ಸಹಜ ಲೇಖಕ ಮಿತ್ರ: ಮನೋಹರ ಮರಗುತ್ತಿ
ಸಹಜ ಲೇಖಕ ಮಿತ್ರ: ಮನೋಹರ ಮರಗುತ್ತಿ
ಒಬ್ಬ ವ್ಯಕ್ತಿ ಪ್ರಾಮಾಣಿಕವಾಗಿ ಯಾವುದೇ ಆಸೆ ಆಮಿಷ ಇಲ್ಲದೆ ತನ್ನ ಬದುಕನ್ನು ತ್ಯಜಿಸಿ ತನ್ನ ಇಡೀ ಪರಿಸರ ಕುಟುಂಬದ ಏಳಿಗೆಗೆ, ಸಮುದಾಯದ ಏಳಿಗೆಗೆ ಸದಾ ಕಾತುರವಾಗಿ ತನ್ನೆಲ್ಲ ಜೀವನವನ್ನೇ ಮುಡುಪಾಗಿಟ್ಟು ಬದುಕಿದ ಬದುಕುತ್ತಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಮನೋಹರ ಮರಗುತ್ತಿ ಒಬ್ಬರು. ಅವರೊಬ್ಬ ಏಕಾಂಗಿಯಾಗಿ ಒಂಟಿ ಸಲಗದಂತೆ ತಮ್ಮ ಜೀವನವನ್ನು ರೂಪಿಸಿಕೊಂಡವರು. ಒಂದು ಕಡೆ ಮುತ್ತೂಟ್ ಕಂಪನಿಯ ಮ್ಯಾನೇಜರ್ ಆಗಿ ಮತ್ತೊಂದೆಡೆ; ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ತನ್ನ ನಂಬಿಕೆ ಬದ್ಧತೆಯ ಮೂಲಕ ಕವಿಯಾಗಿ, ಕಥೆಗಾರನಾಗಿ, ಕಾದಂಬರಿಕಾರಾಗಿ, ಹಲವು ಸಾಹಿತ್ಯ ಕ್ಷೇತ್ರದಲ್ಲಿ ಆಮೆಗತಿಯಲ್ಲಿ ನಡೆದು ತನ್ನ ಬದುಕನ್ನು ಸಾಹಿತ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಒಬ್ಬ ಅನನ್ಯ ಸಾಧಕ.
ಇವರು ಮೂಲತಃ ಕಲಬುರ್ಗಿ ಜಿಲ್ಲೆಯ ಇಂದಿನ ಕಮಲಾಪುರ ತಾಲೂಕಿನ ಮರಗುತ್ತಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬಂದ ವ್ಯಕ್ತಿ. 05-12- 1968 ರಂದು ಲಕ್ಷ್ಮಿ ಬಾಯಿ ಮತ್ತು ನಾಗಪ್ಪ ಎಂಬ ದಂಪತಿಗಳಿಗೆ ಎರಡನೇ ಮಗನಾಗಿ ಜನಿಸಿದರು. ಒಬ್ಬ ಅಕ್ಕ, ಒಬ್ಬ ತಮ್ಮ ಅವರ ಕುಟುಂಬ ಚಿಕ್ಕ ಚೊಕ್ಕ ಆಗಿದ್ದರೂ; ಸಹ ಬೆನ್ನು ಹತ್ತಿ ಬಂದ ಕಡುಬಡತನ ಇವರ ತಂದೆ- ತಾಯಿಗಳ ಮೇಲೆ ಪ್ರಭಾವ ಬೀರಿತು. ಇನ್ನು ಎರಡು ವರ್ಷಗಳು ಇದ್ದಾಗಲೇ 1970 ರ ಬರಗಾಲದ ಛಾಯೆ ಎಲ್ಲೆಡೆ ಆವರಿಸಿಬಿಟ್ಟಿತ್ತು ಅಂತಹ ಸಂದರ್ಭದಲ್ಲಿ ತಾಯಿ ಹಲವು ಊರುಗಳಿಗೆ ಹೋಗಿ ಕೂಲಿ- ನಾಲಿ ಮಾಡಿ ತನ್ನ ಮಕ್ಕಳನ್ನು ಬದುಕಿಸಿ ಬೆಳೆಸಿದವಳು. 1978 ರಲ್ಲಿ ಇವರ ತಂದೆ ನಾಗಪ್ಪ ರಸ್ತೆ ಅಪಘಾತದಲ್ಲಿ ತೀರಿಹೋದ ಇಂತಹ ಒಂದು ಬಡತನ ಒಂದೆಡೆ; ತಂದೆ ಇಲ್ಲದ ತಬ್ಬಲಿಯ ಮಗನಾಗಿ ತಾಯಿಯ ವಾತ್ಸಲ್ಯದಲ್ಲಿ ಬೆಳೆದರು. ಅವರ ಚಿಕ್ಕಪ್ಪ ಮಹದೇವಪ್ಪ ಮತ್ತು ಚಿಕ್ಕಮ್ಮ ಲಲಿತಾಬಾಯಿ ಇವರ ಸಹಕಾರದಿಂದ ಕಲ್ಬುರ್ಗಿಯ ಸಂಜೀವ್ ನಗರದಲ್ಲಿ 10×10 ಅಳತೆಯ ಬಾಡಿಗೆ ಮನೆಯಲ್ಲಿ ಇವರ ಜೀವನದ ಅಧ್ಯಾಯ ಪ್ರಾರಂಭ. ಸಹೋದರಿ ಜಗದೇವಿ ಮತ್ತು ಸೋದರ ಮಾವ ಭೀಮಶಾ ರೇವಣ್ಣ ಅವರು ಇವರ ಕಷ್ಟದ ಜೀವನದಲ್ಲಿ ಪಾಲುದಾರರಾಗಿ ಇವರಿಗೆ ಪ್ರೇರಣೆ ಪ್ರೋತ್ಸಾಹವನ್ನು ನೀಡಿದರು.
