ವಿಷಯ ವಾಸನೆಯ ಪರಧಿ ಕಳಚಿದಾತನೇ ಶರಣ - ಹಾರಕೂಡ ಶ್ರೀ

ವಿಷಯ ವಾಸನೆಯ ಪರಧಿ ಕಳಚಿದಾತನೇ ಶರಣ - ಹಾರಕೂಡ ಶ್ರೀ
ಪ್ರಪಂಚದಲ್ಲಿಯೇ ಇದ್ದುಕೊಂಡು ವಿಷಯವಾಸನೆಯ ಪರಧಿಯಿಂದ ಹೊರಬಂದು ಸರಳ ಸಾತ್ವಿಕ ಸಮಾಜ ಮುಖಿಯಾಗಿ ಬದುಕು ಸಾಗಿಸುವವನೇ ಶರಣ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಮೈಸಲಗಾ ಗ್ರಾಮದ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ಧರ್ಮ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ದೇಹ, ಮನಸ್ಸು, ಆತ್ಮಗಳಿಂದ ಕೂಡಿದ ಮಾನವ ಶರೀರಕ್ಕೆ ಅನ್ನ, ಜ್ಞಾನ, ಧ್ಯಾನ ಅವಶ್ಯವಾಗಿದ್ದು, ಸಮತೋಲನ ಜೀವನ ಸಾಗಿಸಲು ಭದ್ರಭೂಮಿಕೆಯನ್ನು ರೂಪಿಸಿಕೊಡುತ್ತದೆ.
ಸತ್ಯ ಶುದ್ಧತೆಯಿಂದ ಕೂಡಿದ ಕಾಯಕ ಮತ್ತು ದಾಸೋಹ ಗಳಿಂದ ಭಗವಂತನ ಕೃಪೆಗೆ ಪಾತ್ರರಾಗುತ್ತೇವೆ.
ನಮ್ಮ ಸಂಪಾದನೆಯಲ್ಲಿ ಯೋಗ್ಯತೆಗೆ ಅನುಸಾರ ಸ್ವತ್ಪಾತ್ರರಿಗೆ ಮಾಡುವ ದಾನ ಧರ್ಮದಿಂದ ಅಧ್ಯಾತ್ಮದ ಅನುಸಂಧಾನವಾಗಿ ಎತ್ತರದ ಜೀವನ ಸಾಗಿಸಲು ಸಾಧ್ಯವಾಗುತ್ತದೆ.
ಭೌತಿಕ ಸಿರಿ ಸಂಪತ್ತು ಎಷ್ಟೇ ಇದ್ದರೂ ನೆಮ್ಮದಿ ಇರದಿದ್ದರೆ ಎಲ್ಲವೂ ವ್ಯರ್ಥ, ಹಾಗಾಗಿ ಮನೆ ಎಂದರೆ ಕೇವಲ ನಶ್ವರ ಸಂಪತ್ತಿನ ಉಗ್ರಾಣವಲ್ಲ, ತೃಪ್ತಿ, ಆನಂದ, ನಗುವಿನ ಪರಿಮಳ ಯಾವ ಮನೆಯಲ್ಲಿ ಹಸಿರಾಗಿರುತ್ತೋ ಅಂತಹ ಮನೆ ನಿಜವಾಗಿಯೂ ಶ್ರೀಮಂತಿಕೆಯಿಂದ ಕೂಡಿರುತ್ತದೆ.
ದಾನ ಧರ್ಮ ದಾಸೋಹ ಹಾಗೂ ಸಜ್ಜನರಿಂದ ಕೂಡಿದ ಮೈಸಲಗಾ ಜನತೆಗೆ ಹಾರಕೂಡಧೀಶ ಹಾಗೂ ಲಕ್ಷ್ಮೀ ಮಾತೆ ಅಂತ:ಕರಣದ ಆಶೀರ್ವಾದ ಕರುಣಿಸಲಿ ಎಂದು ಶುಭ ಹಾರೈಸಿದರು.
ಖೇಳಗಿಯ ಪೂಜ್ಯ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಮಾತನಾಡಿದರು.
ಸೋಪನರಾವ ಪಾಟೀಲ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.
ಪೂಜ್ಯ ರತ್ನಕಾಂತ ಶಿವಯೋಗಿಗಳು, ಪೂಜ್ಯ ಶಂಕರ ಆಯಿ ಮೈಸಲಗಾ, ಶ್ರೀಮತಿ ಸಾವಿತ್ರಿ ಶರಣು ಸಲಗರ, ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷ ಗುರುಲಿಂಗಪ್ಪ ಸೈದಾಪುರೆ, ಮಲ್ಲಿನಾಥ ಹಿರೇಮಠ ಹಾರಕೂಡ, ಶಿವಶರಣಪ್ಪ ಕಂಬಳಿಮಠ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಸರಸ್ವತಿ ವಡ್ಡೆ, ಜಗನ್ನಾಥ ಧೋಮೆ, ಭೀಮಾಶಂಕರ ಮಾಲಿ ಪಾಟೀಲ, ಶ್ರೀಮತಿ ರೇಣುಕಾ ನೀಲೆ, ಶ್ರೀಮತಿ ಶಾಂತಾಬಾಯಿ ರಾಠೋಡ್, ಶ್ರೀಮತಿ ಸುಧಾಮ ಜಾದವ, ದೇವಸ್ಥಾನ ಕಮಿಟಿ ಅಧ್ಯಕ್ಷರಾದ ರೇವಣಸಿದ್ದಪ್ಪ ಅಟ್ಟೂರ ಮುಂತಾದವರು ಉಪಸ್ಥಿತರಿದ್ದರು.
ಅಣ್ಣಾರಾವ ಶೆಳ್ಳಗಿ ಪ್ರಾರ್ಥನಾ ಗೀತೆ ಹಾಡಿದರು.
ಸಿದ್ದಾರೂಡ ಪಾಟೀಲ ನಿರೂಪಣೆ ಮಾಡಿದರು.
ಸಮಾರಂಭಕ್ಕೂ ಮುನ್ನ ಹಾರಕೂಡ ಶ್ರೀಗಳ ಅದ್ದೂರಿ ಮೆರವಣಿಗೆ ಜರಗಿತು.
ಚಿತ್ರ : ಬಸವಕಲ್ಯಾಣ ತಾಲೂಕಿನ ಮೈಸಲಗಾ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀಯ13ನೇ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ ಧರ್ಮ ಸಭೆಯನ್ನು ಹಾರಕೂಡದ ಪೂಜ್ಯಶ್ರೀ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಖೇಳಗಿಯ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಪೂಜ್ಯ ರತ್ನಕಾಂತ ಶಿವಯೋಗಿಗಳು, ಪೂಜ್ಯ ಶಂಕರ ಆಯಿ ಮೈಸಲಗಾ, ಮಲ್ಲಿನಾಥ ಹಿರೇಮಠ ಹಾರಕೂಡ ಉಪಸ್ಥಿತರಿದ್ದರು.