ಸೊಂಡೂರಿನ ಕಗ್ಗತ್ತಲೆ ಕಥನಗಳು

ಸೊಂಡೂರಿನ ಕಗ್ಗತ್ತಲೆ ಕಥನಗಳು

ಮಾನವರು ತಮಗೆ ತಾವೇ ಎಲ್ಲಿಂದಲೋ ತಂದಿಟ್ಟ ಮ್ಯೂಸಿಯಮಿನ ವಸ್ತುಗಳಾಗುತ್ತಿದ್ದಾರೆ

ಸೊಂಡೂರಿನ ಕಗ್ಗತ್ತಲೆಯ ಕಥನೆಗಳು ಸಾಹಿತಿ ಖ್ಯಾತ ಚಿಂತಕರಾದ ಬಿ ಶ್ರೀನಿವಾಸ್ ರವರ ಎಂಟನೇ ಕೃತಿಯಾಗಿದೆ, ಈ ಕೃತಿಯಲ್ಲಿ 70 ಮೌಲಿಕ ಲೇಖನಗಳಿವೆ ಬಹುಪಾಲು ಲೇಖನಗಳು ಅಖಂಡ

 ಬಳ್ಳಾರಿ ಜಿಲ್ಲೆಯ ಸಂಡೂರಿನ ಭಾಗದ ಐತಿಹಾಸಿಕ ಕಥನದ ಎಳೆಗಳು, ವಾಸ್ತವ ಬದುಕಿನ ಚಿತ್ರಣಗಳು, ಇಲ್ಲಿ ಹಾಳಾಗುತ್ತಿರುವ ಪರಿಸರ,

ಗಣಿ ಬಾಧಿತ ಪ್ರದೇಶದ ಜನರ ಬದುಕು ಭವಣೆಗಳು ಹಾಗೂ ಈ ಭಾಗದ ಪರಿಸರ ಪುನಶ್ಚೇತನಕ್ಕಾಗಿ ಅಗತ್ಯವಾಗಿರುವ ಕ್ರಮ ಮತ್ತು ಶ್ರಮ, ಗಣಿ ಧೂಳಿನಿಂದ ಮೈಗೊಡವಿ ಎದ್ದು ಬರಬೇಕಾದ ಅನಿವಾರ್ಯತೆಗಳನ್ನು ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ.

 ಸೊಂಡೂರಿನ ಕಗ್ಗತ್ತಲೆಯ ಕಥನಗಳು ಬರೀ ಪ್ರಾದೇಶಿಕ ಭಾಗಕ್ಕೆ ಮಾತ್ರ ಸೀಮಿತವಾದದಲ್ಲ ಜಗದ ಉದ್ದಗಲಕ್ಕೂ ನಡೆಯುವ ಮಾನವನ ಅತಿಯಾಸೆಯ ಒತ್ತಾಯಕ್ಕೋ ಇನ್ನಿತರ ಒತ್ತಡಕ್ಕೋ ಒಳಗಾಗಿ ಪ್ರಾಕೃತಿಕ ಕಲ್ಮಷಗಳಿಗೆ ತುತ್ತಾಗುವ ಭೂಪ್ರದೇಶವನ್ನು ರಕ್ಷಿಸದೆ ಹೋದರೆ ಉಲು ಮಾನವನ ಬದುಕಿಗೆ ಬಹುಕಾಲದ ಉಳಿಗಾಲವಿಲ್ಲ ಎನ್ನುವುದನ್ನು ಲೇಖಕರು ಬಹು ಅರ್ಥ ಪೂರ್ಣವಾಗಿ ಹೇಳುತ್ತಾರೆ.

 ಗಣಿಗಾರಿಕೆ ನಡೆದರೆ ಕೆಮ್ಮುತ್ತಲೋ......... ಕುಂಟುತ್ತಲೊ...........