ಅನೇಕ ಕಷ್ಟ ಕೋಟಲೆಗಳ ಮಧ್ಯೆ ಮನೋಹರ ಮರುಗುತ್ತಿಯವರು ಒಂದನೇ ತರಗತಿಯಿಂದ ನಾಲ್ಕನೆಯ ತರಗತಿಯವರೆಗೆ ಶಿಕ್ಷಣವನ್ನು ಮರುಗುತ್ತಿಯಲ್ಲಿ ಪಡೆದು ನಂತರ ಕಲಬುರ್ಗಿಗೆ ಬಂದು ಇಲ್ಲಿಯ ಪರಸ್ಥಿತಿ ಕಂಡು ಹೌಹಾರಿದರು. ಇವುಗಳನ್ನು ನೋಡಿ ಬ್ರಹ್ಮಪುರ ಸರಕಾರಿ ಶಾಲೆಗೆ ಶ್ರೀ ಹನುಮಂತಪ್ಪ ಮಾಸ್ಟರ್ ಪ್ರವೇಶ ಕೊಡಿಸಿದರು. ಸಂಜೀವ್ ನಗರದಿಂದ ಸೂಪರ್ ಮಾರ್ಕೆಟ್ ದವರಿಗೆ ನಡೆದುಕೊಂಡು ಹೋಗುವುದು, ಶರಣಬಸವೇಶ್ವರ ದೇವಸ್ಥಾನದವರೆಗೆ ಕುದುರೆ ಗಾಡಿಯ ಮೂಲಕ ಹೋಗಿ ಮತ್ತೆ ಶಾಲೆಗೆ ನಡೆದುಕೊಂಡು ಹೋಗುವ ಪರಿಸ್ಥಿತಿ ಅವರಿಗೆ ಒಂದ ವರ್ಷಗಳ ಕಾಲ ತನ್ನ ಎಲ್ಲವುಗಳನ್ನ ಮರೆತು ನಂತರದಲ್ಲಿ ವಸತಿ ಶಾಲೆಗೆ ಹನುಮಂತಪ್ಪ ಮಾಸ್ತರ ಇವರಿಗೆ ಪ್ರವೇಶವನ್ನು ನೀಡಿದರು.ಅಲ್ಲಿಗೆ ಹೋಗಲು ಆಗದೇ ತಾಯಿಯ ಕೊರಳಿಗೆ ಬಿದ್ದು ಅಳುತ್ತಾ ನಾನು ಹೇಗೆ ಬದುಕಬೇಕು ಎಂದು ಚಿಂತಿಸುತ್ತಲೇ ತಾಯಿಯನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದರು ತಾಯಿ ಮಗ ಆ ವಾತ್ಸಲ್ಯ ಕೊನೆಗೂ ದೇವರು ಧೈರ್ಯವನ್ನು ತುಂಬಿ ಆರನೇ ತರಗತಿಯಿಂದ 7 ನೇ ತರಗತಿಯವರೆಗೆ ಸ್ಟೇಷನ್ ಬಜಾರ್ ಸರ್ಕಾರಿ ಶಾಲೆ, ಕಲಬುರ್ಗಿಯಲ್ಲಿ ಮತ್ತು ಮಲ್ಲಿಕಾರ್ಜುನ ಖರ್ಗೆ ಪ್ರೌಢಶಾಲೆ ಕಲಬುರ್ಗಿಯಲ್ಲಿ, ಎಂಟನೇ ತರಗತಿಯಿಂದ 10ನೇ ತರಗತಿ ನಂತರ ಮಿಲಿಂದ ಸಂಯುಕ್ತ ವಾಣಿಜ್ಯ ಕಾಲೇಜು ಕಲಬುರ್ಗಿಯಲ್ಲಿ ಪಿಯುಸಿಯನ್ನು ಪಡೆದುಕೊಂಡರು. 1991ರಲ್ಲಿ ಎಸ್.ಬಿ. ಕಾಲೇಜಿನಲ್ಲಿ ಪ್ರವೇಶ ಪಡೆದು ದ್ವಿತೀಯ ದರ್ಜೆಯಲ್ಲಿ ಬಿ.ಕಾಂ.ಪದವಿ ಪಾಸಾದರು 19 92 ರಲ್ಲಿ ಬಿ.ಜಿ .ಡಿ .ಬಿ .ಎಂ ಅಂದರೆ ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮೋನಿಯಂ ಬಿಜಿನೆಸ್ ಮ್ಯಾನೇಜ್ಮೆಂಟ್ ಎಂಬ ಕೋರ್ಸ್ ಪಾಸಾದರು. ಹೀಗೆ ತನ್ನ ಬದುಕಿನ ಅನೇಕ ಕಷ್ಟ- ನೋವುಗಳು, ಹಸಿವು -ಬಡತನ ಇವುಗಳೆಲ್ಲವನ್ನು ಮೀರಿ ಶಿಕ್ಷಣವನ್ನು ಪಡೆದುಕೊಂಡದ್ದು ಅವರ ಒಂದು ಎದೆಗಾರಿಕೆ ಎಂದೆ ಕರೆಯಬೇಕು!
ವೃತ್ತಿ ಜೀವನ:
ಮನೋಹರ ಮರುಗುತ್ತಿಯವರು ಮಳಖೇಡಿನ ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಸೂಪರ್ವೈಸರ್ ಆಗಿ 1991 ರಿಂದ 97 ರವರೆಗೆ ಸೇವೆಯನ್ನು ಸಲ್ಲಿಸಿದರು. 1998 ರಿಂದ 2004 ರವರೆಗೆ ಸಂಚಯನಿ ಸೇವಿಂಗ್ ಮತ್ತು ಇನ್ವೆಸ್ಟ್ಮೆಂಟ್ ಲಿಮಿಟೆಡ್ ಕಂಪನಿಯಲ್ಲಿ ಸೀನಿಯರ್ ಆರ್ಗನೈಸರ್ ಆಗಿ ಆರು ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿದರು. 2011 ರಿಂದ ಕೇರಳದ ಮುತ್ತೂಟ್ ಪಿನ್ಕಾರ್ಪ್ ಲಿಮಿಟೆಡ್ ಗೋಲ್ಡ್ ಲೋನ್ ಕಂಪನಿಯಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಜಯನಗರ, ಮಿನಿ ವಿಧಾನ ಸೌಧ ಎದುರಿಗಿನ ಕಲಬುರ್ಗಿ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ದಾಂಪತ್ಯ ಜೀವನ:
