ಶ್ರೀನಿವಾಸ್ ಉತ್ಸವ ಬಳಗದಿಂದ ಬಸವನಗುಡಿ ಉತ್ತರಾದಿ ಮಠದಲ್ಲಿ ಜನವರಿ 17 18ರಂದು ಪುರಂದರ ದಾಸರ ಆರಾಧನೆ ಸಂಗೀತೋತ್ಸವ
ಶ್ರೀನಿವಾಸ ಉತ್ಸವ ಬಳಗದಿಂದ ಬಸವನಗುಡಿ ಉತ್ತರಾದಿ ಮಠದಲ್ಲಿ ಜನವರಿ ೧೭–೧೮ರಂದು ಪುರಂದರ ದಾಸರ ಆರಾಧನಾ ಸಂಗೀತೋತ್ಸವ| ಗಾನ–ಜ್ಞಾನ ಯಜ್ಞ | ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಗೆ ‘ಶ್ರೀ ಮಧ್ವ–ಪುರಂದರ ಪ್ರಶಸ್ತಿ’ ಪ್ರದಾನ | ಸಾಧಕೋತ್ತಮರಿಗೆ ‘ಹರಿದಾಸಾನುಗ್ರಹ’ ಗೌರವ
ಬೆಂಗಳೂರು: ದಾಸಸಾಹಿತ್ಯದ ಪಿತಾಮಹ ಶ್ರೀ ಪುರಂದರದಾಸರ ಆರಾಧನೆಯನ್ನು ಸ್ಮರಿಸುವ ಗಾನ–ಜ್ಞಾನ ಯಜ್ಞವನ್ನು ದಾಸ ಸಾಹಿತ್ಯ ಪ್ರಚಾರ ಮಾಧ್ಯಮವಾಗಿರುವ ಶ್ರೀನಿವಾಸ ಉತ್ಸವ ಬಳಗವು, ಶ್ರೀ ಉತ್ತರಾದಿ ಮಠಾಧೀಶರಾದ ಪೂಜ್ಯ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ಅನುಗ್ರಹದೊಂದಿಗೆ, ಜನವರಿ ೧೭ ಮತ್ತು ೧೮ರಂದು ಬಸವನಗುಡಿಯ ಶ್ರೀಮದ್ ಉತ್ತರಾದಿ ಮಠದ ಆವರಣದಲ್ಲಿ ಆಯೋಜಿಸಿದೆ. ದಾಸರ ಕೃತಿಗಳ ಗೋಷ್ಠಿಗಾಯನ, ನಾಮಸಂಕೀರ್ತನೆ ಹಾಗೂ ಪ್ರಶಸ್ತಿ ಪ್ರದಾನಗಳೊಂದಿಗೆ ಈ ಉತ್ಸವವು ದಾಸಪರಂಪರೆಯ ಸತ್ವವನ್ನು ಅನಾವರಣಗೊಳಿಸಲಿದೆ.
ದಾಸರ ಬೃಹತ್ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆಯ ಆರನೇ ವರ್ಷದ ಸಂಭ್ರಮದ ಅಂಗವಾಗಿ, ಕಲಬುರಗಿಯ ದಾಸ ಸೌರಭ, ಶಿವಮೊಗ್ಗದ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ, ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ, ಶುಭ ಸಂತೋಷ್ ಅಕಾಡೆಮಿ ಹಾಗೂ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈ ಉತ್ಸವ ನಡೆಯಲಿದೆ.