 ಹತ್ತು ಹದಿನೈದು

ವರ್ಷಗಳ ಕಾಲ ರೋಗ

ಹೊತ್ತುಕೊಂಡು ಓಡಾಡಿ ಹೇಗೋ ಬದುಕಿ ಈ ಲೋಕವನ್ನು ತ್ಯಜಿಸಬಹುದು, ಆದರೆ ಗಣಿಗಾರಿಕೆ ಸ್ತಬ್ಧವಾದರೆ ಮಾತ್ರ ಹಸಿವಿನಿಂದ ಸಾಯಲು ತಡವೇ ಆಗುವುದಿಲ್ಲ.......

 ವಿಡಂಬನಾ ಶೈಲಿಯ ಚುಟುಕಿನಲ್ಲಿ ಗುಟುಕಿರುವ ಪ್ರಸಿದ್ಧರ ಈ ನುಡಿ ಬುದ್ದಿಜೀವಿಗಳ ದೊಡ್ಡವರೆನ್ನಿಸಿಕೊಂಡವರ ಹೃದಯದ ಕದ ತಟ್ಟಿ ಇಲ್ಲಿನ ಪರಿಸರ ಸಂರಕ್ಷಣೆಗೆ ಹೊತ್ತು ಕೊಡುವಂತಿದೆ.

ರೋಗ ಬಂದರೆ ಹೇಗೋ ಹೊದ್ದಾಡಿಕೊಂಡು ಇರುವಷ್ಟು ದಿನ ನರಳಾಡಿ ಹೋಗಿಬಿಡಬಹುದು ಆದರೆ ಹಸಿವಿನಿಂದ ಎಷ್ಟು ದಿನ ಬದುಕಲಾದೀತು ಎನ್ನುವುದು ಆ ಭಾಗದ ಬಡ ಜನರ ನೋವನ್ನ ಹತ್ತಿರದಿಂದ ಕಂಡು0ಡಾಗ ಮಾತ್ರ ವಿವರಿಸಲು ಸಾಧ್ಯ 

ಇಂಥದೊಂದು ವಿಚಿತ್ರ ಸನ್ನಿವೇಶದಲ್ಲಿ ಎಷ್ಟೋ ಮನುಷ್ಯರು ಹುಚ್ಚರಾಗಿ ಬಿಟ್ಟರಂತೆ ಹಾಗೆ ಎಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ ಇಂತಹ ಪರಿಸ್ಥಿತಿಗೆ ತಂದಿಟ್ಟು ಪ್ರಭುತ್ವದ ವಿರುದ್ಧ ಪ್ರತಿರೋಧಿಸಲು ಆಗದೆ ಉತ್ತಮವಾಗಿ ಬದುಕಲು ಆಗದೆ ಸಾಯಲು ಆಗದೆ ಒದ್ದಾಡುತ್ತಿರುವ ಅದೆಷ್ಟೋ ಕುಟುಂಬಗಳು ಜೀವಂತವಾಗಿವೆ ಎನ್ನುವುದು ಕವಿ ಮನದ ಲೇಖಕರ ನುಡಿ ಗಣಿಗಾರಿಕೆಯು ಮನುಕುಲದ ಅವನತಿಗೆ ನಾಂದಿ ಹಾಡಿದೆ ಎಂದಿದ್ದಾರೆ.

 ಪ್ರಾಕೃತಿಕ ಸಂಪತ್ತನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಭೂ ಸಂಪತ್ತು ನಾಶವಾದರೆ ಭೂಮಂಡಲದ ಯಾವ ಜೀವಿಯು ನೆಮ್ಮದಿಯಿಂದ ಬದುಕಲು ಅಸಾಧ್ಯ ಆದುದರಿಂದ ಜೀವವೈವಿಧ್ಯಗಳು ಕಣ್ಮರೆಯಾಗದಂತೆ ನಾಗರಿಕರಾದ ನಾವುಗಳು ಎಚ್ಚೆತ್ತುಕೊಳ್ಳಬೇಕೆಂಬ ಹಂಬಲದಿಂದಲೇ ಅತ್ಯುತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಭಾವನಾ ಜೀವಿಯಾದ ಬಿ ಶ್ರೀನಿವಾಸ್ ರವರು ತುಂಬಾ ಸೂಕ್ಷ್ಮ ನೋಟಗಳಲ್ಲಿ "ನೆಲ ಮಾರಾಟ" ಲೇಖನದಲ್ಲಿ ಹೀಗೆ ಹೇಳುತ್ತಾರೆ,

ಮಾರಾಟ ಮಾಡುವುದಾದರೆ ನೆಲದ

ಜೊತೆ ನಮ್ಮನ್ನು ನೆಲದಲ್ಲಿ ಹೂತು

ಮಾರಿ ಬಿಡು ದೊರೆಯೇ...........

 ಹೀಗೆ ವಿನಮ್ರ ವಿನಂತಿಯ ನುಡಿಯಲ್ಲಿ ವಿಡಂಬನೆ ಹಾಗೂ ಸೂಕ್ಷ್ಮತೆಗಳನ್ನು ಗ್ರಹಿಸಿದಾಗ ಖ್ಯಾತ ಬರಹಗಾರರ ಪ್ರಬುದ್ಧತೆಯನ್ನು ಓದುಗ ದೊರೆಗಳು ಎತ್ತಿ ಹಿಡಿಯುತ್ತಾರೆ ಅದಕ್ಕೆ ಉದಾಹರಣೆ ಎನ್ನುವಂತೆ ಮನುಷ್ಯರ ನೈತಿಕ ವ್ಯವಸ್ಥೆಯು ಕುಸಿದು ಹೋದ ಅಥವಾ ಇಲ್ಲವಾಗಿ ಹೋದ ಇಂತಹ ಊರುಗಳಲ್ಲಿ ಬಹು ಸಂಕೀರ್ಣವಾದ ಅನಿಶ್ಚಿತೆಯಲ್ಲಿ ಬದುಕುತ್ತಿರುವ ಜೀವಗಳ ಮರು ಸಂಶೋಧನೆಗೆ ಇಳಿಯಬೇಕಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಜನರು ದಿನವಿಡೀ ಯಾರೆದುರೂ ಮಾತನಾಡದೆ ಮೌನಿಗಳಾಗಿದ್ದಾರೆ ಮಾನವರು ತಮಗೆ ತಾವೇ ಎಲ್ಲಿಂದಲೋ ತಂದಿಟ್ಟ ಮ್ಯೂಸಿಯಮಿನ ವಸ್ತುಗಳು ಎಂಬ ಭಾವನೆ ಬಲವಾಗಿದೆ, ಈ ನಿಟ್ಟಿನಲ್ಲಿ ಪ್ರಭುತ್ವಕ್ಕೆ ಹೃದಯವಿರಬೇಕು ಕಣ್ಣಿಗೆ ಕಾಣದ ಇಂತಹ ಹಿಂಸೆಗಳು ಮರಿಕಳಿಸದಂತೆ ನೋಡಿಕೊಳ್ಳಬೇಕಾಗಿದ್ದು ಪ್ರಭುತ್ವದ ಜವಾಬ್ದಾರಿ ಎಂದಿದ್ದಾರೆ.

 ಈ ಕೃತಿಯಲ್ಲಿ ಕಾಣಸಿಗುವ ಬಹುತೇಕ ಲೇಖನಗಳು ಬರೀ ಸಂಡೂರು ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ನಾಡಿನಾದ್ಯಂತ ಚಾಚಿ ತನ್ನದೇ ಪ್ರಭಾವ ಬೀರುತ್ತವೆ ಎನ್ನುವುದಕ್ಕೆ

