ಕೋಲಿ ಸಮಾಜದ ಒಗ್ಗಟ್ಟು ಒಡೆಯಬೇಡಿ—ಭೀಮಣ್ಣ ಸಾಲಿ

ಕೋಲಿ ಸಮಾಜದ ಒಗ್ಗಟ್ಟು ಒಡೆಯಬೇಡಿ—ಭೀಮಣ್ಣ ಸಾಲಿ

ಕೋಲಿ ಸಮಾಜದ ಒಗ್ಗಟ್ಟು ಒಡೆಯಬೇಡಿ—ಭೀಮಣ್ಣ ಸಾಲಿ 

ಚಿತ್ತಾಪುರ:ಜಿಲ್ಲೆಯಲ್ಲಿ ಕೋಲಿ ಸಮಾಜದ ಸ್ವಯಂ ಘೋಷಿತ ಅಧ್ಯಕ್ಷರು ಬಹಳ ಜನರಿದ್ದಾರೆ. ಎಲ್ಲರೂ ಒಗ್ಗೂಡಿ ಸಮಾಜದ ಸಂಘಟನೆಗೆ ಶಕ್ತಿ ತುಂಬಬೇಕು. ಸಮಾಜದ ಒಗ್ಗಟ್ಟಿಗೆ ಧಕ್ಕೆಯುಂಟು ಮಾಡಿ ಸಮಾಜ ಒಡೆಯುವ ಕೆಲಸ ಯಾರೂ ಮಾಡಬಾರದು ಎಂದು ಕೋಲಿ ಸಮಾಜದ ಹಿರಿಯ ಮುಖಂಡ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಕೋಲಿ ಸಮಾಜದ ತಾಲೂಕು ಘಟಕ ಮತ್ತು ನಗರ ಘಟಕದ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿರಿಯರಾದವರು ಸಮಾಜದವರನ್ನು ಒಗ್ಗೂಡಿಸಬೇಕೆ ಹೊರತು ಒಡೆಯಬಾರದು. ಸಮಾಜಕ್ಕಾಗಿ ದುಡಿಯುವವರು ಬೇಕು. ಕೇವಲ ಹಣದಿಂದ ಸಮಾಜ ನಡೆಯುವುದಿಲ್ಲ ಎಂದರು.

ಪಕ್ಷಕ್ಕಿಂತ ಸಮಾಜ ಮುಖ್ಯ, ರಾಜಕೀಯ ವಿಷಯ ಬಂದಾಗ ರಾಜಕೀಯ ಮಾಡಿ. ಸಮಾಜದ ವಿಷಯದಲ್ಲಿ ಪಕ್ಷಪಾತ ಬದಿಗಿಟ್ಟು ಒಗ್ಗೂಡಬೇಕು. ಚಿತ್ತಾಪುರ ಕೋಲಿ ಸಮಾಜದ ಸಂಘಟನೆಯು ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ. ಪಕ್ಷಾತೀತವಾಗಿ ಸಮಾಜ ಸಂಘಟಿಸುವ ಕೆಲಸ ಎಲ್ಲರೂ ಮಾಡುತ್ತಿದ್ದಾರೆ. ಇದೆ ಒಗ್ಗಟ್ಟು ನಿರಂತರ ಕಾಪಾಡಿಕೊಂಡು ಮುಂದುವರೆಯಬೇಕು ಎಂದರು.

ಸಮಾಜದ ಯಾವುದೆ ಸಮಸ್ಯೆ, ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕು. ಸಂಘಟನೆ ಎಂದರೆ ಕೇವಲ ಅಧ್ಯಕ್ಷರಾದವರ ಜವಾಬ್ದಾರಿ ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬರು ಅವರಿಗೆ ಸಹಾಯ, ಸಹಕಾರ ಮಾಡಿ ಬೆಂಬಲಿಸಬೇಕು. ಅವರೊಂದಿಗೆ ಕೈಜೋಡಿಸಿ ಸಂಘಟನೆಗೆ ಮುಂದಾಗಬೇಕು ಎಂದರು.

