ಸರ್ವಾಧಿಕಾರಿ ಧೋರಣೆಯತ್ತ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಚಿವರ ನೀತಿಗೆ ಹಿರಿಯ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ ಖಂಡನೆ

ಸರ್ವಾಧಿಕಾರಿ ಧೋರಣೆಯತ್ತ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಚಿವರ ನೀತಿಗೆ ಹಿರಿಯ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ ಖಂಡನೆ
ಕಲಬುರಗಿ: ಸಾರ್ವಜನಿಕ ಗ್ರಂಥಾಲಯ ಇಲಾಖೆಯು ದಿನಾಂಕ 19-03-2025 ರಂದು ಹೊರಡಿಸಿದ ಸುತ್ತೋಲೆ ಕೂಡಲೇ ಹಿಂಪಡೆದುಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕದ ಸಾಹಿತಿ, ಚಿಂತಕರು, ಕವಿ, ಲೇಖಕರು ಆಗ್ರಹಿಸಿದ್ದಾರೆ. ಈ ಸುತ್ತೋಲೆಯನ್ನು ಗಮನಿಸಿದಾಗ ಸರ್ಕಾರ ಏಕಗವಾಕ್ಷಿ ಪುಸ್ತಕ ಖರೀದಿ ಯೋಜನೆಯನ್ನು ಕ್ರಮೇಣ ನಿಲ್ಲಿಸುವ ಷಡ್ಯಂತರ ನಡೆಸಿದೆ ಎಂದು ಆರೋಪಿಸಲಾಗಿದೆ.
ಇದುವರೆಗೆ ಲಭ್ಯವಿದ್ದ ಸೌಲಭ್ಯವನ್ನು ಧೀಡೀರನೆ ಮುಚ್ಚಿದ್ದು ಯಾಕೆ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಪ್ರಧಾನ ಕಛೇರಿ ಮುಚ್ಚಿ ಆಯುಕ್ತರ ಹುದ್ದೆಯನ್ನು ರದ್ದುಪಡಿಸುವ ಸಾಧ್ಯತೆಗಳಿವೆ. ಈ ಹಿಂದೆ ನಿರ್ದೇಶಕರ ಹುದ್ದೆಯನ್ನು ತೆಗೆದು ಆಯುಕ್ತರ ನೇಮಕ ಮಾಡಿದ್ದಲ್ಲಿಯೇ ಕೈವಾಡವಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು ವಲಯ ಗ್ರಂಥಾಲಯಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧಿಕವಾಗಿ ಪುಸ್ತಕ ಖರೀದಿಯ ಪರಮಾಧಿಕಾರವನ್ನು ನೀಡಲಾಗಿದೆ. ಈ ಕ್ರಮದಿಂದ ಭಾಗಶಃ ಪಕ್ಷಪಾತ, ಪ್ರಾದೇಶಿಕತೆ, ಗುಂಪುಗಾರಿಕೆ ಮತ್ತು ಜಾತೀಯತೆ ಧೋರಣೆ ಅನುಸರಿಸುವ ಸಾಧ್ಯತೆ ಇದೆ.
ಹಿರಿಯ ಸಾಹಿತಿಗಳ ಪ್ರಕಾರ, ಬೆಂಗಳೂರು ಮೂಲದ ಲೇಖಕರು ಮತ್ತು ಪ್ರಕಾಶಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ಕರ್ನಾಟಕದ ಉಳಿದ ಜಿಲ್ಲೆಯ ಲೇಖಕರು, ಸಾಹಿತಿಗಳು, ಮತ್ತು ಪ್ರಕಾಶಕರು ನಿರ್ನಾಮವಾಗುವ ಅಪಾಯವಿದೆ. ಎಲ್ಲಾ ಜಿಲ್ಲಾ ಗ್ರಂಥಪಾಲಕರು ತಮ್ಮ ಪುಸ್ತಕ ಖರೀದಿಯ ಅಧಿಕಾರ ಕಳೆದುಕೊಂಡಿದ್ದು, ಸ್ಥಳೀಯ ಸಾಹಿತ್ಯ ಅಭಿವೃದ್ಧಿಗೆ ಧಕ್ಕೆ ಉಂಟಾಗಲಿದೆ.
ಇಂತಹ ಸ್ಥಿತಿಯಲ್ಲಿ, 2021 ರ ಆಯ್ಕೆ ಪಟ್ಟಿಯಡಿ ಬಾಕಿಯಿರುವ ಪುಸ್ತಕ ಖರೀದಿ ಪಾವತಿಯನ್ನು ಕೂಡಲೇ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಎಲ್ಲ ಜಿಲ್ಲೆಗಳ ಲೇಖಕರು ಮತ್ತು ಪ್ರಕಾಶಕರಿಗೆ ಪ್ರತಿ ವರ್ಷ ಬಾಕಿ ಪಾವತಿಯನ್ನು ನಿರ್ವಹಿಸಿ ಪ್ರೋತ್ಸಾಹ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಸಾಮಾಜಿಕ ನ್ಯಾಯವನ್ನು ಪುನಃ ಸ್ಥಾಪಿಸಲು, ಏಕಗವಾಕ್ಷಿ ಪುಸ್ತಕ ಖರೀದಿ ಯೋಜನೆಯ ಪರಮಾಧಿಕಾರವನ್ನು ಆಯುಕ್ತರಿಗೆ ಅಥವಾ ನಿರ್ದೇಶಕರಿಗೆ ಮರಳಿ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಂಬಲ ವ್ಯಕ್ತಪಡಿಸಿದವರು:
ಪ್ರೊ. ಶಿವಾರಾಜ ಪಾಟೀಲ, ಡಾ. ಗವಿಸಿದ್ಧಪ್ಪ ಪಾಟೀಲ, ಡಾ. ಶರಣಬಸಪ್ಪ ವಡ್ಡನಕೇರಿ, ಡಾ. ಕೆ.ಎಸ್. ಬಂಧು, ಡಾ. ಮೀನಾಕ್ಷಿ ಬಾಳಿ, ಡಾ. ರಾಜಕುಮಾರಿ ಮಾಳಗೆ, ಡಾ. ಸಿದ್ದಪ್ಪ ಹೊಸಮನಿ, ಸುರೇಶ್ ಕಾನೇಕರ, ಆಕಾಶ ತೆಗನೂರ, ಡಾ. ಅವಿನಾಶ ದೇವನೂರ, ಸಂತೋಷಕುಮಾರ ಕರಹರಿ, ಡಾ. ಶೀಲಾದೇವಿ ಬಿರಾದಾರ, ಡಾ. ಬಸವರಾಜ ದಯಾಸಾಗರ, ಶಿವರಾಜ ಮೇತ್ರೆ, ಸಿದ್ದಾರ್ಥ ಮಿತ್ರಾ, ಡಾ. ಸಿದ್ರಾಮ ವಾಘಮಾರೆ ಮೊದಲಾದವರು.