ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರಕ್ಕೆ ಕುದ್ರೋಳಿ ಗಣೇಶ್ ಜಾದೂ ಸ್ಪರ್ಶ

ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರಕ್ಕೆ ಕುದ್ರೋಳಿ ಗಣೇಶ್ ಜಾದೂ ಸ್ಪರ್ಶ

ಭಾರತೀಯ ಸಂಸ್ಕೃತಿ ಉತ್ಸವ ಪ್ರಚಾರಕ್ಕೆ ಕುದ್ರೋಳಿ ಗಣೇಶ್ ಜಾದೂ ಸ್ಪರ್ಶ

ಕಲಬುರಗಿ : ಸೇಡಂನಲ್ಲಿ ಜನವರಿ 29 ರಿಂದ ಫೆಬ್ರವರಿ 6 ರವರೆಗೆ ನಡೆಯಲಿರುವ ಏಳನೇ ಭಾರತೀಯ ಸಂಸ್ಕೃತಿ ಉತ್ಸವದ ಪ್ರಚಾರ ಅಭಿಯಾನಕ್ಕೆ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಜನವರಿ ಮೂರರಿಂದ 12 ರವರೆಗೆ ಜಾಗೃತಿ ಅಭಿಯಾನ ಕೈಗೊಂಡಿದ್ದು ಬಸವಕಲ್ಯಾಣದಲ್ಲಿ ಶುಭಾರಂಭಗೊಂಡಿದೆ. 

   ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಒಟ್ಟು 20 ಕಡೆಗಳಲ್ಲಿ ಜಾಗೃತಿ ಜಾದೂ ಪ್ರದರ್ಶನ ಮಾಡುವುದರ ಮೂಲಕ ವಿನೂತನ ಪ್ರಚಾರ ಅಭಿಯಾನ ಕೈಗೊಳ್ಳಲು ಭಾರತೀಯ ಸಂಸ್ಕೃತಿ ಉತ್ಸವದ ಪ್ರಧಾನ ಸಂಯೋಜಕರಾದ ಬಸವರಾಜ ಪಾಟೀಲ್ ಸೇಡಂ ಸಂಕಲ್ಪ ಕೈಗೊಂಡಿದ್ದು ಅದರನ್ವಯ ಜನವರಿ 3 ರಂದು ಬಸವಕಲ್ಯಾಣದಲ್ಲಿ ಜಾಗೃತಿ ಜಾದೂ ಉದ್ಘಾಟನೆಗೊಂಡಿತು. ವಿಕಾಸ ಅಕಾಡೆಮಿಯ ಬೀದರ್ ಜಿಲ್ಲಾ ಸಂಚಾಲಕರಾದ ರೇವಣಸಿದ್ದಪ್ಪ ಜಲಾದೆ ನೇತೃತ್ವದಲ್ಲಿ ಕುದ್ರೋಳಿ ಗಣೇಶ್ ಮತ್ತು ಅವರ ತಂಡವನ್ನು ಸ್ವಾಗತಿಸಿ ಉದ್ಘಾಟನೆ ನೆರವೇರಿಸಲಾಯಿತು. ಮಧ್ಯಾಹ್ನ ನಂತರ ಭಾಲ್ಕಿಯಲ್ಲಿ ಜಾದೂ ಪ್ರದರ್ಶನಗೊಂಡಿತು. ಜನವರಿ 4ರಂದು ಶನಿವಾರ ಬೀದರ್ ನಗರದಲ್ಲಿ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುಮಾರು ಒಂದುವರೆ ಗಂಟೆಗಳ ಕಾಲದ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ಉತ್ಸವದ ಮಾಹಿತಿ ಹಾಗೂ ಮಹತ್ವವನ್ನು ಸಾರುವುದರ ಜೊತೆಗೆ ಭಾರತೀಯ ಪರಂಪರೆ, ಕೃಷಿ, ಸ್ವಚ್ಛತೆ, ಭಾವೈಕ್ಯತೆ ಮುಂತಾದ ವಿಷಯಗಳ ಕುರಿತಾಗಿ ಮನೋರಂಜನೆಯ ಜೊತೆಗೆ ವಿಸ್ಮಯ ಜಾದುನಲ್ಲಿ ಕಲಾಪ್ರದರ್ಶನ ನೀಡುವುದರ ಮೂಲಕ ಜಾದೂ ಜಾಥಾ ವಿದ್ಯಾರ್ಥಿಗಳು ಯುವಜನರು ಮತ್ತು ಸಾರ್ವಜನಿಕರ ಮನಸೂರೆಗೊಳ್ಳುತ್ತಿದೆ. ಪ್ರದರ್ಶನ ನೀಡಿದ ಕಡೆಗಳಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಸಂತಸವಾಗಿದೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಹೇಳಿದರು.

