ವಿಶ್ವಕರ್ಮ ಜಕಣಾಚಾರಿ ಜಯಂತಿಗೆ ಅಧಿಕಾರಿಗಳ ಗೈರು, ಕ್ರಮಕ್ಕೆ ಜಿಲ್ಲಾಧಿಕಾರಿಗಳ ಮೊರೆ ಹೋದ ವಿಶ್ವಕರ್ಮ ಸಮಾಜ ಕಾಟಚಾರದ ಜಯಂತಿಯಿಂದ ವಿಶ್ವಕರ್ಮ ಸಮಾಜಕ್ಕೆ ಅವಮಾನ : ಆರೋಪ

ವಿಶ್ವಕರ್ಮ ಜಕಣಾಚಾರಿ ಜಯಂತಿಗೆ ಅಧಿಕಾರಿಗಳ ಗೈರು, ಕ್ರಮಕ್ಕೆ ಜಿಲ್ಲಾಧಿಕಾರಿಗಳ ಮೊರೆ ಹೋದ ವಿಶ್ವಕರ್ಮ ಸಮಾಜ

ಕಾಟಚಾರದ ಜಯಂತಿಯಿಂದ ವಿಶ್ವಕರ್ಮ ಸಮಾಜಕ್ಕೆ ಅವಮಾನ : ಆರೋಪ 

ಚಿಂಚೋಳಿ : ಕಲ್ಯಾಣ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿರುವ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಯವರು ಅತ್ಯಂತ ನಾಜೂಕಾದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿಗಾರ. ಇಂತಹ ಇತಿಹಾಸ ಉಳ್ಳ ಶಿಲ್ಪಿಯ ಜಯಂತಿಗೆ ಸರಕಾರ ಅರ್ಥಪೂರ್ಣವಾಗಿ ಆಚರಿಸಲು ಆದೇಶವಾಗಿದ್ದರೂ ತಾಲೂಕ ಆಡಳಿತದ ಅಧಿಕಾರಿಗಳು ಹಾಜರಾಗದೆ ಕೇವಲ ಕಾಟಚಾರಕ್ಕೆ ಎಂಬಂತೆ ಉಪತಹಸೀಲ್ದಾರರು ನೇತೃತ್ವದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ ಮಾಡಿ, ಅವಮಾನಿಸಿದೆ ಎಂದು ಅಮರ ಶಿಲ್ಪಿ ಜಕಣಾಚಾರಿ ಪಾಂಚಾಳ ವಿಶ್ವಕರ್ಮ ಸಮಾಜದ ಮುಖಂಡರು ಆರೋಪಿಸಿ, ಜಯಂತಿ ಆಚರಣೆಯಲ್ಲಿ ಗೈರು ಹಾಜರಿಯಾಗಿದ್ದವರ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕೈಗೊಳಬೇಕೆಂದು ಉಪ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. 

2024ರ ಡಿಸೇಂಬರ್ 31 ರಂದು ಗ್ರೇಡ್ -2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ಅವರ ನೇತೃತ್ವದಲ್ಲಿ ಜಯಂತಿ ಪೂರ್ವ ಭಾವಿ ಸಭೆ ತೆಗೆದುಕೊಂಡು ಬೆಳಿಗ್ಗೆ ಇಲಾಖೆಗಳಲ್ಲಿ ಪಂಚಾಳ ಸಮಾಜದ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಅವರ ಜಯಂತಿ ತಾಲೂಕ ಆಡಳಿತ ಅರ್ಥಪೂರ್ಣವಾಗಿ ಜರುಗಿಸಲಾಗುತ್ತದೆ. ತಾಲೂಕಿನ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಜಯಂತಿ ಆಚರಿಸಿ, ಬೆಳಿಗ್ಗೆ 10 ಗಂಟೆಗೆ ತಾಲೂಕ ಆಡಳಿತ ಸೌಧ ತಹಸೀಲ್ ಕಾರ್ಯಾಲಯದ ಸಭಾಂಗಣದಲ್ಲಿ ಆಚರಿಸುವ ಕಾರ್ಯಕ್ರಮದಲ್ಲಿ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಆಗಮಿಸುತ್ತಾರೆ. ಸಮಾಜದ ಬಂಧುಗಳು, ಮುಖಂಡರುಗಳು ಆಗಮಿಸಬೇಕೆಂದು ಪೂರ್ವ ಭಾವಿಸಭೆಯಲ್ಲಿ ನಿರ್ಣಯಿಸಿ ತಿಳಿಸಿರುತ್ತಾರೆ. ಆದರೆ ನಿಗದಿಪಡಿಸಿದ ಸಮಯಕ್ಕೆ ಯಾವೊಬ್ಬರು ಅಧಿಕಾರಿಗಳು ಹಾಜರಾಗದೆ ಕೇವಲ ಉಪ ತಹಸೀಲ್ದಾರ್ ರು ಜಯಂತಿ ಆಚರಿಸಿದ್ದಾರೆ. ಪಂಚಾಳ ಸಮಾಜ ಸಣ್ಣ ಸಮಾಜ ಇದ್ದಿರಬಹುದು ಆದರೆ ಪಂಚಾಳ ಸಮಾಜ ಶಿಸ್ತಿನ ಸಮಾಜವಾಗಿದೆ. ಬೇಜವಾಬ್ದಾರಿತನದ ಅಧಿಕಾರಿಗಳ ನಡೆಗಳಿಂದಾಗಿ ಶಿಸ್ತಿನ ಸಮಾಜಕ್ಕೆ ನೋವುವಾಗಿದೆ. ಹೀಗಾಗಿ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಖುದ್ದು ಭೇಟಿಯಾಗುತ್ತೇವೆ ಎಂದು ಸಮಾಜದ ಮುಖಂಡರು ಮಾತನಾಡಿ ತಿಳಿಸಿದ್ದಾರೆ.  

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಹಿರಿಯರಾದ ಜಗದೀಶ ಪಂಚಾಳ ಟೈಪಿಸ್ಟ್, ರಾಮಚಂದ್ರಪ್ಪ ಪಂಚಾಳ ಗರಗಪಳ್ಳಿ, ಮೋಹನ ಪಂಚಾಳ, ದಿಲೀಪ್ ಪಂಚಾಳ, ಮಹೇಶ ಪತ್ತಾರ, ಪ್ರಭು ಪಂಚಾಳ, ಕಿರಣ ಪಂಚಾಳ, ಗುರು ಪಂಚಾಳ, ನಾರಾಯಣರಾವ ವಿಶ್ವಕರ್ಮ, ಶಿವಾರಾಜ ವಿಶ್ವಕರ್ಮ, ರೇವಣಸಿದ್ಧಪ್ಪ ರುಸ್ತಂಪೂರ, ಶ್ರೀನಿವಾಸರಾವ ವಿಶ್ವಕರ್ಮ ಸುಲೇಪೇಟ ಸೇರಿ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.