.ಓ ಮಾತೃ ಭೂಮಿಯೇ

.ಓ ಮಾತೃ ಭೂಮಿಯೇ

.ಓ ಮಾತೃ ಭೂಮಿಯೇ

ಓ ಮಾನವ ಜನ್ಮಗಳ ಜನ್ಮದಾತೆ

ನಿನ್ನಲ್ಲಿಯೂ ಮೇಲು-ಕೀಳು

ಶ್ರಿಮಂತ-ಬಡವ ಎನ್ನುತ್ತಿರುವಾಗ

ಓ ಮಾತೃ ಭೂಮಿಯೇ

ಇದಕೆ ನ್ಯಾಯ ಕೊಡುವೆಯಾ?

ಹುಟ್ಟುತ್ತಲೇ ಅಣ್ಣತಮ್ಮಂದಿರು

ಬೆಳೆಯುತ್ತಲೇ ದಾಯಾದಿಗಳನ್ನು

ಸೃಷ್ಠಿ ಮಾಡಿದ ಜನ್ಮದಾತೆ ನೀನು

ಎಲ್ಲರೊಂದಿಗೆ ದ್ವೇಷ- ಅಸೂಯೆ

ಹುಟ್ಟಿಕೊಳ್ಳುತ್ತಿದೆ ದಿನನಿತ್ಯ

ಓ ಮಾತೃ ಭೂಮಿಯೇ

ನೀನೇನು ಮಾಡುತ್ತಿರುವೆ ಹೇಳು?

ಮಹಾನ್ ವ್ಯಕ್ತಿಗಳ ಚರಿತ್ರೆಯಲ್ಲಿ

ನೋವು ನಲಿವಿನ ಆಟ ಆಡಿದೆ ನೀನು

ಬಟ್ಟ ಬಯಲಿನ ಶರಣರಿಗೂ ಬಿಟ್ಟಿಲ್ಲಾ ನೀನು

ಓ ಮಾತೃ ಭೂಮಿಯೇ

ಇದರಿಂದ ಮುಕ್ತಿ ನೀಡುವೆಯಾ?

ನನ್ನವರು ಅನ್ನುವವರು ನನಗಾಗಲಿಲ್ಲಾ

ನನ್ನವರು ಯಾರೆಂದು ನೀ ತಿಳಿಸಲಿಲ್ಲಾ

ನಿನ್ನ ಮಾಯೆಯನು ನಾ ಅರಿಯಲಿಲ್ಲ

ಓ ಮಾತೃ ಭೂಮಿಯೇ

ನೀ ಹೀಗೇಕೆ ಮಾಡಿದೆ?

ಹೆಣ್ಣು-ಹೊನ್ನು-ಮಣ್ಣು

ಸೃಷ್ಠಿಸಿದ ಈ ಜಗಕ್ಕೆ

ಜ್ವಾಲೆ ಹೊತ್ತಿ ಉರಿಯುತ್ತಿದೆ

ಹೀಗೇಕೆ ನಡೆಯುತ್ತಿದೆ ಈ ಜಗದಲ್ಲಿ

ಓ ಮಾತೃ ಭೂಮಿಯೇ

ಕಾರಣವಾದರೂ ಹೇಳುವೆಯಾ?

ಅಧಿಕಾರ-ಅಂತಸ್ಸು ಸ್ಥಿರವಿಲ್ಲದಿದ್ದರೂ

ಅಣ್ಣ-ತಮ್ಮ ಅಕ್ಕ-ತಂಗಿ ಬಂಧುಬಳಗ

ಹೊಡೆದಾಡುವುದು ದಿನನಿತ್ಯ ತಪ್ಪಿದ್ದಲ್ಲಾ

ಈ ಜಗದ ಆಟ ಏನೋ ಇದೆ

ಎಲ್ಲವನೂ ನೀ ಬಲ್ಲೆ

ಓ ಮಾತೃ ಭೂಮಿಯೇ

ಉತ್ತರ ನೀನೇ ಹೇಳುವೆಯಾ?

ಹಳ್ಳಿಯೇ ಇರಲಿ, ಪಟ್ಟಣವೇ ಇರಲಿ

ಶಾಂತಿಯೂ ಸಿಗದೇ ಈ ಜನರೆಲ್ಲಾ

ಒದ್ದಾಡಿ ಸಾಯುತ್ತಿದ್ದಾರಲ್ಲಾ

ಓ ಮಾತೃ ಭೂಮಿಯೇ

ಇದಕೆ ಪರಿಹಾರ ನೀಡುವೆಯಾ?

ಜಗಕ್ಕೆಲ್ಲಾ ಜನ್ಮಕೊಟ್ಟು ಸಾಕಿ-ಸಲಹಿ

ಸಾವು-ನೋವುಗಳ ಮಧ್ಯೆಯೆ ಆಟ

ಆಡುತ್ತಿರುವೆಯಲ್ಲ

ಓ ಮಾತೃ ಭೂಮಿಯೇ

ನಿನ್ನಾಟ ಬಯಲಾಟ

ಯಾರು ಬಲ್ಲರು ನೀನೇ ಹೇಳು?

ನಾವೆಲ್ಲರೂ ಒಂದೇ ತಾಯ ಮಕ್ಕಳೆಂದು

ಕೂಗಿದರೂ ಭೇದ-ಭಾವ ತಪ್ಪಲಿಲ್ಲ

ಏನು ತಾಯಿ ನಿನ್ನ ಮಹಿಮೆ

ಓ ಮಾತೃ ಭೂಮಿಯೇ

ನಾ ಹೇಗೆ ತಿಳಿಯಲಿ?

ನಿನ್ನ ಮಹಿಮೆಯ ಅರಿವು

ಜಗಕ್ಕೆಲ್ಲಾ ನೀಡು

ಜಗವೆಲ್ಲ ನಗುತ್ತಿರಲಿ ತಾಯೆ

ಓ ಮಾತೃ ಭೂಮಿಯೇ.

                                                                                                                             ಡಾ.ನಾಗಪ್ಪ ಟಿ ಗೋಗಿ

ಕಲಬುರ್ಗಿಯಲ್ಲಿ ನಡೆದಿರುವ ೮೫ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ ಮಾಡಲಾಗಿದೆ. ದಿನಾಂಕ ೦೭-೦೨-೨೦೨೦