ಬಬಲಾದಿಯ ಭಗವಂತ

ಬಬಲಾದಿಯ ಭಗವಂತ
(ಶ್ರೀ.ಗುರು ಚನ್ನಾವೀರ ಶಿವಯೋಗಿಗಳ ಚರಿತ್ರೆ)
ಕನ್ನಡ ಸಾಹಿತ್ಯದ ಸಾಂಸ್ಕೃತಿಕ ಚರಿತ್ರೆಯು ಹಳೆಗನ್ನಡ ನಡುಗನ್ನಡ ಹೊಸಗನ್ನಡ ಎನ್ನುವ ಮೂರು ಬಗೆಯಲ್ಲಿ ವಿಸ್ತಾರವಾಗಿ ಬೆಳೆದು ಬಂದಿದೆ. ಹಳೆಗನ್ನಡ ಕಾಲದ ಪಂಪ-ರನ್ನರಾದಿಯಾಗಿ ಚಂಪೂ ಸಾಹಿತ್ಯವು ಸಮೃದ್ಧವಾಗಿ ಬೆಳೆದು ಬಂದಿದೆ. ನಡುಗನ್ನಡವು ಬಸವಾದಿ ಶರಣರ ಕಾವ್ಯ ಹಾಗೂ ವಚನಗಳು ಕನ್ನಡದ ಶ್ರೀಮಂತ ಸಾಹಿತ್ಯ ಎನಿಸಿದಂತೆ ಪಂಪ-ಬಸವರನ್ನು ಯುಗಪುರುಷರೆಂದು ಕರೆಯಲಾಗುತ್ತದೆ. ಹತ್ತನೇ ಶತಮಾನ ಹಾಗೂ ಹನ್ನೆರಡನೆಯ ಶತಮಾನಗಳನ್ನು ಕನ್ನಡ ಸಾಹಿತ್ಯದ 'ಸುವರ್ಣಯುಗ'ವೆಂದು ಕರೆಯಲಾಗಿದೆ. ನವೋದಯ ಕಾಲದಲ್ಲಿ ದ.ರಾ ಬೇಂದ್ರೆ, ಕುವೆಂಪು, ಮಾಸ್ತಿಯಂಥವರಿಂದ ಪರಿಸರದ ವರ್ಣನೆಯು ಹಾಗು ಗುರುವಿನ ಚೈತನ್ಯವನ್ನು ನೋಡಿದರೆ ಇದೊಂದು ಸಾಹಿತ್ಯದ ಸುವರ್ಣಯುಗವೆಂದೇ ಕರೆಯಬಹುದಾಗಿದೆ.
ನವೋದಯಕಾಲದ ಕನ್ನಡ ಸಾಹಿತ್ಯದಲ್ಲಿ ಭಾವ ಗೀತೆಗಳು ಹೆಚ್ಚಾಗಿ ರಚನೆಗೊಂಡರೂ ಗದ್ಯ ಸಾಹಿತ್ಯ ಹುಲುಸಾಗಿ ಬೆಳೆದು ಬಂದಿದೆ. ಈ ಗದ್ಯಪ್ರಕಾರಗಳಲ್ಲಿ ಕಥೆ, ಕಾದಂಬರಿ, ನಾಟಕ ಮೊದಲಾದ ಸಾಹಿತ್ಯ ಸೃಷ್ಟಿಯಾದಂತೆ ಆತ್ಮಚರಿತ್ರೆಗಳು, ಜೀವನ ಚರಿತ್ರೆಗಳು ಅಷ್ಟಿಷ್ಟು ಬೆಳಕು ಕಂಡಿರುತ್ತವೆ. ಜೀವನ ಚರಿತ್ರೆಗಳಲ್ಲಿ ಇತಿಹಾಸಿಕ, ರಾಜಕೀಯ ಹಾಗೂ ಧಾರ್ಮಿಕ ಮಹಾಪುರುಷರ ಚರಿತ್ರೆಗಳು ಹೆಚ್ಚಾಗಿ ಬೆಳಕು ಕಂಡಿವೆ. ಹಾಗಾಗಿಯೇ ಕುವೆಂಪು ಅವರು ಸ್ವಾಮಿ ವಿವೇಕಾನಂದರ ಕುರಿತು, ಹ.