ಶ್ರೀನಿವಾಸ ಉತ್ಸವ ಬಳಗದಿಂದ ಎರಡು ದಿನಗಳ ಪುರಂದರದಾಸರ ನಾಮಸಂಕೀರ್ತನೆ- ಸಂಗೀತೋತ್ಸವ
ಜನವರಿ ೧೭, ಶನಿವಾರ ಸಂಜೆ ೬.೩೦ಕ್ಕೆ ಭುವನಗಿರಿ ಆಶ್ರಮದ ಪೂಜ್ಯ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಈ ಸಂದರ್ಭದಲ್ಲಿ ದಾಸ–ಮಾಧ್ವ ಸಾಹಿತ್ಯ, ಭಾಷಾಂತರ, ಸಂಶೋಧನೆ ಮತ್ತು ಸಾಂಸ್ಕೃತಿಕ ಸೇವೆಗಳಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗೌರವಿಸಿ ಹಿರಿಯ ಹರಿದಾಸ ಸಾಹಿತ್ಯ ಸಂಶೋಧಕ ,ಚರಿತಜ್ಞ, ಬಹುಭಾಷಾ ಕೋವಿದ ವಿಜಯಪುರದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ‘ಶ್ರೀ ಮಧ್ವ–ಪುರಂದರ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ದಾಸ ಸಾಹಿತ್ಯದ ಮಹಾಸಾಗರವನ್ನು ಸಂಶೋಧನೆಯಲ್ಲಿ ಮಥಿಸಿ, ಮೌಲ್ಯಮುತ್ತುಗಳನ್ನು ಹೊರತೆಗೆದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಬದುಕು ಹೇಳುವುದು ಒಂದೇ – ಭಕ್ತಿ ಜ್ಞಾನವಾಗಬೇಕು, ಜ್ಞಾನ ಸೇವೆಯಾಗಬೇಕು. ದಾಸರ ವಾಣಿಯನ್ನು ಕೇವಲ ಪಠ್ಯವಲ್ಲ, ಜೀವಂತ ಚಿಂತನೆಯಾಗಿ ನಮ್ಮ ಮುಂದಿಟ್ಟ ಈ ಮಹಾವಿದ್ವಾಂಸರಿಗೆ ನಾಡಿನ ವಿದ್ವತ್ ಲೋಕ ಕೃತಜ್ಞವಾಗಿದೆ.
ಮುಖ್ಯ ಅತಿಥಿಗಳಾಗಿ ಪಂ. ಗುತ್ತಲ್ ರಂಗಾಚಾರ್ (ಕುಲಪತಿ, ಜಯತೀರ್ಥ ವಿದ್ಯಾಪೀಠ),ಡಾ. ಸತ್ಯಧ್ಯಾನಾಚಾರ್ ಕಟ್ಟಿ (ಪ್ರಾಂಶುಪಾಲ),ಪಂ. ವಿದ್ಯಾಧೀಶಾಚಾರ್ಯ ಗುತ್ತಲ್ (ಕಾರ್ಯನಿರ್ವಹಣಾಧಿಕಾರಿ, ಉತ್ತರಾದಿ ಮಠ),ಡಾ. ಎಂ.ಆರ್.ವಿ. ಪ್ರಸಾದ್ (ಅಧ್ಯಕ್ಷ, ಗಾಯನ ಸಮಾಜ),ಹಿರಿಯ ಹಿಂದೂಸ್ತಾನಿ ಗಾಯಕ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಮುದ್ದುಮೋಹನ್ ಉಪಸ್ಥಿತರಿರುವರು.
ಈ ಸಂದರ್ಭದಲ್ಲಿ ಸಾಧಕೋತ್ತಮರಾದ ಡಾ. ಸ್ವಾಮಿರಾವ್ ಕುಲಕರ್ಣಿ (ದಾಸ ಸಾಹಿತ್ಯ ಸಂಶೋಧಕ),ಡಾ. ರವೀಂದ್ರ ಕುಷ್ಟಗಿ (ಅಧ್ಯಾತ್ಮ ಚಿಂತಕ),ಹಿರಿಯ ಪತ್ರಕರ್ತ ರಾಘವೇಂದ್ರ ಗಣಪತಿ ಇವರಿಗೆ ‘ಹರಿದಾಸಾನುಗ್ರಹ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಜನವರಿ ೧೭ರಂದು ಮಧ್ಯಾಹ್ನ ೩.೩೦ರಿಂದ ಭಜನಾ ಕಾರ್ಯಕ್ರಮ, ಸಂಜೆ ೪.೪೫ರಿಂದ ವಿದುಷಿ ಶುಭಾ ಸಂತೋಷ್ ಅವರ ನೇತೃತ್ವದಲ್ಲಿ ಶುಭ ಸಂತೋಷ್ ಅಕಾಡೆಮಿಯ ಶಿಷ್ಯರಿಂದ ಗೋಷ್ಠಿಗಾಯನ ನಡೆಯಲಿದೆ.
