ಶರಣನ ಜಾತ್ರೆ ನೋಡು

ಶರಣನ ಜಾತ್ರೆ ನೋಡು

ಶರಣನ ಜಾತ್ರೆ ನೋಡು

ಬಂದಿತಪ್ಪ ಶರಣ ಬಸವನ ಜಾತ್ರಿ!

ವರ್ಷಕ್ಕೊಮ್ಮೆ ಬಂದೆ ಬರುವುದು ಖಾತ್ರಿ !

ಹರುಷ ತುಂಬಿ ನಲಿಯುವುದು

ಸತ್ಯ ಶರಣನ ಜಾತ್ರಿ !

ಬಣ್ಣ ಬಣ್ಣ ಹುಣ್ಣಿ ಆದೈದ ದಿವಸಿಗೆ!

ಸುಣ್ಣ ಬಣ್ಣವ ಬಳಿದು ಹಗ್ಗ ಕಣ್ಣಿಯ ಹೊಸೆದು!

ಸಣ್ಣ ದೊಡ್ಡವರೆಲ್ಲ ಎಳೆದಾರೋ ಎಳೆದಾರೋ ತೇರಾ!

ಸ್ತ್ರೀಯರು ಪುರುಷರು ಬಾಲರು

ವೃದ್ಧರು !

ನಲ್ಲಾ ನಲ್ಲ್ಯಾರೆಲ್ಲ ಹೂ ಕಾಯಿ ಉದಬತ್ತಿ !

ಸಾಲ ಹಿಡಿದು ನಡೆದಾರೋ ದರುಷನಕೆ ಒತ್ತೊತ್ತಿ!

ಮದ್ದಿನ ಸದ್ದು ಡೋಲಿನ ಡಾಲು!

ಡೊಳ್ಳಿನ ಗೌಳಿ ತಾಳಿನ ಭಜನೆ

ಸನಾಯಿಯ ನಾದ ಬೇಂಡಿನ

ಸೌಂಡು !

ಡಗ್ಗ ದಮಡಿ ನಗಾರಿಗಳ ಮೈ 

ತುಂಬುವ ದ್ವನಿಗಳು !

ಪಲ್ಲಕ್ಕಿ ಹೊತ್ತಾರೋ ಚತ್ತರಕಿ

ಹಿಡಿದಾರೋ!

ದೀಪದಾರತಿ ಹಿಂದ ಪುರುವಂತ

ರ ಕುಣಿತ ಉಚಾಯಿ ಮುಂದ!

ಹಲಗಿಯ ವಾಲಗ ನಂದಿ ಕೋಲದ ಕುಣಿತ !

ಅಣ್ಣವರು ನಿಂತಾರೋ ಪರುಷ

ಬಟ್ಟಲು ಹಿಡಿದಾರೋ!

ಅದರ ಮಹತ್ವ ಹೇಳುವರೊ! ಹಿಂದಿನ ಬಳುವಳಿ ಎಂದೇನುತ

ಮುಂದಿನ ದಾರಿ ತಿಳಿಸಿಹರೋ!

ಚೌರ್ಯವ ಬಿಸ್ಯಾರೋ ರಥ

ಮುಂದೆ ಸಾಗ್ಯದೋ!

ಖಾರಿಕ ಉತ್ತತ್ತಿ ಹಿಡಿಗಾಯಿ ಮಿಡಿ ನಾರ ಬಾಳೆ ಹಣ್ಣಿನ

ಸುರಿ ಮಳಿ ಸುರಿದಾವೋ!

ಹಾಲಿನ ಅಂಗಡಿ ನೂಲಿನ ಅಂಗಡಿ !

ತೆಂಗಿನ ಅಂಗಡಿ ವಿಭೂತಿ 

ರುದ್ರಾಕ್ಷಿ ಅಂಗಡಿ!

ಪುಗ್ಗದ ಹಾರಾಟ ಪಿಪಿಯ ಚೀರಾಟ !

ರಂಗು ರಂಗಿನ ಬೆಂಡು ಬತ್ತಾಸಿ 

ಗುಂಗು ಹಿಡಿಸ್ಯಾವೋ!

ಗರದಿ ಗಮ್ಮತ್ ನೋಡು ಚಕ್ರ

ವಕ್ರವ ನೋಡು!

ತೊಟ್ಟಿಲು ತೂಗೊದು ನೋಡು

ಬಾಂಡ್ಯ ಹಾಂಡೇವ ನೋಡು

ಚನಬಸಪ್ಪನ ಚಿವುಡ ಅಲ್ನೋಡು!

ಧಾನ್ಯದ ಮಳಗಿಯ ನೋಡು

ಬಳೆಗಳ ಅಂಗಡಿ ನೋಡು

ನಾಟಕ ಮಂಡಳಿ ನೋಡು 

ಫೋಟೋದ ಅಂಗಡಿ ನೋಡು

ಚಿತ್ರ ವಿಚಿತ್ರ ಪ್ರಾಣಿ ಕಲಾ

ಮೇಳವ ನೋಡು!

ಸಾದು ಸಂತರ ನೋಡು ಲಕ್ಷ ಭಿಕ್ಷಾದಿಗಳ ನೋಡು!

ದನಗಳ ಜಾತ್ರೆ ನೋಡು 

ಬಹುದೂರ ಭಕ್ತರ ನೋಡು

ಕಳ್ಳ ಕಾಕರು ಕೊಳ್ಳಿ ಹೊಡೀತಾರ ನೋಡು!

ಅರಳ ಗುಂಡಗಿಯಲಿ ಅರಳಿ

ಕಲ್ಲ ಕಲಬುರ್ಗಿಯಲ್ಲಿ ಕಂಡ

ಕಾರುಣ್ಯ ಮೂರುತಿ ಸತ್ಯ ಶರಣನ ಕಿರುತಿ ದಶ ದಿಕ್ಕಿಗೆ

ಹಬ್ಬಿದೆ ನೋಡು!

ಸತ್ಯ ಶರಣನ ಜಾತ್ರೆ ನಿ ನೋಡು

ಅಪ್ಪವರು ಅಣ್ಣವರು ಸಣ್ಣವರು ಪೀಠಾದಿ ಪತಿಗಳು

ನಡಿಸ್ಯರೊ ಅನ್ನ ಜ್ಞಾನ ದಾಸೋಹ ಅವರು 

ರಚಿಸಿಹರೋ ಅಣ್ಣವರು

ದಾಸೋಹ ಸೂತ್ರ 

ಬನ್ನಿರಿ ಬನ್ನಿರಿ ಕಂಕಿಯ ರಾಸಿ

ಮಾಡಿ ಧಾನ್ಯದ ಭಂಡಾರ 

ತುಂಬಿಸಿದ ಶರಣನ ಜಾತ್ರಿ ನೋಡಾನು ಬನ್ನಿರಿ !

ರಾಜೇಂದ್ರ ಕೊರಬಾ ಝಳಕಿ ಹಿರಿಯ ಸಾಹಿತಿಗಳು ಕಲಬುರ್ಗಿ