೂರು ಪುಟಗಳ ಡೆತ್ ನೋಟ್ ಬರೆದಿರುವ ಅವರು, “ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ,” ಎಂದು ಬರೆದು ಬಿಟ್ಟಿದ್ದಾರೆ , ಎಂದು ಮೂಲಗಳು ತಿಳಿಸುತ್ತಿವೆ. ಡೆತ್ ನೋಟ್‌ನ ಇತರ ವಿಷಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮೃತರ ಪತ್ನಿ ಲಲಿತಮ್ಮ ಮಾತನಾಡುತ್ತಾ, “ಅವರಿಗೆ ಸುಗರ್, ಬಿಪಿ, ಹೃದಯ ಸಂಬಂಧಿ ಕಾಯಿಲೆ ಇದ್ದವು. ಜುಲೈ 1 ರಂದು ಮನೆಯಿಂದ ಹೋದವರು ನಂತರ ಸಂಪರ್ಕಕ್ಕೆ ಬಂದಿರಲಿಲ್ಲ. ನಾಪತ್ತೆ ಕುರಿತು ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೆವು. ಇಂತಹ ಪರಿಸ್ಥಿತಿಯಲ್ಲೂ ಅವರು ಈ ನಿರ್ಧಾರ ತೆಗೆದುಕೊಂಡಿದ್ದರೆಂದು ನಂಬಲಾಗುತ್ತಿಲ್ಲ,” ಎಂದು ಕಣ್ಣೀರಿಟ್ಟರು.
ಪಿಎಸ್‌ಐ ನಾಗರಾಜು ಅವರು ಕಳೆದ ವರ್ಷ ಮಗಳ ಮದುವೆ ಮಾಡಿದ್ದರು. ಮುಂದಿನ ತಿಂಗಳು ಮಗಳ ಹೆರಿಗೆ ಇರುವದಾಗಿ ಕುಟುಂಬದವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಕಾರಣ ಏನು ಎಂಬ ಪ್ರಶ್ನೆ ಇನ್ನೂ ಅನುತ್ತರವಾಗಿಯೇ ಉಳಿದಿದೆ.
(ಕೃಪೆ ತುತ್ತೂರಿ ಪತ್ರಿಕಾ ಬ್ಯೂರೊ,ತುಮಕೂರು)