ಮಾ ನಾಯಕರು ರವೀಂದ್ರನಾಥ ಟ್ಯಾಗೋರ್ ಅವರ ಕುರಿತು, ದೇಜೆಗೌ ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರ ಕುರಿತು ಜೀವನ ಚರಿತ್ರೆ ಬರೆಯಲಾಯಿತು. ಇಂಥಹ ಜೀವನ ಚರಿತ್ರೆಗಳಲ್ಲಿ ಬಬಲಾದಿಯ ಶ್ರೀ ಚನ್ನವೀರ ಶಿವಯೋಗಿಗಳ ಕೃತಿಯು ಒಂದಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿಯವರು ಬಬಲಾದಿ ಭಗವಂತ ಎನ್ನುವ ಕೃತಿಯು ಶ್ರೀ ಚನ್ನವೀರ ಶಿವಯೋಗಿಗಳ ಚರಿತ್ರೆಯ ಕುರಿತು ಹಸ್ತಪ್ರತಿಯಲ್ಲಿಯೇ ಓದಿ ಮುಗಿಸಿದ್ದೆ.
ಡಾ. ಶರಣಬಸಪ್ಪ ವಡ್ಡನಕೇರಿ ಅವರು ಈ ಕೃತಿಯನ್ನು ಬರೆಯುವ ಮುಂಚೆ ಗಂಭೀರವಾದ ಕ್ಷೇತ್ರ ಕಾರ್ಯ ಮಾಡಿ ಅನೇಕ ಹಿರಿಯ ಕಿರಿಯರನ್ನು ಭೇಟಿ ಮರು ಭೇಟಿಯನ್ನು ಮಾಡಿದಲ್ಲದೆ ಸಮಾಜದ ಎಲ್ಲಾ ವರ್ಗದವರನ್ನು ಸಂದರ್ಶಿಸಿ ಬರೆದ ಪುಸ್ತಕವೆಂದು ತೋರುತ್ತದೆ. ವಡ್ಡನಕೇರಿಯವರು ಈ ಕೃತಿಯಲ್ಲಿ ಶ್ರೀ ಚನ್ನವೀರ ಶ್ರೀಗಳ ತಂದೆ-ತಾಯಿ ಊರಿನ ಕುರಿತು ಮತ್ತು ಅವರಿಗೆ ಮಕ್ಕಳಾಗದ್ದನ್ನು ಪ್ರಾರಂಭದಲ್ಲಿ ಪರಿಚಯಾತ್ಮಕವಾಗಿ ಬರೆಯುತ್ತಾರೆ. ನಂತರ ಶ್ರೀಗಳ ಹುಟ್ಟು ಬೆಳವಣಿಗೆಯ ಕುರಿತು ಬರೆಯುತ್ತಾರೆ. ಈ ಬರಹದಲ್ಲಿ ಶ್ರೀಗಳ ಹುಟ್ಟು ಮತ್ತು ಬಾಲ್ಯಕ್ಕಿಂತ ಹೆಚ್ಚು ಅವರು ತಮ್ಮ ಇಡೀ ಬದುಕಿನಲ್ಲಿ ಸೃಷ್ಟಿಸಿದ ಪವಾಡದ ಮೂಲಕ ಸಮಾಜದ ಸ್ವಾಸ್ಥ್ಯದ ಮಾರ್ಗವನ್ನು ಕೃತಿಯ ಕೇಂದ್ರವಾಗಿಟ್ಟುಕೊಂಡು ಲೇಖಕರು ಬರೆದಿದ್ದಾರೆ. ಶ್ರೀಗಳು ಕಾಳಿಕಾದೇವಿ ಆರಾಧಕರಾಗಿದ್ದರು ಎನ್ನುವ ಸಂಗತಿಗಳು