ದಾಸಸಾಹಿತ್ಯ ಉಳಿವಿನಲ್ಲಿ ಮಹಿಳೆಯರ ಮಹತ್ತ್ವಪೂರ್ಣ ಪಾತ್ರ” – ಮೈತ್ರೇಯಿ ಹರಿದಾಸ ಟ್ರಸ್ಟ್ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ

ದಾಸಸಾಹಿತ್ಯ ಉಳಿವಿನಲ್ಲಿ ಮಹಿಳೆಯರ ಮಹತ್ತ್ವಪೂರ್ಣ ಪಾತ್ರ” – ಮೈತ್ರೇಯಿ ಹರಿದಾಸ ಟ್ರಸ್ಟ್ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ

ದಾಸಸಾಹಿತ್ಯವು ಇಂದಿಗೂ ಉಳಿದು ಬರುವಲ್ಲಿ ಮಹಿಳೆಯರ ಪಾತ್ರ ದೊಡ್ಡದು”

ಮೈತ್ರೇಯಿ ಕನ್ನಡ ಮಹಿಳಾ ಹರಿದಾಸ ಟ್ರಸ್ಟ್‌ ಶುಭಾರಂಭ

ದಾಸಸಾಹಿತ್ಯದ ಖ್ಯಾತನಾಮರು ಭಾಗಿ ; ಗ್ರಂಥ ಲೋಕಾರ್ಪಣೆ - ಸಾಧಕರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಮಹಿಳಾ ಹರಿದಾಸರ ಸಾಹಿತ್ಯದ ಸಂಗ್ರಹ, ಸಂಘಟನೆ, ಸಂವಾದ, ಸಮಾವೇಶ, ಪ್ರಕಟಣೆ, ಗೌರವ ಪ್ರಶಸ್ತಿ ಮುಂತಾದ ಕಾರ್ಯಕ್ರಮಗಳ ಚಾಲನೆ ಹಾಗೂ ಜಾಗೃತಿ ಮೂಡಿಸುವ ದಿಶೆಯಲ್ಲಿ ಕಾಲಕ್ಕೆ ತಕ್ಕಂತೆ ಒದಗುವ ಎಲ್ಲ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಎಲ್ಲ ದಿಕ್ಕುಗಳಲ್ಲಿ ಅದರ ರಕ್ಷಣೆ, ಅನುಷ್ಠಾನ ಮತ್ತು ಅಭಿವೃದ್ಧಿಯನ್ನು ಮಾಡುವ ಉದ್ದೇಶ್ಯದಿಂದ ರೂಪುಗೊಂಡಿರುವ “ಮೈತ್ರೇಯೀ ಮಹಿಳಾ ಹರಿದಾಸ ಟ್ರಸ್ಟ್” ನ ಸಂಸ್ಥಾಪನಾ ಸಮಾರಂಭವನ್ನು ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜು ಎದುರಿನ ಶ್ರೀಉತ್ತರಾದಿ ಮಠದ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. 

ಭುವನಗಿರಿ ಮಠದ ಪೂಜ್ಯ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಿ “ಮೈತ್ರೇಯೀ ಮಹಿಳಾ ಹರಿದಾಸ ಟ್ರಸ್ಟ್”ಅನ್ನು ದೀಪ ಬೆಳಗಿ – ಸಂಸ್ಥೆಯ ಲಾಂಛನ ಅನಾವರಣ ಮಾಡಿ ಉಧ್ಘಾಟಿಸಿ ಮಾತನಾಡುತ್ತ ಹರಿದಾಸಸಾಹಿತ್ಯ ಪರಂಪರೆಯು ಸಾಮಾನ್ಯರಿಗೂ ತಾತ್ವಿಕ ವಿಚಾರಗಳನ್ನು ಸರಳ ಮಾತುಗಳಲ್ಲಿ ತಲುಪಿಸುವ ಮೂಲಕ ಸಂಸ್ಕೃತಿಯ ಬೆಳವಣಿಗೆಗಾಗಿ ರೂಪುಗೊಂಡದ್ದಾಗಿದೆ. ಶ್ರೀಪಾದರಾಜರು, ಶ್ರೀವ್ಯಾಸರಾಜರು, ಶ್ರೀವಾದಿರಾಜರು, ಪುರಂದರದಾಸರು ಹಾಗು ಮಹಿಳಾ ಹರಿದಾಸಿಯರ ಹೀಗೆ ಅನೇಕ ದಾಸರ ಕೊಡುಗೆಯು ಅಪೂರ್ವವಾದುದು. ಇಂತಹ ದಾಸಸಾಹಿತ್ಯವು ಇಂದಿಗೂ ಉಳಿದು ಬರುವಲ್ಲಿ ಮಹಿಳೆಯರ ಪಾತ್ರ ದೊಡ್ಡದು. ತಾವು ದಿನವೂ ಹಾಡುವುದು ಮತ್ತು ಪಾರಾಯಣ ಮಾಡುವುದಲ್ಲದೆ ಮುಂದಿನ ಪೀಳಿಗೆಗೂ ಅದನ್ನು ತಲುಪಿಸುತ್ತಾ ಬಹುದೊಡ್ಡ ಸಾಧನೆಯನ್ನು ಸ್ತ್ರೀಸಮಾಜವು ಮಾಡುತ್ತ ಸನಾತನ ಧರ್ಮದ ಉಳಿವಿಗೆ ಶ್ರಮಿಸುತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು. 

