ರಾಷ್ಟ್ರ ರಾಜಧಾನಿಯಲ್ಲಿ ಸಂತ ಸೇವಾಲಾಲ್ ಜಯಂತಿ ಸಡಗರ

ರಾಷ್ಟ್ರ ರಾಜಧಾನಿಯಲ್ಲಿ ಸಂತ ಸೇವಾಲಾಲ್ ಜಯಂತಿ ಸಡಗರ

ರಾಷ್ಟ್ರ ರಾಜಧಾನಿಯಲ್ಲಿ ಸಂತ ಸೇವಾಲಾಲ್ ಜಯಂತಿ ಸಡಗರ

ಓಂ ಬಿರ್ಲಾ ಚಾಲನೆ - ರಾಷ್ಟ್ರಾದ್ಯಂತ ಜನರ ಸಮಾಗಮ: ಡಾ.ಉಮೇಶ್ ಜಾಧವ್

ಕಲಬುರಗಿ: ಜಗತ್ತಿಗೆ ಕಾಯಕ ಸಂಸ್ಕೃತಿ ಹಾಗೂ ಪ್ರಕೃತಿ ಪೂಜೆಯ ಬೋಧನೆ ಮಾಡಿದ ಸಂತ ಸೇವಾಲಾಲರ 286ನೆಯ ಜಯಂತಿಯನ್ನು ಫೆಬ್ರವರಿ 28ರಂದು (ಇಂದು) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲು ಭರದ ಸಿದ್ಧತೆ ನಡೆದಿದೆ. 

  ನವದೆಹಲಿಯ ಸಂತ ಸೇವಾಲಾಲ ಮಹಾರಾಜ ಚಾರಿಟೇಬಲ್ ಟ್ರಸ್ಟ್ ಮತ್ತು ಮುಂಬಯಿಯ ಅಖಿಲ ಭಾರತ ಬಂಜಾರ ಸೇವಾ ಸಂಘದ ಆಶ್ರಯದಲ್ಲಿ ಸಂತ ಸೇವಾಲಾಲ ಜಯಂತಿ ಹಾಗೂ ಶ್ರೀ ರೂಪ್ ಸಿಂಗ್ ಮಹಾರಾಜರ ಪುಣ್ಯತಿಥಿಯನ್ನು ನವದೆಹಲಿಯ ಜನಪಥ ರಸ್ತೆಯ ಡಾ. ಬಿ.ಆರ್ ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಬೆಳಗ್ಗೆ 11 ಗಂಟೆಗೆ ಸಂಭ್ರಮದಿಂದ ನಡೆಸಲು ಭರದ ತಯಾರಿಯಾಗಿದೆ .ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.