ಮರುಗುತ್ತಿಯವರು ಕಮಲಾಪುರದ ರಾಮಚಂದ್ರಪ್ಪ ಆರ್. ವಾಲಿಕಾರ ಅವರ ಸಹಕಾರದ ಮೇಲೆ ಅಲ್ಲಿನ ಸುಂದರಮ್ಮ ಮತ್ತು ತೀರ್ಥಪ್ಪ ವಾಲಿಕಾರ ಅವರ ಮುದ್ದಿನ ಮಗಳಾದ ರಂಜನಾಳನ್ನು30-04- 1995 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 11 ವರ್ಷಗಳ ಕಾಲ ತಮ್ಮ ಜೀವನದಲ್ಲಿ ಅನೇಕ ನೋವುಗಳನ್ನು ಎಲ್ಲವುಗಳನ್ನು ಅನುಭವಿಸುತ್ತಲೇ;ಬಾನಾಮತಿ ಎಂಬ ಪಿಶಾಚಿ ಇವರಿಗೆ ವಕ್ಕರಿಸಿಕೊಂಡು ಅವರು ಪತ್ನಿ 25 -04 -2011ರಲ್ಲಿ ನಿಧನರಾದರು. 11.08.2000 ಇಸ್ವಿಯಲ್ಲಿ ಸಚ್ಚಿನ್ ನೆಂಬ ಮಗ ಹುಟ್ಟಿದ.ಕೇವಲ ಆರು ವರ್ಷದ ಮಗನನ್ನು ಕಂಡು ನಾನು ಬದುಕಿನ ಜೀವನದ ಪಯಣದಲ್ಲಿ ಸಾಗಬೇಕು ನನ್ನ ಮಗನಿಗೆ ನಾನೇ ತಾಯಿ- ತಂದೆ ಕುಟುಂಬವಾಗಬೇಕೆಂದು ಆಶಯವನ್ನು ವ್ಯಕ್ತಪಡಿಸಿ ಅವನಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಿ ಡಿಪ್ಲೋಮಾ ಮೆಕಾನಿಕಲ್ ಕೋರ್ಸ್ ಅನ್ನು ಮುಗಿಸಿ ಈಗ ನೌಕರಿಯಲ್ಲಿ ತೊಡಗಿಕೊಂಡದ್ದು ಇವರ ಸಾರ್ಥಕ ಬದುಕಾಗಿದೆ. ಯಾವ ಬಡತನ ಹಸಿವು ಒಂದೆಡೆಯಾದರೆ;ಮತ್ತೊಂದೆಡೆ ಸಾವುಗಳ- ನೋವು ; ಮತ್ತೊಂದೆಡೆ ಸಂಸಾರದ ಭಾರವನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದ ಮನೋಹರವರ ಒಂದು ಬದುಕೇ ಆಶ್ಚರ್ಯಕರ ಮತ್ತು ಸತ್ಯ ಘಟನೆಯು ಕೂಡ ಹೌದು. ಇವುಗಳೆಲ್ಲ ಮಧ್ಯದಲ್ಲಿ ಆ ಎಲ್ಲಾ ಕಹಿ ಘಟನೆಗಳನ್ನು ಅನುಭವಿಸುತ್ತಾ ಅವುಗಳನ್ನು ಮೆಟ್ಟಿನೆಂತು ಬದುಕಿದ- ಬಾಳಿದವರು. ತಮ್ಮ ವೃತ್ತಿ -ಉದ್ಯೋಗವನ್ನು ಅತ್ಯಂತ ಪ್ರಮಾಣಿಕವಾಗಿ ಕರ್ತವ್ಯದ ಮೂಲಕ ನಿರ್ವಹಿಸಿಕೊಂಡು ಬಂದವರು. ಹೀಗಾಗಿ ಅವರ ಬದುಕೆ ಒಂದು ಸವಾಲಾಗಿ ಆ ಬದುಕಿಗೆ ಒಬ್ಬ ಸಾಮಾಜಿಕ ಚಿಂತನೆಯ ಲೇಖಕನಾಗಿ ಹೊರಬರಲು ಸಾಧ್ಯವಾದ್ದದ್ದು ಅವರ ಬದುಕಿನ ಪವಾಡವೆಂದೆ ಭಾವಿಸಬೇಕು!!. ಮುಂದೆ ತಮ್ಮ ಕುಟುಂಬ ಎಲ್ಲಾ ನನ್ನದು ನಾನೇ ನಿರ್ವಹಿಸಬೇಕೆಂದು ಎಲ್ಲಾ ಬಿಟ್ಟು ಕೊಟ್ಟವರು.
ಸಾಹಿತ್ಯ ರಚನೆ: ಬಾಲ್ಯದ ಬಡತನ,ಓದಿನ ಹಸಿವು,ಸಾವು ಗಳು ಇವರ ಸಾಹಿತ್ಯ ರಚನೆಗೆ ಸ್ಫೂರ್ತಿಯಾದವು.ಆಗಾಗ ಬರೆದು ಇಟ್ಟುಕೊಳ್ಳುವುದು ರೂಢಿ. ಪ್ರಕಟಣೆಗೆ 2015 ರಲ್ಲಿ ತೊಡಗಿದರು.ಅಲ್ಲಿಂದ ಇಲ್ಲಿಯವರೆಗೆ ಆರು ಪುಸ್ತಕ ಪ್ರಕಟಿಸಿದ್ದಾರೆ.
ಕಾವ್ಯ: ಕಾವ್ಯದಲ್ಲಿ ವಿಶೇಷ ಸಾಧನೆ ಮಾಡಿದವರು. ನೆನಪಿನ ನಾವಿಕ ಅವರ ಮೊದಲ ಸಂಕಲನ.ಇಲ್ಲಿ ಕ್ರೈಸ್ತ ಧರ್ಮದ,ಕ್ರಿಶ್ಚಿಯನ್ ವಿಷಯದ ಹಲವಾರು ಕವನಗಳಿವೆ. ಇವು ಕಾವ್ಯದ ಧೋರಣೆಯನ್ನು ಪ್ರತಿಪಾದಿಸಿದರು. ದೇವ ದೇವನ ಹಲವು ವಿಚಾರಧಾರೆ ಹೊಂದಿದ ಕವನಗಳಿವೆ. ಇಲ್ಲಿ ಬಹು ಸ್ವಾರಸ್ಯದ ಕವನ ಕಟ್ಟುವ, ಕಾವ್ಯದ ವಸ್ತು, ವಿಷಯ ಆಯ್ಕೆಯಲ್ಲಿ ಪಳಗಿದ್ದಾರೆ.ಆಧ್ಯಾತ್ಮಿಕ ಕ್ರೈಸ್ತ ದ ಹತ್ತು ಹಲವು ಪ್ರತಿಪಾದಿಸಿದ ಅಭಿವ್ಯಕ್ತಿ ಕವನಗಳಿವು.
ಕೃತಿಗಳೆಲ್ಲವೂ ಹೆಸರೇ ಸೂಚಿಸುವಂತೆ ವಿಭಿನ್ನ ನೆಲೆಯ ವಿಶಿಷ್ಟ ಬರಹಗಳಾಗಿವೆ.
'ವರದ ಮಗು' ಎಂಬ ಕವನ ಸಂಕಲನ ಈಗ ಹೊರತರುತ್ತಿದ್ದಾರೆ. ಇದರಲ್ಲಿ ಮೂವತ್ತೈದು ಕವಿತೆಗಳಿವೆ, ಪ್ರತಿಯೊಂದು ಕವಿತೆಯ ಹಿಂದೆ ಮನೋಹರ ಅವರು ಮನೋಹರವಾಗಿ ಚಿತ್ರಿಸಿದ್ದಾರೆ. ಇಲ್ಲಿಯ ಕವನಗಳನ್ನು ನೋಡಿದಾಗ ಸಾಂಸ್ಕೃತಿಕ ಮಹಾತ್ಮ-ಚಿಂತಕರು ಇವರ ಮೇಲೆ ಪ್ರಭಾವ ಬೀರಿದ್ದಾರೆ. ಬುದ್ಧ, ಯೇಸು. ಬಸವಣ್ಣ, ಗಾಂಧಿ, ಅಂಬೇಡ್ಕರ್ ಕುರಿತು ಬರೆದ ಪ್ರತಿಯೊಂದು ಕವನವು ಅವರ ಜೀವನ-ಹೋರಾಟ-ಚಿಂತನೆಗಳನ್ನು ನೆನಪಿಸುತ್ತವೆ. ಸಿದ್ಧಾರ್ಥ ಬುದ್ದನು ಹೇಗಾದ ಆತನ ಚಿತ್ರಣ ಹೇಳುತ್ತಲೇ
ಬದುಕಿನ ಸತ್ಯವ ಅರಿತುಕೊಂಡು
ಧಮ್ಮ ಮಾರ್ಗವ ಕಂಡುಕೊಂಡನು
ಲೋಕವೆಲ್ಲ ಧಮ್ಮವ ಸಾರಿದ ಬುದ್ದನು
ಪಂಚಶೀಲವ ಪಡೆಯಿರೆಂದನು.