ಜನವರಿ ೧೮, ಭಾನುವಾರ (ಅಮಾವಾಸ್ಯೆ) ಬೆಳಿಗ್ಗೆ ೯.00 ಗಂಟೆಯಿಂದ ವಿದುಷಿ ಲಕ್ಷ್ಮಿ ಭಾಸ್ಕರ್ ನೇತೃತ್ವದ ಸರಸ್ವತಿ ಸಂಗೀತ ಶಾಲೆ ಹಾಗೂ ವಿದುಷಿ ಚಂದ್ರಿಕಾ ಬದರಿನಾಥ್ ನೇತೃತ್ವದ ಶಾರದ ಗಾನಾಮೃತ ಶಿಷ್ಯರಿಂದಪುರಂದರದಾಸರ ಕೃತಿಗಳ ಗೋಷ್ಠಿಗಾಯನ- ದಾಸರ ಬೃಹತ್ ಶಿಲಾ ವಿಗ್ರಹಕ್ಕೆ ವಿಶೇಷ ಅಭಿಷೇಕ ನಡೆಯಲಿದೆ.
ಸಂಜೆ ೬.00 ಗಂಟೆಯವರೆಗೆ ಒಂಬತ್ತು ಭಜನಾ ಮಂಡಳಿಗಳಿಂದ ನಿರಂತರ ನಾಮಸಂಕೀರ್ತನೆ ನಡೆಯಲಿದ್ದು, ಸಂಜೆ ೬.00 ಗಂಟೆಗೆ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ ಹಾಗೂ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಮತ್ತು ವಿದ್ವಾನ್ ಜೆ.ಎಸ್. ಶ್ರೀಕಂಠಭಟ್ ಅವರ ನೇತೃತ್ವದಲ್ಲಿ ಪುರಂದರದಾಸರ ನವರತ್ನಮಾಲಿಕ ಕೃತಿಗಳ ಗೋಷ್ಠಿಗಾಯನ ನಡೆಯಲಿದೆ. ಈ ಸಂದರ್ಭದಲ್ಲಿ ವಿದುಷಿ ರಮ್ಯ ಮುರಳಿ ಹಾಗೂ ಕೃಪಾ ಶ್ರೀಕಾಂತ್ ಅವರಿಗೆ ಹರಿದಾಸಾನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಎಂದು ಶ್ರೀನಿವಾಸ ಉತ್ಸವ ಬಳಗದ ಅಧ್ಯಕ್ಷ ಡಾ. ಟಿ. ವಾದಿರಾಜ್ ಹಾಗೂ ಮಹಾಪೋಷಕ ಕೆ.ಆರ್. ಗುರುರಾಜಾರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ: ೯೮೮೬೧ ೦೮೫೫೦
ಕಾರ್ಯಕ್ರಮ ವರದಿಗಾಗಿ ಪತ್ರಿಕೆ ಹಾಗೂ ವಾಹಿನಿಗಳ ವರದಿಗಾರರು ಮತ್ತು ಛಾಯಾಗ್ರಾಹಕರು ಭಾಗವಹಿಸುವಂತೆ ಸವಿನಯ ವಿನಂತಿ.
