ಪ್ರಭಾವಿಗಳ ಸೂಚನೆಯನ್ನು ಪಾಲಿಸಿದ ಎಸಿ : ಸದಸ್ಯರ ಆರೋಪ ಯಲ್ಲೇರಿ
ಪ್ರಭಾವಿಗಳ ಸೂಚನೆಯನ್ನು ಪಾಲಿಸಿದ ಎಸಿ : ಸದಸ್ಯರ ಆರೋಪ ಯಲ್ಲೇರಿ
(ಗುರುಮಠಕಲ್): ತಾಲ್ಲೂಕಿನ ಯಲ್ಲೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಶುಕ್ರವಾರ ನಡೆಸಿದ ಅವಿಶ್ವಾಸ ಮಂಡನೆಯ ಸಭೆಯಲ್ಲಿ ಸಹಾಯಕ ಆಯುಕ್ತರ ನಡೆಯ ವಿರುದ್ಧ ವ್ಯಾಪಕ ಆಕ್ರೋಶ ಮತ್ತು ಪ್ರಭಾವಿಗಳ ಸೂಚನೆಯಂತೆ ಕೆಲಸ ಮಾಡಿದ್ದಾರೆ ಎಂದು ಯಲ್ಲೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಕಣೇಕಲ್ ಅವರು ಆರೋಪಿಸಿದರು.
2023ರ ಅಗಸ್ಟ್ ನಲ್ಲಿ ಯಲ್ಲೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಸವರಾಜ ಕಣೇಕಲ್ ಮತ್ತು ಉಪಾಧ್ಯಕ್ಷೆಯಾಗಿ ಮಂಜುಶ್ರೀ ಆಯ್ಕೆಯಾಗಿದ್ದರು.
2024ರ ಡಿಸೆಂಬರ್ ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಸಹಾಯಕ ಆಯುಕ್ತರಿಗೆ ಅವಿಶ್ವಾಸ ಮಂಡನೆ ಕೋರಿ ಮನವಿ ಪತ್ರ ನೀಡಲಾಗಿತ್ತು. ಅದರಂತೆ ಸಹಾಯಕ ಆಯುಕ್ತರು 2025ರ ಜನೇವರಿ 10 (ಶುಕ್ರವಾರ)ರಂದು ಯಲ್ಲೇರಿ ಗ್ರಾಮ ಪಂಚಾಯಿತಿಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆಂದು ಮತಕ್ಕೆ ಹಾಕಿದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಕಣೇಕಲ್, ಉಪಾಧ್ಯಕ್ಷೆ ಮಂಜುಶ್ರೀ ಹಾಗೂ ಕೆಲ ಸದಸ್ಯರು ಗುಪ್ತಮತದಾನಕ್ಕೆ ಅವಕಾಶ ನೀಡುವಂತೆ ಸಹಾಯಕ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ. ಆದರೆ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ ಅವರು ಕೈ ಎತ್ತುವ ಮೂಲಕ ಮತ ನೀಡಲು ಸೂಚಿಸಿದ್ದಾರೆ.
ಗುಪ್ತ ಮತದಾನವೆಂದು ಅಧ್ಯಕ್ಷ, ಉಪಾಧ್ಯಕ್ಷೆ ಮತ್ತೆ ಕೆಲ ಸದಸ್ಯರು ಮತ್ತು ಕೈ ಎತ್ತುವಂತೆ ಸಹಾಯಕ ಆಯುಕ್ತರು ಪಟ್ಟು ಹಿಡಿದರು. ಕೆಲ ಕಾಲ ಇದೇ ಗೊಂದಲ ಮುಂದುವರೆದ ನಂತರ, ‘ಕೈ ಎತ್ತಿದ ಸದಸ್ಯರಿಂದ ಸಹಿ ಪಡೆದಿದ್ದಾಗಿ’, ಅದರಂತೆ ಸಭೆಯನ್ನು ಮುಕ್ತಾಯ ಮಾಡಿ ಸಹಾಯಕ ಆಯುಕ್ತರು ಪಂಚಾಯಿತಿಯಿಂದ ತೆರಳಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ನಿರ್ಣಯದ ವಿರುದ್ಧ ಕೋರ್ಟ್ ಮೊರೆ? :-ಯಲ್ಲೇರಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಅವಿಶ್ವಾಸ ನಿರ್ಣಯದ ಸಭೆಯಲ್ಲಿನ ಗೊತ್ತುವಳಿ ನಿರ್ಣಯದ ವಿರುದ್ಧ ಅಧ್ಯಕ್ಷ, ಉಪಾಧ್ಯಕ್ಷೆ ಕೋರ್ಟ್ ಮೊರೆ ಹೋಗುವ ಸುಳಿವು ನೀಡಿದ್ದಾರೆ.
ಇಂದು ನಡೆದ ಘಟನೆಯು ಯಾರೋ ಪ್ರಭಾವಿಗಳ ಸೂಚನೆಯನ್ನು ಎ.ಸಿ.ಯವರು ಪಾಲಿಸಿದಂತೆ ತೋರುತ್ತಿದೆ. ನಾವು ಎಷ್ಟು ಪಟ್ಟು ಹಿಡಿದರೂ ಸಹ ಅವರು ಗುಪ್ತ ಮತದಾನಕ್ಕೆ ಅವಕಾಶ ನೀಡಲೇ ಇಲ್ಲ. ಕೆಲವರಿಗೆ ಅನುಕೂಲ ಮಾಡಲು ಮತ್ತು ಯಾರದೋ ಪ್ರಭಾವದಿಂದ ಅವಿಶ್ವಾಸ ನಿರ್ಣಯದ ಸಭೆಯನ್ನು ನಡೆಸಿದ್ದು ಸರಿಯಲ್ಲ. ಇದಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಅಧ್ಯಕ್ಷ ಬಸವರಾಜ ಕಣೇಕಲ್ ಮತ್ತು ಉಪಾಧ್ಯಕ್ಷೆ ಮಂಜುಶ್ರೀ ಗೆ ತಿಳಿಸಿದರು.