ನಿಜ ಬದುಕಿನ ಮೌಲ್ಯವನ್ನು ಪ್ರತಿಪಾದಿಸಿದ್ದು ಸತ್ಯ ಮತ್ತು ವೈಜ್ಞಾನಿಕ ತಳಹದಿ ಮೇಲೆ ತನ್ನ ಧಮ್ಮ ಸಾರಿದ್ದು ಗಮನಾರ್ಹವೆಂದಿದ್ದಾರೆ. ಅದರಂತೆ ಕ್ರೈಸ್ತ ಧರ್ಮದ ಯೇಸು ಕುರಿತು ಲೋಕದ ಒಡೆಯ, ಯೇರೋಸಲೇಮ, ಮನುಜ, ಕಳೆಗುಂದದ ಕರುಣಾಮಯಿ ನಾಲ್ಕು ಕವನಗಳಲ್ಲಿ ಯೇಸುವಿನ ದಯೆ, ಕರುಣೆ, ಪ್ರೀತಿ, ಸಾಕ್ಷಾತ್ ಅವರ ದಿವ್ಯ ವ್ಯಕ್ತಿತ್ವ, ಸಂದೇಶಗಳು ಇವರಿಗೂ ಪ್ರಸ್ತುತವಾದವುಗಳ ಕುರಿತು ಮನಬಿಚ್ಚಿ ತಮ್ಮ ಸಮುದಾಯದ ಅನೇಕ ಸ್ತರದ ಯೇಸುವಿನ ಪ್ರಭಾವ ಇಲ್ಲಿ ವಿವರಿಸಿದ್ದಾರೆ.
ನಮ್ಮೆಲ್ಲರ ರಾಜನು ಪ್ರೀತಿಗೆ ಪಾತ್ರನು
ನಮ್ಮೇಸುರಾಜನು |
ಕುರುಡರು ಕುಂಟರು ಕುಷ್ಟರು ದುಷ್ಟರು
ಸ್ವಚ್ಛತೆ ಕಂಡವರು
ತಿರುಗಿ ಬರುತ್ತೇನೆಂದ ಓಹೋ...
ಮರಿಯಮ್ಮನ ಮುದ್ದು ಕಂದ ಓಹೋ...
ಪಡೆದು ಬಿಜ್ಜಳರಸನಲ್ಲಿ ಕರಣಿಕ, ದಂಡನಾಯಕ ಮಂತ್ರಿಯಾಗಿ ಸಮಾನತೆ, ದಯವೇ ಧರ್ಮದ ಮೂಲ ತೋರಿಸಿದ ಸಾಮಾಜಿಕ ಹರಿಕಾರ.
ಸಾಮಾಜಿಕ ವಚನಯುಗದ ನೇತಾರರು
ಸಮಾನತೆಯ ಹರಿಕಾರರು ಮಹಾಮಾನವತಾವಾದಿಗಳಿವರು
ಶ್ರಮ ಸಂಸ್ಕೃತಿಯ ಪ್ರತಿಪಾದಕರು.
ಎಂದು ಹೇಳಿ ಜಗಜ್ಯೋತಿ ಬಸವೇಶ್ವರರ ಕುರಿತು ಹಾಡಿದ್ದಾರೆ. ಇಪ್ಪತ್ತನೆಯ ಶತಮಾನದ ವಿಶ್ವಜ್ಞಾನಿ ಅಂಬೇಡ್ಕರ್ ಅವರು ಭಾರತದೇಶ, ಪ್ರಪಂಚದ ಶ್ರೇಷ್ಠ ವಿದ್ವಾಂಸ, ತತ್ವಜ್ಞಾನಿ, ಚಿಂತಕ, ಅವರನ್ನು ಎಷ್ಟು ಬಣ್ಣಿಸಿದರೂ ಸಾಧ್ಯವಿಲ್ಲ. ವರ್ಣನಾತೀತ ವ್ಯಕ್ತಿತ್ವದ ಬಹುಮುಖ ಪ್ರತಿಭೆಯ ಮೇರುಪರ್ವತ. ಇವರ ಕುರಿತು ಎರಡು ಕವಿತೆ ಬರೆದಿದ್ದಾರೆ. ಒಂದು ಸಿನೇಮಾ ಹಾಡಿನ ದಾಟಿಯಲ್ಲಿ ಬರೆದಿದ್ದಾರೆ ಹಾಗೇ ವಿಶ್ವವಿಖ್ಯಾತಿ ವಿಶ್ವರತ್ನ ಅವರ ಜೀವನ ವೃತ್ತಾಂತ ಹೇಳುತ್ತಲೇ
ಭಾರತ ಸಂವಿಧಾನ ಶಿಲ್ಪಿಕಾರ
ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ
ಅಸ್ಪೃಶ್ಯತೆಯನ್ನು ಸುಟ್ಟು ಹಾಕಲೆಂದೆ
ಹುಟ್ಟಿ ಬಂದ ದಲಿತ ಪ್ರಖರ ಸೂರ್ಯ
ಎನ್ನುವ ಮೂಲಕ ಅಸ್ಪೃಶ್ಯತೆ, ಜಾತಿಯತೆ, ಅಸಮಾನತೆ ಅಳಿಸಿದ ಈ ಜಗತ್ತಿಗೆ ಪ್ರಕೃತಿದತ್ತವಾಗಿ ಸೂರ್ಯ-ಚಂದ್ರ ಎರಡು ಬೇಕು ಎನ್ನುವಂತೆಯೇ ಕತ್ತಲಲ್ಲಿ ಬೆಳಕಾಗಿ ಬಂದ ಚಂದಿರನಾದರೆ; ಹಗಲಿನಲ್ಲಿ ಸೂರ್ಯನಾಗಿ ಪ್ರಖರತೆ ಮೈಗೂಡಿಸಿಕೊಂಡ ಅಂಬೇಡ್ಕರ್ ಇವರ ವ್ಯಕ್ತಿತ್ವ ಇಲ್ಲಿ ಕಂಡುಬರುತ್ತದೆ. ಇದನ್ನು ತುಂಬಾ ಅರ್ಥಪೂರ್ಣವಾಗಿ ಕವಿ ದಾಖಲಿಸಿದ್ದಾರೆ.
ಬಿಳಿಯನೊಬ್ಬ ದೂರಿದ
ಗಾಂಧಿ ಕರಿಯನವನೆಂದ
ಬ್ರಿಟಿಷರ ವರ್ಣ ಬೇಧದಿಂದ
ಶುರುವಾಯಿತು ಗಾಂಧಿ ಚಳವಳಿ ಅಂದಿನಿಂದ
ನಿಜ ಹೋರಾಟ ಪ್ರಾರಂಭವಾಗಿಯೇ ಅಸ್ಪೃಶ್ಯತೆ ಕರಿ-ಬಿಳಿಯನೆಂಬ
ಎಂದು ಹಾಡಿನ ರೂಪದಲ್ಲಿ, ಕವನದ ರೂಪದಲ್ಲಿ, ಯೇಸುವಿನ ಕುರಿತು ಎಷ್ಟು ಕೊಂಡಾಡಿದರು ಅವರ ವ್ಯಕ್ತಿತ್ವ ಬರೆದರು ಸಹ ಇನ್ನೂ ಬರೆಯಬೇಕೆಂಬ ಉತ್ಸಾಹ ಕವಿಗಿದೆ.
