ಯಡ್ರಾಮಿ ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯ ದುರ್ಬಳಕೆ ಮಹೇಶ್ ಪಾಟೀಲ್ ಕಡಕೋಳ ಖಂಡನೆ

ಯಡ್ರಾಮಿ ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯ ದುರ್ಬಳಕೆ ಮಹೇಶ್ ಪಾಟೀಲ್ ಕಡಕೋಳ ಖಂಡನೆ
ಯಡ್ರಾಮಿ: ಯಡ್ರಾಮಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಜಾರಿಯಲ್ಲಿರುವ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆ ಸರಿಯಾಗಿ ನಿರ್ವಹಣೆಯಾಗದೆ ಅವ್ಯವಸ್ಥೆಯಲ್ಲಿಯೇ ಸಿಲುಕಿದ್ದು, ಯೋಜನೆಯ ಹಿನ್ನಡೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವವರು ನಮ್ಮ ಕರ್ನಾಟಕ ಸೇನೆ ಯಡ್ರಾಮಿ ತಾಲೂಕ ಅಧ್ಯಕ್ಷ ಮಹೇಶ್ ಪಾಟೀಲ್ ಕಡಕೋಳ.
2018ರಲ್ಲಿ ಆರಂಭವಾದ ಜೆಜೆಎಂ ಯೋಜನೆಯು ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರನ್ನು 24 ಗಂಟೆಗಳ ಕಾಲ ಪೂರೈಸುವುದು ಮುಖ್ಯ ಉದ್ದೇಶವಾಗಿದ್ದರೂ, ಹಲವೆಡೆ ಈ ಯೋಜನೆಯ ಕಾರ್ಯಾಚರಣೆ ಯದ್ವತದ್ವವಾಗಿ ನಡೆಯುತ್ತಿದೆ. ಕೆಲವೆ ಮನೆಗಳಿಗೆ ಮಾತ್ರ ನಳ್ಳಿ ಅಳವಡಿಸಿರುವುದು ಕಂಡುಬಂದಿದ್ದು, ನಲ್ಲಿಗಳಿಂದ ನೀರು ಹರಿಯದ ಸ್ಥಿತಿಯಿದೆ. ಇದರಿಂದ ಯೋಜನೆಯ ಉದ್ದೇಶವೇ ವಿಫಲವಾಗಿದೆ ಎಂದು ಪಾಟೀಲ್ ಅವರು ಆಕ್ಷೇಪಿಸಿದರು.
ಇನ್ನೊಂದೆಡೆ, ಕಾಮಗಾರಿ ವೇಳೆಯಲ್ಲಿ ಹಳ್ಳಿಗಳ ಸಿಸಿ ರಸ್ತೆಗಳನ್ನು ಅಗಿದು ನಾಶಪಡಿಸಲಾಗಿದ್ದು, ಇದರಿಂದ ವಾಹನಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಗಾಡಿಗಳು ಸ್ಕಿಡ್ ಆಗಿ ನೆಲಕ್ಕೆ ಬಿದ್ದು, ಪೈಪುಗಳು ಹಾಳಾಗಿರುವ ದೃಶ್ಯಗಳು ದಾಖಲಾಗಿವೆ. ಕೆಲವು ಗ್ರಾಮಸ್ಥರು ಕಾಮಗಾರಿ ಪೂರ್ಣವಾಗುವ ನಂಬಿಕೆಯಿಲ್ಲದೆ, ರಸ್ತೆಗೆ ಅಳವಡಿಸಿದ ಪೈಪುಗಳನ್ನು ಕಿತ್ತುಕೊಂಡು ತಮ್ಮ ಮನೆಯಲ್ಲೇ ಇಟ್ಟುಕೊಂಡಿರುವ ಹಾಸ್ಯಾಸ್ಪದ ಸ್ಥಿತಿಯು ನಿರ್ಮಾಣವಾಗಿದೆ.
ಈ ಎಲ್ಲ ಅವ್ಯವಸ್ಥೆಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಹೇಶ್ ಪಾಟೀಲ್ ಕಡಕೋಳ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯವನ್ನು ಒದಗಿಸಬೇಕು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ.
ವರದಿ: ಜೆಟ್ಟೆಪ್ಪ ಎಸ. ಪೂಜಾರಿ