ಕಲಬುರಗಿಯ ಶರಣ ಸಂಸ್ಥಾನದ ಪೂಜ್ಯ ಡಾ ಶರಣಬಸವಪ್ಪ ಅಪ್ಪಾಜಿ ಚೇತರಿಕೆ: ಆರೋಗ್ಯ ವಿಚಾರಿಸಿದ ಉಭಯ ಸಚಿವರು ; ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ

ಕಲಬುರಗಿಯ ಶರಣ ಸಂಸ್ಥಾನದ ಪೂಜ್ಯ ಡಾ ಶರಣಬಸವಪ್ಪ ಅಪ್ಪಾಜಿ ಚೇತರಿಕೆ: ಆರೋಗ್ಯ ವಿಚಾರಿಸಿದ ಉಭಯ ಸಚಿವರು
ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ದೂರವಾಣಿಯ ಮುಖಾಂತರ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಮಾತನಾಡಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಯವರ ಆರೋಗ್ಯದ ಬಗ್ಗೆ ವಿಚಾರಿಸಿ, ಅವರ ಚೇತರಿಕೆಯ ಬಗ್ಗೆ ತಿಳಿದು ಸಂತಸ ವ್ಯಕ್ತಪಡಿಸಿದರು.
ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಡಾ. ಶರಣಬಸವ ಅಪ್ಪಾಜಿ ಅವರ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದ್ದು, ಕೆಲಸ ದಿನಗಳ ಹಿಂದೆ ಉಸಿರಾಟದ ಸೋಂಕಿನ ತೊಂದರೆಯಿಂದಾಗಿ ಖಾಸಗಿ ಆಸ್ಪತ್ರೆಯಿಂದ ದಾಖಲಾಗಿದ್ದ ಅವರನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಅವರನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.
ಮಂಗಳವಾರದಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಮತ್ತು ಕಾಂಗ್ರೆಸ್ ಪಕ್ಷದ ಇತರ ಹಿರಿಯ ನಾಯಕರು ಚಿರಾಯು ಆಸ್ಪತ್ರೆಗೆ ಭೇಟಿ ನೀಡಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರನ್ನು ಭೇಟಿ ಮಾಡಿ ವೈದ್ಯರು ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಎಸ್ ಅಪ್ಪಾಜಿ ಮತ್ತು ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರೊಂದಿಗೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದರು. ಇಬ್ಬರೂ ಸಚಿವರು ಡಾ. ಅಪ್ಪಾಜಿ ಮತ್ತು ಮಾತೋಶ್ರೀ ಡಾ. ಅವ್ವಾಜಿ ಅವರೊಂದಿಗೆ 10 ನಿಮಿಷಗಳಿಗೂ ಹೆಚ್ಚು ಸಮಯ ಕಳೆದರು ಮತ್ತು ಪೂಜ್ಯ ಡಾ.ಅಪ್ಪಾಜಿ ಅವರ ಆರೋಗ್ಯ ಚೇತರಿಕೆಯ ಬಗ್ಗೆ ತಿಳಿದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಅದೇ ಸಮಯದಲ್ಲಿ, ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಸಭೆಯ ವಿಪಕ್ಷ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ದೂರವಾಣಿಯ ಮುಖಾಂತರ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಮಾತನಾಡಿ ಪೂಜ್ಯ ಡಾ. ಅಪ್ಪಾಜಿಯವರ ಆರೋಗ್ಯದ ಬಗ್ಗೆ ವಿಚಾರಿಸಿ, ಅವರ ಚೇತರಿಕೆಯ ಬಗ್ಗೆ ತಿಳಿದು ಹರ್ಷ ವ್ಯಕ್ತಪಡಿಸಿದರು.
ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರನ್ನು ಉಸಿರಾಟದ ಸೋಂಕಿನ ದೂರುಗಳೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಅವರ ಆರೋಗ್ಯ ಸ್ಥಿತಿ 24 ಗಂಟೆಗಳ ಒಳಗೆ ಸಾಮಾನ್ಯ ಸ್ಥಿತಿಗೆ ಮರಳಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಬಹುತೇಕ ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಸಂಸ್ಥಾನದ ಮೂಲಗಳು ತಿಳಿಸಿವೆ.
ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ ಡಿ. ಅವರು ಸಹ ಆಸ್ಪತ್ರೆಗೆ ಭೇಟಿ ನೀಡಿ ಪೂಜ್ಯ ಡಾ. ಅಪ್ಪಾಜಿ ಅವರನ್ನು ಭೇಟಿ ಮಾಡಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಪೂಜ್ಯ ಡಾ.
ದಾಕ್ಷಾಯಿಣಿ ಎಸ್ ಅಪ್ಪಾ ಅವರೊಂದಿಗೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಿದರು. ಈ ಸಂದರ್ಭದಲ್ಲಿ ಡಾ. ಉಮಾದೇವಿ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ, ಹಣಕಾಸು ಅಧಿಕಾರಿ ಡಾ ಕಿರಣ್ ಮಾಕಾ, ಶರಣಬಸವೇಶ್ವರ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ನಂದಗಾಂವ್, ಡಾ ಅಲ್ಲಮಪ್ರಭು ದೇಶಮುಖ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಿನ್ನೆ ದಿವಸ ಶರಣ ಸಂಸ್ಥಾನದ 9 ನೇ ಪೀಠಾಧಿಪತಿಗಳಾದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಸುಮಧುರ ಕಂಠದಿಂದ ಶರಣರ ಹಾಡು ಕೇಳಿ ಪೂಜ್ಯ ಡಾ ಅಪ್ಪಾಜಿ ಯವರು ಭಾವುಕರಾಗಿದ್ದೂ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಶರಣಬಸವೇಶ್ವರರ ಕೃಪಾಶೀರ್ವಾದ ಹಾಗೂ ಸದ್ಭಕ್ತರ ಪ್ರಾರ್ಥನೆಯಿಂದ ಪೂಜ್ಯ ಶ್ರೀ ಡಾ ಶರಣಬಸಪ್ಪ ಅಪ್ಪ ಅವರು ಚೇತರಿಸಿಕೊಳ್ಳುತ್ತಿದ್ದು, ಅವರು ಶತಾಯುಷಿಗಳಾಗಲಿ ಎಂಬುದು ಶರಣ ಸಂಸ್ಥಾನದ ಸದ್ಭಕ್ತರ ಪ್ರಾರ್ಥನೆಯಾಗಿದೆ.