ಯಾದಗಿರಿ ಜಿಲ್ಲೆಯನ್ನು ಹಸಿ ಬರಗಾಲ ಜಿಲ್ಲೆ ಎಂದು ಘೋಷಿಸಿ –ರೈತ ಸಂಘ ಒತ್ತಾಯ
ಯಾದಗಿರಿ ಜಿಲ್ಲೆಯನ್ನು ಹಸಿ ಬರಗಾಲ ಜಿಲ್ಲೆ ಎಂದು ಘೋಷಿಸಿ – ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಒತ್ತಾಯ
ಯಾದಗಿರಿ, ಅ.28:ಕರ್ನಾಟಕ ರಾಜ್ಯ ರೈತ ಸಂಘ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಈ ಮನವಿಯಲ್ಲಿ ಜಿಲ್ಲೆಯಲ್ಲಿ ಅತಿಮಳೆಯ ಪರಿಣಾಮವಾಗಿ ಹತ್ತಿ, ತೊಗರಿ, ಭತ್ತ, ಶೇಂಗಾ ಸೇರಿದಂತೆ ಎಲ್ಲಾ ಪ್ರಮುಖ ಮುಂಗಾರು ಬೆಳೆಗಳು ನಾಶವಾಗಿರುವುದರಿಂದ ರೈತರ ಬದುಕು ಸಂಕಷ್ಟಕ್ಕೀಡಾಗಿದೆ ಎಂದು ತಿಳಿಸಲಾಗಿದೆ.
ರೈತರ ಜೀವನದ ಪರಿಸ್ಥಿತಿ ಗಂಭೀರವಾಗಿದ್ದು, ಯಾದಗಿರಿ ಜಿಲ್ಲೆಯನ್ನು ತಕ್ಷಣವೇ ಹಸಿ ಬರಗಾಲ ಜಿಲ್ಲೆಯಾಗಿ ಘೋಷಿಸಿ, ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ರೈತ ಸಂಘದ ಮುಖಂಡರು ಸರ್ಕಾರವನ್ನು ಒತ್ತಾಯಿಸಿದರು.
ಅಲ್ಪ ಪ್ರಮಾಣದಲ್ಲಿ ಉಳಿದಿರುವ ಬೆಳೆಗಳಿಗೆ ಸಹಾಯವಾಗುವಂತೆ ಹತ್ತಿ ಮತ್ತು ಭತ್ತ ಖರೀದಿ ಕೇಂದ್ರಗಳನ್ನು ತಕ್ಷಣ ತೆರೆಯಬೇಕು, ಜೊತೆಗೆ ಮಳೆಯಿಂದ ಹಾನಿಗೊಳಗಾದ ಹೊಲಗಳಿಗೆ ಸೂಕ್ತ ಪರಿಹಾರ ಮೊತ್ತ ನೀಡಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಜಿಲ್ಲಾ ಅಧ್ಯಕ್ಷ ಶರಣು ಮಂದಾರವಾಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಚಂದ್ರಕಲಾ ಬಾಗೂರು, ಜಿಲ್ಲಾ ಕಾರ್ಯದರ್ಶಿ ಮಲ್ಕಣ್ಣ ಚಿಂತಿ, ಗುರುಮಿಠಕಲ್ ತಾಲೂಕು ಅಧ್ಯಕ್ಷ ಭೀಮರಾಯ ಯಲ್ಹೇರಿ, ವಡಗೇರಾ ತಾಲೂಕು ಅಧ್ಯಕ್ಷ ಮಲ್ಲಣ್ಣ ನೀಲಹಳ್ಳಿ, ಶಹಾಪುರ ತಾಲೂಕು ಅಧ್ಯಕ್ಷ ಪ್ರಭಾಕರ್ ರೆಡ್ಡಿ ಸೇರಿದಂತೆ ಎಲ್ಲಾ ತಾಲೂಕು ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
ರೈತರ ಹಿತಕ್ಕಾಗಿ ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಒತ್ತಾಯ ವ್ಯಕ್ತವಾಯಿತು.
— ಕರ್ನಾಟಕ ರಾಜ್ಯ ರೈತ ಸಂಘ, ಯಾದಗಿರಿ ಜಿಲ್ಲಾ ಘಟಕ