  ಸಂತ ಸೇವಾಲಾಲರು 1739 ಫೆಬ್ರವರಿ 15 ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿಯ ನೂರಗೊಂಡನ ಕೊಪ್ಪ (ಭಾಯಘಢ) ದಲ್ಲಿ ಜನ್ಮವೆತ್ತಿದವರು. "ದುಡಿದರೆ ಮಾತ್ರ ತಿನ್ನಲು ಸಾಧ್ಯ" (ರಾಭೆನಿತೋ ಚಾವೇನ್ ಮಳನಿ ) ಎಂಬ ಶರಣರ ಸಂದೇಶವನ್ನೇ ಸಾರಿದ ಸಂತ ಸೇವಾಲಾಲರ ತತ್ವಾದರ್ಶವು ಜಗತ್ತಿಗೆ ಉದಾತ್ತ ಸಂದೇಶವಾಗಿದೆ. ಪ್ರಕೃತಿಯೊಂದಿಗೆ ಬೆರೆತು ಶ್ರಮ ಸಂಸ್ಕೃತಿಯನ್ನು ಉಸಿರಾಗಿಸಿದ ಬಂಜಾರಾ ಸಮುದಾಯದವರ ಬದುಕು ಆದರ್ಶವಾದುದು. ಸ್ವಾತಂತ್ರ್ಯ ಹೋರಾಟದಲ್ಲಿ ಕೂಡಾ ಪಾತ್ರವಹಿಸಿದ ಈ ಸಮುದಾಯವು ಮೊದಲ ಗೋಪಾಲಕರಾಗಿ, ಕರಕುಶಲ ಕಲಾ ಪ್ರವೀಣರಾಗಿ, ಕೃಷ್ಣ ಪರಮಾತ್ಮನಿಗೆ ಕೊಳಲನ್ನು ಮೊಟ್ಟ ಮೊದಲಿಗೆ ಕೊಟ್ಟ ಹೆಗ್ಗಳಿಕೆ ಹೊಂದಿದ ಸಮಾಜವಾಗಿದೆ. ನಂಬಿಕೆ ಮತ್ತು ಪ್ರಾಮಾಣಿಕತೆಗೆ ಲಂಬಾಣಿ ಸಮುದಾಯವು ಹೆಸರುವಾಸಿಯಾಗಿದೆ. "ಸಿಕ್ ಸಿಕೊ , ಸಿಕನ್ ಸಿಕಾವೋ, ಸಿಕೋ ಜಕೋ ಸೇನಿ ಅಂಗ ಚಾಲಚ್"ಎಂದರೆ ಶಿಕ್ಷಣ ಕಲಿಯಿರಿ, ಕಲಿತು ಕಲಿಸಿರಿ, ಕಲಿತವರು ಸರ್ವರನ್ನು ಒ ಗ್ಗೂಡಿಸಿ ಮುಂದೆ ಸಾಗುತ್ತಾನೆ"ಎಂದು ಸಾರಿದ ಸೇವಾಲಾಲರ ನುಡಿಮುತ್ತು ಕೇವಲ ಸಮುದಾಯದವರಿಗೆ ಮಾತ್ರವಲ್ಲ ಇಡೀ ಮಾನವ ಜಗತ್ತಿಗೆ ದಿವ್ಯ ಸಂದೇಶವಾಗಿದೆ. ಸೇವಾಲಾಲರ ಬೋಧನೆಯಲ್ಲಿ ಬೋಧಿ ಸತ್ವ ಹಾಗೂ ಶರಣ ತತ್ವ ಒಳಗೊಂಡಿದೆ. "ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಿರಿ" ಎಂಬ ಧರ್ಮಸಮನ್ವಯ ತತ್ವವು ಮಾನವ ಜಗತ್ತಿನ ಕಲ್ಯಾಣಕ್ಕೆ ರಹದಾರಿ ಎಂದು ಸೇವಾಲಾಲರು ಬೋಧಿಸಿದ್ದು ಸಾರ್ವಕಾಲಿಕ ಸಂದೇಶವಾಗಿದೆ. ಮಾನವೀಯತೆಯ ಮೇರು ಶಿಖರವಾಗಿದ್ದ ಸೇವಾಲಾಲರು ನಾಟಿ ವೈದ್ಯರಾಗಿ, ಭವರೋಗ ವೈದ್ಯರಾಗಿ, ಕೃಷಿ ಸಂಸ್ಕೃತಿ ಪೋಷಕರಾಗಿ, ಪಶು ಪಾಲನಾ ಸಂಸ್ಕೃತಿಯ ಆಚಾರ್ಯ ಪುರುಷರಾಗಿ, ಸ್ತ್ರೀ ಸಮಾನತೆಯನ್ನು ಬೋಧನೆ ಮಾಡಿ ಮಾನವರಲ್ಲಿ ಭೇದವೆನಿಸ ಕೂಡದು ಎಂದು ಸಮಾನತೆಯ ಮಂತ್ರ ಬೋಧಿಸಿದ ಪರಮ ಗುರುಗಳು. ಅವರ ತತ್ವ ಸಂದೇಶ ಜಗತ್ತಿಗೆ ಪಸರಿಸಲು ತಾಲೂಕು, ಹೋಬಳಿ ಜಿಲ್ಲಾಮಟ್ಟದ ಕಾರ್ಯಕ್ರಮಗಳು ರಾಷ್ಟ್ರಾದ್ಯಂತ ನಡೆಸಲಾಗುತ್ತಿದೆ. ಜೊತೆಗೆ ಜಾಗತಿಕ ಮಟ್ಟಕ್ಕೆ ಸೇವಾಲಾಲರ ತತ್ವ ಪ್ರಸಾರಕ್ಕಾಗಿ ದೆಹಲಿಯಲ್ಲಿ ಫೆ. 28ರಂದು ಶುಕ್ರವಾರ ಕಾರ್ಯಕ್ರಮ ರೂಪಿಸಿ ವಿಶ್ವಮಟ್ಟಕ್ಕೆ ಸಂದೇಶ ಸಾರಲು ಮಹಾನ್ ಉದ್ದೇಶ ಹೊಂದಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕರಾದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.

