ಶರಣರ ವಚನಗಳನ್ನು ತಿರುಚಿ ಬರೆದು ಅವುಗಳನ್ನು ಸರ್ವನಾಶ ಮಾಡುವ ಹುನ್ನಾರ ಮೀನಾಕ್ಷಿ ಬಾಳಿ ಕಿಡಿ
ಕಲಬುರಗಿ
ಪ್ರಸ್ತುತ ಶರಣರ ವಚನಗಳನ್ನು ತಿರುಚಿ ಬರೆದು ಅವುಗಳನ್ನು ಸರ್ವನಾಶ ಮಾಡುವ ಹುನ್ನಾರ ನಡೆಸಿದ್ದು, ಅದು ಎಂದಿಗೂ ಕೈಗೂಡುವುದಿಲ್ಲ ಎಂದು ಪ್ರಗತಿಪರ ಚಿಂತಕಿ ಮೀನಾಕ್ಷಿ ಬಾಳಿ ಕಿಡಿ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ದೇವಾಲಯ ಸಂಸ್ಕೃತಿಯವರು. ಆದರೆ ಬಸವಣ್ಣ ದೇವಾಲಯ ಸಂಸ್ಕೃತಿ ಧಿಕ್ಕರಿಸಿದವರು. ಅದನ್ನು ತಿರುಚುವ ಹುನ್ನಾರ ನಡೆದಿದೆ. ಇಡೀ ದೇಶ, ವಿಶ್ವದಲ್ಲಿ ಹರಡುವ, ಒಪ್ಪುವ ಶಕ್ತಿ ಇರುವ ವಚನವನ್ನು ಸೀಮಿತಗೊಳಿಸುವ ದುಷ್ಟ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
`ವಚನ ದರ್ಶನ' ಪುಸ್ತಕದ ಎಲ್ಲೂ ಬಸವಣ್ಣನವರ ಭಾವಚಿತ್ರ ಮುದ್ರಿಸಿಲ್ಲ. ಮುಖಪುಟದಲ್ಲಿ ಬಾಣದ ಗುರುತು ಇಡಲಾಗಿದೆ. ಋಷಿಯಂತೆ ಬಿಂಬಿಸಲಾಗಿದೆ. ಕೆಲವು ಪ್ರತಿಗಳಲ್ಲಿ ಇದ್ದ ಅಯೋಧ್ಯ ಪ್ರಕಾಶನದ ಲೋಗೋ ಬದಲಾವಣೆ ಮಾಡಲಾಗಿದೆ. ಪ್ರಸ್ತುತ ವಚನಗಳ ಬಗ್ಗೆ ವಿಶ್ವದೆಲ್ಲೆಡೆ ವ್ಯಾಪಕ ಪ್ರಚಾರ ನಡೆಯುತ್ತಿದೆ. ಆದ್ದರಿಂದ ಭೀತಿಗೆ ಒಳಗಾಗಿರುವ ಬ್ರಾಹ್ಮಣ್ಯವಾದಿಗಳು ವಚನವನ್ನು ತಿರುಚುವ ಪ್ರಯತ್ನ, ವಚನಗಳ ವೈಚಾರಿಕತೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ದೇವಸ್ಥಾನದ ಹೆಸರಿನಲ್ಲಿ ವ್ಯವಹಾರ ಮಾಡುವ ಬಂಡವಾಳಶಾಹಿಗಳು ವಚನಗಳನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ. ವಚನಗಳಲ್ಲಿ ಮಿತಿಗಳಿವೆ. ಆದರೆ ಮುಕ್ತವಾದ ಚರ್ಚೆಗೆ ಅವಕಾಶವಿದೆ. ದಿಢೀರ್ ಎಂದು ಬಸವಣ್ಣನವರ ಬಗ್ಗೆ ಪ್ರೀತಿ ಬರಲು ಬಸವಣ್ಣನವರ ಪೂರ್ವ ಜಾತಿ ಕಾರಣವಾಗಿರಬಹುದೇ? ಎಂದು ಪ್ರಶ್ನಿಸಿದರು.