ಕೃತಿಯಲ್ಲಿ ಕಂಡುಬರುವುದರಿಂದ ಈ ನೆಲದ ದೇಶೀ ಪಂಥವಾದ ಶಾಕ್ತಪಂತಕ್ಕೆ ಸೇರಿದವರೆಂದು ತೋರುತ್ತದೆ. ಈ ರೀತಿ ಚಿದಾನಂದಾವಧೂತರು ಬಗಳಾಮುಖಿ, ಸುನ್ನತಿ ಚಂದ್ರಲಾಂಬರನ್ನು ಸ್ಮರಿಸುತ್ತಾರೆ. ಇಡೀ ಕೃತಿಯಲ್ಲಿ ಸುಮಾರು ೩೦ಕ್ಕೂ ಹೆಚ್ಚು ಪವಾಡಗಳು ಕಂಡುಬರುತ್ತದೆ. ಮುಖ್ಯವಾಗಿ ಬಡತನಕ್ಕೆ ಸಂಬಂಧಿಸಿದ ಪವಾಡಗಳು, ಪ್ರಾಣಿಗಳಿಗೆ ಸಂಬಂಧಿಸಿದಂತಹ ಪವಾಡಗಳು ಮತ್ತು ವಾಹನಗಳಿಗೆ ಸಂಬಂಧಿಸಿದಂತಹ ಪವಾಡಗಳು ಹೀಗೆ ಮುಂತಾದ ಸಂಗತಿಗಳು ಕಂಡುಬರುತ್ತವೆ. ಶ್ರೀಗಳು ಅವರು ಆಕಾರವಿಲ್ಲದ ನೀರಿನಂತೆ ಚಲಿಸುವ ಚೈತನ್ಯ ಉಳ್ಳವರು ತಾವು ಚಲಿಸಿದ ಸ್ಥಳಗಳನ್ನು ಪವಾಡಗಳ ಮೂಲಕ ಹೊನಲಾಗಿಸಿದ್ದಾರೆ. ಆತ್ಮವಂಚನೆ ಮಾಡಿಕೊಳ್ಳುತ್ತಿದ್ದವರಿಗೆ ಆತ್ಮಚಿಂತನೆಗೆ ಹಚ್ಚಿದ್ದಾರೆ. ಅನ್ಯರ ಮೇಲೆ ಎರಗುವ ಮನಸ್ಥಿತಿಯವರಿಗೆ ಪ್ರೀತಿಯಿಂದ ಕರಗುವ ಗುಣ ಸ್ವಭಾವಗಳನ್ನು ಕಳಿಸಿದ್ದಾರೆ. ಈ ಸಮಾಜವನ್ನು ದೂರದಿಂದ ನೋಡುವುದಕ್ಕಿಂತ ಹತ್ತಿರದಿಂದ ಕಾಣಬೇಕೆಂಬ ಮತಿತಾರ್ಕಿಕ ಮಾತುಗಳನ್ನಾಡಿದ್ದಾರೆ. ಪ್ರಾರಂಭದಲ್ಲಿ ಹೇಳಿದಂತೆ ಇಲ್ಲಿ ಒಟ್ಟು ಪವಾಡ ಸದೃಶಗಳನ್ನು ನೋಡಿದರೆ ಇದೊಂದು ಆಧ್ಯಾತ್ಮದ 'ನೀಲವತ್ತಿಗೆ' ಕೃತಿ ಓದಿದಂತೆ ಅನಿಸುತ್ತದೆ.
ಪುಸ್ತಕ ಮುದ್ರಣ ಅಂದವಾಗಿದ್ದು ಬಬಲಾದಿಯ ಶ್ರೀ ಚನ್ನವೀರೇಶ್ವರ ಪ್ರಕಾಶನದಿಂದ ಹೊರಬಂದ ಈ ಕೃತಿಯಲ್ಲಿ 121 ಪುಟಗಳಿದ್ದು,100 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಡಾ. ಸಂಗನಗೌಡ ಹಿರೇಗೌಡ