"ನಿಜ ಮಕ್ಕಳ ಮುಂದೆ ಅಪ್ಪ ಅಳಬಾರದು" ಎನ್ನುವ ಲೇಖನದಲ್ಲಿ ಗಣಿಗಾರಿಕೆ ನಿಂತ ಪ್ರದೇಶದಲ್ಲಿ ಕೆಲವು ವರ್ಷಗಳು ಗತಿಸಿದಾಗ ಬರಿ ಪ್ರಕೃತಿಯಿಂದ ಅಷ್ಟೇ ಅಲ್ಲ ನಮಗೆ ಎಲ್ಲಾ ರೀತಿಯಿಂದಲೂ ಅನಾನುಕೂಲವಾಗುವುದಲ್ಲದೆ ಅಲ್ಲಿನ ದುರ್ಬಲ ವರ್ಗದ (ಬಡವರ) ನಿಸ್ತೇಜತೆಯನ್ನು ಲೇಖಕರು ನಾಲ್ಕು ಸಾಲುಗಳಲ್ಲಿ ಹೀಗೆ ಹೇಳಿದ್ದಾರೆ.

'ಒಂದು ಬದಿಯಲ್ಲಿ ಅಪ್ಪನ

 ಹುಡುಕುತ್ತಾ ನಿಂತ ಹುಡುಗ

ಇನ್ನೊಂದು ಬದಿಗೆ

ಗಿರಾಕಿ ಹುಡುಕುತ್ತಾ ನಿಂತ ಅವ್ವ......'

 ಇಂತಹ ಮಾರ್ಮಿಕ ನುಡಿಗಳ ಮೂಲಕ ಪ್ರಸ್ತುತ ಸಮಾಜದ ವೇಧನೆ ಹಾಗೂ ತಮ್ಮ ಹೃದಯಂತರಾಳದ ವಿಶಾಲತೆಯ ವಿಸ್ತಾರವನ್ನು ಗಂಭೀರವಾಗಿ ತರ್ಕಿಸಿ ಜನಮನ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೃತಿಯ ಮತ್ತೊಂದು ಚಿಕ್ಕ ಕಥೆ "ಆಕೆ ತಲೆಯೆತ್ತಿ ನಡೆಯುತ್ತಿದ್ದಾಳೆ" ಎನ್ನುವುದು ಮೊನಚಾಗಿದ್ದು ಮೂರು ದಿನ ಮಕ್ಕಳಿಗೆ ಪಾಠ ಮಾಡುವ ಆಗಿದೆ. ಕೇವಲ ಎಂಟು ಸಾಲಿನ ಕಥೆಯಲ್ಲಿ ವರ್ಷವಿಡೀ ಬೋಧಿಸುವ ಹಾಗೂ ಸಮಾಜವನ್ನು ಕಣ್ಣು ತೆರೆಸುವ ವಿಚಾರ ಕೃತಿಯಲ್ಲಿ ಮನಮುಟ್ಟುವಂತಿದೆ.

 ಈ ಕೃತಿಯಲ್ಲಿ ಜಾತ್ರೆ ಮುಗಿತಲ್ಲ ಸರ್, ವಾಯುಪುತ್ರನ ಊರಲ್ಲಿ ವಾಯುಮಾಲಿನ್ಯ, ಬಡವರೇ ಇರದ ಊರು, ಸಂಡೂರಿನ ಮಳೆ, ಎದೆಕುಲುಕುವ ನೋಟಗಳು, ಮಣ್ಣು ಮಾರಲು ವಿರೋಧಿಸಿದ ಮುದುಕಿ, ಆತನೀಗ ಅಳುತ್ತಿಲ್ಲ, ಗಾಯಗೊಂಡ ಊರು, ಹೀಗೆ "ಅಂತಿಮವಾಗಿ" ಎನ್ನುವ ವಿಭಿನ್ನ ಹಾಗು ವೈವಿಧ್ಯಮಯ ಲೇಖನಗಳನ್ನು ಸಂಡೂರಿನ ಕಗ್ಗತಲೆಯ ಕೃತಿಯಲ್ಲಿ ಹಿಡಿದಿಟ್ಟು ಜನರ ಬದುಕಿಗೆ ಬೆಳಕು ನೀಡುವಂತೆ ಸಮಾಜದ ಕಣ್ಣು ತೆರೆಸಿದ್ದಾರೆ.

