ಅಳಿವಿನ ಅಂಚಿನಲ್ಲಿ ರಾಷ್ಟ್ರದ ಪತ್ರಿಕೋದ್ಯಮ ಪ್ರೊ ಪಾಟೀಲ್

ಅಳಿವಿನ ಅಂಚಿನಲ್ಲಿ ರಾಷ್ಟ್ರದ ಪತ್ರಿಕೋದ್ಯಮ ಪ್ರೊ ಪಾಟೀಲ್

ಅಳಿವಿನ ಅಂಚಿನಲ್ಲಿ ರಾಷ್ಟ್ರದ ಪತ್ರಿಕೋದ್ಯಮ : ಪ್ರೊ ಶಿವರಾಜ ಪಾಟೀಲ್

ಕಲಬುರಗಿ : ಪತ್ರಿಕೋದ್ಯಮವು ಇಂದು ಬೆಳವಣಿಗಾಗಿ ಅಲ್ಲ ಉಳಿವಿಗಾಗಿ ಹೋರಾಟ ಮಾಡುವ ಕಠಿಣ ಪರಿಸ್ಥಿತಿ ಬಂದು ತಲುಪಿದೆ. ಓದುಗರು ಮುದ್ರಣ ಮಾಧ್ಯಮ ತಿರಸ್ಕರಿಸಿ, ಡಿಜಿಟಲ್ ಮಾಧ್ಯಮವನ್ನು ಪುರಸ್ಕರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

 ಆಧುನಿಕ ಯುಗದಲ್ಲಿ ಡಿಜಿಟಲೀಕರಣ ಮಾಧ್ಯಮ ದಾಪುಗಾಲು ಹಾಕಿ ಚಂಡ ಮಾರುತದಂತೆ ಮುನ್ನಡೆಯುತ್ತಿದೆ, ಸ್ಕ್ರೀನ್ ಟಚ್ ವ್ಯವಸ್ಥೆ ಪತ್ರಿಕಾ ಮಾಧ್ಯಮವನ್ನು ಹಿಂದಿಕ್ಕಿ ಪತ್ರಿಕೆ ಓದುಗರಿಂದ ದೂರಾಗುವಂತೆ ಮತ್ತು ನಿರ್ಲಕ್ಷಿಸುವಂತೆ ಮಾಡುತ್ತಿದೆ.

 ಇಂದು ಪತ್ರಿಕೆಗಳ ಓದುಗರ ಸಂಖ್ಯೆ ಕುಸಿದು ಮುದ್ರಣ ಮಾಧ್ಯಮ ಸೊರಗುತ್ತಿದೆ, ಸಣ್ಣ ಮತ್ತು ಅತಿ ಸಣ್ಣ ಪತ್ರಿಕೆಗಳು ಸರಕಾರಿ ಜಾಹೀರಾತು ಎಂಬ ಆಕ್ಸಿಜನ್ ಮೂಲಕ ಬದುಕುತ್ತಿವೆ. ದೊಡ್ಡ ಪತ್ರಿಕೆಗಳು ಸರಕಾರ ಮತ್ತು ಸಾಹುಕಾರರ ಜಾಹೀರಾತು ನಂಬಿ ಬದುಕುತ್ತಿರುವುದು ಕಟು ಸತ್ಯ, ಹೀಗಾಗಿ ಇವುಗಳಿಗೆ ಮುಂದಿನ ದಿನಗಳಲ್ಲಿ ಭವಿಷ್ಯವಿಲ್ಲ ಎಂದೇ ಹೇಳಬಹುದು. ಇಂದು ಪತ್ರಿಕೆಗಳು ಉಳ್ಳವರ ಪರವಾಗಿ ಬರೆಯುತ್ತಿವೆ, ಜನಸಾಮಾನ್ಯರ ದನಿಯಾಗುತ್ತಿಲ್ಲ ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.

