ಶಾಂತರಸ

ಶಾಂತರಸ

ವಾಚಿಕೆ-3. ಶಾಂತರಸ

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.

ಈ ಸದಿಚ್ಛೆ ನೆರವೇರುವಲ್ಲಿ ಡಾ. ದಸ್ತಿಗೀರಸಾಬ್ ದಿನ್ನಿ ಯವರು ಶಾಂತರಸರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಶಾಂತರಸರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡಾ ಲಭಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಕಟ್ಟುವುದರ ಜೊತೆಗೆ ಕಾವ್ಯ, ಕಥೆ, ಗಜಲ್, ಕಾದಂಬರಿ, ಅನುವಾದ ಸೇರಿದಂತೆ ಹಲವು ಕೃತಿ ರಚಿಸಿದವರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.

ಬಯಲು ಸೀಮೆಯ ಪ್ರದೇಶವೆಂದು ಕರೆಯಿಸಿಕೊಳ್ಳುವ ರಾಯಚೂರು ಜಿಲ್ಲೆಯ ಹಿರಿಯ ಸಾಹಿತಿಗಳಾದ ಶಾಂತರಸ ಅವರನ್ನು ಕುರಿತು ಕವಿ ಪ್ರೊ.ಚಂದ್ರಶೇಖರ ಪಾಟೀಲ ಅವರು ಬರೆದ ಕವಿತೆಯ ಸಾಲುಗಳಿವು. ಅವರ ಇಡೀ ಬದುಕಿಗೆ ಇವು ಅನ್ವರ್ಥಕದಂತಿವೆ. ಶಾಂತರಸರು ಹುಟ್ಟಿದ್ದು ೪..೪.೧೯೨೪ ರಲ್ಲಿ.ರಾಯಚೂರು ಜಿಲ್ಲೆಯ ಹೆಂಬೇರಾಳ ಗ್ರಾಮದ ಚನ್ನಬಸವಯ್ಯ ಹಿರೇಮಠ ಮತ್ತು ಸಿದ್ದಲಿಂಗಮ್ಮನವರು ಶಾಂತರಸ ಅವರ ತಂದೆ ತಾಯಿ. ಅವರ ಮೊದಲ ಹೆಸರು ಶಾಂತಯ್ಯ. ಬಾಲ್ಯದಲ್ಲಿಯೇ ಚುರುಕಾಗಿದ್ದರು. ಹೊಟ್ಟೆಪಾಡಿಗಾಗಿ ಪಂಚಾಂಗ ಹೇಳುವ, ದೆವ್ವ ಬಿಡಿಸುವ, ಕರ್ಮಠ ವಿಧಿ ವಿಧಾನಗಳನ್ನು ಅನುಸರಿಸುವ ತಂದೆಯ ಕೆಲಸಗಳನ್ನು ಬಾಲ್ಯದಲ್ಲಿಯೇ ಪ್ರಶ್ನಿಸುವ ಗುಣವನ್ನು ಬೆಳೆಸಿಕೊಂಡಿದ್ದರು.

ಮನೆಯ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ಶಿಕ್ಷಣವನ್ನು ಪಡೆಯುವ ಸಂದರ್ಭದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ತಿಮ್ಮಾಪುರ, ಹೆಂಬೇರಾಳ, ಶಿರವಾಳ, ಮುನ್ನೂರು, ಕಲಬುರ್ಗಿ, ರಾಯಚೂರು ಮತ್ತು ಲಾತೂರು ಮುಂತಾದ ಊರುಗಳಲ್ಲಿ ಶಿಕ್ಷಣವನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು ಮನೆಯಲ್ಲಿ ಆಗಾಗ ನಡೆಯುತ್ತಿದ್ದ ಅನುಭಾವ ಗೋಷ್ಠಿ, ತತ್ವಪದಗಳ ಹಾಡುಗಾರಿಕೆ, ಶಬರ ಶಂಕರ ವಿಳಾಸ, ರಾಜಶೇಖರ ವಿಳಾಸ, ಜೈಮಿನಿ ಭಾರತ, ಅಮರಕೋಶ ಮುಂತಾದ ಹಳೆಗನ್ನಡ ಕಾವ್ಯಗಳ ಓದು ಅವರ ಸೃಜನಶೀಲ, ಸಾಂಸ್ಕೃತಿಕ ವ್ಯಕ್ತಿತ್ವದ ಮೇಲೆ ಗಾಢವಾದ ಪ್ರಭಾವವನ್ನು ಬೀರಿದವು. ರಾಯಚೂರಿನ ತಾರಾನಾಥ

