ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಿ: ಅಂಜುನಾಬಾಯಿ ರಾಠೋಡ
ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಿ: ಅಂಜುನಾಬಾಯಿ ರಾಠೋಡ
ಕಲಬುರಗಿ: ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿರುವ ಜಿಲ್ಲೆಯ ಯಡ್ರಾಮಿ ತಾಲೂಕಿನ 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಎಸಗಿದ ಅತ್ಯಾಚಾರವನ್ನು ಗಂಭೀರವಾಗಿ ಪರಿಗಣಿಸಿ, ಕಾಮುಕ ಶಿಕ್ಷಕ ಹಾಜಿಮಲಿಂಗನನ್ನು ತಕ್ಷಣವೇ ಗಲ್ಲು ಶಿಕ್ಷೆಗೆ ಏರುವಂತೆ ಸರ್ಕಾರ ಮಾಡಬೇಕು ಎಂದು ಸಾವಿತ್ರಿಬಾಯಿ ಪುಲೆ ಸಂಘಟನೆಯ ಜೇವರ್ಗಿ ಅಧ್ಯಕ್ಷೆ ಅಂಜುನಾಬಾಯಿ ರಾಠೋಡ ಆಗ್ರಹಿಸಿದರು.
ರಾಜ್ಯದಲ್ಲಿ ದಿನಾಲು ಒಂದಿಲ್ಲ ಒಂದು ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇದ್ದು, ಅದರಲ್ಲೂ ವಿಶೇಷವಾಗಿ ಲಂಬಾಣಿ ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಯ ಕೃತ್ಯಗಳನ್ನು ಎಸಗಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶಾಲೆಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ತಪ್ಪಿಸಲು ಅದರಲ್ಲೂ ಆತ್ಯಾಚಾರದಂತಹ ಹೇಯ ಕೃತ್ಯಗಳು ತಡೆಯಬೇಕಾದರೆ ಸರಕಾರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳನ್ನು ಮಹಿಳೆಯರಿಗೆ ಮಾತ್ರ ಸೀಮಿತ ಮಾಡುವ ಮುಖಾಂತರ ಕುಕೃತ್ಯಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದರು.
ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯ ಸಂಪೂರ್ಣ ಶಿಕ್ಷಣದ ಖರ್ಚನ್ನು ಸರಕಾರವೇ ನೋಡಿಕೊಳ್ಳಬೇಕು. ಜತೆಗೆ ಸಂತ್ರಸ್ತ ಮಗುವಿಗೆ 18 ವರ್ಷ ತುಂಬಿದ ಮೇಲೆ ಅವಳಿಗೆ ಸರಕಾರಿ ನೌಕರಿ ಕೊಡಬೇಕೆಂದು ಪ್ರಕಟಣೆಯ ಮೂಲಕ ಸರಕಾರಕ್ಕೆ ಆಗ್ರಹಿಸಿದ್ದಾರೆ.