  ಪತ್ರಿಕಾ ಮಾಧ್ಯಮ ಸ್ವಯಂಸಮಾಧಿ ಮಾಡಿ ಕೊಳ್ಳುವತ್ತ ಮುನ್ನಡೆದಿದೆ. 

ಮಾಧ್ಯಮವು ಉದ್ಯಮಿಗಳ ಕೈಗೆ ಸಿಕ್ಕು ನಲುಗುತ್ತಿದೆ. ಉದ್ಯಮಿಗಳು ಮಾಧ್ಯಮವನ್ನು ಕೈಗೆ ತೆಗೆದುಕೊಂಡಾಗ ಅದು ಬಂಡವಾಳಶಾಹಿಗಳ ಕೈಗೊಂಬೆಯಂತೆ ಕಾಣತೊಡಗಿದೆ.

ಹಣ ಹಾಕಿ ಹಣ ತೆಗೆಯುವ ಕೆಲಸ ಎಲ್ಲಿಯವರೆಗೆ ನಡೆಯುತ್ತದೆಯೋ ಅಲ್ಲಿಯವರೆಗೆ ಪತ್ರಿಕೆಗಳು ಜನಪ್ರಿಯವಾಗುವುದಿಲ್ಲ ಎಂದು ಪ್ರೊ ಶಿವರಾಜ್ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.

ಅವರು ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆ ಏರ್ಪಡಿಸಿದ ಓದುಗರ ಅಂಗಳದಲ್ಲಿ ವಿಜಯವಾಣಿ ಎಂಬ ವಿಷಯ ಕುರಿತು ಏರ್ಪಡಿಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪತ್ರಿಕೆಗಳಿಗೆ ವರದಿ ಬರೆಯಲಿಕ್ಕೆ ಬಾರದವರು ಹಿರಿಯ ಸಂಪಾದಕರು, ಉಪಸಂಪಾದಕರು ಮತ್ತು ಸ್ಥಾನಿಕ ಸಂಪಾದಕರು ಆಗುತ್ತಿರುವುದು ಪತ್ರಿಕಾರಂಗದ ದುರಂತ ಎಂದೇ ಅರ್ಥೈಸಬಹುದು.

 ಪತ್ರಿಕೆಗಳು ಎಡಿಟೋರಿಯಲ್ ಬರೆಯುವುದನ್ನು ಬಿಟ್ಟು ಅಡ್ವರಟೈರಿಯಲ್ ಬರೆಯಲು ಹೊರಟಿದ್ದು ಅವುಗಳ ಅವನತಿಗೆ ಇನ್ನೊಂದು ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

 ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಅವರನ್ನು ಆಲಕ್ಷಿಸಿ ಉಳ್ಳವರು ಆಳುವವರ ಪರವಾಗಿ ಬರೆಯಲು ಹೊರಟರೆ ಪತ್ರಿಕೆಗಳು ತಿರಸ್ಕಾರಕ್ಕೆ ಒಳಗಾಗುವುದರಲ್ಲಿ ಸಂದೀಹವಿಲ್ಲ ಎಂದು ಖಾರವಾಗಿ ನುಡಿದರು.

 ಆಕಾಶವಾಣಿ ದೂರದರ್ಶನ ಮಾಜಿ ನಿರ್ದೇಶಕರಾದ ಎಂ ಬಿ ಪಾಟೀಲರು ಪ್ರಸ್ತುತ ಸಂದರ್ಭದಲ್ಲಿ ಸಮಸ್ಯೆ ಮತ್ತು ಸವಾಲುಗಳನ್ನು ಅರಿತುಕೊಂಡು ಬದಲಾಗುತ್ತಿರುವ ಡಿಜಿಟಲೀಕರಣ ವ್ಯವಸ್ಥೆಯನ್ನು ಒಪ್ಪಿಕೊಂಡಾಗ ಮಾತ್ರ ನಾವು ವೇಗವಾಗಿ ಬೆಳೆಯಲು ಸಾಧ್ಯವೆಂದು ನುಡಿದರು .

