ಕಂಬದ ಮಾರಿ ತಂದೆ ಶರಣ (ಕದಂಬ)

ಕಂಬದ ಮಾರಿ ತಂದೆ ಶರಣ (ಕದಂಬ)

ಕಂಬದ ಮಾರಿ ತಂದೆ ಶರಣ (ಕದಂಬ)

ನಾನಾ ಜನ್ಮಂಗಳಲ್ಲಿ ಬಂದಡೂ,

ನಾನಾ ಯುಕ್ತಿಯಲ್ಲಿ ನುಡಿದಡೂ,

ನಾನಾ ಲಕ್ಷಣಂಗಳಲ್ಲಿ ಶ್ರುತ ದೃಷ್ಟ. ಅನುಮಾನಂಗಳ ಲಕ್ಷಿಸಿ ನುಡಿವಲ್ಲಿ;

ಏನನಹುದು ಏನನಲ್ಲಾಯೆಂಬ. ಠಾವನರಿಯಬೇಕು.

ಮಾತ ಬಲ್ಲೆನೆಂದು ನುಡಿಯದೆ,

ನೀತಿವಂತನೆಂದು ಸುಮ್ಮನಿರದೆ,

ಆ ತತ್ಕಾಲದ ನೀತಿಯನರಿದು

ಸಾತ್ವಿಕ ಲಕ್ಷಣದಲ್ಲಿಪ್ಪಾತನ ಲಕ್ಷಣವೇ.ನಿರೀಕ್ಷಣ ಕದಂಬಲಿಂಗಾ.

  *ಕಂಬದ(ಕದಂಬ) ಮಾರಿತಂದೆ.*

        ವಚನ ಅನುಸಂಧಾನ*

ಲೌಕಿಕ ಮತ್ತು ಅಲೌಕಿಕ ಸಾಂಸಾರಿಕ ಬದುಕನ್ನು; ಶರಣರು ಏಕಕಾಲದಲ್ಲಿಯೇ ಅತ್ಯಂತ ಅರಿವು ಮತ್ತು ಎಚ್ಚರದ ಆಚರಣೆ ಮೂಲಕ ಪರಿಶುದ್ಧ ಮಾಡಿಕೊಂಡು, ನಿಸರ್ಗ ಸಹಜ ಸತ್ಯವಾದಂಥಾ ಜೀವನವನ್ನ ಪರಿಶೋಧಿಸಿ, ಸರ್ವಸಮಾನತೆಯ ನಿಜವಾದ ಬದುಕನ್ನೇ ಹದನಗೊಳಿಸಿಕೊಂಡು, ಹದುಳತನದಿ ನಡೆನುಡಿ ಒಂದಾಗಿ ಬಾಳಿ ಬೆಳಗಿ, ಸಮಷ್ಟಿಯ ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸಿ ಬದುಕನ್ನು ಬೆಳಗಿ ಬದುಕುತ್ತಾ ಬಯಲು ಬೆಳಕನ್ನು ಜಗಕೆ ಬೆಳಗಿ ತೋರಿದವರು. ಈ ನುಡಿ ಬೆಳಕಲ್ಲಿ ಪ್ರಸ್ತುತ ಕಂಬದ ಮಾರಿತಂದೆ ಶರಣರ ಪ್ರಸ್ತುತ ವಚನದ ಅನುಸಂಧಾನವನ್ನು ಮಾಡಲು ಪ್ರಯತ್ನಿಸೋಣ.

*ನಾನಾ ಜನ್ಮಂಗಳಲ್ಲಿ ಬಂದಡೂ,*

*ನಾನಾ ಯುಕ್ತಿಯಲ್ಲಿ ನುಡಿದಡೂ,*

*ನಾನಾ ಲಕ್ಷಣಂಗಳಲ್ಲಿ ಶ್ರುತ* *ದೃಷ್ಟ ಅನುಮಾನಂಗಳ ಲಕ್ಷಿಸಿ ನುಡಿವಲ್ಲಿ;* *ಏನನಹುದು ಏನನಲ್ಲಾಯೆಂಬ *#ಠಾವನರಿಯಬೇಕು.*

