ಹೋಗತಿ ನಕ್ಕೀ ಕೊಚ್ಚಿ
ಹೋಗತಿ ನಕ್ಕೀ ಕೊಚ್ಚಿ
ದೇಹವೆಂಬೋದು ಮಣ್ಣಿನ ಕುಡಿಕಿ
ದೇವ ಮಾಡ್ಯಾನ ತಿದ್ದಿ ತದಿಕಿ
ಬಳಸಬೇಕ ಜ್ವಾಕಾಗಿ ಇದನ
ಗಡಿಗೆ ಒಡೆದ ಮ್ಯಾಲೆ ಉಳಿಯೋದೇನ //
ಗಾಳಿ ಆಡಾಕಂತ ಒಂಬತ್ತ ಬಾಗಿಲ
ಯಾವುದಕ್ಕೂ ಹಾಕಿಲ್ಲ ಕಡಿವಾಣ ಕೀಲ
ಎಲ್ಲಾನೂ ಬಳಸದ ಇರಾಕ ಆಗಾಕಿಲ್ಲ
ನೀತಿ ತಪ್ಪಿದರ ಹಾಳಾಗದೆ ಇರದಲ್ಲ ಕೇಳ ,//
ಎಲುಬಿನ ಹಂದರಕ ತೊಗಲಿನ ಹೊದಿಕಿ
ಹುಡುಕಿದರೆನಿಲ್ಲ ಬೆದಕಿ ಬೆದಕಿ
ಆಸೆ ಹಂಬಲಗಳು ಹಾಕತಾವ ಇಣಿಕಿ
ಮನಸ ಮಾತ ಕೇಳಿದರ ಬಾಳ ಗೋಳ ಐತಿ //
ನಾಶವಾಗೋ ಈ ದೇಹಾ ನೆಚ್ಚಿ
ಕಾಣುವುದೆಲ್ಲಾ ಸುಖ ಕೊಡತೈತಿ ಅಂತ ಮೆಚ್ಚಿ
ಬೆನ್ನತ್ತಿ ತಿರುಗಿದರ ಆಗತಿ ನೀ ಹುಚ್ಚಿ
ಹಾಳು ಸಂಸಾರದಾಗ ಹೋಗುತೀ ನಕ್ಕೀ ಕೊಚ್ಚಿ//
ನಿನ್ನ ನೀ ತಿಳಿದ ನೋಡದೇನಿಲ್ಲ ಒಳಗ
ಯಾರಿಲ್ಲ ಇಲ್ಲಿ ಸ್ಥಿರವಾದ ಬಂಧು ಬಳಗ
ಬಂದು ಹೋಗೋ ನೆಂಟರೆ ಎಲ್ಲಾ
ಇಲ್ಲಿ ಉಳಿದೊರು ಯಾರೂ ಇಲ್ಲ//
ಗುಡಿ ಗುಂಡಾರ ಸುತ್ತಿ ದನಿದರೇನ
ಅಡಿಗಡಿಗೆ ಶಿವನ ನೆನೆಯದಿರೇನಿಲ್ಲ
ಮುಡಿಕೊಟ್ಟು ಮಡಿಯಾಗಿ ನಿಂತರೇನ
ನಿಜ ಬಕುತಿ ತೋರದ ಅಂವ ಒಲಿದಾನೇನ//
ಡಾ ಅನ್ನಪೂರ್ಣ ಹಿರೇಮಠ