ಸಾಹಿತ್ಯ ಸಂಗಮ

ಸಾಹಿತ್ಯ ಸಂಗಮ

ಸಾಹಿತ್ಯ ಸಂಗಮ

ಡಾ. ಸುರೇಂದ್ರಕುಮಾರ ಕೆರಮಗಿಯವರು ಸ್ನಾತಕೋತ್ತರ ಕನ್ನಡ ಅಧ್ಯಯನ ಹಾಗೂ ಸಂಶೋಧನಾ ವಿಭಾಗ, ಸರಕಾರಿ ಕಾಲೇಜು (ಸ್ವಾಯತ್ತ) ಕಲಬುರಗಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾವ್ಯ ಮೀಮಾಂಸೆ ಹಾಗೂ ಸಾಹಿತ್ಯ ವಿಮರ್ಶೆಯ ಬಗೆಗೆ ಪಾಠ-ಪ್ರವಚನ ಮಾಡಿದ್ದಾರೆ. ಕಲಬುರಗಿ ಜಿಲ್ಲೆಯ ಕಮಲಾಪುರದಲ್ಲಿ ಶ್ರೀ ಬಸವಣ್ಣಯ್ಯ ಹಾಗೂ ಶ್ರೀಮತಿ ಸರಸ್ವತಿ ದಂಪತಿಗಳ ಸುಪುತ್ರರಾಗಿ ಜನಿಸಿದ ಶ್ರೀಯುತರು ಕಮಲಾಪೂರದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿ.ಯು.ಸಿ. ಶಿಕ್ಷಣ ಪೂರೈಸಿಕೊಂಡು ಗುಲಬರ್ಗಾದ ಶ್ರೀ ಶರಣಬಸವೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ತಮ್ಮ ಬಿ.ಎ. ಪದವಿಯನ್ನು ಪಡೆದುಕೊಂಡಿದ್ದಾರೆ. ಶ್ರೀ ಕೃಷ್ಣ ಆಲನಹಳ್ಳಿಯರ 'ಭುಜಂಗಯ್ಯನ ದಶಾವತಾರಗಳ ಕುರಿತು' ಸಂಪ್ರಬಂಧ ಮಂಡಿಸಿ ಎಂ.ಫಿಲ್. ಪದವಿ ಹಾಗೂ ಡಾ. 'ಹಾ.ಮಾ.ನಾಯಕರ ಅಂಕಣ ಸಾಹಿತ್ಯ' ಕುರಿತು ಸಂಶೋಧನಾ ಮಹಾ ಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪೂರೈಸಿಕೊಂಡಿದ್ದಾರೆ. ಶ್ರೀಯುತರು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯಿಂದ ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದು ಇವರ ಮಾರ್ಗದರ್ಶನದಲ್ಲಿ ಎಂಟು ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪಿಎಚ್.ಡಿ. ಪದವಿ ಪೂರೈಸಿಕೊಂಡಿದ್ದಾರೆ.

'ಸಾಹಿತ್ಯ ಸಂಗಮ' ಕೆರಮಗಿಯವರ ಹನ್ನೆರಡು ವಿಮರ್ಶಾತ್ಮಕ ಲೇಖನಗಳ ಸಂಗ್ರಹವಾಗಿದ್ದು ಇಲ್ಲಿ ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡಕ್ಕೆ ಸಂಬಂಧಿಸಿದ ಮಹತ್ವದ ಕೃತಿಗಳನ್ನು ಬೆಲೆಗಟ್ಟಿದ್ದಾರೆ. ಕಾವ್ಯದಲ್ಲಿ ಕಲ್ಪನೆಯ ಸ್ಥಾನ, ಕರ್ನಾಟಕ ಕಾದಂಬರಿಯಲ್ಲಿ ಜೀವನ ಮೌಲ್ಯಗಳ ಅನ್ವೇಷಣೆ, ಶರಣರ ವಚನಗಳಲ್ಲಿ ಶೂನ್ಯ ಸಂಪಾದನಾ ತತ್ವ, ಘನಮನ ಸಂಪನ್ನರು ಕೃತಿಯಲ್ಲಿ ಆಚಾರ-ವಿಚಾರಗಳಿಂದ ಎತ್ತರಕ್ಕೇರಿದ ಶರಣರ ಬದುಕಿನ ಚಿಂತನೆ, ಕನ್ನಡ ಸಾಹಿತ್ಯದಲ್ಲಿ ಕಂಡುಬರುವ ಸೌಹಾರ್ದತೆಯ ನೆಲೆಗಳ ವಿವೇಚನೆ, ಪ್ರವಾಸ ಕಥನ, ಸಣ್ಣಕಥೆ ಹಾಗೂ ಅಂಕಣ ಬರಹಕ್ಕೆ ಸಂಬಂಧಿಸಿದ ಕೃತಿ ಹಾಗೂ ಪ್ರಕಾರ ಚಿಂತನೆಯಿಂದಾಗಿ ಇಲ್ಲಿಯ ವಿಮರ್ಶಾತ್ಮಕ ಲೇಖನಗಳಿಗೆ ಬೆಲೆ ಬಂದಿದೆ. ಯಾವುದೇ ಕೃತಿಯ ಬೆಲೆಗಟ್ಟುವಲ್ಲಿ ವಿಮರ್ಶೆಯ ವಿವಿಧ ಆಯಾಮಗಳ ಅರಿವಿರಬೇಕಾಗುತ್ತದೆ. ಕೆರಮಗಿಯವರು ಸಾಹಿತ್ಯ ವಿಮರ್ಶೆಯ ಬೋಧಕರಾದ್ದರಿಂದ ಅವರಿಗೆ ಕೃತಿಗಳನ್ನು ವಿವಿಧ ದೃಷ್ಟಿಕೋನಗಳಿಂದ ನೋಡುವುದು ಸಾಧ್ಯವಾಗಿದೆ. ನಿಜವಾದ ವಿಮರ್ಶೆ ಸಂಕುಚಿತ ಸ್ವಾರ್ಥಭಾವನೆಗಳನ್ನು ದೂರ ಸರಿಸಿ ಅರಿಸ್ಟಾಟಲ್ ರವರು ಆಶಿಸುವ 'ಭಾವ ವಿರೇಚನೆ' ಯನ್ನುಂಟುಮಾಡುವುದೇ ಆಗಿದೆ. ಅನೇಕ ಕಂದಕಗಳಿಂದ, ಮೂಢ ನಂಬಿಕೆ, ಸಂಪ್ರದಾಯಗಳಿಂದ ಕೂಡಿದ ಸಮಾಜಕ್ಕೆ ವೈಚಾರಿಕ, ವೈಜ್ಞಾನಿಕ ಹಾಗೂ ತಾರ್ಕಿಕ ಆಲೋಚನೆಗಳನ್ನು ಬಲಪಡಿಸಲು ಸಾಹಿತ್ಯ ತುಡಿಯಬೇಕಾದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಕೆರಮಗಿಯವರ 'ಸಾಹಿತ್ಯ ಸಂಗಮ' ದ ಕೃತಿಗಳು ದಾರಿ ತೋರುತ್ತವೆ.

ಕಲಬುರಗಿಯ ಶ್ರೀ ಬಸವ ಪ್ರಕಾಶನದಿಂದ 2023ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ 176 ಪುಟಗಳಿದ್ದು 170ಬೆಲೆ ನಿಗದಿಪಡಿಸಲಾಗಿದೆ.

ಡಾ. ಶರಣಬಸಪ್ಪ ವಡ್ಡನಕೇರಿ