ಸಾಮಾಜಿಕ ಬದುಕಿನ ಜೀವನದಲ್ಲಿ ಮನುಷ್ಯನು ಎಷ್ಟೇ ಜನ್ಮದಲ್ಲಿ ಹುಟ್ಟಿಬಂದರೂ ಎಷ್ಟೇ ಜಾಣ್ಮೆ ಯಿಂದ ಮಾತನಾಡಲು ತಿಳಿದರೂ ಸಹಿತವಾಗಿ ಎದುರಿಗಿರುವ ಇನ್ನೊಂದು ಜೀವದ ಜೊತೆಯಲ್ಲಿ ವರ್ತಿಸಬೇಕಾದ ಸಂದರ್ಭದಲ್ಲಿ ಹೇಗಿರಬೇಕು, ಹೇಗೆ ನುಡಿ ಬೇಕು ಹಾಗೂ ಅದ್ರಂತೆ ನಡೆಯಲೇ ಬೇಕೆಂಬ ಬದುಕಿನ ಸಾಮಾನ್ಯ ಸತ್ಯದ ನಿಷ್ಠುರದ ಪಾಠವನ್ನು ವಚನದ ಈ ಸಾಲುಗಳು ಅತ್ಯಂತ ಸರಳಾತಿ ಸರಳ ನುಡಿಗಳಲ್ಲಿ ಅಷ್ಟೇ ಸಹಜವಾಗಿ ಅನಾವರಣ ಗೊಳಿಸುತ್ತವೆ. ಈ ಜೀವನದಲ್ಲಿನ ನಮ್ಮ ನಡೆನುಡಿಯು ಸತ್ಯ ಶುದ್ಧದ ಮಾರ್ಗದಲ್ಲಿ ಇರಬೇಕು. ಹಾಗಂತಾ ಸಮಯ ಸಂದರ್ಭಗಳ ಪರಸ್ಥಿತಿಯನ್ನು ಪರಿಗಣಿಸದೇ ನಮ್ಮ ನಡೆ ಮತ್ತು ನುಡಿಯ ಛಡಿಯನ್ನು ಬೀಸಬಾರದು! ಎನ್ನುವ ಪ್ರಜ್ಞೆಯು ಅಗತ್ಯ ಎನ್ನುವುದು ಪ್ರಸ್ತುತ ವಚನದ ಈ ಸಾಲುಗಳಲ್ಲಿ ಅಡಕವಾದ ತಾತ್ಪರ್ಯವಾಗಿದೆ

*#ಮಾತ ಬಲ್ಲೆನೆಂದು ನುಡಿಯದೆ,*

*ನೀತಿವಂತನೆಂದು ಸುಮ್ಮನಿರದೆ,*

*ಆ ತತ್ಕಾಲದ ನೀತಿಯನರಿದು*

*ಸಾತ್ವಿಕ ಲಕ್ಷಣದಲ್ಲಿಪ್ಪಾತನ *ಲಕ್ಷಣವೇ*

*ನಿರೀಕ್ಷಣ* *#ಕದಂಬಲಿಂಗಾ.*

ವಚನದ ಮೊದಲ ಭಾಗದ ವಿಚಾರವನ್ನೇ ಇಲ್ಲಿನ ಸಾಲುಗಳು ಇನ್ನೂ ಸ್ಪಷ್ಟವಾಗಿ ಮನಗಾಣಿಸುತ್ತವೆ 

ಮಾತು ಬಲ್ಲಾತನಿಗೆ ಜಗಳವಿಲ್ಲ ಊಟ ಬಲ್ಲಾತ ನಿಗೆ ರೋಗವಿಲ್ಲ ಎಂಬ ಲೋಕೋಕ್ತಿ ಉಂಟು. ಅದರೆ ಶರಣರು ಈ ಮಾತು ಬಲ್ಲಾತನ ಒನಪನ್ನ ಒಲ್ಲರು. ನೀತಿ ಉಳ್ಳಾತ ತಾನೆಂದು ತಿಳಕೊಂಡು ಅಗತ್ಯವಿದ್ದಲ್ಲಿ ಮೌನವಾಗಿದ್ದು ನುಡಿಯದೆಯೂ ಇರಬಾರದು! ಎನ್ನುವರು. ಅಂದರೆ ಇಲ್ಲಿ ವಾಸ್ತವ ಬದುಕಿನ ಪ್ರಸ್ತುತ ಸಂದರ್ಭದಲ್ಲಿ ಕಣ್ಣೆದುರಲ್ಲೇ ನಡೆಯುವ ಘಟನೆಗೆ ಹೇಗೆ ಸತ್ಯವಾಗಿ ಹಾಗೆನೇ ನಿಷ್ಠುರವಾಗಿ ಪ್ರತಿಕ್ರಿಯೆ ನೀಡಿ ನಡೆದುಕೊಳ್ಳಲೇ ಬೇಕೆಂಬ ತತ್ಕಾಲದ ಕ್ರಿಯಾತ್ಮಕ ನಡೆ ನುಡಿಯ ಸಂಗತಿಯನ್ನು ಇಲ್ಲಿ ವಚನದ ಈ ಸಾಲುಗಳಲ್ಲಿ ಕಂಬದ(ಕದಂಬ) ಮಾರಿತಂದೆಯು ಸರಳವಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆಂದು ಅನಿಸುತ್ತದೆ.

