ಅಮರೇಶ್ವರ ಜಾತ್ರೆ ವೈಭವದಿಂದ ಜರುಗಲಿ- ಶಾಸಕ ಪ್ರಭು ಚವ್ಹಾಣ

ಅಮರೇಶ್ವರ ಜಾತ್ರೆ ವೈಭವದಿಂದ ಜರುಗಲಿ- ಶಾಸಕ ಪ್ರಭು ಚವ್ಹಾಣ

ಅಮರೇಶ್ವರ ಜಾತ್ರೆ ವೈಭವದಿಂದ ಜರುಗಲಿ- ಶಾಸಕ ಪ್ರಭು ಚವ್ಹಾಣ

ಉದ್ಭವಲಿಂಗ ಅಮರೇಶ್ವರ ಜಾತ್ರಾ ಮಹೋತ್ಸವ ವೈಭವದಿಂದ ಮತ್ತು ವ್ಯವಸ್ಥಿತವಾಗಿ ನಡೆಯುವಂತಾಗಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಸೂಚಿಸಿದರು.

ಔರಾದ(ಬಿ) ಪಟ್ಟಣ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಫೆ.24ರಂದು ನಡೆದ ಜಾತ್ರೆಗೆ ಸಂಬಂಧಿಸಿದ ಸಭೆಯಲ್ಲಿ ಅವರು ಮಾತನಾಡಿದರು.

ಉದ್ಭವಲಿಂಗ ಅಮರೇಶ್ವರ ಜಾತ್ರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಜಾತ್ರೆ, ಕರ್ನಾಟಕವಲ್ಲದೇ ತೆಲಂಗಾಣಾ, ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ. ಅಗ್ನಿ ಪೂಜೆ ಮತ್ತು ರಥೋತ್ಸವವದ ದಿನಗಳಂದು ಅಸಂಖ್ಯಾತ ಭಕ್ತರು ಆಗಮಿಸುವುದರಿಂದ ಮಂದಿರವನ್ನು ಹೂವು ಮತ್ತು ಅಲಂಕಾರಿಕ ದೀಪಗಳಿಂದ ಸಿಂಗರಿಸಬೇಕು. ಪಟ್ಟಣ ಆಕರ್ಷಕವಾಗಿ ಕಾಣಿಸುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜನದಟ್ಟಣೆ ನಿರ್ವಹಣೆಗೆ ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಬೇಕು. ಪಾರ್ಕಿಂಗ್ ಸೇರಿದಂತೆ ಸೂಕ್ತ ಭದ್ರತೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಅಗ್ನಿಕುಂಡದ ಹೊರ ಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಬೇಕು. ಅಗ್ನಿಶಾಮಕ ವಾಹನಗಳು ಜಾತ್ರೆ ಮುಗಿಯುವವರೆಗೆ ಪಟ್ಟಣದಲ್ಲಿ ಇರಬೇಕು. ಪಟ್ಟಣ ಪಂಚಾಯಿತಿಯಿಂದ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಜಾತ್ರೆಯ ಪ್ರಮುಖ ದಿನಗಳಂದು ಸ್ವಚ್ಛತಾಕರ್ಮಿಗಳು ಪಾಳಿಯ ಆಧಾರದಲ್ಲಿ ಕೆಲಸ ಮಾಡಬೇಕು. ಅಲ್ಲಲ್ಲಿ ಕಸದ ಬುಟ್ಟಿಗಳನ್ನು ಇಡಬೇಕು. ಎಲ್ಲ ಚರಂಡಿಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸುವುದು, ಬ್ಲೀಚಿಂಗ್ ಪೌಡರ್ ಸಿಂಪಡಣೆ ಅಚ್ಚುಕಟ್ಟಾಗಿ ಮಾಡಬೇಕೆಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಜಾತ್ರೆ ಮುಗಿಯುವವರೆಗೆ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪಟ್ಟಣದ ಕೆಲವೆಡೆ ವಿದ್ಯುತ್ ತಂತಿಗಳು ಜೋತು ಬಿದ್ದಿರುವುದು ಗಮನಕ್ಕೆ ಬಂದಿದೆ. ಇವು ಸರಿಯಾಗಬೇಕು.‌ ಶಿಥಿಲ ವಿದ್ಯುತ್ ಕಂಬಗಳನ್ನು ಬದಲಾಯಿಸಿ ಸಾರ್ವಜನಿಕರ ಸುರಕ್ಷತೆಯತ್ತ ಗಮನ ಹರಿಸಬೇಕು. ಜಾತ್ರೆ ಮುಗಿಯುವ ವರೆಗೆ ಅಧಿಕಾರಿಗಳು ಸ್ಥಳೀಯವಾಗಿ ಲಭ್ಯವಿದ್ದು ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ಬೇಸಿಗೆ‌‌ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ನೀರಿನ ವ್ಯವಸ್ಥೆ ಮಾಡುವ ಮೂಲಕ ಭಕ್ತಾದಿಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗಲು ಮೊಬೈಲ್ ಟಾಯ್ಲೆಟ್‌ಗಳ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ನಿರ್ದೇಶನ ನೀಡಿದರು. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬಸ್‌ಗಳು ಅಗ್ನಿಕುಂಡ ಮಾರ್ಗದ ಬದಲಾಗಿ ಪರ್ಯಾಯ ಮಾರ್ಗದಿಂದ ಸಂಚರಿಸಲು ವ್ಯವಸ್ಥೆ ಮಾಡಬೇಕು. ಮತ್ತು ಹೆಚ್ಚಿನ ಬಸ್‌ಗಳನ್ನು ಒದಗಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಜಾನುವಾರು ಮೇಳ ಅಚ್ಚುಕಟ್ಟಾಗಿ ನಡೆಯಬೇಕು. ಬಹುಮಾನ ವಿತರಣೆ ಪಾರದರ್ಶಕವಾಗಿ ನಡೆಯಬೇಕೆಂದು ತಿಳಿಸಿದರು. ಇದೇ ವೇಳೆ ಜಾತ್ರಾ ಮಹೋತ್ಸವದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ ಅವರು ಮಾತನಾಡಿ, ಜಾತ್ರೆ ವ್ಯವಸ್ಥಿತವಾಗಿ ನಡೆಯಲು ತಾಲ್ಲೂಕು ಆಡಳಿತದಿಂದ ಕೈಗೊಂಡಿರುವ ತಯಾರಿಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸರುಬಾಯಿ ಘೂಳೆ, ಸದಸ್ಯರಾದ ಧೊಂಡಿಬಾ ನರೋಟೆ, ಸಂತೋಷ ಪೋಕಲವಾರ, ದಯಾನಂದ ಘೂಳೆ, ಸಂಜು ವಡೆಯರ್, ಕೇರಬಾ ಪವಾರ್, ಗುಂಡಪ್ಪ ಮುಧಾಳೆ, ಯಾದು ಮೇತ್ರೆ, ಬನ್ಸಿಲಾಲ್ ಖೀರಾನಾಯಕ್, ತಾಲ್ಲೂಕು ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ, ಜೆಸ್ಕಾಂ ಎಇಇ ರವಿ ಕಾರಬಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದರು.