ಡೊಂಗರಗಾಂವ ಮಹಾತ್ಮಾ ಬಸವೇಶ್ವರ ಶಾಲಾ ಮಕ್ಕಳ ಅಳಲು: ಚರಂಡಿ ದಾಟಿ ಶಾಲೆಗೆ ಹೋಗುವ ದುಸ್ಥಿತಿ – ಗ್ರಾಮ ಪಂಚಾಯತ್ ಮುತ್ತಿಗೆ ಹಾಕಿ ಪ್ರತಿಭಟನೆ
ಡೊಂಗರಗಾಂವ ಮಹಾತ್ಮಾ ಬಸವೇಶ್ವರ ಶಾಲಾ ಮಕ್ಕಳ ಅಳಲು: ಚರಂಡಿ ದಾಟಿ ಶಾಲೆಗೆ ಹೋಗುವ ದುಸ್ಥಿತಿ – ಗ್ರಾಮ ಪಂಚಾಯತ್ ಮುತ್ತಿಗೆ ಹಾಕಿ ಪ್ರತಿಭಟನೆ
ಕಮಲಾಪುರ: ಕಮಲಾಪುರ ತಾಲೂಕಿನ ಡೊಂಗರಗಾಂವ ಗ್ರಾಮದ ಮಹಾತ್ಮ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳಿಗೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ತೀವ್ರ ತೊಂದರೆ ಎದುರಾಗುತ್ತಿದೆ. ಶಾಲೆಗೆ ಹೋಗಲು ಮಕ್ಕಳು ಗ್ರಾಮದ ಚರಂಡಿಯನ್ನು ದಾಟಿ ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿದ್ದು, ದಿನನಿತ್ಯ ಮಕ್ಕಳು ಚರಂಡಿಯೊಳಗೆ ಕಾಲಿಟ್ಟು ಶಾಲೆಗೆ ಹೋಗುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಮಕ್ಕಳ ಮೈಯೆಲ್ಲಾ ಗಾಯಗಳು, ಚರ್ಮದ ಸೋಂಕುಗಳು ಉಂಟಾಗುತ್ತಿವೆ ಎಂದು ಪಾಲಕರು ಮತ್ತು ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಯ ಕುರಿತು ಹಲವಾರು ಬಾರಿ ಶಾಸಕರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ ಎನ್ನುವುದು ಗ್ರಾಮಸ್ಥರ ಅಳಲು. ಸಮಸ್ಯೆ ಬಗೆಹರಿಯದೆ ನಿರ್ಲಕ್ಷ್ಯ ಮುಂದುವರೆದ ಹಿನ್ನೆಲೆಯಲ್ಲಿ ಬೇಸತ್ತ ಶಾಲಾ ಮಕ್ಕಳು ಶಿಕ್ಷಕರೊಂದಿಗೆ ಸೇರಿ ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಕ್ಕಳು “ನಮಗೆ ಸುರಕ್ಷಿತವಾಗಿ ಶಾಲೆಗೆ ಹೋಗುವ ದಾರಿ ಬೇಕು” ಎಂದು ಘೋಷಣೆಗಳನ್ನು ಕೂಗಿದರು. ಈ ವಿಷಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಗಮನಕ್ಕೆ ತಂದರೂ, ಇದುವರೆಗೂ ಸಂಬಂಧಪಟ್ಟವರು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎನ್ನುವುದೇ ಮಕ್ಕಳ ನೋವಿನ ಮಾತಾಗಿದೆ.
ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, “ಇಂದಿನ ಮಕ್ಕಳು ನಾಳೆಯ ದೇಶದ ನಾಗರಿಕರು. ಅವರ ಮನಸ್ಸಿನಲ್ಲಿ ಉತ್ತಮ ಮೌಲ್ಯಗಳು ಉಳಿಯಬೇಕಾದರೆ ಮೊದಲು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಸರ್ಕಾರ ಹಾಗೂ ಸ್ಥಳೀಯ ಆಡಳಿತದ ಮೇಲಿದೆ. ಮಕ್ಕಳಿಗೆ ಸುರಕ್ಷತೆ ಇಲ್ಲದೆ, ಕೊಳಕು ಪರಿಸರದಲ್ಲಿ ಬೆಳೆಸಿದರೆ ಮುಂದೆ ಸಮಾಜಕ್ಕೂ ದೇಶಕ್ಕೂ ಅನಾಹುತ ಉಂಟಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಸಿದರು.
ಡೊಂಗರಗಾಂವ ಗ್ರಾಮದ ಮಹಾತ್ಮ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಬೇಕು. ಚರಂಡಿ ದಾಟದೆ ಸುರಕ್ಷಿತವಾಗಿ ಶಾಲೆಗೆ ಹೋಗಲು ಸೇತುವೆ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕರಿಗೆ, ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ಅಭಿವೃದ್ಧಿ ಅಧಿಕಾರಿಗಳನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಜಕುಮಾರ್ ಎಸ್. ಕಾರಮಗಿ ಉಪಾಧ್ಯಕ್ಷರಾದ ಶಿವನಂದ ಇಟಗಿ , ನಿರ್ದೇಶಕರಾದ ಶಂಕರಯ್ಯ ಎಸ್ ಹಿರೇಮಠ , ಸಂಗಪ್ಪ ಆರ್.ಚಿಗ್ಗೋನ್ , ಗುಂಡಪ್ಪ ಓ. ಜನಕಟ್ಟಿ , ಮಚ್ಚಿಂದ್ರನಾಥ್ ಲಗಸೆಟ್ಟಿಯವರು ಉಪಸ್ಥಿತರಿದ್ದರು.
