ವೈಜ್ಞಾನಿಕ ಮನೋಭಾವ ಬೆಳಿಸಿಕೊಳ್ಳಿ-ಡಾ.ಬಾಬುರಾವ ಶೇರಿಕಾರ

ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ರಂಗೋಲಿ ಸ್ಪರ್ಧೆ
ವೈಜ್ಞಾನಿಕ ಮನೋಭಾವ ಬೆಳಿಸಿಕೊಳ್ಳಿ-ಡಾ.ಬಾಬುರಾವ ಶೇರಿಕಾರ
ಆಳಂದ: ವಿಜ್ಞಾನವುಪ್ರತಿಯೊಬ್ಬರ ಜೀವನದ ಅನಿವಾರ್ಯವಾಗಿದ್ದು, ದಿನನಿತ್ಯ ಬದುಕಿನಲ್ಲಿ ನಾವು ವಿಜ್ಞಾನವನ್ನು ಅವಲಂಭಿಸಿದ್ದೇವೆ. ಹೀಗಾಗಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಲಬುರಗಿ ಪಿಡಿಎ ಇಂಜಿನಿಯರ್ ಕಾಲೇಜಿನ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ ತಿಳಿಸಿದರು.
ಪಟ್ಟಣದ ಸಂಬುದ್ಧ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಮತ್ತು ಸಂಶೋಧನಾ ಪರಿಷತ್ತು ಆಳಂದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡ ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ವಿಜ್ಞಾನ ಮಾದರಿ ರಂಗೋಲಿ ಸ್ಪರ್ಧೆ ಕಾರ್ಯ ಕ್ರಮದಲ್ಲಿ ಮಾತನಾಡಿದರು.
ಜಗತ್ತಿನಲ್ಲಿ ಪ್ರತಿಕ್ಷಣವು ಹೊಸ ಹೊಸ ಸಂಶೋಧನೆ ಮತ್ತು ಆವಿಷ್ಕಾರಗಳು ನಡೆದಿವೆ, ವಿದ್ಯಾರ್ಥಿಗಳು ಪ್ರಶ್ನಿಸುವ, ಚರ್ಚಿಸುವ ಮೂಲಕ ಸುತ್ತಲಿನ ಜಗತ್ತನ್ನು ಅರ್ಥ ಮಾಡಿಕೊಳ್ಳಬೇಕು, ವಿಶೇಷವಾಗಿ ಪರಿಸರ ಮತ್ತು ಪ್ರಾಕೃತಿಕ ಸಂಪತ್ತಿನ ಸಂವರ್ಧನೆ ಬಗೆಗೆ ಹೆಚ್ಚಿನ ಕಾಳಜಿವಹಿಸುವದು ಅಗತ್ಯವಾಗಿದೆ ಎಂದರು.
ಎ.ವಿ.ಪಾಟೀಲ ಪದವಿ ಕಾಲೇಜು ಪ್ರಾಂಶುಪಾಲ ಎಸ್. ಎಚ್.ಹೊಸಮನಿ ಮಾತನಾಡಿ ನಮ್ಮಲ್ಲಿನ ಮೌಡ್ಯತೆ, ಅಜ್ಞಾನ ಹೊಗಲಾಡಿಸಲು ವೈಚಾರಿಕ ಚಿಂತನೆ ಅವಶ್ಯಕವಾಗಿದೆ, ಸರ್ ಸಿ.ವಿ.ರಾಮನ್, ಜಗದೀಶ್ಚಂದ್ರ ಬೋಸ್, ಅಬ್ದುಲ್ ಕಲಾಂ ಮುಂತಾದ ಭಾರತೀಯ ವಿಜ್ಞಾನಿಗಳು ನೀಡಿದ ಕೊಡುಗೆ ಸದಾ ಸ್ಮರಣೀಯವಾಗಿದೆ ಎಂದರು.
ಸಂಬುದ್ಧ ಪದವಿ ಕಾಲೇಜು ಪ್ರಾಂಶುಪಾಲ ಸಂಜಯ ಎಸ್ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ ವೈಚಾರಿಕತೆ ನಮ್ಮ ಮಾನಸಿಕ ಶಕ್ತಿಯಾದರೆ, ವೈಜ್ಞಾನಿಕತೆಯು ನಮ್ಮ ಬದುಕನ್ನು ಪ್ರಗತಿಶೀಲಗೊಳಿಸಲಿದೆ ಎಂದು ಅಭಿಪ್ರಾಯ ಪಟ್ಟರು.
ವಿದ್ಯಾರ್ಥಿನಿ ಪ್ರೀಯಾಂಕಾ ಎಸ್ ಪಾಟೀಲ ಅವರು ಸರ್ ಸಿ.ವಿ.ರಾಮನ್ ಅವರ ವೈಜ್ಞಾನಿಕ ಕೊಡುಗೆ ಕುರಿತು ಮಾತನಾಡಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಮತ್ತು ಸಂಶೋಧನಾ ಪರಿಷತ್ತಿನ ತಾಲ್ಲೂಕಾಧ್ಯಕ್ಷ ಎಲ್ ಎಸ್ ಬೀದಿ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಧ್ಯಾಪಕರಾದ ಶರಣಬಸಪ್ಪ ಪರಾಣೆ, ಬಾಬುರಾವ ಚಿಕಣಿ, ಜಗದೀಶ ಮುಲಗೆ, ಮಹಾದೇವಿ ಮುನ್ನೋಳ್ಳಿ, ಶಹಗುಫ್ತಾ ನಾಜ್, ವಿಜಯಲಕ್ಷ್ಮಿ, ಪಟ್ನೆ, ಸುಖಮುನಿ ಪಾಟೀಲ ಉಪಸ್ಥಿತರಿದ್ದರು.
ವೈಷ್ಣವಿ ಹಾರಕೆ ನಿರೂಪಿಸಿದರೆ, ಸಿದ್ಧಾರ್ಥ ಹಸೂರೆ ಸ್ವಾಗತಿಸಿದರು. ಮಹ್ಮದಿ ಬೇಗಂ ವಂದಿಸಿದರು. ಇದೇ ಸಂದರ್ಭದಲ್ಲಿ ವಿಜ್ಞಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ರಂಗೋಲಿ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ ಡಾ. ಅವಿನಾಶ್ s ದೇವನೂರ ಆಳಂದ