ಚಂದ್ರಕಾಂತ ಕರದಳ್ಳಿ

ಚಂದ್ರಕಾಂತ ಕರದಳ್ಳಿ

ವಾಚಿಕೆ-17.    ಚಂದ್ರಕಾಂತ ಕರದಳ್ಳಿ

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರಾರು ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.

ಈ ಸದಿಚ್ಛೆ ನೆರವೇರುವಲ್ಲಿ ಡಾ. ಶೈಲಜಾ ಏನ್. ಬಾಗೇವಾಡಿ ಅವರು ಚಂದ್ರಕಾಂತ ಕರದಳ್ಳಿಯವರ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ಚಂದ್ರಕಾಂತ ಕರದಳ್ಳಿಯವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿ ಕೂಡಾ ಲಭಿಸಿದೆ. ಅವರ ಒಟ್ಟು ಸಾಹಿತ್ಯದ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.

ಮಕ್ಕಳ ಸಾಹಿತ್ಯ ರಚನೆ ಹಾಗಿರಬೇಕು. ಹೀಗಿರಬೇಕು ಎಂಬ ಚಿಂತಿಸುತ್ತಾ ಮಗುವಿನ ಮಿದುಳಿಗೆ ಮುಟ್ಟದ ಕಥೆ ಕವನಗಳನ್ನು ಹೆಣೆದು ಅವರು ಓದದಂತೆ ಮಾಡುವುದರಲ್ಲಿ ಯಾವ ಪುರುಷಾರ್ಥವು ಇಲ್ಲ. ವಸ್ತು ಹೊಸದಾಗಿರಬೇಕು, ಹೇಳುವ ರೀತಿ ಸರಳವಾಗಿರಬೇಕು ವಿಚಾರಕ್ಕೆ ಹಚ್ಚುವಂತಿರಬೇಕು ಎಂಬ ಮಾತೇನೋ ಸರಿ ಆದರೆ ಓದುವ ಮಗು ಮೊದಲು ಆಪೇಕ್ಷೆ ಪಡುವುದು, ಸರಳವಾದ ಓದನ್ನು ಕೊನೆಯಲ್ಲಿ ವಿಡಂಬನೆಯನ್ನೋ, ಹಾಸ್ಯವನ್ನೋ, ಲಯವನ್ನೋ, ಮನಸ್ಸಿನಲ್ಲಿಟ್ಟು ಮೆಲುಕು ಹಾಕುತ್ತಿರು ಇದೆ" ಎಂಬ ಆಲೋಚನೆಯಿಂದ ಚಂದ್ರಕಾಂತ ಕರದಳ್ಳಿಯವರು ಮಕ್ಕಳ ಸಾಹಿತ್ಯ ರಚನೆಗೆ ತೊಡಗಿದರು. ಮಕ್ಕಳ ಮನೋವಿಕಾಸಕ್ಕೆ ವ್ಯಕ್ತಿತ್ವದ ರೂಪಗೊಳ್ಳುವಿಕೆಯಲ್ಲಿ ಮಕ್ಕಳ ಸಾಹಿತ್ಯ ಪೂರಕವಾಗಿ ಪರಿಣಮಿಸುತ್ತದೆ. ಅವುಗಳ ಮನಸ್ಸು ಬಿಳಿಹಾಳೆಯಂತಿದ್ದು, ಅಲ್ಲಿ ನಾವು ಬಿತ್ತಿದ ಬೀಜ ಫಲ ನೀಡುತ್ತದೆ ಮಕ್ಕಳಿಗೆ ರಮ್ಯ ರೋಚಕ ವಸ್ತುಗಳನ್ನು ಸಾಹಿತ್ಯದ ಮೂಲಕ ಬಿಂಬಿಸಿದರೆ ಅವರ ಕುತೂಹಲ ಜಾಗ್ರತವಾಗುತ್ತದೆ. ಈ ಕುತೂಹಲವೇ ಬುದ್ಧಿವಿಕಾಸಕ್ಕೆ ಮೂಲವಾಗಿದೆ. ಇಂತಹ ಘನ ಉದ್ದೇಶವಿಟ್ಟುಕೊಂಡೆ ಕರದಳ್ಳಿಯವರು ಮಕ್ಕಳಿಗಾಗಿ ಸಾಹಿತ್ಯ ಕೃಷಿ ಮಾಡಿ ಹೆಸರಾದರು. ಮಕ್ಕಳ ಕವಿತೆ, ಕಾದಂಬರಿ, ಶಿಶುಪ್ರಾಸ, ಕತೆ, ವಿಮರ್ಶೆ, ಜೀವನ ವೃತ್ತಾಂತ, ಸಂಪಾದನೆ, ಹೀಗೆ ಹಲವಾರು ಪ್ರಕಾರಗಳಲ್ಲಿ ಬರೆದು ಮಕ್ಕಳ ಸಾಹಿತ್ಯ ಮತ್ತು ಪ್ರೌಢ ಸಾಹಿತ್ಯದಲ್ಲೂ ಸೈ ಎನ್ನಿಸಿಕೊಂಡವರು. ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮಕ್ಕಳೊಂದಿಗಿನ ಒಡನಾಟ ಅವರ ಬರವಣಿಗೆಗೆ ಕಸುವು ನೀಡಿದ್ದು ಸಹಜ. ಜೊತೆಗೆ ಸಾಹಿತ್ಯ ವಲಯದ ನಂಟು, ಅವರ ಅನುಭವ, ಬದುಕಿನ ಜಂಜಾಟಗಳಿಂದ ಶಕ್ತಿ ಪಡೆದು ಚಿಂತನ, ವಿಮರ್ಶೆ, ವ್ಯಕ್ತಿ ಚಿತ್ರಣ ಬರೆಯುವಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

 ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದಿಂದ 2023 ರಲ್ಲಿ ಹೊರಬಂದ ಈ ವಾಚಿಕೆಯ ಕೃತಿಯು 184 ಪುಟಗಳನ್ನು ಹೊಂದಿದ್ದು 180 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.