ಬಾರೋ ಮನೆಗೆ ಗೋವಿಂದಾ…
‘ಬಾರೋ ಮನೆಗೆ ಗೋವಿಂದ’ ಎಂಬ ಅರ್ಥಪೂರ್ಣ ಶೀರ್ಷಿಕೆಯೊಂದಿಗೆ, ನಾಡಿನಧ್ಯಾತ್ಮಿಕ–ಸಾಂಸ್ಕೃತಿಕ ಚೇತನೆಯನ್ನು ಜನಮಾನಸದಲ್ಲಿ ಬೆಳಗಿಸುವ ಸಂಕಲ್ಪದೊಂದಿಗೆ ಶ್ರೀ ಶ್ರೀನಿವಾಸ ಉತ್ಸವ ಬಳಗವು ೨೦೧೨ರಲ್ಲಿ ಉದಯವಾಯಿತು. ಅಧ್ಯಾತ್ಮ, ಸಂಸ್ಕೃತಿ, ಸಾಹಿತ್ಯ ಮತ್ತು ಸಂಗೀತದ ಸುಗಂಧವನ್ನು ನಾಡಿನಾದ್ಯಂತ ಪಸರಿಸುವ ಮಹತ್ತರ ಧ್ಯೇಯದೊಂದಿಗೆ ಆರಂಭವಾದ ಈ ಉತ್ಸವ ಬಳಗವು, ಆ ದಿನದಿಂದ ಇಂದಿನವರೆಗೂ ಹರಿದಾಸ ಸಾಹಿತ್ಯ ಪ್ರಚಾರ ಹಾಗೂ ಅದಕ್ಕೆ ಪೂರಕವಾದ ವೈವಿಧ್ಯಮಯ ಚಟುವಟಿಕೆಗಳನ್ನು ಆಭಿಮಾನಿಗಳ ಹಾಗೂ ಹಿತೈಷಿಗಳ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.
ಪ್ರತಿವರ್ಷವೂ ದಾಸಶ್ರೇಷ್ಠ ಶ್ರೀ ಪುರಂದರದಾಸರ ಪುಣ್ಯದಿನದ ಸಂದರ್ಭದಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ನಡೆಯುವ ಸಂಗೀತ ವಿದ್ವಾಂಸರ ಉಪನ್ಯಾಸಗಳು, ದಾಸವಾಣಿ, ಹರಿದಾಸ ಗೋಷ್ಠಿ, ಭಜನೆ ಹಾಗೂ ಪ್ರತಿಭಾನ್ವಿತ ಗಣ್ಯರಿಗೆ ನೀಡಲಾಗುವ ‘ಹರಿದಾಸಾನುಗ್ರಹ’ ಪ್ರಶಸ್ತಿ ಸಮಾರಂಭಗಳು ನಾಡಿನಾದ್ಯಂತ ಅಪಾರ ಜನಪ್ರಿಯತೆ ಪಡೆದಿವೆ.
ದಾಸ ಸಾಹಿತ್ಯ ಪ್ರಚಾರಕ್ಕೆ ಮಾತ್ರ ಸೀಮಿತವಾಗದೇ, ಶ್ರೀ ಶ್ರೀನಿವಾಸ ಉತ್ಸವ ಬಳಗವು ದೇಶದ ಉದ್ದಗಲಕ್ಕೂ ವೈಭವೋಪೇತವಾಗಿ ನಡೆಸುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಊಂಜಲೋತ್ಸವ ಕಾರ್ಯಕ್ರಮಗಳು ಭಕ್ತಜನರ ಮನಸೂರೆಗೊಂಡಿವೆ. ತಿರುಮಲೆಯಲ್ಲಿ ಸಾಂಪ್ರದಾಯಿಕವಾಗಿ ಮತ್ತು ವಿಧಿವತ್ತಾಗಿ ನಡೆಯುವ ಈ ವರ್ಣರಂಜಿತ ಉತ್ಸವಗಳನ್ನು ಸಂದರ್ಭೋಚಿತ ದಾಸಪದಗಳು ಮತ್ತು ದೇವರ ನಾಮಸ್ಮರಣೆಯೊಂದಿಗೆ ಪ್ರಸ್ತುತಗೊಳಿಸುವುದು ಈ ಬಳಗದ ವಿಶೇಷತೆ.