ಸಾಹಿತಿ ಡಾ. ಮೀನಾಕ್ಷಿ ಬಾಳಿಯವರು ಮಾತನಾಡಿ ಇಂದಿನ ತಲ್ಲಣಗಳು ಮತ್ತು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಲೇಖನಗಳು ಬರೆಯಬೇಕು ಮತ್ತು ಆಧುನಿಕರಣದ ಜಗತ್ತಿಗೆ ಮುಖ ಮಾಡಿ ಬೆಳೆಯದಿದ್ದರೆ ಮತ್ತೆ ನಾವು ಐವತ್ತು ವರ್ಷಗಳ ಕಾಲ ಹಿಂದೆ ಹೋಗುತ್ತೇವೆ ಎಂದು ಎಚ್ಚರಿಸಿದರು.

 ಇಂದು ಸುದ್ದಿಗಾಗಿ ಇಪ್ಪತ್ತ ನಾಲ್ಕು ಗಂಟೆ ಕಾಯುವ ಅವಶ್ಯಕತೆ ಇಲ್ಲ ಕ್ಷಣಾರ್ಧದಲ್ಲಿ ಜಗತ್ತನ್ನು ವ್ಯಾಪಿಸುವ ಸುದ್ದಿ ಮಾಧ್ಯಮ ಡಿಜಿಟಲಿಕರಣ ಆಗಿರುವುದರಿಂದ ಸಾಮಾಜಿಕ ಜಾಲ ಸಂಸ್ಥೆಗಳು ಪ್ರಬಲವಾಗಿ ಬೆಳೆಯುತ್ತಿರುವುದರಿಂದ ಮುದ್ರಣ ಮಾಧ್ಯಮ ಕುಸಿಯುತ್ತಿರುವುದು ಸಹಜವಾಗಿದೆ ಎಂದು ವಿವರಿಸಿದರು

 ಪ್ರಕಾಶನದ ಮಾಲೀಕರಾದ ಬಸವರಾಜ್ ಕೊನೆಕ್ ಅವರು ಮಾತನಾಡಿ, ಪತ್ರಿಕೆಗಳು ಓದುವುದರಿಂದ ಆಗುವ ಆನಂದ ಮೊಬೈಲ್ ಅಥವಾ ಇ ಪತ್ರಿಕೆಗಳನ್ನು ಓದುವುದರಿಂದ ಸಿಗಲಾರದು. ಮುದ್ರಣ ಪತ್ರಿಕೆ ಓದುವ ತೃಪ್ತಿಯೇ ಬೇರೆಯಾಗಿದ್ದೂ, ಜನರು ಪತ್ರಿಕೆ ಓದುವ ಅಭಿರುಚಿ ಬೆಳೆಸುವಂತೆ ಮಾಡಲು ಸರಕಾರ ಗ್ರಂಥಾಲಯಗಳಿಗೆ ಹೆಚ್ಚಿನ ಪತ್ರಿಕೆಗಳು ಸರಬರಾಜು ವಾಗುವಂತೆ ಮಾಡಬೇಕು ಮುತ್ತು ಪತ್ರಿಕಾ ಓದುಗರ ಸಂಖ್ಯೆ ಬೆಳೆಯುವುದಕ್ಕೆ ಯೋಜನೆಗಳನ್ನು ರೂಪಿಸಬೇಕೆಂದು ಮನವಿ ಮಾಡಿಕೊಂಡರು.

 ಇಂದಿನ ಯುಗದಲ್ಲಿ ಮಕ್ಕಳು ಸಹಿತ ಮೊಬೈಲ್ ಬಳಸುವುದರಿಂದ ಶ್ರೀಸಾಮಾನ್ಯರು ಫೋನ್ ಪೇ ಗಳಿಗೆ ಅವಲಂಬಿಸಿರುವುದರಿಂದ ಡಿಜಿಟಲ್ ಜನಪ್ರಿಯವಾಗುವುದು ಸಹಜ ಎಂದು ಸಾಹಿತಿ ಚಿ ಸಿ ನಿಂಗಣ್ಣ ಅಭಿಪ್ರಾಯಿಸಿದರು. 

