ಸಮಾಜಮುಖಿ ವಚನಕಾರ ಷಣ್ಮುಖ ಶಿವಯೋಗಿ !

ಸಮಾಜಮುಖಿ ವಚನಕಾರ ಷಣ್ಮುಖ ಶಿವಯೋಗಿ !

ಸಮಾಜಮುಖಿ ವಚನಕಾರ ಷಣ್ಮುಖ ಶಿವಯೋಗಿ ! 

ಷಣ್ಮುಖ ಶಿವಯೋಗಿಗಳು ಕಲ್ಯಾಣ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಜೇವರಗಿಯವರು ಅನ್ನುವದು ವಿಶೇಷ. ಅವರು ಅಖಂಡೇಶ್ವರ ಅಂಕಿತದಿಂದ ಹೆಸರಾದವರು ಸುಮಾರು ಏಳುನೂರಕ್ಕಿಂತ ಹೆಚ್ಚಿನ ವಚನ ರಚಿಸಿ ವಚನ ಸಾಹಿತ್ಯಕ್ಕೆ ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದು ಯಾರೂ ಮರೆಯುವಂತಿಲ್ಲ. 

ಬಸವೋತ್ತರ ಯುಗದ ಪ್ರಮುಖ ವಚನಕಾರರರಲ್ಲಿ ಒಬ್ಬರಾದ ಇವರು ತಮ್ಮ ಅಗಾಧ ಜ್ಞಾನದಿಂದ ಬೆಳೆದು ಬಂದವರು. ಹನ್ನೇರಡನೇ ಶತಮಾನದ ವಚನ ಚಳುವಳಿ, ಸಾಮಾಜಿಕ ಕ್ರಾಂತಿಯ ಪ್ರಭಾವ ಇವರ ಮೇಲೆ ಬೀರಿರುವದು ಕಂಡು ಬರುತ್ತದೆ. 

"ಎಚ್ಚರವಿರಬೇಕು ನಡೆ ನುಡಿಯಲ್ಲಿ 

ಮಚ್ಚರವಿರಬೇಕು ಭವ ಸಂಸಾರದಲ್ಲಿ 

ಹುಚ್ಚನಾಗಿರಬೇಕು ಜನರ ಕಣ್ಣಿನಲ್ಲಿ 

ಮನ ಅಚ್ಚೊತ್ತಿದಂತಿರಬೇಕು ಲಿಂಗದಲ್ಲಿ 

ಇಂತಿ ಗುಣವುಳ್ಳಾತನೇ 

ಅಚ್ಚ ಶರಣ ನೋಡಾ ಅಖಂಡೇಶ್ವರ!! 

ಡಾಂಬಿಕತೆಯ ಭಕ್ತಿ ಇರಲೇಬಾರದು. ನಾವು 

ಸಮಾಜದಲ್ಲಿ ಯಾವ ರೀತಿ ಬದುಕಿ ಭವಸಾಗರ ದಾಟಬೇಕು ಅನ್ನುವದರ ಬಗ್ಗೆ ಉಪದೇಶಿಸಿದ್ದಾರೆ. ಅವರ ವಚನ ಸಾಮಾನ್ಯರಿಗು ಅರ್ಥವಾಗುವಂತಿವೆ .

ವಚನಕಾರರು ಸೂರ್ಯನಂತೆ ಉದಯಿಸಿ ಸಾಮಾಜಿಕ ಅಡೆತಡೆ ಅಡ್ಡಿ ಆತಂಕ ಎದುರಾದರು ದಿಟ್ಟತನದಿಂದ ಎದುರಿಸಿ ಗಟ್ಟಿಯಾದ ವಚನ ರಚಿಸಿದ್ದಾರೆ. ಅವರು ತಮ್ಮ ವಚನಗಳನ್ನು ಆತ್ಮತೃಪ್ತಿಗಾಗಿ ಇಲ್ಲವೇ ಯಾರನ್ನೋ ಮೆಚ್ಚಿಸಲು ಬರೆದಿದ್ದಲ್ಲ ಅವುಗಳ ಹಿಂದೆ ಸಾಮಾಜಿಕ ಕಳಕಳಿ ಹೊಸ ಹೊಸ ಚಿಂತನೆ ಇದ್ದೇ ಇರುತ್ತವೆ. 

"ಜಂಗಮಕ್ಕೆ ಮಾತಾಪಿತರಿಲ್ಲ 

ಜಂಗಮಕ್ಕೆ ಜಾತಿಬೇಧಗಳಿಲ್ಲ 

ಜಂಗಮಕ್ಕೆ ನಾಮರೂಪಗಳಿಲ್ಲ 

ಜಂಗಮಕ್ಕೆ ಕುಲಗೋತ್ರಗಳಿಲ್ಲ 

ಜಂಗಮಕ್ಕೆ ಮಲಮಾಯೆಗಳಿಲ್ಲ 

ನೋಡಾ ಅಖಂಡೇಶ್ವರ! 

