ರಕ್ತದಾನ ಶ್ರೇಷ್ಠ ದಾನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಲ್ಲಿ ಬೃಹತ್ ರಕ್ತದಾನ ಶಿಬಿರ
ರಕ್ತದಾನ ಶ್ರೇಷ್ಠ ದಾನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಕಲಬುರಗಿ,ಆ.12- ದಾನದಲ್ಲಿಯೇ ರಕ್ತದಾನ ಶ್ರೇಷ್ಠವಾಗಿದ್ದು, ಆರೋಗ್ಯವಂತ ಪ್ರತಿಯೊಬ್ಬ ವ್ಯಕ್ತಿ ರಕ್ತದಾನ ಮಾಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು.
ಕಲಬುರಗಿ ನಗರದ ವಿ.ಟಿ.ಯು. ಪ್ರಾದೇಶಿಕ ಕಚೇರಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕವು ಆಯೋಜಿಸಿದ ಜಿನೀವಾ ಒಪ್ಪಂದ ದಿನಾಚರಣೆ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಸಸಿಗೆ ನೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ರಸ್ತೆ ಅಪಘಾತ ಹೆಚ್ಚುತ್ತಿರುವುದರಿಂದ ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದೆ. ಹೀಗಾಗಿ ಎಲ್ಲೆಡೆ ಬ್ಲಡ್ ಬ್ಯಾಂಕ್‌ಗಳ ಜೊತೆಗೆ ರಕ್ತದಾನ ಶಿಬಿರ ಕಾರ್ಯಕ್ರಮವು ಹೆಚ್ಚಾಗಬೇಕಿದೆ ಎಂದರು.
ರಕ್ತದಾನ ಮಾಡುವುದರಿಂದ ಅಶಕ್ತರಾಗುವುದಿಲ್ಲ ಬದಲಾಗಿ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಗೆ ಜಾಗ ಮಾಡಿಕೊಡುತ್ತದೆ. ರಕ್ತ ಪಡೆಯುವ ವ್ಯಕ್ತಿ ರಕ್ತದಾನ ಮಾಡಿದ ವ್ಯಕ್ತಿಯನ್ನು ತನ್ನ ಜೀವ ಉಳಿಸಿದ ವ್ಯಕ್ತಿ ಎಂದು ತುಂಬಾ ಗೌರವದಿಂದ ಕಾಣುತ್ತಾನೆ. ರಕ್ತದಾನ ನಮ್ಮಲ್ಲಿ ಏಕತೆಯನ್ನು ಹೆಚ್ಚಿಸುತ್ತದೆ ಎಂದ ಅವರು ತಾವು ಸಹ 8 ಬಾರಿ ಮತ್ತು ತಮ್ಮ ಮಗ 54 ಬಾರಿ ರಕ್ತದಾನ ಮಾಡಿದ್ದಾನೆ ಎಂದರು.
ಕೋವಿಡ್ ಸಂದರ್ಭದಲ್ಲಿ ರಕ್ತದಾನದಿಂದ ಹಲವು ಜೀವಗಳು ಉಳಿದಿವೆ ಎಂದು ಸ್ಮರಿಸಿದ ಅವರು ರಕ್ತದಾನ ಮಹತ್ವ ಕುರಿತು ಜನರಿಗೆ ಅರಿವಾಗಿದೆ. ಪರಿಣಾಮ ಇಂದಿಲ್ಲಿ ಸುಮಾರು 175 ಜನ ರಕ್ತದಾನ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ದಾನಿಗಳಿಗೆ ಪ್ರಮಾಣ ಪತ್ರ ವಿತರಣೆ
ರಕ್ತದಾನ ಶಿಬಿರದಲ್ಲಿ ಸುಮಾರು 20 ವಿದ್ಯಾ ಸಂಸ್ಥೆಗಳ 175 ಜನ ರಕ್ತದಾನ ಮಾಡಿದರು. ಖುದ್ದು ರಕ್ತದಾನ ಮಾಡಿದ ಭಾಲ್ಕಿಯ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದೇವರು ಮತ್ತು ಕಲಬುರಗಿಯ ವಿವೇಕಾನಂದ ಆಶ್ರಮದ ಮಹೇಶ್ವರಾನಂದ ಮಹಾರಾಜರು ಸೇರಿದಂತೆ ರಕ್ತದಾನಿಗಳಿಗೆ ವಿತರಿಸಲು ಆಯಾ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಮಾಣ ಪತ್ರ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿ.ಟಿ.ಯು ಪ್ರಾದೇಶಿಕ ನಿರ್ದೇಶಕ ಬಸವರಾಜ ಗಾದಗೆ, ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯದ ಗೌರವ ಕಾರ್ಯದರ್ಶಿ ಬಸವರಾಜ ದೇಶಮುಖ ಸೇರಿದಂತೆ ಪಿ.ಜಿ.ಸೆಂಟರಿನ ಬೋಧಕ/ ಬೋಧಕೇತರ ವೃಂದದವರು ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಅರುಣಕುಮಾರ ಲೋಯಾ ಸ್ವಾಗತಿಸಿದರೆ, ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ವಂದಿಸಿದರು.