ಹನ್ನೆರಡನೆಯ ಶತಮಾನದ ಸಮಾಜೋದ್ಧಾರ್ಮಿಕ ಕ್ರಾಂತಿ ಕೈಗೊಂಡ ಬಸವಣ್ಣ ಲಿಂಗಾಯತ ಧರ್ಮಕ್ಕೆ ಅಡಿಪಾಯ ಹಾಕಿದ. ವೀರಶೈವದ ಮೂಲಕ ಲಿಂಗಾಯತರು ಒತ್ತು ನೀಡಿ ಮಾದರಸ-ಮಾದಲಾಂಬಿಕೆಯ ಮಗನಾಗಿ ಬಸವಣ್ಣ ಹೊರಬಂದು ಶಿವ ಗುರು
ಅಕೊಳ್ಳಬೇಕು ಎಂದನೆ ನಾವುಗಳು
ಮೇಲು ಕೀಳು ತಾರತಮ್ಯವೆಲ್ಲ ಬ್ರಿಟಿಷರ ವಿರುದ್ಧ ಹೋರಾಡಿ ಗಾಂಧಿ ರಾಷ್ಟ್ರಪಿತನಾದನು. ಇವತ್ತಿನ ಪ್ರಚಲಿತ ಘಟನೆ ಕೋವಿಡ್-19 ಕೊರೋನಾ ವೈರಸ್‌ದಿಂದಾಗಿ ಇಡೀ ದೇಶ-ವಿಶ್ವವೇ ತತ್ತರಿಸಿ ಹೋಗಿದೆ. ಪರಿಸರ ತನ್ನನ್ನೇ ತಾನು ಕಾಪಾಡಿಕೊಳ್ಳುತ್ತದೆ. ಇಲ್ಲಿ ತುಂಬಿದ ಪಾಪವು ಸೃಷ್ಟಿಯಲ್ಲಿ ಆಗುವ ಏರುಪೇರು ಸಂದಿಗ್ಧತೆ ಎಲ್ಲವನ್ನು ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಇದು ವಾಸ್ತವವೂ ಹೌದು. ಸದ್ದಿಲ್ಲದೆ ಯುದ್ಧ ಬಾಂಬು ಶಸ್ತ್ರಾಸ್ತ್ರವಿಲ್ಲದೆ ನಡೆಯುತಿದೆ. ಇದಕ್ಕೆಲ್ಲ ಕಂಡ ಕವಿ ಎಲ್ಲರಿಗೂ ಬುದ್ದಿ ಬಂದಿದೆ. ಮಾನವ ಹುಟ್ಟಿದ್ದು ಸಾರ್ಥಕವಾಗಬೇಕಾದರೆ ಕೊರೋನಾ ಓಡಿಸುವೆ ಎಂದಿದ್ದಾರೆ.
ಇದೊಂದು ವೈದ್ಯಕೀಯ ಲೋಕ ವಿಸ್ಮಿತವಾಗಿದೆ. ಪ್ರಪಂಚದ ದೊಡ್ಡವರು ಸಹ ನಲುಗಿ ಹೋಗಿದ್ದಾರೆ. ವಿಜ್ಞಾನ ತಂತ್ರಜ್ಞಾನಗಳು ನಿಂತುಹೋಗಿವೆ. ದೇವರು-ಧರ್ಮಗಳು ಬಾಗಿಲು ಮುಚ್ಚಿ ಕೀಲಿಹಾಕಿವೆ. ಇದೆಂತಹ ದೊಡ್ಡ ದುರಂತ ಇಲ್ಲಿ ನಡೆದಿದೆ. ಕಣ್ಣಿಗೆ ಕಾಣದ ವೈರಸ್ ಇದಕ್ಕೆ
ಮಾಸ್ಕ್ ಧರಿಸಿ, ಸ್ಯಾನಿಟೈಜರ್ ಬಳಸೋಣ
ಕೈತೊಳೆದು ಸ್ವಚ್ಛತೆ ಅಂತರ ಕಾಪಾಡೋಣ
ಎಲ್ಲರೂ ಮನೆಯಲ್ಲಿಯೇ ಇರೋಣ
ಸರ್ಕಾರದ ನಿಯಮ ಪಾಲಿಸೋಣ.
ಎಂದು ಕವಿ ಆಶಯವಿದೆ. ಕನ್ನಡ ನಾಡು ನುಡಿಯ ಭಾಷೆಯ ಬಗ್ಗೆ
ಅವರ ಶ್ರೀಮಂತಿಕೆಯ ಕುರಿತು ಗಂಭೀರವಾಗಿ ಕವಿ ನೋಡಿದ್ದಾರೆ. ಕನ್ನಡ ಕಸ್ತೂರಿ ಕನ್ನಡ ವೀರ, ಶೂರ, ಶೌರ್, ಸಂತ, ಶರಣ, ಕವಿಗಳ ನಾಡು, ಬೇವು ಗುಬ್ಬಿ ಪವಾಡಗಳಿಂದ, ಹಳ್ಳಕೊಳ್ಳಗಳ ನಾಡು. ಕೋಗಿಲೆ ಕಂಠ ಸಂಗೀತ ನಾಟ್ಯವ, ಹಲವು ಭಾಷೆ ಅನೇಕ ಧರ್ಮಗಳ ಕವಿಯಾದ ನಾಡು ನಮ್ಮದೆಂದು ಹೇಳಿದ್ದಾರೆ. ಕನ್ನಡದ ಬಗ್ಗೆ ಮುಕ್ತ ಕಂಠ ಸ್ವಾಭಿಮಾನ, ಆಭಿಮಾನದಿಂದ ಹಾಡಿದ್ದಾರೆ.