  ಕಲ್ಬುರ್ಗಿಯಲ್ಲಿ ಜನವರಿ 5ರಂದು ಬೆಳಗ್ಗೆ 10.30 ಕ್ಕೆ ಶ್ರೀ ಶರಣಬಸವೇಶ್ವರ ವಸತಿ ಶಾಲೆ ಹಾಗೂ ಮಧ್ಯಾಹ್ನ 2 ಗಂಟೆಗೆ ಸರ್ವಜ್ಞ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ಜನವರಿ 6ರಂದು ಬೆಳಿಗ್ಗೆ 10.30 ಕ್ಕೆ ಕಲ್ಬುರ್ಗಿಯ ಸಂತೋಷ್ ಕಾಲೋನಿಯ ಮಿಲೇನಿಯಮ್ ಶಾಲೆ, 12.30ಕ್ಕೆ ನೆಹರು ಗಂಜ್ ನ ನಗರೇಶ್ವರ ಶಾಲೆಯಲ್ಲಿ ಹಾಗೂ ಮಧ್ಯಾಹ್ನ 3.30ಕ್ಕೆ ಆರಾಧನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಾಗೃತಿ ಜಾದೂ ಪ್ರದರ್ಶನಗೊಳ್ಳಲಿದೆ. 

  ಯಾದಗಿರಿ ಜಿಲ್ಲೆಯಲ್ಲಿ ಜನವರಿ 7ರಂದು ಜಾಗೃತಿ ಜಾದೂ ನಡೆಯಲಿದ್ದು ಬೆಳಿಗ್ಗೆ 10 ಗಂಟೆಗೆ ಯಾದಗಿರಿ ನಗರದ ಸರಕಾರಿ ಪಿಯು ಕಾಲೇಜ್ ಹಾಗೂ ಮಧ್ಯಾಹ್ನ 2.30ಕ್ಕೆ ಸುರಪುರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಜಾದೂ ಪ್ರದರ್ಶನ ನಡೆಯಲಿದೆ. ರಾಯಚೂರು ಜಿಲ್ಲೆಯಲ್ಲಿ ಜನವರಿ 8ರಂದು ಬೆಳಿಗ್ಗೆ 10 ಗಂಟೆಗೆ ರಾಯಚೂರು ನಗರದ ಜಂಬಲದಿನ್ನಿ, ರಂಗಮಂದಿರದಲ್ಲಿ ಹಾಗೂ 2.30ಕ್ಕೆ ಮಸ್ಕಿಯ ಜೋಗಿನ್ ರಾಮಣ್ಣ ಪ್ರೌಢಶಾಲೆಯಲ್ಲಿ ಜಾಗೃತಿ ಜಾದೂ ಪ್ರದರ್ಶನ ನೆರವೇರಲಿದೆ. ಜನವರಿ 9 ರಂದು ಕೊಪ್ಪಳ ಜಿಲ್ಲೆ, ಹತ್ತರಂದು ವಿಜಯನಗರ ಜಿಲ್ಲೆ ಹಾಗೂ ಜನವರಿ 11 ಮತ್ತು 12ರಂದು ಬಳ್ಳಾರಿ ಜಿಲ್ಲೆಗಳಲ್ಲಿ ಜಾಗೃತಿ ಜಾದೂ ಪ್ರದರ್ಶನ ಏರ್ಪಡಿಸಲಾಗಿದೆ. ಜಾಗೃತಿ ಜಾದೂ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನವನ್ನು ವೀಕ್ಷಿಸಬೇಕು ಎಂದು ಮಾಧ್ಯಮ ವಿಭಾಗದ ಸಂಚಾಲಕರಾದ ಡಾ. ಸದಾನಂದ ಪೆರ್ಲ ಹಾಗೂ ಪ್ರಭಾಕರ ಜೋಶಿ ಸೇಡಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.