ಈಡಿಗ ಸಮಾಜಕ್ಕೆ ನೀಡಿದ ಭರವಸೆ ಖರ್ಗೆ ಮರೆತರೆ?: ಡಾ. ಪ್ರಣವಾನಂದ ಶ್ರೀಗಳ ಪ್ರಶ್ನೆ
ಈಡಿಗ ಸಮಾಜಕ್ಕೆ ನೀಡಿದ ಭರವಸೆ ಖರ್ಗೆ ಮರೆತರೆ?: ಡಾ. ಪ್ರಣವಾನಂದ ಶ್ರೀಗಳ ಪ್ರಶ್ನೆ
ಕಲಬುರಗಿ : ಈಡಿಗ ಸಮಾಜದ ಬ್ರಹ್ಮಶ್ರೀ ನಾರಾಯಣ ಗುರು ನಿಗಮಕ್ಕೆ ಆರ್ಥಿಕ ನೆರವು ಸೇರಿದಂತೆ ಸಮುದಾಯಕ್ಕಾಗಿ ಎಲ್ಲಾ ಸೌಲಭ್ಯ ಒದಗಿಸಲಾಗುವುದು ಎಂದು ಈ ಹಿಂದೆ ವಿಪಕ್ಷ ಸ್ಥಾನದಲ್ಲಿದ್ದಾಗ ಪ್ರಿಯಾಂಕ ಖರ್ಗೆಯವರು ಕೊಟ್ಟ ಭರವಸೆಯನ್ನು ಈಗ ಮರೆತಿದ್ದಾರೆಯೆ ಎಂದು ಚಿತ್ತಾಪುರ ಕರದಾಳು ಬ್ರಹ್ಮಶ್ರೀ ನಾರಾಯಣ ಗುರುಪೀಠದ ಡಾ. ಪ್ರಣವಾನಂದ ಶ್ರೀಗಳು ಪ್ರಶ್ನಿಸಿದ್ದಾರೆ.
ಈಡಿಗ ಸಮಾಜದ ಬೇಡಿಕೆಗಳನ್ನು ಒತ್ತಾಯಿಸಿ ಚಿಂಚೋಳಿ ಯಿಂದ ಕಲಬುರಗಿ ತನಕದ ಪಾದಯಾತ್ರೆ ಸಂದರ್ಭದಲ್ಲಿ ವಿಪಕ್ಷ ಸ್ಥಾನದಲ್ಲಿದ್ದ ಪ್ರಿಯಾಂಕ ಖರ್ಗೆ ಹಾಗೂ ಡಾ. ಶರಣ್ ಪ್ರಕಾಶ್ ಪಾಟೀಲ್ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಈಡಿಗ, ಬಿಲ್ಲವ ,
ನಾಮಧಾರಿ ಸೇರಿದಂತೆ 26 ಪಂಗಡಗಳ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟಿದ್ದರಲ್ಲದೆ ನಿಗಮವನ್ನು ಸ್ಥಾಪಿಸಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗಾಗಲೇ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತಂದ ಈಡಿಗ ನಿಗಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದು ಎರಡು ಬಜೆಟ್ ಗಳನ್ನು ಮಂಡಿಸಿದರೂ ಒಂದು ನಯಾ ಪೈಸೆಯನ್ನು ನೀಡದೆ ಈ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಿಯಾಂಕ ಖರ್ಗೆ ಹಾಗೂ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಸಮುದಾಯದ ಬೇಡಿಕೆಗಳಿಗೆ ಯಾವುದೇ ರೀತಿಯ ಸ್ಪಂದನ ನೀಡದೆ ಈಗ ಮೌನವಾಗಿದ್ದಾರೆ. ಕನಿಷ್ಠ ಸೌಜನ್ಯಕ್ಕಾದರೂ ಮುಖ್ಯಮಂತ್ರಿಗಳ ಗಮನಕ್ಕೆ ತರಲು ನಿಯೋಗವನ್ನಾದರೂ ಕೊಂಡೊಯ್ದು ಗಮನ ಸೆಳೆಯಲು ಪ್ರಯತ್ನ ಮಾಡಲಿಲ್ಲ. ನಮ್ಮ ಸಮುದಾಯದಿಂದ ಆಯ್ಕೆಗೊಂಡ ಸುಮಾರು 9 ಜನ ಶಾಸಕರು ಕೂಡ ಸಮಾಜಕ್ಕಾಗಿ ಯಾವುದೇ ರೀತಿಯ ಸ್ಪಂದನೆಯನ್ನು ನೀಡುತ್ತಿಲ್ಲ. ಈಡಿಗ ಸಮುದಾಯಕ್ಕೆಇಬ್ಬರು ಸಚಿವರನ್ನು ನೀಡಬೇಕೆಂಬ ಬೇಡಿಕೆಯನ್ನು ಕಡೆಗಣಿಸಿ ಕೇವಲ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿದ್ದರೂ ಕೂಡ ಮಧು ಬಂಗಾರಪ್ಪ ಅವರು ಮೌನಿ ಬಾಬಾ ಆಗಿದ್ದಾರೆ. ಈ ರೀತಿ ಒಂದು ಸಮಾಜವನ್ನು ಕಡೆಗಣಿಸಿರುವುದು ಅಕ್ಷಮ್ಯ ಅಪರಾಧವಾಗಿದ್ದು ಕೂಡಲೇ ಈಡಿಗ ನಿಗಮಕ್ಕೆ ಐದು ನೂರು ಕೋಟಿ ರೂಪಾಯಿ ಅನುದಾನ ಘೋಷಣೆ, ಈ ಹಿಂದಿನ ಸರಕಾರ ಕುಲಶಾಸ್ತ್ರೀಯ ಅಧ್ಯಯನಕ್ಕೆ ಮೀಸಲಿರಿಸಿ 25 ಲಕ್ಷ ರೂ. ಮೈಸೂರು ವಿದ್ಯಾಲಯಕ್ಕೆ ನೀಡಿದ್ದು ಕೂಡಲೇ ಅಧ್ಯಯನವನ್ನು ಪ್ರಾರಂಭಿಸಬೇಕು, ಸೇಂದಿ ಕುಲಕಸುಬನ್ನು ಕಳೆದುಕೊಂಡ ಸಮುದಾಯದ ಜನರಿಗಾಗಿ ನೀರಾ ಇಳಿಸುವ ವ್ಯವಸ್ಥೆ ಅಥವಾ ನಿರ್ಗತಿಕರಾದವರಿಗೆ ಪ್ರತ್ಯೇಕ ಪುನರ್ವಸತಿ ಕಲ್ಪಿಸಬೇಕು, ವಿಧಾನಸೌಧದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆ ಸ್ಥಾಪನೆ ಮಾಡಲು ಮುಂದಾಗಬೇಕು. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಆರಂಭಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಪ್ರತಿ ವರ್ಷ 250 ಕೋಟಿ ರೂಪಾಯಿ ಈಟಿಗ ಬಿಲ್ಲವ ನಿಗಮಕ್ಕೆ ಘೋಷಣೆ ಮಾಡಿರುವುದನ್ನು ಕಾಂಗ್ರೆಸ್ ಮರೆತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರವು ಬೇಡಿಕೆ ಈಡೇರಿಸದಿದ್ದರೆ ಎರಡನೇ ಹಂತದ ಬೃಹತ್ ಹೋರಾಟಕ್ಕೆ ರೂಪುರೇಷೆ ನೀಡಲಾಗುವುದು ಎಂದು ಸ್ವಾಮೀಜಿಯವರು ಒತ್ತಾಯಿಸಿದರುಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಡಾ. ಶರಣ್ ಪ್ರಕಾಶ್ ಪಾಟೀಲ್ ಧರಣಿ ಸ್ಥಳಕ್ಕೆ ಭೇಟಿ ಮಾಡಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಹೇಳಿದ್ದರು ಆದರೆ ಈ ವರೆಗೆ ಅದು ಈಡೇರಲಿಲ್ಲ. ಈ ಬಗ್ಗೆ ಪ್ರಿಯಾಂಕ ಖರ್ಗೆ ಮತ್ತು ಶರಣ ಪ್ರಕಾಶ್ ಪಾಟೀಲ್ ಅವರು ಕೂಡಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಡಾ.ಪ್ರಣವಾನಂದ ಶ್ರೀಗಳು ಹೇಳಿದರು.