ಶಿಕ್ಷಣ ಸಂಸ್ಥೆಯ ಹಮ್ಹರ್ದ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಆರಂಭಿಸಿದರು. ಬಾಹ್ಯ ವಿದ್ಯಾರ್ಥಿಯಾಗಿ ಓದಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ನಂತರ ಪ್ರೌಢಶಾಲಾ ಶಿಕ್ಷಕರಾಗಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮತ್ತು ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿದರು. ಶಾಂತರಸರು ವೃತ್ತಿಯಲ್ಲಿದ್ದಾಗ ಉತ್ತಮ ಶಿಕ್ಷಕರಾಗಿ, ಆಡಳಿತಗಾರರಾಗಿ ಸಂಸ್ಥೆಯ ಏಳಿಗೆಗೆ ಹಗಲಿರುಳು ಶ್ರಮಿಸಿದ್ದಾರೆ. ಶಾಂತರಸರು ಕಥೆ, ಕಾದಂಬರಿ, ನಾಟಕ,ಕವನ ಗಜಲುಗಳನ್ನು ಬರೆಯುವುದರ ಮೂಲಕ ನಾಡಿನಾದ್ಯಂತ ಹೆಸರಾದವರು. ಸಂಶೋಧಕ, ಚಿಂತಕರಾಗಿದ್ದ ಅವರು

ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಹೋರಾಟಗಾರರಾಗಿ ಗುರುತಿಸಿಕೊಂಡವರು. ಎಡೆದೊರೆ, ದೋ-ಆಬ್ ನೆಲವಾದ ರಾಯಚೂರಿನಲ್ಲಿ ಅಧ್ಯಾಪಕ ವೃತ್ತಿಯನ್ನು ಕೈಗೊಂಡು ಅಲ್ಲಿಯೇ ಗಟ್ಟಿಯಾಗಿ ನೆಲೆಯನ್ನು ಕಂಡುಕೊಂಡಿದ್ದಲ್ಲದೇ, ಅಲ್ಲಿನ ನೆಲದ ಸಂಸ್ಕೃತಿಯನ್ನು ಸಾಹಿತ್ಯಕ್ಕೆ ಅರ್ಥಪೂರ್ಣವಾಗಿ ಇಳಿಸಿದವರು . ಶಾಂತರಸರು ವಿದ್ಯಾರ್ಥಿಗಳ ಪಾಲಿಗಂತು ಅಚ್ಚುಮೆಚ್ಚಿನ ಗುರುಗಳಾಗಿದ್ದರು. ವಿದ್ಯಾರ್ಥಿಗಳಿಗೆ ಪಾಠ ಹೇಳಲು ತೊಡಗಿದರೆ ಛಂದಸ್ಸು,ರಗಳೆ, ಪದ್ಯ,ಕಥೆಗಳನ್ನು ತುತ್ತು ಮಾಡಿ ಉಣಿಸುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿದ್ದ ಪ್ರತಿಭೆಯನ್ನು ಗುರುತಿಸಿ ಬೆನ್ನು ತಟ್ಟುತ್ತಿದ್ದರು. ಬರವಣಿಗೆ, ಚಿತ್ರಕಲೆ, ಓದು, ಆಟ ಮುಂತಾದವುಗಳಲ್ಲಿ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ತೊಡಗಿಸುತ್ತಿದ್ದರು. ಅವರ ಶಿಷ್ಯರು ಇಂದು ರಾಜ್ಯಮಟ್ಟದಲ್ಲಿ ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರುವಾಸಿಗಳಾಗಿದ್ದಾರೆ. ಅದರಲ್ಲಿ ಸಾಹಿತಿಗಳು, ಸಂಗೀತಗಾರರು ಚಿತ್ರಕಲಾವಿದರು ಇದ್ದಾರೆ ಎನ್ನುವುದು ಗಮನಾರ್ಹ.

 ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 184 ಪುಟಗಳನ್ನು ಹೊಂದಿದ್ದು 185 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.