ಮೈತ್ರೇಯಿ ಎನ್ನುವುದು ಮಾತೃತ್ವದ ಸಂಕೇತ ,ಕೇವಲ ಒಬ್ಬ ಬ್ರಹ್ಮವಾದಿನಿ ಕುರಿತಾಗಿಲ್ಲ ಜ್ಞಾನದಿಂದ ತುಂಬಿದ ಒಬ್ಬ ಮಹಿಳೆಯು ಮೈತ್ರಿ ಎಂದು ಹೇಳಬಹುದು ಸಮಾಜಕ್ಕೆ ಏನನ್ನಾದರೂ ಕೊಡುವಲ್ಲಿ ತಾಯಂದಿರ ಪಾತ್ರವೂ ಮೇಲು ಎಂಬುದು ಸಿದ್ಧವಾದ ಮಾತು, ಜನನೀಯ ಮೊದಲ ಗುರು ಎನ್ನುವಂತೆ ಒಬ್ಬೊಬ್ಬ ಪ್ರತಿಭಾವಂತ ವ್ಯಕ್ತಿತ್ವದ ಹಿಂದೆ ಒಬ್ಬ ಮಹಿಳೆಯ ಶ್ರಮ ತ್ಯಾಗ ಸಹನೆ ಕ್ಷಮಾ ಧೈರ್ಯ ಸ್ಥೈರ್ಯ ಎಲ್ಲವೂ ಅಡಗಿದೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಜಯಪುರದ ನಿವೃತ್ತ ನ್ಯಾಯಾಧೀಶೆ ಮೀನಾಕ್ಷಿ ಸಾವಳಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಡಾ.ಸತ್ಯಧ್ಯಾನಾಚಾರ್ಯ ಕಟ್ಟಿ, ಉತ್ತರಾದಿ ಮಠದ ಪಂ .ವಿದ್ಯಾಧೀಶಾಚಾರ್ಯ ಗುತ್ತಲ್‌ , ದಾಸಸಾಹಿತ್ಯ ಚಿಂತಕರಾದ ನಿವೇದಿತಾ ಹೊನ್ನತ್ತಿ, ರವೀಂದ್ರ ಕುಷ್ಟಗಿ, ವಾಸುದೇವ ಅಗ್ನಿಹೋತ್ರಿ, ಪರಶುರಾಮ ಬೆಟಗೇರಿ ದಂಪತಿಗಳು, ಶಾಂತಾಬಾಯಿ, ಮುಕುಂದ್‌ ಗಂಗೂರ, , ಡಾ.ಗುರುರಾಜ ಪೋಶೆಟ್ಟಿಹಳ್ಳಿ, ವಾದಿರಾಜ ಅಗ್ನಿಹೋತ್ರಿ , ಶ್ರೀನಿವಾಸ ಉತ್ಸವ ಬಳಗದ ವಾದಿರಾಜ ಟಿ, ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ, ಡಾ.ಸುರೇಶ ಪಾಟೀಲ, ಅನಂತರಾವ್‌ ದಂಡಿನ್‌ , ಡಾ.ಕುಮುದಾ, ಡಾ.ವಾರುಣಿ ಜಯತೀರ್ಥ, ನಿರುಪಮ ಗುರುರಾಜ, ಕೆ.ಎಂ ಶೇಷಗಿರಿ, ವಕೀಲೇ ಗೌರಿ ಜಡೆ ದಾಸವಾಣಿ ಕರ್ನಾಟಕದ ಜಯರಾಜ ಕುಲಕರ್ಣಿ ಮೊದಲಾದವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.

ಟ್ರಸ್ಟನ ಗೌರವಾಧ್ಯಕ್ಷರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಪದಾಧಿಕಾರಿಗಳಾದ ಡಾ. ಸುಧಾ ನರಸಿಂಗರಾವ್‌ ದೇಶಪಾಂಡೆ, ಡಾ, ಶಾಂತಾ ರಘೋತ್ತಮಾಚಾರ್‌, ಡಾ, ವೃಂದಾ ಸಂಗಮ್‌, ಡಾ. ವಿದ್ಯಾ ಕಸಬೆ, ಡಾ. ಶೀಲಾ ದಾಸ್, ಡಾ, ವಿದ್ಯಾಶ್ರೀ ಮಾನ್ವಿ , ಮಾನಸ ಜಯರಾಜ್‌ ಕುಲಕರ್ಣಿ ,ಪ್ರಿಯಾ ಪ್ರಾಣೇಶ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂದನ ವಾಹಿನಿಯ ಪ್ರವೀಣಾ ಕುಲಕರ್ಣಿ ನಿರೂಪಿಸಿದರು.

ಮೈತ್ರೇಯಿ ಪ್ರಕಾಶನದಿಂದ ಡಾ.ವಿದ್ಯಾ ಕಸ್ಬೆ ಸಂಪಾದಕತ್ವದ “ಪ್ರಮುಖ ಮಹಿಳಾ ಹರಿದಾಸರು” ಗ್ರಂಥ ಲೋಕಾರ್ಪಣೆ , ಸಾಧಕ ಮಹಿಳಾ ಹರಿದಾಸಿಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಹಾಗೂ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದವರಿಗೆ ಹಾಗೂ ವಿಶೇಷ ಸಾಧನೆಗೈದ ಮಾಡಿದವರಿಗೆ ಪ್ರತಿಭಾ ಪುರಸ್ಕಾರದಿಂದ ಗೌರವಿಸಲಾಯಿತು .