 ಈ ಕೃತಿಯಲ್ಲಿನ ಬಹುತೇಕ ಬರಹಗಳು, ಲೇಖನಗಳು, ಕಥೆಗಳು, ಕವನಗಳು, ಚುಟುಕುಗಳು ಹೀಗೆ ಮಿಶ್ರಿತ ಸ್ವರೂಪವಾಗಿ ಕೂಡಿದ ಅಧ್ಯಯನ ಗ್ರಂಥವಾಗಿದೆ. ಓದುಗರ ಹೃದಯಕ್ಕೆ ಹತ್ತಿರವಾಗುತ್ತವೆ ಮುಂಬರುವ ದಿನಗಳಲ್ಲಿ ನಮ್ಮ ಪರಿಸರ ಹೇಗಿರಬೇಕು ಪರಿಸರ ವಿಕೋಪಗಳು ಸಂಭವಿಸಬಾರದು ಎನ್ನುವ ವಿಚಾರಗಳನ್ನು ವಿದ್ಯಾರ್ಥಿಯ ಹಂತದಲ್ಲಿಯೇ ಈ ಕೃತಿಯಲ್ಲಿನ ಲೇಖನಗಳನ್ನು ಪಠ್ಯ ಪುಸ್ತಕದಲ್ಲಿರಿಸಿ ಬೋಧನೆ ಮಾಡಿ ಇಂತಹ ಭೂ ಪ್ರದೇಶಕ್ಕೆ ಪ್ರವಾಸಕ್ಕೆ ಕರೆದುಕೊಂಡು ಹೋದರೆ ನಿಜಾನುಭವ ಪಡೆದ ಯುವಜನತೆಗೆ ಪ್ರಕೃತಿಯ ಕೊಡುಗೆ ಏನೆಂದು ತಿಳಿಯುವುದರ ಜೊತೆಗೆ ಪರಿಸರ ಸಂರಕ್ಷಣೆ ವನ್ಯಜೀವಿಗಳ ಸಂರಕ್ಷಣೆ ಮಾಡುವಲ್ಲಿ ಮುಂದಾಗುತ್ತಾರೆ. ಆದುದರಿಂದ ಈ ಕೃತಿಯು ಒಂದು ಮೌಲಿಕ ಗ್ರಂಥ ವಾಗಿದೆ, ಹಾಗೂ ಇಂತಹ ಪ್ರದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳಿಗೆ, ಸಂಶೋಧಕರಿಗೆ, ಕಲಿಕಾರ್ಥಿಗಳಿಗೆ ಒಂದೊಳ್ಳೆಯ ಕೃತಿ ಸಿಕ್ಕಂತಾಗಿದೆ ಹಾಗೆಯೇ ಖ್ಯಾತ ಸಾಹಿತಿ ಹಾಗೂ ಅತ್ಯುತ್ತಮ ಅನುಭವಿ ಬರಹಗಾರರಾದಂತ ಬಿ ಶ್ರೀನಿವಾಸ್ ರವರ ಬರಹಗಳ ಮೌಲ್ಯಗಳನ್ನು ಈ ಕೃತಿ ಹೆಚ್ಚಿಸಿದೆ.

 ಕೃತಿ: ಸೊಂಡೂರಿನ ಕಗ್ಗತ್ತಲೆ ಕಥನಗಳು

 ಲೇಖಕರು: ಬಿ ಶ್ರೀನಿವಾಸ್

 ಪ್ರಕಟಣೆ : ದಿನಮಾನ ಡಿಜಿಟಲ್ ಮೀಡಿಯಾ ದಾವಣಗೆರೆ

 ಪುಟ:188

ಬೆಲೆ :250

 ವಿಮರ್ಶಕರು ಉಮೇಶ್ ಬಾಬು ಮಠದ್ (ಉಬಾಮ)