ಕಲಬುರ್ಗಿಯಲ್ಲಿ 25 ರಂದು ರಾಜ್ಯ ಮಟ್ಟದ ಪ್ರಥಮ ಗಜಲ್ ಸಮ್ಮೇಳನ
ಕಲಬುರ್ಗಿಯಲ್ಲಿ 25 ರಂದು ರಾಜ್ಯ ಮಟ್ಟದ ಪ್ರಥಮ ಗಜಲ್ ಸಮ್ಮೇಳನ
ಕಲಬುರಗಿ, ಆ. 20 - ಕರ್ನಾಟಕ ಗಜಲ್ ಅಕಾಡೆಮಿ ಬೆಂಗಳೂರು ವತಿಯಿಂದ ಸಹಕಾರದೊಂದಿಗೆ ಇದೇ ಆಗಸ್ಟ್ 25 ರಂದು ಒಂದು ದಿನದ 'ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನ'ವನ್ನು ಗುಲಬರ್ಗ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಮ್ಮೇಳನ ಸಂಚಾಲಕರಾದ ಮಹಿಪಾಲರೆಡ್ಡಿ ಮುನ್ನೂರ್ ಹಾಗೂ ಅಬ್ದುಲ್ ಹೈ ತೋರಣಗಲ್ಲು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ ಗಜಲ್ ಆರಂಭಿಸಿದ ಆದ್ಯ ಗಜಲಕಾರ, ಗಜಲ್ ಗಾರುಡಿಗ ಶಾಂತರಸ ಅವರ ಹೆಸರಿನ ವೇದಿಕೆ ಹಾಗೂ ಗಜಲ್ ಕ್ಷೇತ್ರಕ್ಕೆ ಕೊಡುಗೆ ನೀಡಿದ ಜಂಬಣ್ಣ ಅಮರಚಿಂತ ರಾಯಚೂರು, ಚಂದ್ರಕಾಂತ ಕುಸನೂರ ಕಲಬುರಗಿ, ಅಬ್ದುಲ ಮಜೀದಖಾನ್ ಸಾಗರ, ಇಟಗಿ ಈರಣ್ಣ ಬಳ್ಳಾರಿ, ಸುಜಾತಾ ಲಕ್ಕನೆ ಬೆಂಗಳೂರು ಹಾಗೂ ರಮೇಶ ಹೆಗಡೆ ಸಿರಸಿ ಹೆಸರಿನ ಮಹಾದ್ವಾರ ಇರುತ್ತವೆ. ವಿಜಯಪುರದ ಕವಯಿತ್ರಿ, ಒಂಬತ್ತು ಗಜಲ್ ಸಂಕಲನ ಸೇರಿ 23 ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಹಿರಿಯ ಗಜಲಕಾರ್ತಿ ಶ್ರೀಮತಿ ಪ್ರಭಾವತಿ ದೇಸಾಯಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರ ಅಧ್ಯಕ್ಷತೆಯಲ್ಲಿ ಇಡೀ ಒಂದು ದಿನ ಗಜಲ್ ಸಂಭ್ರಮ ನಡೆಯಲಿದೆ. ಹಾಗೂ ಪ್ರಾತಿನಿಧಿಕ ಗಜಲ್ ಕೃತಿಯೊಂದು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
77 ವರ್ಷದ ಹಿರಿಯ ಗಜಲಕಾರ್ತಿ ಪ್ರಭಾವತಿ ದೇಸಾಯಿ ಅವರು ಮೂಲತಃ ರಾಯಚೂರಿನವರು. ಕನ್ನಡದ ಗಜಲ್ ಹುಟ್ಟಿದ ಮೂಲ ನೆಲೆಯವರು. ಕಲಬುರಗಿ ಜಿಲ್ಲೆಯ ಅಫಜಲಮರ ತಾಲೂಕಿ ಅರ್ಜುಣಗಿ ದೇಸಾಯಿ ಮನೆತನದ ಸೊಸೆಯಾಗಿದ್ದು, ಇದೀಗ ವಿಜಯಪುರದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದರು.
ಬೆಳಿಗ್ಗೆ 10 ಕ್ಕೆ ಸಮಾರಂಭವನ್ನು ಕಲಬುರಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ ಉದ್ಘಾಟಿಸುವರು. ಕಲಬುರಗಿಯ ಕವಯಿತ್ರಿ ಬಸ್ಸಮ್ಮ ಸಜ್ಜನ್ ಅವರು ಸಂಪಾದಿಸಿರುವ 'ಗಜಲ್ ನಾದಲೋಕ' ಪ್ರಾತಿನಿಧಿಕ ಕೃತಿಯನ್ನು ಗುಲಬರ್ಗ ವಿವಿ ಕುಲಪತಿಗಳಾದ ಡಾ. ದಯಾನಂದ ಅಗಸರ ಬಿಡುಗಡೆ ಮಾಡುವರು. ಗುಲಬರ್ಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಜರ್ ಆಲಂ ಖಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಗಜಲ್ ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ ಅಧ್ಯಕ್ಷತೆ ವಹಿಸುವರು.
ಸಮ್ಮೇಳನಾಧ್ಯಕ್ಷರ ಬದುಕು-ಬರಹ' ಮೊದಲ ಗೋಷ್ಠಿಗೆ ಬೆಂಗಳೂರಿನ ಗಜಲಕಾರ ಸಂಗಮೇಶ್ ಬಾದವಾಡಗಿ ಚಾಲನೆ ನೀಡುವರು. ಬಳ್ಳಾರಿಯ ಗಜಲಕಾರ ಸಿಕಂದರ್ ಅಲಿ ಅಧ್ಯಕ್ಷತೆ ವಹಿಸುವರು. ಯುವ ಗಜಲಕಾರ ನಂರುಶಿ ಕಡೂರು ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತು ಮಾತನಾಡುವರು.