ಮುಖಂಡ ಮಲ್ಲಿಕಾರ್ಜುನ ಎಮ್ಮೆನೋರ್ ಮಾತನಾಡಿ, ಜಿಲ್ಲೆಯಲ್ಲಿಯೆ ತಾಲೂಕು ಕೋಲಿ ಸಮಾಜದ ಸಂಘಟನೆ, ಒಗ್ಗಟ್ಟು, ಹೋರಾಟ ಹೆಸರುವಾಸಿಯಾಗಿದೆ. ಜಿಲ್ಲೆಯ ರಾಜಕಾರಣದ ಗತಿಯನ್ನೆ ಬದಲಾಯಿಸುವ ಶಕ್ತಿ ಸಮಾಜಕ್ಕಿದೆ. ಅಧ್ಯಕ್ಷರ ಆಯ್ಕೆ ಸಮಯದಲ್ಲಿ ಪೈಪೋಟಿ ಸಹಜ. ಪೈಪೋಟಿಯು ಸಮಾಜದ ಒಗ್ಗಟ್ಟು ಒಡೆಯಬಾರದು. ಸಮಾಜಕ್ಕಿಂತ ದೊಡ್ಡವರು ಯಾರು ಇಲ್ಲ. ಕತ್ತಲೆ ಕೋಣೆಯಲ್ಲಿ ಕುಳಿತು ಅಧ್ಯಕ್ಷರ ಆಯ್ಕೆ ಮಾಡಿಲ್ಲ. ಆಕಾಂಕ್ಷಿಗಳ ಒಪ್ಪಿಗೆ ಪಡೆದು ತುಂಬಿದ ಸಭೆಯಲ್ಲಿಯೆ ಘೋಷಣೆ ಮಾಡಲಾಗಿದೆ ಎಂದರು.

ಮುಖಂಡರಾದ ಬಸವರಾಜ ಚಿನ್ನಮಳ್ಳಿ, ಶರಣಪ್ಪ ನಾಶಿ, ಸುರೇಶ ಬೆನಕನಳ್ಳಿ, ಮೌನೇಶ ಭಂಕಲಗಾ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೋಲಿ ಸಮಾಜದ ಮಾಜಿ ಅಧ್ಯಕ್ಷ ರಾಮಲಿಂಗ ಬಾನರ, ಮಾಜಿ ಗೌರವಾಧ್ಯಕ್ಷ ಹಣಮಂತ ಸಂಕನೂರು, ನಗರ ಘಟಕದ ಮಾಜಿ ಅಧ್ಯಕ್ಷ ರಾಜೇಶ ಹೋಳಿಕಟ್ಟಿ ಮಾತನಾಡಿದರು.

ತಾಲೂಕು ಕೋಲಿ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿಂಗಣ್ಣ ಹೆಗಲೇರಿ, ನಗರ ಘಟಕದ ಅಧ್ಯಕ್ಷ ಪ್ರಭು ಹಲಕರ್ಟಿ ಅವರಿಗೆ ರಾಮಲಿಂಗ ಬಾನರ, ಹಣಮಂತ ಸಂಕನೂರು ಸನ್ಮಾನಿಸಿ ಕೋಲಿ ಸಮಾಜದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು. ಇದೆ ಸಂದರ್ಭದಲ್ಲಿ ಹಿರಿಯ ಮುಖಂಡ ಭೀಮಣ್ಣಾ ಸಾಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಮುಖಂಡರಾದ ವೆಂಕಟರಮಣ ಬೇವಿನಗಿಡ, ಬಸಣ್ಣಾ ತಳವಾರ, ಮುನಿಯಪ್ಪ ಕೊಳ್ಳಿ, ರಾಮು ನಾಟಿಕಾರ, ನಾಗರಾಜ ಜೈಗಂಗಾ, ಶರಣಪ್ಪ ಮಾಲಗತ್ತಿ, ಮಹಾದೇವ ಬೂನಿ, ರಾಮಲಿಂಗ ಅಲ್ಲೂರ್, ದುರ್ಜನಪ್ಪ ಅಲ್ಲೂರ, ಚಂದ್ರು ಕಾಳಗಿ, ಭೀಮರಾಯ ಅಂಬಾರ, ಕರಣಕುಮಾರ ಅಲ್ಲೂರ್, ಶರಣು ಡೋಣಗಾಂವ, ಸಾಬಣ್ಣ ಹೋಳಿಕಟ್ಟಿ, ದೇವು ದಿಗ್ಗಾಂವ, ಶರಣು ಸಿದ್ರಾಮಗೋಳ, ಸಾಬಣ್ಣಾ ಹಾಸಬಾ, ಚಂದ್ರಕಾಂತ ಜೀವಣಗಿ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೋಲಿ ಸಮಾಜದ ಮಾಜಿ ಪ್ರಧಾನ ಕಾರ್ಯದರ್ಶಿ ದೇವಿಂದ್ರ ಅರಣಕಲ್ ಸ್ವಾಗತಿಸಿ, ನಿರೂಪಿಸಿದರು.