ನಾಡಿನ ಸಂಗೀತ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿ, ಶ್ರೀ ಪುರಂದರದಾಸರ ಹತ್ತೊಂಬತ್ತು ಅಡಿ ಎತ್ತರದ ಬೃಹತ್ ಏಕಶಿಲಾ ಪ್ರತಿಮೆಯನ್ನು ಶ್ರೀಮದ್ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ೧೦೦೮ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ಬೆಂಗಳೂರು ನಗರದಲ್ಲಿರುವ ಉತ್ತರಾದಿ ಮಠದ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ೨೦೨೦ರಲ್ಲಿ ಪ್ರತಿಷ್ಠಾಪಿಸಿ ನಾಡಿಗೆ ಸಮರ್ಪಿಸಿರುವ ಮಹತ್ತರ ಕೀರ್ತಿ ಈ ಉತ್ಸವ ಬಳಗಕ್ಕೆ ಸಲ್ಲುತ್ತದೆ.
ಇಂತಹ ಹೃದಯಸ್ಪರ್ಶಿ ಸಾಹಿತ್ಯವನ್ನು ಜೀವನದ ಉಸಿರಾಗಿಸಿಕೊಂಡು, ವೈದಿಕ ಪರಂಪರೆಯ ತತ್ತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಾತ್ವಿಕ ಮಾರ್ಗದಲ್ಲಿ ನಡೆಯುತ್ತ ಶ್ರೀನಿವಾಸನ ಅನುಗ್ರಹಕ್ಕೆ ಪಾತ್ರರಾದ, ಶ್ರೀ ಶ್ರೀನಿವಾಸ ಉತ್ಸವ ಬಳಗದ ಪ್ರಮುಖ ರೂವಾರಿಯಾದ ಸನ್ಮಾನ್ಯ ಶ್ರೀ ಟಿ. ವಾದಿರಾಜರು, ‘ವೇದರತ್ನ’ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದು, ಕಳೆದ 14 ವರ್ಷಗಳಿಂದ ‘ಶ್ರೀ ಶ್ರೀನಿವಾಸ ಉತ್ಸವ ಬಳಗ (ರಿ)’ ದಾಸಸಾಹಿತ್ಯ ಪ್ರಚಾರ ಮಾಧ್ಯಮದ ಮೂಲಕ ‘ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ’ವನ್ನು ನಿರಂತರವಾಗಿ ನಡೆಸುತ್ತ ಜನಹಿತಕಾರ್ಯ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ.
ದಾಸ ಸಾಹಿತ್ಯದ ಸಾಗರವನ್ನು ಮಥಿಸಿದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿಗೆ ‘ಶ್ರೀ ಮಧ್ವ ಪುರಂದರ ಪ್ರಶಸ್ತಿ’
ವಿಜಯಪುರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕೊಲ್ಹಾರದಲ್ಲಿ ಜನಿಸಿದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪ್ರಾಚೀನ–ಅರ್ವಾಚೀನ ಕನ್ನಡ ಭಾಷೆ, ಇತಿಹಾಸ ಮತ್ತು ವಿಶೇಷವಾಗಿ ದಾಸ ಸಾಹಿತ್ಯದ ಅಧ್ಯಯನದಲ್ಲಿ ಅಪೂರ್ವ ಪಾಂಡಿತ್ಯವನ್ನು ಸಾಧಿಸಿದ್ದಾರೆ. ‘ಕಾಖಂಡಕಿ ಮಹಿಪತಿ ದಾಸರು – ಒಂದು ಅಧ್ಯಯನ’ ಎಂಬ ಪ್ರೌಢ ನಿಬಂಧದ ಮೂಲಕ ಕಲಬುರ್ಗಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದ ಅವರು, ಅನೇಕ ಪಿಎಚ್ಡಿ ಹಾಗೂ ಎಂಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಶೈಕ್ಷಣಿಕ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.
