ಬೆಲೆ ಏರಿಕೆ ಹೆಚ್ಚಳಕ್ಕೆ ಸಿರಗಾಪೂರ ಖಂಡನೆ

ಬೆಲೆ ಏರಿಕೆ ಹೆಚ್ಚಳಕ್ಕೆ ಸಿರಗಾಪೂರ ಖಂಡನೆ
ಕಲಬುರಗಿ: ಹಾಲು, ಮೊಸರು, ವಿದ್ಯುತ್, ಮೆಟ್ರೊ ಪ್ರಯಾಣ, ಸಾರ್ವಜನಿಕ ಸಾರಿಗೆ, ಡೀಸೆಲ್, ಟೋಲ್ ದರ ಏರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು,ರಾಜ್ಯದ ಜನರು ಹಾಲು, ಮೊಸರಿನ ಬೆಲೆ ಹಾಗೂ ವಿದ್ಯುತ್, ಕಸ ಸಂಗ್ರಹಣೆ ದರ ಏರಿಕೆಯ ಕಹಿಯನ್ನು ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಜ್ಯ ಸರ್ಕಾರವು ಡೀಸೆಲ್ ದರ ಹಾಗೂ ಕೇಂದ್ರ ಸರ್ಕಾರವು ಟೋಲ್ ದರ ಏರಿಕೆ ಮಾಡಿರುವುದು ಖಂಡನೀಯ ಎಂದರು.
ಆಸ್ತಿ ನೋಂದಣಿ ಶುಲ್ಕ, ಸಾರ್ವಜನಿಕ ಸಾರಿಗೆಯ ಪ್ರಯಾಣದ ದರ, ವಾಹನ ನೋಂದಣಿ ಶುಲ್ಕ, ಬಿತ್ತನೆ ಬೀಜ ಹಾಗೂ ರಸಗೊಬ್ಬರ ದರ, ಆಸ್ತಿ ತೆರಿಗೆ, ಸರ್ಕಾರಿ ಕಾಲೇಜುಗಳ ಪ್ರವೇಶ ಶುಲ್ಕವನ್ನೂ ಹೆಚ್ಚಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿವೆ ಎಂದು ಹೇಳಿದರು.ಅಗತ್ಯ ವಸ್ತುಗಳ ಬೆಲೆ ಏರಿಕೆಯು ಜನಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರಲಿದೆ. ತಕ್ಷಣವೇ ಬೆಲೆ ಏರಿಕೆಯನ್ನು ಕೈ ಬಿಡಬೇಕು ಎಂದು ಅವರು ಆಗ್ರಹಿಸಿದರು.