ಜಂಗಮತ್ವ ಅನ್ನುವದು ಜಾತಿಯಿಂದ ಇಲ್ಲವೇ ಹುಟ್ಟಿನಿಂದ ಗುರುತಿಸುವದು ಸರಿಯಲ್ಲ. ಅದು ಯಾರು ಬೇಕಾದರು ಜ್ಞಾನದ ಮೂಲಕ ಪಡೆಯಬಹುದಾಗಿದೆ ಅಂತ ಹೇಳುತ್ತಾರೆ. 

" ಬಸವನ ನಾಮವು ಕಾಮಧೇನು ಕಾಣಿರೊ 

ಬಸವನ ನಾಮವು ಕಲ್ಪವೃಕ್ಷ ಕಾಣಿರೋ 

ಬಸವನ ನಾಮವು ಚಿಂತಾಮಣಿ ಕಾಣಿರೋ 

ಬಸವನ ನಾಮವು ಪರುಷದಖನಿ ಕಾಣಿರೋ 

ಇಂತಹ ಬಸವನಾಮಾಮೃತ ಎನ್ನ ಜಿಹ್ವೆಯ ತುಂಬಿ 

ಹೊರಸೂಸಿ ಮನವ ತುಂಬಿತ್ತು ಆ ಮನ ತುಂಬಿ

ಹೊರಸೂಸಿ ಭಾವತುಂಬಿತ್ತು ಭಾವತುಂಬಿ 

ಹೊರಸೂಸಿ ಸಕಲ ಕರ್ಣೇಂದ್ರಿಯಗಳ ತುಂಬಿ 

ಹೊರಸೂಸಿ ಸರ್ವಾಂಗದ ರೋಮ ಕುಳಿಗಳನ್ನೆಲ್ಲ 

ವೇಧಿಸಿತ್ತಾಗಿ ನಾನು ಬಸವಾಕ್ಛರವೆಂಬ ಹಡಗನ್ನೇರಿ 

ಬಸವಾ ಬಸವಾ ಬಸವಾ ಎಂದು ಭವಸಾಗರವ 

ದಾಂಟಿದೆನಯ್ಯಾ ಅಖಂಡೇಶ್ವರ " 

ಬಸವನ ಆದರ್ಶ ಇವರ ವಚನಗಳಲ್ಲೂ ವಿವರಿಸಿದ್ದು ಸರಳವಾದ ವಚನದ ಮೂಲಕ ಸುಲಭವಾಗಿ ಅರ್ಥವಾಗುವಂತೆ ರಚಿಸಿರುವದು ಕಂಡು ಬರುತ್ತದೆ. 

"ಇಂದಿನ ಇರುಳಿನಲ್ಲಿ 

ನಲ್ಲನು ಚಲ್ಲವಾಡುತ ಬಂದು 

ಮೆಲ್ಲಗೆ ಎನ್ನ ಕೈ ಹಿಡಿದನವ್ವ 

ಅಲ್ಲಿ ಉಟ್ಟ ಸೀರೆಯ ನಿರಿಗಳು

ಸಡಿಲ ಬಿದ್ದುವವ್ವ 

ತೊಟ್ಟ ರವಿಕೆಯ ಗಂಟು ಬಿಚ್ಚಿ 

ಕಡೆಗಾದುವವ್ವ 

ಅಖಂಡೇಶ್ವರನೆಂಬ ನಲ್ಲನು 

ಎನ್ನ ಬಿಗಿಯಪ್ಪಿ ತೆಕ್ಕೆಸಿಕ್ಕೊಂಡು 

ಕೂಡಿದ ಸುಖವ ಎದಿರಿಟ್ಟು ಹೇಳಲಾರೆನವ್ವ. 

ಜೀವನವೆಂಬ ವಿಶಾಲ ಸಮುದ್ರದಲ್ಲಿ ಮನುಜನೆಂಬ ನಾವೆಗಳು ಮುಳುಗುತ್ತಾ ತೇಲುತ್ತಾ ಎಲ್ಲೋ ಕೆಲವು ಧೀರಪುರುಷರು ಅಲೆಗಳನ್ನು ಎದುರಿಸಿ ದಢ ಸೇರುತ್ತಾರೆ ಇದೊಂದು ಮನುಷ್ಯ ಜೀವನದ ಸಂಘರ್ಷ, ಅವಿರತ ಹೋರಾಟ, ಅದರಲ್ಲಿ ಷಣ್ಮುಖ ಶಿವಯೋಗಿ ಕೂಡ ಸಫಲರಾದರು. ಷಣ್ಮುಖ 

ಶಿವಯೋಗಿ ರಚಿಸಿದ 727 ವಚನ 14 ಚೌಪದಿಯ ಜೋಗುಳ ಪದ ಷಟ್ಪದಿಯ ಸ್ತೋತ್ರ ಸಧ್ಯ ಲಭ್ಯವಿವೆ. 