ವೃತ್ತಿಪರವಾಗಿ ದೂರಸಂಪರ್ಕ ಇಲಾಖೆಯ ಯೋಜನೆ ಹಾಗೂ ಆಡಳಿತ ವಿಭಾಗಗಳಲ್ಲಿ, ಮೂರೂವರೆ ದಶಕಕ್ಕೂ ಮಿಕ್ಕ ನಿಷ್ಠಾವಂತ ಸೇವೆ ಸಲ್ಲಿಸಿದ ಅವರು ನಂತರ ವಿದ್ಯಾವರ್ಧಕ ಪದವಿ ಕಾಲೇಜಿನ ಪ್ರಾಚಾರ್ಯರಾಗಿ, ಕರ್ನಾಟಕದ ಕೃಷಿ, ನೀರಾವರಿ, ನದಿ ನೀರು ಹಂಚಿಕೆ, ಸಂತ್ರಸ್ತರ ಪುನರ್ವಸತಿ ಮೊದಲಾದ ಕ್ಷೇತ್ರಗಳಲ್ಲಿ ಅಧ್ಯಯನಪೂರ್ಣ ಪ್ರಬಂಧಗಳ ಮೂಲಕ ಸರ್ಕಾರಕ್ಕೆ ಸಕಾಲಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಭೀಮಾ–ಕೃಷ್ಣಾ ನದಿಗಳನ್ನು ಕರ್ನಾಟಕದ ಜೀವನಾಡಿಗಳಾಗಿಸುವ ಚಿಂತನೆಗೂ ಅವರ ಶ್ರಮ ಮಹತ್ವದ ಅಡಿಪಾಯವಾಗಿದೆ.
ಅಧ್ಯಯನ–ಸಂಶೋಧನ ಕ್ಷೇತ್ರದಲ್ಲಿ ಡಾ. ಕುಲಕರ್ಣಿಯವರ ಕೊಡುಗೆ ವಿಶಾಲ. ಆದಿಲ್ಶಾಹಿ ಅಧ್ಯಯನ ಸಂಸ್ಥೆಯ ಗೌರವಾಧ್ಯಕ್ಷರಾಗಿ, ೮೦೦೦ ಪುಟಗಳ ೧೮ ಸಂಪುಟಗಳ ಆದಿಲ್ಶಾಹಿ ಸಾಹಿತ್ಯಾನುವಾದ ಸಂಪಾದನೆಯ ಸಾರಥಿಯಾಗಿರುವುದು ಮಾತ್ರವಲ್ಲದೆ, ಡಾ. ಕಲಬುರ್ಗಿ ಸಮಗ್ರ ಸಾಹಿತ್ಯ ಸಂಚಯನದ ೨೭,೦೦೦ ಪುಟಗಳ ೪೦ ಬೃಹತ್ ಸಂಪುಟಗಳ ಪ್ರಕಟಣೆಯ ಯೋಜನಾ ನಿರ್ದೇಶಕರಾಗಿ ಕನ್ನಡ ಸಾಹಿತ್ಯ ಇತಿಹಾಸದಲ್ಲೇ ಅಪರೂಪದ ಸಾಧನೆ ಮಾಡಿದ್ದಾರೆ.
ವಿಶ್ವಸಾಹಿತ್ಯ ಬೊಕ್ಕಸಕ್ಕೆ ಕನ್ನಡದ ಅಮೂಲ್ಯ ಕೊಡುಗೆಯಾದ ದಾಸ ಸಾಹಿತ್ಯ ಸಾಗರವನ್ನು ಮಥಿಸಿ, ಕಾಲಗರ್ಭದ ಕತ್ತಲಲ್ಲಿ ಹುದುಗಿದ್ದ ಸಾವಿರಾರು ಕೀರ್ತನೆಗಳು ಹಾಗೂ ಅನೇಕ ಕಾವ್ಯಗಳನ್ನು ಬೆಳಕಿಗೆ ತಂದ ಕೀರ್ತಿಯು ಅವರದ್ದೇ. ‘ಮನುಕುಲಕ್ಕೆ ಹರಿದಾಸರ ಕೊಡುಗೆ’, ‘ಹರಿದಾಸ ಸಾಹಿತ್ಯ’, ‘ವಿಜಯದಾಸರು’, ‘ವ್ಯಾಸರಾಯರ ಕೀರ್ತನೆಗಳು’, ‘ಗುರುಪರಂಪರೆ’, ‘ಮೂಲರಾಮನ ನಿತ್ಯ ನೆಲೆ’, ‘ನರಸಿಂಹ ಪ್ರಪಂಚ’, ‘ಶ್ರೀ ಉತ್ತರಾದಿ ಮಠ’ ಮೊದಲಾದ ಮೌಲಿಕ ಕೃತಿಗಳು ಹರಿದಾಸ–ಮಾಧ್ವ ಸಾಹಿತ್ಯದ ಶ್ರೀಮಂತಿಕೆಗೆ ಹೊಸ ಆಯಾಮ ನೀಡಿವೆ.
