ಗಝಲ್:ಶರಣಗೌಡ ಪಾಟೀಲ ಜೈನಾಪುರ.

ಗಝಲ್
ಪ್ರೀತಿಯ ಪರದೆಯಲಿ ಭಾವಚಿತ್ತಾರ ಬಿಡಿಸುವೆ ನಿನಗಾಗಿ
ನಕ್ಷತ್ರಗಳ ಪೋಣಿಸಿ ಒಲವಿನ ಮಾಲೆ ಉಡಿಸುವೆ ನಿನಗಾಗಿ
ನಿನಗೆ ಕಣ್ಣಲ್ಲೇ ಕೊಲ್ಲುವ ಚಾಳಿಯಿದು ದೇವರ ವರವಾಗಿದೆ
ಕತ್ತಲಾದರೆ ಪಿಸುಮಾತಿನ ಮಧುರ ಮಲ್ಲಿಗೆ ಮುಡಿಸುವೆ ನಿನಗಾಗಿ
ಇರುಳಿನಲಿ ನೆರಳು ಇದ್ದರೂ ಮರೆಯಾಗುವುದು ನಿಶ್ಚಿತ
ಸಂಭ್ರಮಿಸಲು ಬದುಕಿನ ಏಕತಾರಿ ನುಡಿಸುವೆ ನಿನಗಾಗಿ
ನಿನ್ನೊಲುಮೆಗೆ ಬದುಕಿನ ಸ್ಪರ್ಧೆಯಲಿ ಸೋಲನೊಪ್ಪುವೆ
ಅನುರಾಗದ ಸಂಗಮಕೆ ಒಲವಿನಮೃತವ ಕುಡಿಸುವೆ ನಿನಗಾಗಿ
ಸನಿಹ ಬಯಸಿದೆ ತನು ಮನ ಶರಣಾಗಿದೆ ಸ್ವಾಭಿಮಾನ
ಜೊತೆಜೊತೆಯಾಗಿ ಸಾಗಿದರೆ ಮನದ ಕಲ್ಮಶ ಗುಡಿಸುವೆ ನಿನಗಾಗಿ
ಶರಣಗೌಡ ಪಾಟೀಲ ಜೈನಾಪುರ.