*ಸಂಕ್ಷಿಪ್ತ #ಪರಿಚಯ*

(ಚಿತ್ರ ಸಾಂದರ್ಭಿಕ ಮಾಹಿತಿ ಅಂತರ್ಜಾಲ ಕೃಪೆ)

ಕಂಬದ ಮಾರಿತಂದೆ ೧೨ನೇ ಶತಮಾನದ ಶರಣ ಇವರು ಮೂಲತಃ ಕರಾವಳಿ ಭಾಗದ ಕದಂಬ ರಾಜ್ಯದ ಮೀನು ಹಿಡಿಯುವ ಕುಲ ಕಸುಬಿನ ಮೀನುಗಾರ‌. ಇವರು ತಮ್ಮ ಲೌಕಿಕ ಮತ್ತು ಅಲೌಕಿಕ ಬದುಕಿನ ನಿರ್ವಹಣೆಗಾಗಿ ಕಲ್ಯಾಣ ರಾಜ್ಯಕ್ಕೆ ಬಂದು , ಅಪ್ಪ ಬಸವಾದಿ ಶರಣರು ನಡೆಸಿದ ಚಳುವಳಿಯ ಭಾಗವಾಗಿದ್ದುಕೊಂಡು, ಅನುಭವ ಮಂಟಪದ ೭೭೦ ಅಮರ ಗಣಂಗಳ ಲ್ಲೊಬ್ಬ ವಚನಕಾರ ಶರಣರಾದ ಈ ಮಾರಿತಂದೆ. "ಚನ್ನಕದಂಬಲಿಂಗಾ" ಅಂಕಿತದಲ್ಲಿ ರಚಿಸಿದ ೧೧ ವಚನ ಲಭ್ಯವಾಗಿವೆ. ಕದಂಬ ಎಂಬುವ ಹೆಸರೇ ಅಪಭ್ರಂಶದಿಂದಾಗಿ ಕಂಬದ ಎಂದಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಇವರ ವಚನ ಗಳಲ್ಲಿ; ತೆಪ್ಪ, ತಿರುವು,ಮತ್ಸ್ಯ,ಗಾಳ, ಕೀಟ, ಬಲೆ, ಸೆಳೆ ಗೋಲು,ಮಡುವು, ಏಡಿ ಇಂತಹ ಪದಗಳು ಬರುವುದರಿಂದ ಖಂಡಿತಾ ಕದಂಬ ರಾಜ್ಯದಿಂದ ಬಂದ ಮೀನುಗಾರ ಕುಲಕಸಬುದಾರಿವರೆಂದು ಹೇಳಬಹುದು. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ಅಲ್ಲಿನ ಸಲಕರಣೆಗಳನ್ನು ಇವರು ತಮ್ಮ ವಚನ ರಚನೆಯಲ್ಲಿ ಅವನ್ನು ಆಧ್ಯಾತ್ಮಿಕಗೊಳಿಸಿ ಪ್ರತಿಮೆಗಳನ್ನಾಗಿ ಬಳಸಿ ಕಾವ್ಯಾತ್ಮಕವಾಗಿಯೇ ವಚನಗಳನ್ನು ರಚಿಸಿದ್ದು ಇವರ ಪ್ರತಿಭೆಗೆ ಹಿಡಿದ ಸಾಕ್ಷಿಯಾಗಿದೆ.

             ಅಳಗುಂಡಿ ಅಂದಾನಯ್ಯ*