ಚಿಂತಕ ಆರ್.ಕೆ.ಹುಡಗಿ ಮಾತನಾಡಿ, ೧೨ನೇ ಶತಮಾನದಲ್ಲಿ ವಚನಗಳನ್ನು ಸುಟ್ಟ ಶನಿ ಸಂತಾನಗಳೇ ಇಂದು ವಚನ ದರ್ಶನ ಎಂದು ಹೇಳುತ್ತಿದ್ದಾರೆ. ಅವರ ಸುಳ್ಳುಗಳ ಬಗ್ಗೆ, ವಚನಗಳ ಬಗ್ಗೆ ಚರ್ಚಿಸಲು ನಾವು ಸದಾ ಸಿದ್ಧವಾಗಿದ್ದೇವೆ. ತಿರುಚಿ ಬರೆದರೆ ಸುಮ್ಮನೆ ಕೂಡಲು ಆಗುವುದಿಲ್ಲ. ಕೆಲವು ಸ್ವಾಮೀಜಿಗಳ ಬುದ್ದಿಗೇಡಿತನ ಖಂಡನೀಯ ಎಂದರು.
ಹೋರಾಟಗಾರ ಆರ್.ಕೆ.ಹುಡಗಿ ಮಾತನಾಡಿ, ಕಾಯಕ, ದಾಸೋಹ, ಭಕ್ತಿ ಬಗ್ಗೆ ಮಾತನಾಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ವರ್ಣದ ಬಗ್ಗೆ ಚಕಾರ ಎತ್ತುವುದಿಲ್ಲ. ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡುವುದಕ್ಕೆ ಆಗ್ರಹಿಸಲ್ಲ. ದೇವಸ್ಥಾನಗಳಲ್ಲಿ ಬ್ರಾಹ್ಮಣೇತರರನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಶರಣರ, ವಚನಗಳ ಆಶಯವನ್ನು ಎಂದಿಗೂ ಪಾಲಿಸದವರು ವಚನಗಳ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ ಎಂದರು.
ಆರ್.ಜಿ.ಶೆಟಗಾರ, ಪ್ರಭುಲಿಂಗ ಮಹಾಗಾಂವಕರ್, ರವೀಂದ್ರ ಶಾಬಾದಿ, ಆರ್.ಕೆ.ಹುಡಗಿ, ರವಿ ಸಜ್ಜನ್, ಹಣಮಂತರಾವ, ಲವಿತ್ರ ವಸ್ತ್ರದ ಇದ್ದರು.
ಬಹಿರಂಗ ಚರ್ಚೆಗೆ ಮುಕ್ತ ಅವಕಾಶ
ವಚನಗಳ ಮೂಲ ಆಶಯಕ್ಕೆ ಧಕ್ಕೆ ತಂದು ಪುಸ್ತಕ ರಚನೆ ಮಾಡುವುದು ಖಂಡನೀಯ. ಗೊಂದಲಗಳ ಬಗೆ ಹರಿಸುವ ಧೈರ್ಯವಿದ್ದರೆ ಮನುವಾದಿಗಳೊಂದಿಗೆ ಬಹಿರಂಗ ಚರ್ಚೆ ಮಾಡಲು ಸಿದ್ಧ. ಯಾವುದೇ ಸ್ಥಳ, ಸಮಯ ನಿಗದಿ ಮಾಡಿದರೆ ನಾವು ಸಿದ್ಧರಾಗಿದ್ದೇವೆ.. ಸುಳ್ಳು ಹರಡುತ್ತ ಹೋದರೆ ಎಲ್ಲೆ ಕಾರ್ಯಕ್ರಮ ನಡೆದರೂ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಸಾಹಿತಿ ಮೀನಾಕ್ಷಿ ಬಾಳಿ ಎಚ್ಚರಿಕೆ ನೀಡಿದರು.