ಮರಾಠಿ, ಹಿಂದಿ, ದಖನಿ, ಸಂಸ್ಕೃತ, ಇಂಗ್ಲಿಷ್ ಭಾಷೆಗಳ ಹಲವಾರು ಮೌಲ್ಯಯುತ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಅವರು, ಉರ್ದು ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ನಾಡಿನ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ವಿವಿಧ ವಿಶ್ವವಿದ್ಯಾನಿಲಯಗಳ ನಿಯತಕಾಲಿಕೆಗಳಿಗೆ ೪೦೦ಕ್ಕೂ ಹೆಚ್ಚು ವಿದ್ವತ್ಪೂರ್ಣ ಲೇಖನಗಳನ್ನು ನೀಡಿದ್ದಾರೆ. ಜೊತೆಗೆ ಕಾದಂಬರಿ, ಕಥಾಸಂಕಲನ, ವ್ಯಕ್ತಿಚಿತ್ರ, ನಾಟಕಗಳ ಮೂಲಕವೂ ತಮ್ಮ ಸಾಹಿತ್ಯಿಕ ವಿಸ್ತಾರವನ್ನು ತೋರಿಸಿದ್ದಾರೆ.
‘ಹರಿದಾಸ ಸಾಹಿತ್ಯ ಭೂಷಣ’, ‘ಗಮಕ ಮಹಿಪತಿ’, ‘ಪ್ರಸನ್ನವೇಂಕಟ ಸಾಹಿತ್ಯ ರತ್ನ’ ಸೇರಿದಂತೆ ಅನೇಕ ಗೌರವೋಪಾಧಿಗಳು, ಕರ್ನಾಟಕ ಸರ್ಕಾರದ ‘ಕುವೆಂಪು ಭಾಷಾ ಭಾರತಿ ಪ್ರಶಸ್ತಿ’, ‘ಕನಕ ಶ್ರೀ’, ‘ರಾಜ್ಯೋತ್ಸವ ಪ್ರಶಸ್ತಿ’, ‘ಅಕಾಡೆಮಿ ಪ್ರಶಸ್ತಿ’ ಮುಂತಾದ ಅಸಂಖ್ಯ ಪುರಸ್ಕಾರಗಳು ಅವರ ಸಾಧನೆಯ ಸಾಕ್ಷ್ಯ.
ಸರಳತೆ, ಸಮುನ್ನತ ಚಿಂತನೆ ಮತ್ತು ಸಮುತ್ತುಂಗ ವ್ಯಕ್ತಿತ್ವದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರಿಗೆ ಶ್ರೀ ಪುರಂದರದಾಸರ ಆರಾಧನಾ ಸಂದರ್ಭದಲ್ಲಿ ‘ಶ್ರೀ ಮಧ್ವ ಪುರಂದರ ಪ್ರಶಸ್ತಿ’ ಪ್ರದಾನಿಸುವ ಮೂಲಕ, ದಾಸ ಸಾಹಿತ್ಯ ಸೇವೆಗೆ ಸಲ್ಲಿಸಿದ ದೀರ್ಘಕಾಲದ ಅಮೂಲ್ಯ ಸಾಧನೆಯನ್ನು ಗೌರವಿಸಿದ ಶ್ರೀ ಶ್ರೀನಿವಾಸ ಉತ್ಸವ ಬಳಗದ ಈ ನಡೆ ನಾಡಿನ ಸಾಂಸ್ಕೃತಿಕ ಲೋಕಕ್ಕೆ ಪ್ರೇರಣೆಯಾಗಿದೆ.