   ಸೇವಾಲಾಲರ ಜೀವನ ಬೋಧನೆ ಕುರಿತಾಗಿ ರಾಷ್ಟ್ರದಲ್ಲಿ ವ್ಯಾಪಕ ಪ್ರಚಾರ ಮಾಡಿ ಜಾಗೃತಿ ಸೃಷ್ಟಿಸಿ ಮನುಕುಲದ ಏಳಿಗೆಗಾಗಿ ಸಂದೇಶ ಬಿತ್ತರಿಸುವುದಕ್ಕಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಂಜಾರಾ ಸಂಸ್ಕೃತಿಯನ್ನು ಸಾರುವ ಸಾಂಸ್ಕೃತಿಕ ಕಲಾತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರುಗು ನೀಡಲಿವೆ. ಈಗಾಗಲೇ ರಾಷ್ಟ್ರಾದ್ಯಂತದಿಂದ ಜನರು ದೆಹಲಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಮಾಯಿಸಿದ್ದಾರೆ.

ಸ್ವಾಮೀಜಿ - ಗಣ್ಯರ ಉಪಸ್ಥಿತಿ

  ಮುಂಬಯಿ ಪೋಹಾರದೇವಿ ಸಂತ ಸೇವಾಲಾಲ ಮಹಾರಾಜ್ ಐಕ್ಯ ಸ್ಥಳದ ಪೂಜ್ಯರು ಹಾಗೂ ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಾಬು ಸಿಂಗ್ ಮಹಾರಾಜ್, ಪೋಹಾರದೇವಿ ಸಂತ ರಾಮರಾವ್ ಮಹಾರಾಜ್ ನ ಪೀಠಾಧಿಪತಿಗಳಾದ ಶ್ರೀ ಶೇಖರ್ ಮಹಾರಾಜ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದೆಹಲಿಯ ಸಚಿವರಾದ ಮಂಜಿಂದರ್ ಸಿಂಗ್ ಸಿರ್ಸಾ, ಮಹಾರಾಷ್ಟ್ರದ ಸ್ಪೀಕರ್ ರಾಹುಲ್ ನಾರ್ವೆಕರ್, ಸಚಿವರಾದ ಸಂಜಯ್ ಡಿ. ರಾಠೋಡ್, ಹರಿಯಾಣ ಸ್ಪೀಕರ್ ಹರವಿಂದರ್ ಕಲ್ಯಾಣ್, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಶಾಸಕರಾದ ಡಾ. ಅವಿನಾಶ್ ಜಾಧವ್, ತೆಲಂಗಾಣದ ಮಾಜಿ ಸಚಿವರಾದ ಶ್ರೀನಿವಾಸ ಗೌಡ, ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ್ ಮತ್ತಿತರ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಡಾ. ಉಮೇಶ್ ಜಾಧವ್ ದಿಕ್ಸೂಚಿ ಭಾಷಣ ಮಾಡಲಿರುವರು. ಸಾಯಂಕಾಲ 3 ಗಂಟೆಗೆ ಬಂಜಾರಾ ಸಮುದಾಯದ ಸಾಮಾಜಿಕ - ಆರ್ಥಿಕ ಸವಾಲು ಕುರಿತಾಗಿ ವಿಚಾರ ಸಂಕಿರಣ ನಡೆಯಲಿದೆ.