ತಾಯಿ ಕುರಿತು ಎಲ್ಲಾ ಕವಿಗಳು ತಮ್ಮ ಕವನ ಬರೆದಿದ್ದಾರೆ. ಇದರಲ್ಲಿ ಪ್ರತಿಯೊಬ್ಬರು ತಮ್ಮದೇ ನೆಲೆಗಳಲ್ಲಿ ಕವನ ಬರೆದಿದ್ದಾರೆ. ಇದು ಸಹಜವೂ ಆಗಿದೆ. ಆದರೆ ಆ ಕವನ ಎಲ್ಲರೂ ಹಾಡಿದಾಗ ಅದು ಪ್ರತಿಯೊಬ್ಬರ ತಾಯಿ ಕವನವಾಗುವುದು. ಅಷ್ಟೊಂದು ಪ್ರೀತಿ
ಗೌರವದ ಸಂಕೇತವನ್ನು ನಾವಿಲ್ಲಿ ನೋಡುತ್ತೇವೆ. ಮನೋಹರ ಸಹಿತ ಇಲ್ಲಿ ತಮ್ಮ ತಾಯಿ ಉಸಿರು ಕೊಡದಿದ್ದರೆ ನಾನು ಇರುತ್ತಿರಲಿಲ್ಲ. ಈ ಜಗತ್ತಿನಲ್ಲಿ ನನ್ನ ಹೆಸರು ಕೊಟ್ಟಿ, ಒಂಭತ್ತು ತಿಂಗಳು ಹೊತ್ತು, ಹೆತ್ತು ಸಾಕಿ, ಸಲುಹಿ ಎಷ್ಟೊಂದು ನೋವು ಅನುಭವಿಸಿ ಜ್ಞಾನ ನೀಡಿದೆ ದೇವತೆಯಾದೆ. ಸಂಸಾರದಲ್ಲಿ ಸೋತಾಗ ನೀ ಬಳಲಿದ ಸಂಕಟ ನಾನು ಕಂಡಿರುವೆ ನಿನ್ನ ಜೀವ ನನಗೆ ಹಾಗೇ ತೇಯ್ದೆ ಎಂದು ಹೇಳುತ್ತಲೇ
ಅವ್ವನ ಋಣಭಾರ ತೀರಿಸಲಾಗದು
ಕೋಟಿ ಕೋಟಿ ದುಡ್ಡು ಕೊಟ್ಟರೂ ಸಾಲದು
ತಾಯಿ ಪ್ರೀತಿಗೆ ಇಲ್ಲ ಸರಿಸಾಟಿ ಯ್ಯಾರು
ಬೆಲೆ ಕಟ್ಟಲಾಗದ ತಾಯಿ ನಮ್ಮ ದೇವರು.
ಎಂದು ಅವ್ವನ ಋಣ ತೀರಿಸಲಾಗದು. ಏನೇ ಕೊಟ್ಟರೂ ಬೆಲೆ ಕಟ್ಟಲಾಗದ ಆಸ್ತಿ ತಾಯಿ ದೇವರು. ಇಂದು ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ತಂದೆ-ತಾಯಿಯರು ಮಕ್ಕಳು ನೋಡದ ಅಂತವರೆಲ್ಲರೂ ತಾಯಿ ಮಮತೆ, ಗುಣ ತಿಳಿದುಕೊಳ್ಳಬೇಕಾದರೆ ಇಂತಹ ಕವನ ಓದಿ ತಿಳಿದುಕೊಳ್ಳಬೇಕು. ತಾಯಿ ಕೇವಲ ಹಡೆದ ತಾಯಿ ಆಗಿರದೇ ನಿಸರ್ಗಕ್ಕೆ ಭೂಮಿಯೂ ಕೂಡಾ ಭೂತಾಯಿ, ಅದರಂತೆ ನಾವು ವಾಸಿಸುವ ನೆಲ ಕನ್ನಡ, ಇಲ್ಲಿಯ ಸಾಹಿತ್ಯ ಸಂಸ್ಕೃತಿ ಕೂಡಾ ಭೂತಾಯಿ ಕನ್ನಡದವಳು ಕೂಡಾ ನಮಗೆ ತಾಯಿ. ಒಂದೆಡೆ ತಾಯಿಯ ಪ್ರೀತಿ ಇದ್ದರೆ, ಮತ್ತೊಂದೆಡೆ ತನ್ನ ತಾಯಿ ಕಲಬುರಗಿಯಲ್ಲಿ ಫೆಬ್ರುವರಿ 5,6,7-2020ರ ಮೂರು ದಿನಗಳ ಕಾಲ ನಡೆದ ಎಂಭತ್ತೈದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೊತ್ತಿಗೆ ಅವರ ತಾಯಿ ನಿಧನ ಹೊಂದಿದ್ದು. ಒಂದೆಡೆ ಕನ್ನಡಮ್ಮನ ಅಕ್ಷರಜಾತ್ರೆ, ಇನ್ನೊಂದೆಡೆ ಹುಟ್ಟಿಸಿದ ತಾಯಿ ಅಂತ್ಯ ಇವರೆಡನ್ನು ಬೆಸೆದು 'ನುಡಿಜಾತ್ರೆ ನನ್ನವ್ವನ ಕೊನೆಯಾತ್ರೆ' ಕವನದಲ್ಲಿ ಸಾದಾರಪಡಿಸಿದ್ದಾರೆ.
ನಾನೇಕೆ ಸಿಟ್ಟಾಗಲಿ ಎಂದು ಪ್ರಕೃತಿಯ ಚಿಂತನೆ ನಾವಿಲ್ಲಿ ಕಾಣುತ್ತೇವೆ. 'ಕವಿ ನೀ ಮುನಿದರೆ ಎಲ್ಲವೂ ನಾಶ ನೀ ಒಲಿದರೆ ಸ್ವರ್ಗ' ಎಂಬಂತೆ ವಿಕೋಪಕ್ಕೂ ಗುರಿಯಾದರು. 'ಮಣ್ಣಲಿಯೇ ಮಣ್ಣಾಗಿದ್ದು ನಾವು ಒಂದಾಗುತ್ತೇವಲ್ಲ' ಎಂಬ ಧ್ವನಿ ಪ್ರಕೃತಿಯೊಳಗೆ ಒಂದಾಗಿ ಲೀನವಾಗಲು ಇವರು ಸಜ್ಜಾಗಿದ್ದಾರೆ. ಜೀವನವು ಒಂದು ಸಂತೆ ಅದರೊಳಗೆ ನಾವೆಲ್ಲ ಬದುಕಿ ನಲಿಯಬೇಕು. ನಾವು ಚಿಂತಿಸುತ್ತಾ ಹೋದರೆ ಚಿತೆಯಾಗುತ್ತದೆ. ಜೀವಂತ ನೆಲ ಚಿತ್ರಣ ಸಂಸಾರದ ಚಿಂತೆ ಕವನ ಪ್ರತಿಬಿಂಬಿಸಿದೆ. ಈ ಜೀವನದಲ್ಲಿ ನಾವು ಜೀವ ತೆತ್ತಿದ್ದೇವು. ಇದನ್ನು ತುಂಬಾ ಸೊಗಸಾಗಿ ಕಳೆಯಬೇಕು. ಕೈಗೊಂಬೆಗಳು, ನಾವು ಬಂದದ್ದಲ್ಲಿ ಆಕಸ್ಮಿಕ ಇರುವಷ್ಟು ಕಾಲ ಒಳ್ಳೆಯ ರೀತಿಯಿಂದ ಕಳೆದು ಹೋಗಬೇಕು ಎಂಬ ಕೈಗೊಂಬೆ ಕವನ ಬಿತ್ತರಿಸಿದೆ. ನಾವೆಲ್ಲ ಹಾದಿ ಹೆಣವಾಗುವುದು ಬೇಡ ಎನ್ನುವಲ್ಲಿ ಕವಿಯ ತತ್ವಸಿದ್ಧಾಂತ ಅಡಗಿದೆ. ಇನ್ನೊಬ್ಬರಿಗೆ ನೋಯಿಸದೇ ನಾವು ಶ್ರಮವಹಿಸಿ ಜೀವಿಸಬೇಕೆಂಬ ನೀತಿ ಸಾರುವ ಕವನ.
