ಬಿಳವಾರ ಗ್ರಾಮದಲ್ಲಿ ವಾಮಾಚಾರದ ಆತಂಕ – ಜಮೀನಿನಲ್ಲಿ ಸಂಶಯಾಸ್ಪದ ವಸ್ತುಗಳ ಪತ್ತೆ
ಬಿಳವಾರ ಗ್ರಾಮದಲ್ಲಿ ವಾಮಾಚಾರದ ಆತಂಕ – ಜಮೀನಿನಲ್ಲಿ ಸಂಶಯಾಸ್ಪದ ವಸ್ತುಗಳ ಪತ್ತೆ
ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಸರ್ವೆ ನಂ. 60 ರ ಜಮೀನಿನಲ್ಲಿ ವಾಮಾಚಾರದ ಚಟುವಟಿಕೆ ನಡೆದಿದೆ ಎಂಬ ಆತಂಕ ಗ್ರಾಮಸ್ಥರಲ್ಲಿ ಹರಡಿದೆ. ಜಮೀನಿನ ವಾರಸುದಾರರಾದ ಮೆಹಬೂಬಿ ಅವರ ಪತಿ ಖಾಸಿಂಸಾಬ್ ಚೌದ್ರಿ ಅವರು ಬೆಳಗಿನ ಜಾವ ಹೊಲಕ್ಕೆ ಭೇಟಿ ನೀಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ಹೊಲದ ಬದವಿನ ಬಳಿ ಲಿಂಬು ಹಣ್ಣು, ಕುಂಕುಮ, ಚಂದ್ರದ ಚಿಹ್ನೆಗಳು ಹಾಗೂ ಇತರ ವಾಮಾಚಾರಕ್ಕೆ ಬಳಸುವ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದ್ದು, ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾತನಾಡಿರುವ ಖಾಸಿಂಸಾಬ್ ಚೌದ್ರಿ ಅವರು, “ಅಪರಿಚಿತ ಕಿಡಿಗೇಡಿಗಳು ನಮ್ಮ ಜಮೀನಿನಲ್ಲಿ ವಾಮಾಚಾರದ ಚಟುವಟಿಕೆ ನಡೆಸಿದ್ದಾರೆ. ಇದರಿಂದ ಕುಟುಂಬ ಮತ್ತು ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ,” ಎಂದು ತಿಳಿಸಿದ್ದಾರೆ.
ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿ, ಈ ದುಷ್ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
— ವರದಿ: ಜೆಟ್ಟಪ್ಪ ಎಸ್. ಪೂಜಾರಿ
