"ಗುಡ್ಡ ಕುಸಿತಕ್ಕೆ ನ್ಯಾಯ ಕೇಳಿದ ಡಾ. ಪ್ರಣವಾನಂದ ಶ್ರೀಗಳು: ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ"

ಶೀರೂರು ಗುಡ್ಡ ಕುಸಿತ ಪ್ರಕರಣ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ:
ಡಾ. ಪ್ರಣವಾನಂದ ಶ್ರೀಗಳ ನಿರಶನ ಹೋರಾಟಕ್ಕೆ ಆರ್ಯ ಈಡಿಗ ಹೋರಾಟ ಸಮಿತಿ ಬೆಂಬಲ
ಕಲಬುರಗಿ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶೀರೂರಿನಲ್ಲಿ ಗುಡ್ಡ ಕುಸಿತ ಘಟನೆ ಯಿಂದ ಸಾವನ್ನಪ್ಪಿದವರಿಗೆ ಪರಿಹಾರ ಹಾಗೂ ದುರಂತಕ್ಕೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚಿತ್ತಾಪುರ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಎಪ್ರಿಲ್ 7 ಸೋಮವಾರದಿಂದ ಪ್ರಾರಂಭಿಸುವ ನಿರಶನ ಸತ್ಯಾಗ್ರಹಕ್ಕೆ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯು ಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಶೀರೂರು ಗುಡ್ಡ ದುರಂತ ಘಟನೆಯಲ್ಲಿ ಒಟ್ಟು 11 ಮಂದಿ ಮಣ್ಣಿನಡಿ ಬಿದ್ದು ಮೃತರಾಗಿದ್ದು ಇದರಲ್ಲಿ ಏಳು ಮಂದಿ ನಾಮಧಾರಿ ಈಡಿಗ ಸಮುದಾಯದಕ್ಕೆ ಸೇರಿದವರು. ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಘಟನೆಗೆ ಕಾರಣರಾದ ಕಂಪನಿ ಹಾಗೂ ಅಧಿಕಾರಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಡಾ. ಪ್ರಣವಾನಂದ ಸ್ವಾಮೀಜಿಯವರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಂತ್ರಸ್ತರ ಕುಟುಂಬ ಹಾಗೂ ಈಡಿಗ, ನಾಮಧಾರಿ, ನಾಯಕ ಸಮುದಾಯದ ಜನರೊಂದಿಗೆ ನಡೆಸುವ ಹೋರಾಟ ನ್ಯಾಯೋಚಿತವಾಗಿದೆ. ಕಾನೂನು ರೀತಿ ಕ್ರಮ ಕೈಗೊಂಡು ತಕ್ಷಣ ಸಂತ್ರಸ್ತರಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ಘೋಷಿಸಬೇಕು ಹಾಗೂ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯು ನ್ಯಾಯೋಚಿತವಾಗಿದೆ ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಹಾಗೂ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನೆಯಲ್ಲಿ ಈಡಿಗ ಸಮುದಾಯದ ಏಳು ಜನರು ಹಾಗೂ ಉಳಿದ ನಾಲ್ವರು ಇದ್ದು ಎಲ್ಲರಿಗೂ ನ್ಯಾಯ ಸಿಗಬೇಕಾಗಿದೆ. ಮೃತಪಟ್ಟು ಶವ ಪತ್ತೆಯಾಗದವರಿಗೆ ಡೆತ್ ಸರ್ಟಿಫಿಕೇಟ್ ಒದಗಿಸಬೇಕು. ಘಟನೆಯ ಕುರಿತಾಗಿ ನ್ಯಾಯಾಂಗ ತನಿಖೆ ಅಗತ್ಯವಾಗಿದೆ. ಗುಡ್ಡ ಕುಸಿತಕ್ಕೆ ಕಾರಣವಾದ ಕಂಪನಿಯ ವಿರುದ್ಧ ಎಫ್ಐಆರ್ ದಾಖಲು ಆಗಿದ್ದರೂ ಈವರೆಗೆ ಬಂಧಿಸಲಿಲ್ಲ ಹಾಗೂ ಸಂಬಂಧಪಟ್ಟ ಇಲಾಖೆಗಳ ಮೇಲೆ ಕೂಡ ಕ್ರಮ ಕೈಗೊಳ್ಳದಿರುವುದು ಅಕ್ಷಮ್ಯ ಅಪರಾಧವಾಗಿದೆ. ಸ್ವಾಮೀಜಿಯವರ ನಿರಶನ ಹೋರಾಟ ನ್ಯಾಯೋಚಿತವಾಗಿದೆ ಎಂದು ಹೋರಾಟ ಸಮಿತಿಯು ತಿಳಿಸಿದೆ.
ಈ ಹೋರಾಟದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಈಡಿಗ ಸಮುದಾಯದ ಜನರು ಭಾಗವಹಿಸಲಿದ್ದು ಸ್ವಾಮೀಜಿಯವರಿಗೆ ಪೂರ್ಣ ಬೆಂಬಲ ನೀಡುವುದಾಗಿ ಸಮಿತಿ ತಿಳಿಸಿದೆ.