ಸಮಾಜ ದರ್ಶನ ಸಾಹಿತ್ಯ ದರ್ಶನ ಕ್ರೀಯೆಯಲ್ಲಿ ತಲ್ಲೀನರಾದ ಷಣ್ಮುಖರನ್ನು ಅನುಭಾವ ಭಕ್ತಿಯನ್ನು ಆನಂದ ಭಕ್ತಿಯ ಮಟ್ಟಕ್ಕೇರಿಸಲು ಅಖಂಡೇಶ್ವರರು ಸಲಹೆ ನೀಡಿದರು. ಶರಣರು ಜೀವನದ ಗಲಿಬಿಲಿಯ ಮಧ್ಯದಲ್ಲಿ ನಿಂತು ಸಮರಸದಲ್ಲಿ ಲೀನವಾಗಬೇಕು ಕಾಯಕ ಜೀವನ ಪುರಾಣಕಷ್ಟೇ ಸೀಮಿತವಾಗದೆ ಸಾಮಾನ್ಯ ಜನರ ಬಳಿಗೆ ಬಂದು ಅವರ ಮಧ್ಯ ನಿಂತುಕೊಂಡು ಅವರನ್ನು ಮೇಲೆತ್ತಬೇಕು ಇದರ ಬಗ್ಗೆ ನೀನು ಸಿದ್ದಪಡಿಸಿಕೊ ಎಂಬ ಗುರುಗಳ ಮಾತಿಗೆ ಬದ್ದರಾದರು. 

ಷಣ್ಮುಖ ಶಿವಯೋಗಿಗಳು ಮಠದಲ್ಲಿ ಜ್ಞಾನ ದಾಸೋಹದ ಜೊತೆಗೆ ಅನ್ನದಾಸೋಹವೂ ಆರಂಭಿಸಿದರು ಯಾವುದೇ ಜಾತಿ ಭೇದವಿಲ್ಲದೆ ಎಲ್ಲ ಮಕ್ಕಳನ್ನು ಸೇರಿಸಿ ಶಿಕ್ಷಣ ನೀಡಿದಾಗ ಕೆಲವು ಮತೀಯವಾದಿಗಳ ವಿರೋಧವು ಎದುರಾಯಿತು ಅದ್ಯಾವದಕ್ಕೂ ಲಕ್ಷ ಕೊಡದೇ ತಮ್ಮ ಕಾರ್ಯ ಚಟುವಟಿಕೆಯಲ್ಲಿ ತೊಡಗಿದರು. ಕೊನೆಗೊಂದುದಿನ ಇವರಿಗೆ ಪೂಜೆ ಪುನಸ್ಕಾರಗಳಿಗೆ ಕರೆದು ವಿಷ ಪ್ರಾಶನವು ಮಾಡಲಾಯಿತು. ಹಠಯೋಗದಿಂದ ವಿಷ ಕೂಡ ಜೀರ್ಣಿಸಿಕೊಂಡರು ಆದರೂ ಶರೀರ ಕೃಶವಾಗುತ್ತಾ ಬಂದಿತು ಬರೀ ಹಣ್ಣು ಹಂಪಲದ ಮೇಲೆ ಸುಮಾರು ದಿನ ಕಳೆದರು. 

ಒಂದು ದಿನ ಷಣ್ಮುಖರು ಪೂಜೆ ಮುಗಿಸಿ ತಾವು ರಚಿಸಿದ ವಚನಗಳ ಮೇಲೆ ಕಣ್ಣಾಡಿಸಿ ಇನ್ನೂ ಐಕ್ಯದ ಕಡೆ ನಡೆಯಬೇಕೆಂಬ ಹಂಬಲ ವ್ಯಕ್ತಪಡಿಸಿದರು. 

" ಕೇಳು ಕೇಳಯ್ಯ ಕರುಣಿ ನಿನ್ನ ಕಂದನೆಂದು 

ಕರಪಿಡಿದು ತಲೆದಡಹಿ ಪೂರ್ಣ ಜ್ಞಾನದ ಕಣ್ಣೆದೆರೆಸಯ್ಯ ಅಖಂಡೇಶ್ವರ " ಅಂತ ಕೊನೆಯ ವಚನ ಬರೆದು ಕಣ್ಣು ಮುಚ್ಚಿದರು. ಆಗ ಅವರ ಜ್ಯೋತಿ ಬಯಲೊಳು ಬಯಲಾಗಿ ಷಣ್ಮುಖ ಶಿವಯೋಗಿ ಎಂಬ ನಾಮ ಅಮರವಾಯಿತು. !!! 

ಶರಣಗೌಡ ಬಿ ಪಾಟೀಲ ತಿಳಗೂಳ

ಶಿಕ್ಷಕ,ಲೇಖಕ ಕಥೆಗಾರ ಕಲ್ಬುರ್ಗಿ