ಕೇರಳದ ಶ್ರೀಗಳು ದೇವಸ್ಥಾನದಲ್ಲಿ ಅಂಗೀಕರಿಸುವುದರ ಬಗ್ಗೆ ಹೇಳಿದ ಪ್ರತಿಕ್ರಿಯೆಗೆ ಕೇರಳದ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡುತ್ತಾ, ನಾರಾಯಣ ಗುರುಗಳು ಕ್ರಾಂತಿಕಾರಿ ಸಮಾಜ ಸುಧಾರ ಕನಾಗಿದ್ದು ವಿರೋಧಿ ಸನಾತನ ವಿರೋಧಿ ಗುರುಗಳಾಗಿದ್ದರು ಪುರುಷರು ದರ್ಶನದ ವೇಳೆ ಅಂಗಿ ತುತ್ತು ದೇವಸ್ಥಾನ ಪ್ರವೇಶಿಸುಬಹುದು ಎಂಬ ಹೇಳಿಕೆಯನ್ನು ಟೀಕಿಸಿ ಹಿಂದೂ ಧರ್ಮದ ಯಾವುದೇ ಆಚರಣೆಗಳ ಬಗ್ಗೆ ರಾಜಕೀಯದವರು ಮೂಗು ತೂರಿಸುವುದು ಸರಿಯಾದ ಕ್ರಮವಲ್ಲ ಇದನ್ನು ಖಂಡಿಸುತ್ತೇನೆ. ಹಿಂದೂ ಸಾಧುಸಂತರು ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಹೇಳಿದರು.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರ ಗ್ರಾಮದಲ್ಲಿರುವ ಶ್ರೀ ಶರಣಬಸವೇಶ್ವರ ಮಠದಲ್ಲಿ ಏಪ್ರಿಲ್ 28ರಂದು ಶ್ರೀ ಶರಣಬಸವೇಶ್ವರರ 40 ಮೂರ್ತಿಗಳ ಪ್ರತಿಷ್ಠಾಪನೆ, ಪ್ರತ್ಯಂಗೀರ ಹೋಮ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡುತ್ತ ಈ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಸಂಸ್ಥಾನದ ಒಂಬತ್ತನೇ ಪೀಠಾಧಿಪತಿಗಳಾದ ಚಿರಂಜೀವಿ ಪೂಜ್ಯ ದೊಡ್ಡಪ್ಪ ಅಪ್ಪ, ನೆಗಳೂರು ಸಂಸ್ಥಾನ ಹಿರೇಮಠದ ಶ್ರೀ ಗುರು ಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸಾಧುಸಂತರು, ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕಾಂಗ್ರೆಸ್ ಮಾಲಿಕಯ್ಯ ಗುತ್ತೇದಾರರಿಗೆ ಸೂಕ್ತ ಸ್ಥಾನಮಾನ ನೀಡಿ
ರಾಜ್ಯದ ಈಡಿಗ ಸಮುದಾಯದ ಹಿರಿಯ ನಾಯಕರು ಮಾಜಿ ಮಂತ್ರಿಗಳಾದ ಮಾಲಿಕಯ್ಯ ವಿ. ಗುತ್ತೇದಾರ್ ಅವರಿಗೆ ಕಾಂಗ್ರೆಸ್ ಸ್ಥಾನಮಾನಗಳ ಆಶ್ವಾಸನೆ ಕೊಟ್ಟು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿತ್ತು. ಆದರೆ ಈ ವರೆಗೆ ಅವರಿಗೆ ಯಾವುದೇ ಸ್ಥಾನಮಾನ ನೀಡದೆ ಇರುವುದು ಖಂಡನೀಯ. ಕೂಡಲೇ ಅವರಿಗೆ ಗೌರವಯುತಸ್ಥಾನ ನೀಡಿ ಹಿರಿತನಕ್ಕೆ ಬೆಲೆ ಕೊಡಬೇಕಾಗಿದೆ ಎಂದು ಡಾ. ಪ್ರಾಣಾನಂದ ಸ್ವಾಮೀಜಿ ಒತ್ತಾಯಿಸಿದರು
ಸಚಿನ್ ಪಾಂಚಾಳ ಪ್ರಕರಣಕ್ಕೆ ಸೂಕ್ತ ನ್ಯಾಯ ನೀಡಿ
ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣವನ್ನು ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ನ್ಯಾಯ ಒದಗಿಸಬೇಕು ಎಂದು ವಿಶ್ವಕರ್ಮ ಸಮಾಜದ ಶ್ರೀ ದೊಡ್ಡೇಂದ್ರ ಸ್ವಾಮೀಜಿಯವರು ಒತ್ತಾಯಿಸಿದರು
ರಾಜ್ಯದಲ್ಲಿ ದೊಡ್ಡ ಸುದ್ದಿಯಾದ ಈ ಘಟನೆಯಲ್ಲಿ ರಾಜಕೀಯ ಬೆಸೆಯದೆ ತನಿಖೆ ಕೈಗೊಂಡು ನ್ಯಾಯ ಕಲ್ಪಿಸಬೇಕು ಹಾಗೂ ಮೃತರ ಕುಟುಂಬಕ್ಕೆ ಉದ್ಯೋಗ ಹಾಗೂ ಹೆಚ್ಚಿನ ಪರಿಹಾರವನ್ನು ನೀಡಿ ಸರಕಾರ ರಕ್ಷಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು
ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ಈಡಿಗ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಎಂ ಕಡೇಚೂರ್, ಈಡಿಗ ಸಮಾಜದ ತಾಲೂಕ ಅಧ್ಯಕ್ಷ ಮಹೇಶ್ ಗುತ್ತೇದಾರ್, ಸಮಾಜ ಮುಖಂಡರಾದ ಡಾ. ಸದಾನಂದ ಪೆರ್ಲ, ಅಂಬಯ್ಯ ಗುತ್ತೇದಾರ್, ಶಿವಯ್ಯ ಪೇಟ ಶಿರೂರು, ಉಪಸ್ಥಿತರಿದ್ದರು.