ದೇಹದ ಮನಿ

ದೇಹದ ಮನಿ

ದೇಹದ ಮನಿ

ದೇಹದ ಮನಿಗೆ ಒಂಬತ್ತ ಬಾಗಿಲ 

ಒಂದೊಂದುಕ್ಕೂ ಅದೇನೇನೋ ದಿಗಿಲ/ಕೇಳವ್ವ 

ಮನಸಿನ ಕೈಯಾಗ ಇವುಗಳ ಕೀಲ //

ಇವ ಮಾಡುವ ಕೆಂತಿ ಒಂದೊಂದಲ್ಲ 

ಇವನ ಬಿಟ್ಟರ ಲೋಕದ ಸಂತಿ ಇಲ್ಲ/ ಕೇಳವ್ವ 

ಮನುಜನಿಗೆ ಇವಕ್ಕಿಂತ ಏನೂ ಮೇಲಿಲ್ಲ //

ಎದುರಿಸಬೇಕವು ನೂರೆಂಟ ಸವಾಲ 

ಬಯಸಿದ್ದ ಸಿಗದಿರ ವಿಲ ವಿಲ /ಕೇಳವ್ವ 

ತೃಪ್ತಿಯಾಗೋ ಹಂಗ ಸಿಕ್ಕರ ಎಲ್ಲಾ ಕಿಲ ಕಿಲ //

ಹಸಿವು ತೃಷೆ ಕ್ವಾಪ ತಾಪ ಎಲ್ಲಾ ಇವಕ 

ಬಯಸತಾವ ಎಲ್ಲ ಬೇಕ ಬೇಕ/ ಕೇಳವ್ವ 

ಇವನ ಬೆನ್ನ ಹತ್ತಿದರ ತಪ್ಪಿದ್ದಲ್ಲ ನರಕ //

ಪಂಚೇಂದ್ರಿಯಗಳೊಳಗೆ ಹೊಳಿತಾವ 

ಕೇಳತಾವ ನೋಡತಾವ ಬೇಕು ಬ್ಯಾಡಾದ

 ಕಲಿಯತಾವ ಕೇಳವ್ವ 

ಮನಸ ಎಳಕೊಂಡ ಅತ್ತ ಇತ್ತ ಅಲಿತಾವ //

ಆಸೆ ಆಮಿಷದ ಬೆನ್ನ ಹತ್ತತಾವ 

ಹೇಸಿ ಕೆಲಸಾನೂ ಮಾಡಿ ಕೆಡತಾವ/ ಕೇಳವ್ವ 

ಮಾಯಾಮೋಹಕ ಬಿದ್ದ ಘಾಸಿಯಾಗತಾವ//

ನೋಡಿದ್ದೆಲ್ಲ ನನಗೆ ಬೇಕಂತ ಒದ್ದಾಡತಾವ 

ಚಟ ವ್ಯಸನಗಳ ಬೆನ್ನತ್ತಿ ಕೆಡತಾವ/ ಕೇಳವ್ವ 

ಚಟ್ಟ ಹತ್ತೊತನ ಸುಮ್ಮನ ಮೆರಿತಾವ// 

ದೇವ ಇಟ್ಟಾನ ದೇಹ ಸ್ವಾಸ್ತಾಗಿರಾಕ 

ಹುಟ್ಟಿ ಬಂದ ಮ್ಯಾಲೆ ಕೇಳಿ ಮಾಡಿ/ ತಿಳಿಯಾಕ

ಬುದ್ಧಿ ಗ್ಯಾನ ಕಲಿತ ವಸಿ ಜಾಣನಾಗಾಕ //

ಹದ್ದುಬಸ್ತಿನಲಿಟ್ಟರ ಎಲ್ಲದಕೂ ಮೇಲ

ಹಸನ ಇರತೈತಿ, ದೇಹವೆಂಬ ಹೊಲ /ಕೇಳವ್ವ 

ನೆನಿಯತಿರಬೇಕ ಹಂಗ ಶಿವನ ಮ್ಯಾಲ ಮ್ಯಾಲ//

ಡಾ ಅನ್ನಪೂರ್ಣ ಹಿರೇಮಠ