" ಬದುಕನ್ನು ಭಗವಂತನ ಪ್ರಸಾದವೆಂದು ಬಗೆದು ಬಾಳುವುದೇ ಸಾರ್ಥಕತೆ" -- ಮುಕ್ಕಣ್ಣ ಕರಿಗಾರ

" ಬದುಕನ್ನು ಭಗವಂತನ ಪ್ರಸಾದವೆಂದು ಬಗೆದು ಬಾಳುವುದೇ ಸಾರ್ಥಕತೆ" -- ಮುಕ್ಕಣ್ಣ ಕರಿಗಾರ

" ಬದುಕನ್ನು ಭಗವಂತನ ಪ್ರಸಾದವೆಂದು ಬಗೆದು ಬಾಳುವುದೇ ಸಾರ್ಥಕತೆ" -- ಮುಕ್ಕಣ್ಣ ಕರಿಗಾರ

ಹಾವೇರಿ : "ಲೋಕಗುರು ಕನಕದಾಸರು ಬದುಕನ್ನು ಭಗವಂತನ ಪ್ರಸಾದವೆಂದು ತಿಳಿದು ಬಾಳುವುದರಲ್ಲಿ ಬಾಳ ಸಾರ್ಥಕತೆ ಇದೆ ಎಂದು ಲೋಕ ಸಮಸ್ತರಿಗೆ ಉಪದೇಶಿಸಿದ್ದಾರೆ.ನಮ್ಮ ಬದುಕು ದೈವಾಧೀನವಾದುದು‌.ವಿಜ್ಞಾನ- ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಪರಮಾತ್ಮನ ನಿಯತಿಯಾಚೆ ಸಾಗದು ಪ್ರಕೃತಿ ವ್ಯವಹಾರ.ಜಗತ್ತನ್ನು ಸೃಷ್ಟಿಸಿದ ಪರಮಾತ್ಮನು ಜಗತ್ತಿನ ಗತಿನಿರ್ಧಾರಕನಾಗಿರುವುದರಿಂದ ಇಲ್ಲಿ ನಡೆಯುವ ಎಲ್ಲವೂ ಪರಮಾತ್ಮನ ಪ್ರೇರಣೆ ಎಂದರಿತು ಬದುಕಿದರೆ ನಮ್ಮ ಬದುಕು ಸುಂದರವಾಗುತ್ತದೆ,ಪ್ರಸಾದಮಯ ಬದುಕು ಆಗುತ್ತದೆ' ಎಂದು ಹೇಳಿದರು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ಅವರು. ಕಾಗಿನೆಲೆಯ ಸಂತ ಕನಕದಾಸರ ಐಕ್ಯಮಂಟಪದಲ್ಲಿ ಇಂದು ನಡೆದ ' ಲೋಕಗುರು ಕನಕದಾಸರ ಕೀರ್ತನೆಗಳ ಅರ್ಥಲೋಕ' ಕಾರ್ಯಕ್ರಮದ ಐದನೆಯ ಅವತರಣಿಕೆ ಕಾರ್ಯಕ್ರಮದಲ್ಲಿ ಅವರು ಕನಕದಾಸರ ' ತನುವು ನಿನ್ನದು ಜೀವ ನಿನ್ನದು' ಎನ್ನುವ ಕೀರ್ತನೆಯ ಅರ್ಥ ವ್ಯಾಖ್ಯಾನ ಮಾಡುತ್ತಿದ್ದರು.

    ಕನಕದಾಸರ ಈ ಕೀರ್ತನೆಯನ್ನು ಕೆಲವು ಗಾಯಕರು ' ತನುವು ನಿನ್ನದು ಜೀವನ ನಿನ್ನದು' ಎಂದು ಹಾಡುತ್ತಿರುವುದು ಸರಿಯಲ್ಲವೆಂದು ' ಅದು ಜೀವನವಲ್ಲ,ಜೀವ ಆಗಬೇಕು.ಕನಕದಾಸರ ಕೀರ್ತನೆಗಳನ್ನು ಸಂಪಾದಿಸಿದ ಯಾರೋ ಜೀವ ಎನ್ನುವುದನ್ನು ಜೀವನ ಎಂದು ತಪ್ಪಾಗಿ ಮುದ್ರಿಸಿದ್ದನ್ನೇ ಗಾಯಕರು ಹಾಡುತ್ತಿದ್ದಾರೆ.ಆದರೆ ಅದು ಸರಿಯಲ್ಲ.ತನು ಎಂದರೆ ದೇಹ,ಜೀವ ಎಂದರೆ ಪ್ರಾಣ.ದೇಹ ಮತ್ತು ಪ್ರಾಣಗಳೆರಡೂ ಪರಮಾತ್ಮನ ಕೊಡುಗೆ,ಅನುಗ್ರಹ ಎನ್ನುವ ಅರ್ಥದಲ್ಲಿ ಕನಕದಾಸರು ಈ ಕೀರ್ತನೆಯನ್ನು ರಚಿಸಿದ್ದಾರೆ' ಎಂದು ಸ್ಪಷ್ಟೀಕರಣ ನೀಡಿ ಕೀರ್ತನೆಯ ಅರ್ಥ ವ್ಯಾಖ್ಯಾನ ಮಾಡಿದರು.

     ಪ್ರಾಧಿಕಾರದ ಸಂಶೋಧಕರಾದ ಡಾಕ್ಟರ್ ಜಗನ್ನಾಥ ಗೇನಣ್ಣನವರ್ ಕೀರ್ತನೆಯನ್ನು ಹಾಡಿದರು.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಬಾಡದ ಸಿಬ್ಬಂದಿ ಸಂತೋಷ ಸ್ವಾಗತಿಸಿದರೆ ಪ್ರಕಾಶ ವಂದಿಸಿದರು.ಜಗದೀಶ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ನಿರ್ವಹಿಸಿದವರು ಮಂಜು‌ ಕುರಿ.ಪ್ರಾಧಿಕಾರದ ಫೋಟೋಗ್ರಾಫರ್ ವಿಜಯ್ ಬ್ಯಾಡಗಿ ಕಾರ್ಯಕ್ರಮದ ವಿಡಿಯೋ ರೆಕಾರ್ಡಿಂಗ್ ಮಾಡಿ, ಫೋಟೋಗಳನ್ನು ಕ್ಲಿಕ್ಕಿಸಿದರು.