ಇಲ್ಲಿ ಕವಿ ಪ್ರೀತಿ-ಪ್ರೇಮ ಒತ್ತಾಸೆಗಳು ಇಲ್ಲಿ ಟಿಸಿಲೊಡೆದು ಬಂದಿವೆ. ಮತ್ತೊಂದು ಊರು ಕವನ ಪ್ರೀತಿಸುವ ಪ್ರೇಯಸಿ-ಪ್ರಿಯಕರ, ಗಂಡ-ಹೆಂಡತಿ ಯಾರೇ ಆಗಲಿ ನಾವೆಲ್ಲ ತಂದು ಇಲ್ಲಿ ಎಷ್ಟೋ ಕಳೆದರು. ನಮಗಾಗಿ ಸಾವು ಬಲವಾಗಿ ಕಾಡುತ್ತಿದೆ. ಇದು ಎಷ್ಟು ಪ್ರೀತಿಯಿಂದ ಇರೋಣವೆಂಬ ಆಶಯ ಇಲ್ಲಿದೆ. ಇಲ್ಲಿ ಮತ್ತೆ ಕವಿ ಪ್ರೀತಿ-ಪ್ರೇಮದ ಜೊತೆಗೆ ಜೀವನ ಇರಲಿ, ಸ್ವಲ್ಪ ಜ್ಞಾಕಿ ಎಂದು ಎಚ್ಚರಿಸಿದ್ದಾರೆ. ಪ್ರೀತಿಯ ಹುಚ್ಚು ಹಿಡಿಸಿದ ಗೆಳತಿಗೆ ಮರೆತೆನೆಂದರೆ ಮರೆಯಲಿ ಹ್ಯಾಂಗ, ನೀಲಾಂಬರಿ, ಪ್ರೇಮ ಬರಹ, ಇವು ಪ್ರೀತಿ-ಪ್ರೇಮದ ಬದುಕಿನ ದಾರಿಗಳು ಮಳೆ, ಚಳಿ, ಬೆಳೆಗಳ ಕುರಿತಾದ ಸೊಗಸಾದ ಪದ್ಯಗಳು ಇಲ್ಲಿವೆ. ಜೀವನ ಬೇಸರವೆಂದರೆ ಬಾಳು ಶೂನ್ಯವಾಗುತ್ತದೆ. ಅದರಲ್ಲಿ ಹೊಸದನ್ನು ತರಬೇಕು, ಮೆಟ್ಟಿನಿಲ್ಲಬೇಕು. ಯಾವ ಜನ್ಮದ ಮೈತ್ರಿ ಕವನ ಕೊನೆಗೆ ವಿಷಾದ ಛಾಯೆಯಿದೆ. ತನ್ನ ಪ್ರೀತಿಸಿ ಬಿಟ್ಟಿರಬಾರದೆ ಒಂದು ಕ್ಷಣ ಕಳೆಯುವ ಗೆಳತಿ 'ಬೇರೊಬ್ಬನಿಗೆ ಕೊರಳು ಕೊಟ್ಟು ಸತ್ತು ನನ್ನ ಸಾಯಿಸಿದೆಲ್ಲ' ನೀನು ಸತ್ತು ನನಗೂ ಸತ್ತು ಹೊಡೆದೆ ಎಂಬ ವಿಷಾದತೆಯಿದೆ.
ಮನೋಹರ ಅವರು ಒಬ್ಬ ತಂದೆಯಾಗಿ ಈ ಜಗತ್ತಿಗೆ ಏನು ಕೊಡಬೇಕು ಎಂದು ಯೋಚಿಸುತ್ತಾರೆ. 'ವರದ ಮಗು' ಎಂಬ ಕವನ ರಚಿಸಿದ್ದಾರೆ. ತನ್ನ ಮಗು ಏನೇನು ಆಗಬೇಕು ಭಾರತೀಯ ಸಂಸ್ಕೃತಿಯಲ್ಲಿ ಅಡಗಿದ ತತ್ವಸಿದ್ಧಾಂತ, ಮಹಾತ್ಮರು ಚಿಂತಕರ
ವಿಚಾರಧಾರೆ ಅರಿತು ಅಂತಹ ಮಗು ಹುಟ್ಟಬೇಕು ಅವನೇ ವರದ ಮಗನಾಗಲಿ ಎಂದು ಯೋಚಿಸಿದ್ದಾರೆ. ಇದು ಎಲ್ಲಾ ತಾಯಿ-ತಂದೆಯರ ಆಶಯವಾಗಬೇಕು. ಇಲ್ಲಿಯ ಕವನಗಳು ಎಲ್ಲಾ ಆಶಯಗಳಿವೆ. ಪ್ರಾಸವನ್ನು ಬಳಸಿಕೊಂಡು ನಾಲ್ಕು ನಾಲ್ಕು ಸಾಲುಗಳ ಒಂದೊಂದು ನುಡಿಗಳ ಎಲ್ಲಾ ವಿಚಾರ ತಂದಿದ್ದಾರೆ. ಅವರ ಸಹಜವಾದ ನಿಲುವಿಗೆ ತಕ್ಕಂತೆ ಕವನ ರಚಿಸಿದ್ದಾರೆ. ಭಾಷೆ ಸರಳ, ನಿರೂಪಣೆಯಲ್ಲಿ ಕುತೂಹಲವಿದೆ. ವಸ್ತು ವೈವಿದ್ಯತೆ ಕವನ ನೀತಿ ಜೀವನಕ್ಕೆ ಒಂದು ಹೊಸ ಮಾರ್ಗ ತೋರಿಸಲು ಕಾವ್ಯದ ಮೂಲಕ ಹೊರಹಾಕಿದ್ದಾರೆ. '
ಪ್ರಕೃತಿ: ಅವರ ಮೂರನೆಯ ಕವನ ಸಂಕಲನದಲ್ಲಿ ೪೭ ಕವನಗಳಿವೆ.ಮನುಕುಲದ ಒಳಿತಿಗೆ ಪರಿಸರ ಮುಖ್ಯವೆಂದು ಅರಿತವರು.ಪ್ರೇಮಾಮೃತ ಅಡಗಿವೆ. ಚನ್ನಣ್ಣ,ಬಂಧು,ಹೊಸಮನಿ ಮೊದಲಾದವರ ವ್ಯಕ್ತಿ ಚಿತ್ರಣ ಕವನಗಳು ಪ್ರೇರಣೆ. ಸಾಮಾಜಿಕ ತುಡಿತ ಅವರ ಕವನಗಳಲ್ಲಿವೆ.ನೆಲದ ನಿಧಾನ, ಕರೋನಾ ಮೊದಲಾದ ಕವಿತೆಗಳು ಭರವಸೆ ನೀಡಿವೆ.
