ಶರಣ ಸಾಹಿತ್ಯದಲ್ಲಿ ಅರ್ಥವ್ಯವಸ್ಥೆ
ಶರಣ ಸಾಹಿತ್ಯದಲ್ಲಿ ಅರ್ಥವ್ಯವಸ್ಥೆ
ಹನ್ನೆರಡನೆಯ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಮಗ್ರ ಕ್ರಾಂತಿ ವಿಶ್ವದ ಇತಿಹಾಸ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆಯುವಂತಿದೆ. ಈ ಕ್ರಾಂತಿ ಹೆಣ್ಣು, ಮಣ್ಣು, ಹೊನ್ನಿಗಾಗಿ ನಡೆಯದೇ ಅದು ಮಾನವನ ಪರಿಪೂರ್ಣ ಜೀವನ ಅಂದರೆ ಲೌಕಿಕ ಮತ್ತು ಪಾರಮಾರ್ಥಿಕ ಬದುಕು ಜೊತೆ ಜೊತೆಯಾಗಿ ನಡೆಸಿ, ಅನುಭವ ಮಂಟಪವೆಂಬ ಕುಲುಮೆಯಲ್ಲಿ ಮರ್ತ್ಯದ ಮನದ ಮೈಲಿಗೆ ಕಳೆದು, ತನು ಶುದ್ಧ, ಮನ ಶುದ್ಧ ಮತ್ತು ಭಾವ ಶುದ್ಧವಾಗಿ ಶಿವಸ್ವರೂಪಿಯನ್ನಾಗಿಸಿದರು. ಆಗಿನ ಕಾಲದ ಸ್ಥಾಪಿತ ಸಾಮಾಜಿಕ, ಧಾರ್ಮಿಕ ವಿಚಾರಗಳನ್ನು ಮತ್ತು ಸಂಪ್ರದಾಯವನ್ನು ವೈಚಾರಿಕ ನೆಲೆಯಲ್ಲಿ ಪ್ರಶ್ನಿಸಿ, ಪ್ರತಿಭಟಿಸಿ, ತಿರಸ್ಕರಿಸಿ, ಅದಕ್ಕೆ ಪರ್ಯಾಯ ಮಾರ್ಗವನ್ನು ಕೊಟ್ಟ ಶ್ರೇಯಸ್ಸು ಕಲ್ಯಾಣದ ಶರಣರಿಗೆ ಸಲ್ಲುತ್ತದೆ. ಶತ ಶತಮಾನಗಳಿಂದ ಬಂದ ಸಂಪ್ರದಾಯವೆಂಬ ಹೆಚ್ಚೇನು ಗೂಡಿಗೆ ಬಸವಾದಿ ಶರಣರು ಆತ್ಮವಿಶ್ವಾಸದಿಂದ ವೈಚಾರಿಕತೆಯ ಕಲ್ಲಿನಿಂದ ಉದ್ದೇಶ ಪೂರ್ವಕವಾಗಿಯೇ ಹೊಡೆದರು. ಕಲ್ಲು ಎಸೆಯುವಾಗ ಅದರ ಪರಿಣಾಮ ಏನೆಂಬುದೂ ಕೂಡ ಅವರಿಗೆ ತಿಳಿದಿತ್ತು. ಮತ್ತು ಅದನ್ನು ಅವರು ಸಮರ್ಪಕವಾಗಿ ಧೈರ್ಯದಿಂದ ಎದುರಿಸಿದರು. ಇದಕ್ಕೆ ಅವರ ಅಂತಃಶಕ್ತಿಯಾಗಿ ಆತ್ಮ ನಿರ್ಭರದ ಸ್ವಾಭಿಮಾನದ ಕಾಯಕದ ಬದುಕಾಗಿತ್ತು. ಮಾನವನ ಬದುಕಿಗೆ 'ಅರ್ಥ' ಅತ್ಯಂತ ಪ್ರಮುಖ ಅಂಶ. ಶರಣರ ಅರ್ಥ ವ್ಯವಸ್ಥೆಗೆ ಕಂಡುಕೊಂಡ ಕಾಯಕ ಬಹುಮುಖ್ಯ ಪಾತ್ರವಹಿಸುತ್ತದೆ. ಅರ್ಥ ಹಾಗೂ ಶರಣರ ಮನೋಭಾವವನ್ನು ಗಮನಿಸಿದ ಲೇಖಕಿ ಇದನ್ನು ಸದುವಿನಯವೇ ಸದಾಶಿವನ ಒಲುಮೆ; ಮೃದುವಚನಗಳೇ ಜಪತಪಂಗಳೆಂಬ ಶರಣರ ವಾಣಿ ತಮ್ಮ ಬದುಕಿನಲ್ಲಿ ಆಳವಡಿಸಿಕೊಂಡು, ಪ್ರಾಂಶುಪಾಲರಾದ ಸಹೋದರಿ ಶರಣೆ ಡಾ. ಪ್ರೇಮಾ ಅಪಚಂದ ಅವರು ತಾವು ಬರೆದ "ಶರಣ ಸಾಹಿತ್ಯದಲ್ಲಿ ಅರ್ಥವ್ಯವಸ್ಥೆ ಎಂಬ ಪುಸ್ತಕದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಪುಸ್ತಕ ಓದುತ್ತಾ ಹೋದಂತೆ ತಾನಾಗಿಯೇ ಪುಟಗಳು ತಿರುಗುತ್ತ ಹೋಗುತ್ತವೆ. ಅಷ್ಟರ ಮಟ್ಟಿಗೆ ಓದುಗರನ್ನು ಹಿಡಿದಿಡುವ ವಿಷಯ ಸಂಗ್ರಹ ಈ ಪುಸ್ತಕದಲ್ಲಿ ಮೂಡಿಬಂದಿದೆ.
ಈ ಪುಸ್ತಕವು ಕಲಬುರಗಿಯ ಬಸವ ಪ್ರಕಾಶನದಿಂದ 2020 ರಲ್ಲಿ ಪ್ರಕಟಗೊಂಡಿದ್ದು 108 ಪುಟಗಳನ್ನು ಹೊಂದಿರುವ ಪುಸ್ತಕದ ಬೆಲೆ 85 ರೂಪಾಯಿ ನಿಗದಿಪಡಿಸಲಾಗಿದೆ.
-ಡಾ. ಶರಣಬಸಪ್ಪ ವಡ್ಡನಕೇರಿ