ಪುಸ್ತಕಗಳು ಮತ್ತು ಪತ್ರಿಕೆಗಳು ಓದುವ ಸಂಸ್ಕೃತಿಯನ್ನು ಪ್ರಯತ್ನಪೂರ್ವಕವಾಗಿ ಉಳಿಸಿಕೊಳ್ಳಬೇಕೆಂದು ಸಾಹಿತಿ ಡಾ. ಶರಣಬಸಪ್ಪ ವಡ್ಡನಕೇರಿ ಹೇಳಿದರು. ಡಿಜಿಟಲ್ ವ್ಯವಸ್ಥೆಯನ್ನು ನಾವು ಅಳವಡಿಸಿಕೊಳ್ಳದಿದ್ದರೆ ಬೆಳೆಯುತ್ತಿರುವ ಜಗತ್ತನ್ನು ಅರಿತುಕೊಳ್ಳಲು ಕಷ್ಟವಾಗುತ್ತದೆ, ಇಂದು ಬದಲಾಗುತ್ತಿರುವ ಜಗತ್ತಿಗೆ ನಾವು ಸ್ಪಂದಿಸದಿದ್ದರೆ ಹಿಂದೆ ಉಳಿಯುತ್ತೇವೆ, ಅದನ್ನು ಬಳಸಿಕೊಂಡು ಬೆಳೆಯಬೇಕೆಂದು ಬರಹಗಾರ್ತಿ ಕಾವ್ಯಶ್ರೀ ಮಹಾಗಾವ್ಕರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. 

ಈ ಕಾರ್ಯಕ್ರಮದಲ್ಲಿ ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ್ ಯಡ್ರಾಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

 ಜಯತೀರ್ಥ ಪಾಟೀಲ್ ರಮೇಶ್ ಮೇಳಕುಂದಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜಕುಮಾರ್ ಉದನೂರ ಭಾಗವಹಿಸಿದ್ದರು.

 ಕನ್ನಡಪರ ಹೋರಾಟಗಾರ ವಿಶ್ವನಾಥ್ ಭಕರೆ, ಸಿ ಎಸ್ ಆನಂದ್, ಕಿರಣ ಪಾಟಿಲ್, ವಿನಯ್ ಗುತ್ತೇದಾರ್, ಅರುಣ ಗಡ್ಡದ, ಸೇರಿದಂತೆ ಅನೇಕರು ಸಂವಾದದಲ್ಲಿ ಭಾಗವಹಿಸಿದ್ದರು.

 ಸಂವಾದದ ಕೊನೆಯಲ್ಲಿ ಹಿರಿಯ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಮಾತನಾಡಿ ,ಯಾವುದೇ ಹೊಸ ಮಾಧ್ಯಮ ಜಗತ್ತು ತೆರೆದುಕೊಂಡಾಗ ಜನ ಸಾಮಾನ್ಯರು ವಿಚಲಿತರಾಗುವುದು ಸಹಜ ಆದರೆ ಕ್ರಮೇಣ ಓದುವ ಸಂಸ್ಕೃತಿಯನ್ನು ಬೆಳೆಸಿ ಕೊಳ್ಳುತ್ತ, ಹೊಸದುದರೆಡೆಗೆ ಆರಂಭದ ದಿನಗಳಲ್ಲಿ ಆಕರ್ಷಿತರಾಗುವುದು ಸಹಜ. ಮುಂಬರುವ ದಿನಮಾನಗಳಲ್ಲಿ ಪತ್ರಿಕಾ ಮಾಧ್ಯಮವು ಉಳಿದು ಬೆಳೆಯುತ್ತದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.