ಗಜಲ್ ಹೆಜ್ಜೆ ಗುರುತು ಕುರಿತು ಎರಡನೇ ಗೋಷ್ಟಿಯನ್ನು ಮಂಗಳೂರಿನ ಗಜಲಕಾರ ಡಾ. ಸುರೇಶ್ ನೆಗಳಗುಳಿ ಚಾಲನೆ ನೀಡುವರು. ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ ಅಧ್ಯಕ್ಷತೆ ವಹಿಸುವರು. ಸವದತ್ತಿಯ ವಿಮರ್ಶಕ ಡಾ. ಎಂ.ವೈ. ಯಾಕೋಳ್ಳಿ- ಗಜಲ್ ಆಕೃತಿ ಮತ್ತು ಆಶಯ, ಅಂಕೋಲಾ ಗಜಲ್ ಕವಯಿತ್ರಿಶ್ರೀದೇವಿ ಕೆರೆಮನೆ- ಕನ್ನಡ ಸಾಹಿತ್ಯದಲ್ಲಿ 'ಗಜಲ್' ಹಾಗೂ ಕೊಪ್ಪಳದ ಕವಯಿತ್ರಿ ಅರುಣಾ ನರೇಂದ್ರ - ಕಲ್ಯಾಣ ಕರ್ನಾಟಕ ನೆಲದಲ್ಲಿ 'ಗಜಲ್' ಕುರಿತು ಉಪನ್ಯಾಸ ನೀಡುವರು. ನಂತರ ನಡೆಯುವ ಗಜಲ್ ವಾಚನ ಗೋಷ್ಠಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್ ಚಾಲನೆ ನೀಡುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯೆ ಡಾ. ಜಯದೇವಿ ಗಾಯಕವಾಡ್ ಅಧ್ಯಕ್ಷತೆ ವಹಿಸುವರು. ಸುಮಾರು 40 ಜನ ಗಜಲಕಾರರು ಭಾಗವಹಿಸುವರು.
ಗೋಷ್ಟಿ ನಾಲ್ಕರಲ್ಲಿ ವಿಶಿಷ್ಟ ಕಾರ್ಯಕ್ರಮ 'ನಿನ್ನ ಗಜಲಿಗೆ ನನ್ನ ಕವಿತೆ- ಜುಗಲ್‌ಬಂದಿ' ಯನ್ನು ಸಿನಿಮಾ, ಕಿರುತೆರೆ ನಟರಾದ ಶ್ರೀನಿವಾಸಪ್ರಭು ಮತ್ತು ಡಾ. ರಂಜಿನಿಪ್ರಭು ಬೆಂಗಳೂರು ನಡೆಸಿಕೊಡುವರು. ಮಂಗಳೂರಿನ ಹಿರಿಯ ಗಜಲಕಾರ ಮಹಮ್ಮದ್ ಬದ್ದೂರು ಚಾಲನೆ ನೀಡುವರು. ಕೊಪ್ಪಳ: ಕವಯಿತ್ರಿ ಅನುಸೂಯ ಜಹಾಗೀರದಾರ್ ಅಧ್ಯಕ್ಷತೆ ವಹಿಸುವರು.
ಎರಡನೇ ಗಜಲ್ ವಾಚನ ಗೋಷ್ಟಿಯನ್ನು ಹಿರಿಯ ಗಜಲಕಾರ-ಡಾ. ಕಾಶಿನಾಥ ಅಂಬಲಗೆ ಚಾಲನೆ ನೀಡುವರು. ಹುಬ್ಬಳ್ಳಿಯ ಗಜಲ್ ಕವಯಿತ್ರಿ ಡಾ. ರೇಣುಕಾತಾಯಿ ಸಂತಬಾ ಅಧ್ಯಕ್ಷತೆ ವಹಿಸುವರು. ಸುಮಾರು 45 ಜನ ಗಜಲಕಾರರು ಭಾಗವಹಿಸುವರು.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಗುಲ್ಬರ್ಗಾ ವಿ.ಎ ಉರ್ದು-ಪರ್ಶಿಯನ್ ವಿಭಾಗ ಮುಖ್ಯಸ್ಥ : ಪ್ರೊ. ಅಬ್ದುಲ್ ರಬ್ ಉಸ್ತಾದ್ ಸಮಾರೋಪ ನುಡಿಗಳಾಡುವರು. ಸಮ್ಮೇಳನಾಧ್ಯಕ್ಷೆ ಪ್ರಭಾವತಿ ಎಸ್.ಬೇಸಾಯಿ ಉಪಸ್ಥಿತರಿರುವರು. ಗುಲಬರ್ಗಾ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಚಂದ್ರಕಲಾ ಬಿದರಿ, ಗಜಲಕಾರ ಬೋಡೆ ರಿಯಾಜ್ ಅಹ್ಮದ್ ಮುಖ್ಯ ಅತಿಥಿಗಳಾಗಿರುವರು. ರಾಯಚೂರಿನ ಗಜಲಕಾರ ಮಂಡಲಗಿರಿ ಪ್ರಸನ್ನ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ಪ್ರಭುಲಿಂಗ ನೀಲೂರೆ, ಡಾ.ಕಪಿಲ್ ಚಕ್ರವರ್ತಿ,ಗೌರಿ ಪಾಟೀಲ, ಪ್ರೇಮಾ ಹುಗಾರ ಉಪಸ್ಥಿತರಿದ್ದರು
ಶ್ರೀಮತಿ ಪ್ರಭಾವತಿ ದೇಸಾಯಿ ಸಮ್ಮೇಳನಾಧ್ಯಕ್ಷರು