'ಜ್ಞಾನದ ಶಿಖರ ಒಲುಮೆಯ ಸಾಕಾರ
ಮಕ್ಕಳಂತಹ ಮೃದು ಮನಸ್ಸುಳ್ಳ ರಾಮೇಶ್ವರ
ಸಾಹಿತ್ಯ ಲೋಕಕ್ಕೆ ಇವರ ಕೊಡುಗೆ ಅಪಾರ ಮಕ್ಕಳ ಕವಿಯೆಂದೇ ಪ್ರಸಿದ್ಧವಾಗಿದೆ ಇವರ ಹೆಸರ” -ಎಂಬ ಎ.ಕೆ.ರಾಮೇಶ್ವರ ಅವರ ಕುರಿತು ಕವನ ಗಮನ ಸೆಳೆದಿವೆ.
ಜನ್ಮ ಗ್ರಂಥ:
ಕಾದಂಬರಿ 2018 ರಲ್ಲಿ ಪ್ರಕಟವಾಗಿದೆ.ಇದೊಂದು ಆತ್ಮಕಥನಾತ್ಮಕ ಕಾದಂಬರಿ.ಬದುಕಿನ ಬಡತನ,ಅನಕ್ಷರಸ್ಥ
ಜೀವಭಯ,ಸಾಮಾಜಿಕ, ಧಾರ್ಮಿಕ, ಹಳ್ಳಿ ಪರಿಸರ, ಮುಂತಾದ ವಿಷಯ ವಸ್ತು ಕಾದಂಬರಿಕಾರನ ಆತ್ಮ ಚರಿತ್ರೆ ಈ ಕಾದಂಬರಿ.
ಕಥಾ ಸಾಹಿತ್ಯ:
ಇವುಗಳು ಸಹ ತಮ್ಮ ಅನುಭವದ ಹಾಗೂ ಸುತ್ತ ಮುತ್ತ ನಡೆದ ಘಟನಾವಳಿಗಳ ಕಥಾ ರೂಪ ಪಡೆದಿವೆ.ಐದು ಕಥೆಗಳಿವೆ.ವಿವಾಹ ವಿಚ್ಛೇದನ ಹೊಂದಿದ
ರಾಜು ಮತ್ತು ರಾಜಶ್ರೀಯ ದಂಪತಿಗಳ ಸಣ್ಣ ಮನಸ್ತಾಪ
ಈ ಹಂತ ತಲುಪಿತು.ಮುಂದೆ ಮನಪರಿವರ್ತನೆಯಾಗಿ ವಕೀಲರ ಮೂಲಕ ಹೊಸ ಜೀವನನಡೆಸುವರು.
ಅವ್ವ ಮತ್ತೆ ನಡೆದಳು ಕಥೆ: ಹಳ್ಳಿ ಜೀವನದ ಮೌಢ್ಯತೆ,ಅಂಧಕಾರ,ಅಸಮಾನತೆ ಮೂಲಕ ಪ್ರಾಣಿ ಬಲಿ ಕೊಡುವ ಮೂಲಕ ಎದುರಾದ ಸಮಸ್ಯೆ ಮೊಮ್ಮಗ ಸತೀಶ್ ನ ಪ್ರಭಾವದಿಂದ ಮನ ಬದಲಾಯಿಸಿ ಕೊಂಡು ನಡೆದ ಜೀವನವೇ ಅವ್ವ ಮತ್ತೆ ನಡೆದಳು.
ಚೆಲುವೆಯ ಚೆಕ್ಕಾಟ:ಪ್ರವಾಸದಲ್ಲಿ ಪರಿಚಯವಾದವಳು,
ಆಶ್ರಯದಾತರನ್ನು ಅಲಕ್ಷಿಸಬೇಡ, ಮೊದಲಾದ ಕಥೆಗಳು
ಸಮಾಜದ ಸಮಸ್ಯೆ, ಸವಾಲುಗಳ ಮೇಲೆ ಹಾದು ಹೋಗುವವು.ಪರಿವರ್ತನೆ ಎಲ್ಲಾ ಕಥೆಗಳು ಸಹ ಪರಿವರ್ತನೆ ಯಿಂದ ಕೂಡಿವೆ.ವಸ್ತು, ಪಾತ್ರಗಳು, ಸಂಭಾಷಣೆ, ಭಾಷೆ ಮೂಲಕ ಸಹ ಮಧ್ಯಮ ಕಥೆಗಳಾಗಿವೆ.
ಮುತ್ತುಗಳ ಸುತ್ತ: ಇಲ್ಲಿ ಅನೇಕ ಮನಸ್ಸಿಗೆ ಮುದ ನೀಡುವ
ಮುತ್ತುಗಳು.ಇವು ಸುತ್ತ ಮುತ್ತಲಿನ ಜನ ಮಾನಸದ ನುಡಿ ಮುತ್ತುಗಳು ಓದಿಸಿಕೊಂಡು ಮನ ಶುದ್ದ್ಇಗಾಗಿ ಇರುವ ಕೈಪಿಡಿಗಳು.
ಇವರು ಅನೇಕ ಸಾಮಾಜಿಕ, ಧಾರ್ಮಿಕ, ಸಾಹಿತ್ಯ
ಸಾಂಸ್ಕೃತಿಕ, ನಾಡು,ನುಡಿ, ಭಾಷೆ,ನೆಲ.ಜಲ,ಸಂಸ್ಕೃತಿ ಮೊದಲಾದ ಸಂಘ ಸಂಸ್ಥೆಗಳೊಂದಿಗೆ ಒಡನಾಟ ಹೊಂದಿರುವರು.ಬಸವಪುರಸ್ಕಾರ,ವಿಶ್ವ ಕನ್ನಡಿಗರ ಪ್ರಶಸ್ತಿ, ಡಾ.ಶರಣಬಸಪ್ಪ ಅಪ್ಪಾ ದಾಸೋಹ ಪ್ರಶಸ್ತಿ ಲಭಿಸಿವೆ.
ಸದಾ ಗುರುಭಕ್ತಿ ಅಪಾರವಾಗಿದೆ.ಬಂಧು ಅವರ ಸಿದ್ಧಾರ್ಥ ಪ್ರಕಾಶನದ ಮೂಲಕ ಅವರ ಕೃತಿಗಳು ಪ್ರಕಟವಾಗಿವೆ. ಸರಳ,ಸೌಜನ್ಯ, ವಿನಯಶೀಲತೆ,ಸೌಮ್ಯ ಸ್ವಭಾವದ ಕವಿ- ಲೇಖಕ ಮನೋಹರ ಮರಗುತ್ತಿ ಅಪರೂಪದ ವ್ಯಕ್ತಿ.
ಅವರಿಂದ ಇನ್ನು ಹೆಚ್ಚಿನ ಕೃತಿಗಳು; ಸಾಹಿತ್ಯ ಕ್ಷೇತ್ರದಲ್ಲಿ ಬರಲಿ ಎಂದು ಹಾರೈಸುವೆ.
ಲೇಖಕರು: ಡಾ.ಗವಿಸಿದ್ಧಪ್ಪ ಎಚ್.ಪಾಟೀಲ, ಸಾಹಿತಿ,ಕಲಬುರಗಿ
