ದೆಹಲಿಯಲ್ಲಿ ಅಭಿವೃದ್ಧಿಪರ ಬಿಜೆಪಿಗೆ ಅಧಿಕಾರ: ಶಾಸಕ ಪ್ರಭು ಚವ್ಹಾಣ

ದೆಹಲಿಯಲ್ಲಿ ಅಭಿವೃದ್ಧಿಪರ ಬಿಜೆಪಿಗೆ ಅಧಿಕಾರ: ಶಾಸಕ ಪ್ರಭು ಚವ್ಹಾಣ

 ದೆಹಲಿಯಲ್ಲಿ ಅಭಿವೃದ್ಧಿಪರ ಬಿಜೆಪಿಗೆ ಅಧಿಕಾರ: ಶಾಸಕ ಪ್ರಭು ಚವ್ಹಾಣ

ಆಮ್ ಆದ್ಮಿ ಪಾರ್ಟಿಯ(ಆಪ್) ದುರಾಡಳಿತದಿಂದ ಬೇಸತ್ತಿದ್ದ ದೆಹಲಿಯ ಜನತೆ ಅಭಿವೃದ್ಧಿ ಪರವಾಗಿರುವ ಭಾರತೀಯ ಜನತಾ ಪಕ್ಷಕ್ಕೆ ಅಭೂತಪೂರ್ವ ಗೆಲುವು ನೀಡಿದ್ದಾರೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಮಾನ್ಯ ಜನರ ಪಕ್ಷವೆಂದು ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷವು ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿಯ ಬದಲು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿತ್ತು. ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಮೊದಲಿಗೆ ಸರ್ಕಾರಿ ವಾಹನ, ಮನೆ ಯಾವುದೂ ಬೇಡ ಎಂದು ನಂತರ ಎಲ್ಲ ಸೌಲಭ್ಯ ಪಡೆದು ನಿಜ ರೂಪ ತೋರಿಸಿದ್ದರು.

ಪಕ್ಷದ ನಾಯಕರು ಸಾಲು ಸಾಲಾಗಿ ಜೈಲಿಗೆ ಹೋಗುವುದು ಸಾಮಾನ್ಯವಾಗಿತ್ತು. ಕಳೆದ ಒಂದು ವರ್ಷದ ವರ್ಷದಿಂದ ದೆಹಲಿಯಲ್ಲಿ ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿತ್ತು. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿತ್ತು. ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು, ದೆಹಲಿ ರಸ್ತೆಗಳನ್ನು ಪ್ಯಾರಿಸ್‌ನಂತೆ ಮಾಡುವುದು ಮತ್ತು ಶುದ್ಧ ನೀರು ಒದಗಿಸುವುದು ಮುಂತಾದ ಭರವಸೆಗಳನ್ನು ಈಡೇರಿಸದೇ ಜನರನ್ನು ಯಾಮಾರಿಸಿದ್ದರು. ಮದ್ಯ ಹಗರಣ, ಭ್ರಷ್ಟಾಚಾರ, ಲೂಟಿತನ, ಅಹಂಕಾರವೇ ಅವರನ್ನು ಸೋಲಿಸಿದೆ ಎಂದಿದ್ದಾರೆ.

ರಾಹುಲ್ ಗಾಂಧಿ ದೆಹಲಿಯಲ್ಲಿಯೂ ವಿಫಲರಾಗಿದ್ದಾರೆ. ಕರ್ನಾಟಕ ಮಾದರಿಯಾಗಿಟ್ಟುಕೊಂಡು ಪ್ರಚಾರಕ್ಕೆ ಹೋಗಿದ್ದ ರಾಜ್ಯದ ಕಾಂಗ್ರೆಸ್ ನಾಯಕರಿಗೆ ತೀವ್ರ ಹಿನ್ನೆಡೆಯಾಗಿದೆ. ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ನಂತರ ದೆಹಲಿ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿದೆ. ಈ ಜಯದಿಂದ ವಿಕಸಿತ ಭಾರತದ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಆನೆಬಲ ಬಂದಿದೆ. ಪಕ್ಷದ ವರ್ಚಸ್ಸು ಮತ್ತಷ್ಟು ವೃದ್ಧಿಸಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಿಂದಲೂ ಧೂಳಿಪಟವಾಗಲಿದೆ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರದಿಂದ ದೆಹಲಿ ಅಭಿವೃದ್ಧಿಯಾಗಲಿದೆ. ವಿಕಸಿತ ಭಾರತದ ಸಂಕಲ್ಪ ತೊಟ್ಟು ಶ್ರಮಿಸುತ್ತಿರುವ ನಾಯಕರಿಂದ ವಿಕಸಿತ ದೆಹಲಿಯಾಗಲಿದೆ ಎಂದಿರುವ ಅವರು, ಬಿಜೆಪಿಗೆ ಐತಿಹಾಸಿಕ ಗೆಲುವು ನೀಡಿದ ದೆಹಲಿಯ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಹಾಗೆಯೇ ಈ ಗೆಲುವಿಗೆ ಕಾರಣೀಭೂತರಾದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಅಧ್ಯಕ್ಷರು ಹಾಗೂ ಎಲ್ಲ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಶಾಸಕರು ಅಭಿನಂದನೆ ಸಲ್ಲಿಸಿದ್ದಾರೆ.